ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ; ಸಚಿವ ಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಸವದಿ

ಡಿಸಿಎಂ ಡಿ.ಕೆ. ಶಿವಕುಮಾರ್‌ ಪರವಾಗಿ ಸವದಿ ಗಟ್ಟಿಯಾಗಿ ನಿಂತಿದ್ದಾರೆ ಎಂದು ಕೆಲವರು ಆರೋಪ ಮಾಡುತ್ತಿದ್ಧಾರೆ. ಆದರೆ ನಾನು ಯಾರ ಜೊತೆಯೂ ಚರ್ಚೆ ಮಾಡಿಲ್ಲ. ನಾನು ಯಾರ ಪರ ಅಥವಾ ವಿರೋಧವೂ ಇಲ್ಲ ಎಂದು ಶಾಸಕ ಲಕ್ಷ್ಮಣ್‌ ಸವದಿ ಸ್ಪಷ್ಟಪಡಿಸಿದರು.

Update: 2025-11-25 07:16 GMT

ಅಥಣಿ ಶಾಸಕ ಲಕ್ಷ್ಮಣ್‌ ಸವದಿ

Click the Play button to listen to article

ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆಯ ಮಾತುಗಳು ಜೋರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಯಾತ್ರೆ ಆರಂಭಿಸಿದ್ದಾರೆ. ಅಥಣಿ ಶಾಸಕ ಲಕ್ಷ್ಮಣ್‌ ಸವದಿ ಕೂಡ ಸಚಿವ ಸ್ಥಾನದ ಇಚ್ಛೆ ವ್ಯಕ್ತಪಡಿಸಿದ್ದು, ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ (ನ.25) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಗೊಂದಲಗಳಿವೆ. ಹೈಕಮಾಂಡ್‌ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಆದಷ್ಟು ಬೇಗ ಈ ಗೊಂದಲ ಬಗೆಹರಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಸಾಕಷ್ಟು ಮುಜುಗರವಾಗಲಿದೆ ಎಂದು ಹೇಳಿದ್ದಾರೆ.

ನಾನು ಯಾರ ಪರ- ವಿರೋಧ ಇಲ್ಲ

ಹಲವು ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ನನಗೆ ತಿಳಿದಿಲ್ಲ. ಮಂತ್ರಿಗಳಾಗಬೇಕು ಎಂಬ ಆಸೆ ಎಲ್ಲಾ ಶಾಸಕರಿಗೂ ಇರುತ್ತದೆ. ಅದಕ್ಕಾಗಿ ಹೋಗಿರಬೇಕು. ದೆಹಲಿಗೆ ಏಕೆ ಹೋಗಿದ್ದು ಎಂದು ನಾವು ಹೇಳುವುದು ಕಷ್ಟ. ಡಿಸಿಎಂ ಡಿ.ಕೆ. ಶಿವಕುಮಾರ್‌ ಪರವಾಗಿ ಲಕ್ಷ್ಮಣ್‌ ಸವದಿ ಗಟ್ಟಿಯಾಗಿ ನಿಂತಿದ್ದಾರೆ ಎಂದು ಕೆಲವರು ಆರೋಪ ಮಾಡುತ್ತಿದ್ಧಾರೆ. ಆದರೆ, ನಾನು ಯಾರ ಜೊತೆಯೂ ಚರ್ಚೆ ಮಾಡಿಲ್ಲ. ನಾನು ಯಾರ ಪರ ಅಥವಾ ವಿರೋಧವೂ ಇಲ್ಲ. ಹೈಕಮಾಂಡ್ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ಬದ್ಧನಾಗಿದ್ದೇನೆ. ನನ್ನ ನೇತೃತ್ವದಲ್ಲಿ ಯಾವ ಶಾಸಕರು ಹೋಗುವುದಿಲ್ಲ ಎಂದು ಹೇಳಿದ್ದಾರೆ. 

ಅಧಿವೇಶನದ ಬಳಿಕ ಸಂಪುಟ ಪುನಾರಚನೆ ಸಾಧ್ಯತೆ

ಡಿ.ಕೆ. ಶಿವಕುಮಾರ್‌ ಅವರಿಂದಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹುಶಃ ರಮೇಶ್‌ ಜಾರಕಿಹೊಳಿಗೆ ಬ್ರಹ್ಮ ಈ ರೀತಿ ಹೇಳಿಕೆ ನೀಡುವ ಶಕ್ತಿ ಕೊಟ್ಟಿರಬಹುದು ಎಂದು ವ್ಯಂಗ್ಯವಾಡಿದ್ದಾರೆ. ಬೆಳಗಾವಿ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ಈ ಹಿಂದೆ ನಾಯಕರು ಮಂತ್ರಿ ಸ್ಥಾನಗಳನ್ನು ಬಿಟ್ಟು ಕೊಡುತ್ತಿದ್ದರು. ಇವತ್ತಿನ ಮನಸ್ಥಿತಿ ಆ ರೀತಿ ಇಲ್ಲ. ಕೆಲವರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನೇ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

Tags:    

Similar News