ಗುಂಡ್ಲುಪೇಟೆ ಗಡಿಯಲ್ಲಿ ಮೇಕೆ ಮೇಯಿಸುತ್ತಿದ್ದ ವೃದ್ಧೆ ಹುಲಿ ಬಾಯಿಗೆ ಬಲಿ
ಸೋಮವಾರದಂದು ನಾಗಿಯಮ್ಮ ಅವರು ಎಂದಿನಂತೆ ತಮ್ಮ ಮೇಕೆಗಳನ್ನು ಮೇಯಿಸಲು ಅರಣ್ಯದಂಚಿನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಪೊದೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ಹುಲಿಯು ಏಕಾಏಕಿ ಅವರ ಮೇಲೆ ಎರಗಿದೆ. ಕಣ್ಣಿನ ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ಮಹಿಳೆಯನ್ನು ಅರಣ್ಯದೊಳಗೆ ಎಳೆದೊಯ್ದ ಹುಲಿ ಅವರನ್ನು ಬಲಿ ಪಡೆದಿದೆ.
ನಾಗಿಯಮ್ಮ ಹುಲಿಯ ದಾಳಿಗೆ ಬಲಿಯಾದ ಮಹಿಳೆ
ರಾಜ್ಯದ ಗಡಿ ಭಾಗದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮಧುಮಲೈ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಸೋಮವಾರ ನಡೆದಿದೆ. ಈ ಘಟನೆಯು ಗಡಿ ಭಾಗದ ಗ್ರಾಮಸ್ಥರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಗಡಿಭಾಗ ಹಾಗೂ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ತಮಿಳುನಾಡಿನ ನೀಲಗಿರಿ (ಊಟಿ) ಜಿಲ್ಲೆಯ ಗೂಡ್ಲೂರು ತಾಲ್ಲೂಕಿನ ಮಾವನಹಳ್ಳ ಗ್ರಾಮದ ನಿವಾಸಿ ನಾಗಿಯಮ್ಮ (61) ಎಂದು ಗುರುತಿಸಲಾಗಿದೆ. ಸೋಮವಾರದಂದು ನಾಗಿಯಮ್ಮ ಅವರು ಎಂದಿನಂತೆ ತಮ್ಮ ಮೇಕೆಗಳನ್ನು ಮೇಯಿಸಲು ಅರಣ್ಯದಂಚಿನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಪೊದೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ಹುಲಿಯು ಏಕಾಏಕಿ ಅವರ ಮೇಲೆ ಎರಗಿದೆ. ಕಣ್ಣಿನ ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ಮಹಿಳೆಯನ್ನು ಅರಣ್ಯದೊಳಗೆ ಎಳೆದೊಯ್ದ ಹುಲಿ ಅವರನ್ನು ಬಲಿ ಪಡೆದಿದೆ.
ಎಚ್ಚರಿಕೆ ಗಂಟೆ ಬಾರಿಸಿದ್ದ ವ್ಯಾಘ್ರ
ಈ ಪ್ರದೇಶದಲ್ಲಿ ಹುಲಿ ಹಾವಳಿ ಇದೇ ಮೊದಲೇನಲ್ಲ ಎನ್ನುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ನಾಗಿಯಮ್ಮ ಅವರ ಮೇಲೆ ದಾಳಿ ನಡೆದ ಇದೇ ಸ್ಥಳದಲ್ಲಿ ಕೇವಲ ಐದು ತಿಂಗಳ ಹಿಂದೆ ಹುಲಿಯು ಎರಡು ಹಸುಗಳನ್ನು ಕೊಂದು ಹಾಕಿತ್ತು. ಅಂದಿನಿಂದಲೇ ಈ ಭಾಗದ ರೈತರು ಮತ್ತು ಜಾನುವಾರು ಮಾಲೀಕರು ಪ್ರಾಣ ಭಯದಲ್ಲೇ ದಿನ ಕಳೆಯುವಂತಾಗಿತ್ತು. ಹಸುಗಳ ಮೇಲೆ ದಾಳಿ ನಡೆಸಿದ್ದ ಹುಲಿ ಈಗ ಮನುಷ್ಯರ ರಕ್ತ ರುಚಿ ಕಂಡಿರುವುದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾಹುತಗಳಿಗೆ ಎಡೆಮಾಡಿಕೊಡಬಹುದು ಎಂಬ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.
ಗಡಿ ಗ್ರಾಮಗಳಲ್ಲಿ ಹೆಚ್ಚಿದ ಆತಂಕ
ಬಂಡೀಪುರ ಮತ್ತು ಮಧುಮಲೈ ಎರಡೂ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾಗಿದ್ದು, ಪ್ರಾಣಿಗಳ ಸ್ವಚ್ಛಂದ ಸಂಚಾರಕ್ಕೆ ಮುಕ್ತವಾಗಿವೆ. ಆದರೆ ಅರಣ್ಯದಂಚಿನಲ್ಲಿ ವಾಸಿಸುವ ಜನರಿಗೆ ಈ ಸ್ವಚ್ಛಂದತೆಯೇ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ. ಜೀವನೋಪಾಯಕ್ಕಾಗಿ ಜಾನುವಾರು ಮೇಯಿಸಲು ಕಾಡಂಚಿಗೆ ಹೋಗಲೇಬೇಕಾದ ಅನಿವಾರ್ಯತೆಯಲ್ಲಿರುವ ಬಡ ಕುಟುಂಬಗಳು ಈಗ ಕಾಡಿನ ಕಡೆ ಮುಖ ಮಾಡಲು ಹೆದರುತ್ತಿವೆ.