ಪ್ರಜಾಪ್ರಭುತ್ವ ದಿನ | ಸೆ.15ರಂದು ಬೀದರ್‌ನಿಂದ ಚಾಮರಾಜನಗರವರೆಗೆ ಅತಿ ದೊಡ್ಡ ಮಾನವ ಸರಪಳಿ

ಕರ್ನಾಟಕ ಸರ್ಕಾರ, ರೋಟರಿ ಇಂಟರ್ ನ್ಯಾಷನಲ್, ವಿವಿಧ ಸಂಘ ಸಂಸ್ಧೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಈ ಬೃಹತ್ ದಾಖಲೆಯನ್ನು ಬರೆಯಲು ಮುಂದಾಗಿದೆ.

Update: 2024-09-13 13:02 GMT
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ,
Click the Play button to listen to article

ಸೆಪ್ಟಂಬರ್‌ 15ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ರಾಜ್ಯದ ತುತ್ತ ತುದಿಯ ಬೀದರ್ ಜಿಲ್ಲೆಯಿಂದ ದಕ್ಷಿಣದ ಚಾಮರಾಜನಗರ ಜಿಲ್ಲೆಯವರೆಗೆ ಅತಿ ದೊಡ್ಡ ಮಾನವ ಸರಪಳಿ ನಿರ್ಮಿಸುವ ಮೂಲಕ ಹೊಸ ದಾಖಲೆ ಬರೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.

ಕರ್ನಾಟಕ ಸರ್ಕಾರ, ರೋಟರಿ ಇಂಟರ್ ನ್ಯಾಷನಲ್, ವಿವಿಧ ಸಂಘ ಸಂಸ್ಧೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಈ ಬೃಹತ್ ದಾಖಲೆ ನಿರ್ಮಿಸಲು ಮುಂದಾಗಿದೆ. ಸೆ. 15ರ ಭಾನುವಾರ ಬೆಳಗ್ಗೆ 9.30ರಿಂದ 10 ಗಂಟೆಯವರೆಗಿನ ಅವಧಿಯಲ್ಲಿ ಆಯಾ ಜಿಲ್ಲೆಗಳಲ್ಲಿ ತಾಲೂಕು, ಹೋಬಳಿ, ಗ್ರಾಮಗಳಲ್ಲಿ ಜನರನ್ನು ಸಂಘಟಿಸಿ ಬೃಹತ್‌ ಮಾನವ ಸರಪಳಿ ನಿರ್ಮಿಸಲು ನಿರ್ಧರಿಸಲಾಗಿದೆ.

ಈ ಬೃಹತ್ ಅಭಿಯಾನಕ್ಕೆ ʼಜಾಯಿನ್ ಹ್ಯಾಂಡ್ಸ್ ಫಾರ್ ಡೆಮಾಕ್ರಸಿʼ ಎಂಬ ಹೆಸರನ್ನಿಡಲಾಗಿದೆ. ಬೀದರ್ ನಿಂದ ಚಾಮರಾಜನಗರದವರೆಗೆ 2,500 ಕಿ.ಮೀ.ವರೆಗೆ ಮಾನವ ಸರಪಳಿ ನಿರ್ಮಿಸಲು, 25 ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಹೊಂದಲಾಗಿದೆ. ಇದೇ ವೇಳೆ, 10 ಲಕ್ಷ ಸಸಿಗಳನ್ನು ನೆಡಲು ಕೂಡ ತೀರ್ಮಾನಿಸಲಾಗಿದೆ ಎಂದು ಹಿರಿಯ ಐಎಎಸ್‌ ಅಧಿಕಾರಿ ಮಣಿವಣ್ಣನ್ ಅವರು ʼಎಕ್ಸ್‌ʼ ಖಾತೆಯಲ್ಲಿ ಹೇಳಿದ್ದಾರೆ.

ಡಿಸಿಗಳಿಗೆ ಸೂಚನೆ

ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಕುರಿತಂತೆ ಸೂಚನೆ ನೀಡಲಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರ ಹಾಗೂ ಆಯಾ ಜಿಲ್ಲೆಗಳ ರೋಟರಿ ಕ್ಲಬ್ ಸದಸ್ಯರು, ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದ್ದು, ಅತಿದೊಡ್ಡ ಮಾನವ ಸರಪಳಿ ನಿರ್ಮಿಸಲು ಮುಂದಡಿ ಇಡಲಾಗಿದೆ.

ಮಾನವ ಸರಪಳಿ ಜೊತೆಗೆ ಆಯಾ ಜಾಗಗಳಲ್ಲೇ ಜನರು ತಮ್ಮ ಮೊಬೈಲ್ ಗಳಿಂದ ಸೆಲ್ಫಿ ತೆಗೆದು ಕಳುಹಿಸುವಂತೆ ಸರ್ಕಾರ ಕೋರಿದೆ. ಈ ಬಗ್ಗೆಯೂ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿರುವ ಅವರು, ಸೆಲ್ಫಿ ತೆಗೆದು ಆ ಫೋಟೋಗಳನ್ನು ನಿಗದಿತ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿ, ಎಲ್ಲಾ ಮಾಹಿತಿಗಳನ್ನು ನೀಡಿದರೆ, ಅವರಿಗೆ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದಕ್ಕೆ ಪ್ರಮಾಣಪತ್ರ ನೀಡಲಾಗುತ್ತದೆ. ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ಉತ್ತಮ ಭವಿಷ್ಯದ ಕಡೆಗೆ ಹೆಜ್ಜೆಯಿಡೋಣ ಬನ್ನಿ ಎಂದು ಮಣಿವಣ್ಣನ್ ಅವರು ತಿಳಿಸಿದ್ದಾರೆ.

Tags:    

Similar News