NEP ಜಾರಿಗೆ ಒಲವು | ಪದವಿ ಅವಧಿ 4 ವರ್ಷಕ್ಕೆ ಹೆಚ್ಚಿಸಲು ತೆರೆಮರೆ ಯತ್ನ?

ರಾಜ್ಯ ಸರ್ಕಾರ ಎನ್ಇಪಿ ಜಾರಿಗೆ ಒಲವು ಹೊಂದಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಪದವಿ ಅವಧಿಯನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸಲು ತೆರೆಮರೆಯ ಕಸರತ್ತು ನಡೆಯುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ

By :  Hitesh Y
Update: 2024-04-01 06:28 GMT
ಪದವಿ

ಒಂದು ಕಡೆ, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(NEP) ಜಾರಿಗೆ ಅವಕಾಶ ನೀಡುವುದಿಲ್ಲ ಎನ್ನುತ್ತಿರುವ ಕರ್ನಾಟಕ ಸರ್ಕಾರ, ಮತ್ತೊಂದು ಕಡೆ ರಾಜ್ಯದಲ್ಲಿ ಪದವಿ ಅವಧಿ ಈಗಿನ ಮೂರು ವರ್ಷವೇ ಇರಬೇಕೆ? ಅಥವಾ ನಾಲ್ಕು ವರ್ಷ ಅವಧಿ ಬೇಕೆ? ಎಂಬ ಕುರಿತು ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ಅಭಿಪ್ರಾಯ ಸಂಗ್ರಹಿಸುತ್ತಿದೆ. ಸರ್ಕಾರದ ಈ ದ್ವಂದ್ವ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕರ್ನಾಟಕದಲ್ಲಿ ಪದವಿ(degree) ಅವಧಿ 3 ವರ್ಷ ಸಾಕೆ? ಇಲ್ಲವೇ 4 ವರ್ಷಕ್ಕೆ ವಿಸ್ತರಿಸಬೇಕೆ? ಎಂದು ಪದವಿ ವಿದ್ಯಾರ್ಥಿಗಳಿಂದ ಉನ್ನತ ಶಿಕ್ಷಣ ಇಲಾಖೆ ಅಭಿಪ್ರಾಯ ಸಂಗ್ರಹಿಸುತ್ತಿದೆ.

"ಯಾವುದೇ ಕಾರಣಕ್ಕೂ ನಾವು ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ʼರಾಷ್ಟ್ರೀಯ ಶಿಕ್ಷಣ ನೀತಿ-2020(NEP)ʼ ಜಾರಿ ಮಾಡುವುದಕ್ಕೆ ಬಿಡುವುದಿಲ್ಲ. ಪರ್ಯಾಯವಾಗಿ ʼರಾಜ್ಯ ಶಿಕ್ಷಣ ನೀತಿ(SEP)ʼ ಅಳವಡಿಸಿಕೊಳ್ಳುತ್ತೇವೆ" ಎಂದು ಕಾಂಗ್ರೆಸ್ ವಿಧಾನಸಭಾ ಚುನಾವಣಾಪೂರ್ವದಲ್ಲಿ ಹೇಳಿತ್ತು. ಸರ್ಕಾರ ರಚಿಸಿದ ಬಳಿಕವೂ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿ ಕೂಡ ಹಲವು ಬಾರಿ ಆ ಮಾತನ್ನು ಪುನರುಚ್ಛರಿಸಿದ್ದರು.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಿದ್ದು, ಆಯೋಗವು ತನ್ನ ಪ್ರಥಮ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಿದೆ. ಮೂಲಗಳ ಪ್ರಕಾರ ಆಯೋಗದ ವರದಿಯಲ್ಲೂ ಪದವಿ ಅವಧಿ ಮೂರು ವರ್ಷ ಸಾಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಇದೀಗ ರಾಜ್ಯ ಸರ್ಕಾರ ಪದವಿ ಅವಧಿಯ ಕುರಿತು ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

5 , 8 ಮತ್ತು 9 ನೇ ತರಗತಿಗಳಿಗೆ ಹಿಂದಿನ ಬಿಜೆಪಿ ಸರ್ಕಾರ ʼರಾಷ್ಟ್ರೀಯ ಶಿಕ್ಷಣ ನೀತಿ-2020(NEP)ʼ ಅನುಸಾರ ಜಾರಿಗೆ ತಂದಿದ್ದ ಬೋರ್ಡ್‌ ಪರೀಕ್ಷೆ(ಪಬ್ಲಿಕ್ ಪರೀಕ್ಷೆ)ಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ ಪಟ್ಟು ಬಿಡದೆ ಸಮರ್ಥಿಸಿಕೊಂಡು ಪರೀಕ್ಷೆ ನಡೆಸಿರುವ ಸರ್ಕಾರ, ಇದೀಗ ಪದವಿ ಅವಧಿಯ ವಿಷಯದಲ್ಲೂ ಗುಟ್ಟಾಗಿ ʼರಾಷ್ಟ್ರೀಯ ಶಿಕ್ಷಣ ನೀತಿ-2020(NEP)ʼ ಪಾಲಿಸಲು ಮುಂದಾಗಿದೆ ಎಂಬ ಅನುಮಾನಗಳಿಗೆ ಈ ನಡೆ ಅವಕಾಶ ಮಾಡಿದೆ. ಮುಖ್ಯವಾಗಿ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಸರ್ಕಾರ ಪದವಿ ಅವಧಿಯನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸಲು ತೆರೆಮರೆಯ ಕಸರತ್ತು ನಡೆಸುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ. 

ಇನ್ನು ಕೇಂದ್ರ ಬಿಜೆಪಿ ಸರ್ಕಾರವು ಜಾರಿ ಮಾಡಿರುವ ʼರಾಷ್ಟ್ರೀಯ ಶಿಕ್ಷಣ ನೀತಿ-2020(NEP)ʼ ಸಮರ್ಪಕವಾಗಿಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ,ʼರಾಜ್ಯ ಶಿಕ್ಷಣ ನೀತಿ(SEP)ʼ ಅನುಷ್ಠಾನಗೊಳಿಸಿ, ನಾಲ್ಕು ವರ್ಷಗಳ ಪದವಿಯನ್ನು ಹಿಂಪಡೆಯುವುದಾಗಿ ಭರವಸೆ ನೀಡಿತ್ತು(ಹಲವು ವಿವಿಗಳಲ್ಲಿ ಬಿಜೆಪಿ ಅವಧಿಯಲ್ಲೇ ನಾಲ್ಕು ವರ್ಷದ ಪದವಿ ಜಾರಿಯಾಗಿದೆ). ಆದರೆ, ಇದೀಗ 4 ವರ್ಷಗಳ ಪದವಿ ಮುಂದುವರಿಸುವ ಬಗ್ಗೆ ಸರ್ಕಾರ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಶಿಕ್ಷಣ ಇಲಾಖೆಯ ಈ ಕ್ರಮಕ್ಕೆ ವಿದ್ಯಾರ್ಥಿ ಸಂಘಟನೆಗಳು ಕೂಡ ಆಕ್ಷೇಪ ವ್ಯಕ್ತಪಡಿಸಿವೆ.


ಯಾರಿಂದ ಅಭಿಪ್ರಾಯ ಸಂಗ್ರಹ ?

ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS)ಯು ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. 2021-22ನೇ ಸಾಲಿನಲ್ಲಿ ಡಿಗ್ರಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದು ಇದೀಗ ಮೂರನೇ ವರ್ಷದಲ್ಲಿ 5ನೇ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. “ಆತ್ಮೀಯ ವಿದ್ಯಾರ್ಥಿ, ದಯವಿಟ್ಟು UUCMS ಪೋರ್ಟಲ್‌ಗೆ ಲಾಗಿನ್ ಮಾಡಿ, ನಿಮ್ಮ ಪದವಿ ಆಯ್ಕೆಯ ಬಗ್ಗೆ ಪ್ರತಿಕ್ರಿಯೆ ನೀಡಿ. ಇದಕ್ಕೆ ಪ್ರತಿಕ್ರಿಯೆ ನೀಡುವುದು ಕಡ್ಡಾಯವಾಗಿದೆ. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಿಂದ ಶುಭಾಶಯಗಳು (Dear Student, Please login to UUCMS portal and give your feedback regarding your choice of Honors Degree. This feedback is compulsory. Best Wishes Department of Higher Education Government of Karnataka)" ಎನ್ನುವ ಸಂದೇಶವನ್ನು ವಿದ್ಯಾರ್ಥಿಗಳಿಗೆ ಕಳುಹಿಸಲಾಗಿದೆ.


ನಾಲ್ಕು ವರ್ಷಗಳ ಪದವಿ ಬೇಡ

“ರಾಜ್ಯ ಶಿಕ್ಷಣ ನೀತಿ ಆಯೋಗ ನಡೆಸಿದ ಸಭೆಗಳಲ್ಲಿಯೂ ನಾಲ್ಕು ವರ್ಷಗಳ ಪದವಿ ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ನಾಲ್ಕು ವರ್ಷಗಳ ಪದವಿಗೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದರೆ, ಇದೀಗ ಬಿಜೆಪಿ ಸರ್ಕಾರದ ಎನ್ಇಪಿ (NEP) ಪ್ರಕಾರವೇ ರಾಜ್ಯ ಕಾಂಗ್ರೆಸ್ ಸರ್ಕಾರ ಪದವಿ ಅವಧಿಯನ್ನು ನಾಲ್ಕು ವರ್ಷಗಳಿಗೆ ಹೆಚ್ಚಿಸಲು ಮುಂದಾಗಿದೆ” ಎಂದು ಎಐಡಿಎಸ್ಒ (AIDSO) ವಿದ್ಯಾರ್ಥಿ ಸಂಘಟನೆಯ ಬೆಂಗಳೂರು ಜಿಲ್ಲೆ ಅಧ್ಯಕ್ಷೆ ಸಿ.ಎಂ. ಅಪೂರ್ವ ಆರೋಪಿಸಿದ್ದಾರೆ.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, “ಎನ್ಇಪಿ (NEP) ಪ್ರಕಾರ 4 ವರ್ಷಗಳ ಪದವಿ ಬೇಡ ಎಂದು ಹೇಳುತ್ತಿದ್ದರೂ ಅದನ್ನೇ ಜಾರಿ ಮಾಡಲು ರಾಜ್ಯ ಸರ್ಕಾರವೂ ಮುಂದಾಗಿದೆ. ಈಗ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದರೆ, ಇನ್ನು ಕೆಲವರಿಗೆ ಪರೀಕ್ಷೆ ಮುಗಿದು ರಜೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮೆಸೇಜ್ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಅಭಿಪ್ರಾಯ ತಿಳಿಸುವುದು ನಮ್ಮ ಆಯ್ಕೆ. ಆದರೆ, ಶಿಕ್ಷಣ ಇಲಾಖೆ ಕಡ್ಡಾಯ ಅಭಿಪ್ರಾಯಕ್ಕೆ ಒತ್ತಾಯಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ವಿಶ್ವವಿದ್ಯಾಲಯಗಳ ಒತ್ತಡ

ಕರ್ನಾಟಕದಲ್ಲಿ ಎನ್ಇಪಿ ಜಾರಿ ಮಾಡಬೇಕು ಎಂದು ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ಒತ್ತಾಯ ಮಾಡುತ್ತಿವೆ. ವಿದ್ಯಾರ್ಥಿಗಳು ನಾಲ್ಕ ವರ್ಷ ಪದವಿ ಮಾಡುವುದರಿಂದ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ. ಅಲ್ಲದೇ ವಿದೇಶದಿಂದ ಬಂದು ಇಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೂ ಇದು ಅನುಕೂಲವಾಗಲಿದೆ ಎಂದು ಖಾಸಗಿ ವಿಶ್ವವಿದ್ಯಾಲಯಗಳು ಒತ್ತಾಯಿಸುತ್ತಿವೆ. ರಾಜ್ಯ ಶಿಕ್ಷಣ ನೀತಿ ಆಯೋಗ ನಡೆಸಿದ ಸಭೆಯಲ್ಲಿ ಖಾಸಗಿ ಶಾಲೆಗಳು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದಕ್ಕೆ ಸರ್ಕಾರಿ ವಿಶ್ವವಿದ್ಯಾಲಯಗಳಿಂದ ವಿರೋಧ ವ್ಯಕ್ತವಾಗಿತ್ತು ಎನ್ನುತ್ತಾರೆ ಎಐಡಿಎಸ್ಒ ಸದಸ್ಯರು.

ಖಾಸಗಿ ಶಾಲೆಗಳಿಗೆ ಹೇಗೆ ಲಾಭ 

ಪದವಿ ಅವಧಿಯನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸುವುದರಿಂದ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತೊಂದು ವರ್ಷ ಹೆಚ್ಚಿಗೆ ವಿದ್ಯಾಭ್ಯಾಸ ಮಾಡುತ್ತಾರೆ. ಅಲ್ಲದೇ ವಿದೇಶಿ ವಿದ್ಯಾರ್ಥಿಗಳು ಕರ್ನಾಟಕದ ಖಾಸಗಿ ವಿಶ್ವವಿದ್ಯಾಲಯಕ್ಕೆ ಸೇರಲು ಇಲ್ಲವೇ ಇಲ್ಲಿನ ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗಲಿದೆ. ವಿದ್ಯಾರ್ಥಿಗಳ ಕಾಲೇಜು ಶುಲ್ಕವೂ ಹೆಚ್ಚಳವಾಗುವುದರಿಂದ ಕಾಲೇಜು ಆಡಳಿತ ಮಂಡಳಿಗೆ ಆದಾಯವೂ ಹೆಚ್ಚಾಗಲಿದೆ. ಇದೇ ಕಾರಣಕ್ಕೆ ಖಾಸಗಿ ವಿಶ್ವವಿದ್ಯಾಲಯಗಳು ಪದವಿ ಅವಧಿಯನ್ನು 4 ವರ್ಷಗಳಿಗೆ ವಿಸ್ತರಿಸಲು ಒತ್ತಡ ತಂತ್ರ ಅನುಸರಿಸುತ್ತಿವೆ ಎನ್ನಲಾಗಿದೆ. 

ಸರ್ಕಾರದ ಹಂತದಲ್ಲಿ ನಿರ್ಧಾರ ಬಾಕಿ

́ಸರ್ಕಾರಕ್ಕೆ ರಾಜ್ಯ ಶಿಕ್ಷಣ ನೀತಿ ಆಯೋಗ ಒಂದು ಹಂತದ ವರದಿ ನೀಡಿದೆ. ಆಯೋಗ ನೀಡಿದ ವರದಿಯ ಬಗ್ಗೆ ಸರ್ಕಾರ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನು ಮೂರು ವರ್ಷ ಪದವಿ ಅಥವಾ ನಾಲ್ಕು ವರ್ಷ ಪದವಿ ಎನ್ನುವುದು ಇಲ್ಲ. ಅದು ವಿದ್ಯಾರ್ಥಿಗಳ ಆಯ್ಕೆ ಮಾತ್ರ" ಎಂದು ರಾಜ್ಯ ಶಿಕ್ಷಣ ನೀತಿ ಆಯೋಗದ ಸದಸ್ಯರೊಬ್ಬರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ಹೆಚ್ಚು ಅನುದಾನ ಬರುವ ಸಾಧ್ಯತೆ

ʼರಾಷ್ಟ್ರೀಯ ಶಿಕ್ಷಣ ನೀತಿ-2020(NEP)ʼ ಜಾರಿಗೊಳಿಸಿ, ಅದರಂತೆ ಪದವಿ ಅವಧಿಯನ್ನು ನಾಲ್ಕು ವರ್ಷಕ್ಕೆ ವಿಸ್ತರಿಸುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಹೆಚ್ಚಾಗಲಿದೆ. ಅಲ್ಲದೇ ಕೇಂದ್ರ ಶಿಕ್ಷಣ ಇಲಾಖೆಯಿಂದ ವಿಶ್ವ ವಿದ್ಯಾಲಯಗಳಿಗೆ ಅನುದಾನ ಬಿಡುಗಡೆಯಾಗುತ್ತದೆ. ಎನ್ಇಪಿ ಜಾರಿಯಾಗದಿದ್ದರೆ, ಅನುದಾನ ಸಿಗುವುದು ಕಷ್ಟವಾಗಲಿದೆ. ಹೀಗಾಗಿ, ಪದವಿ ಅವಧಿಯನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸುವ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತಿರುವ ಸಾಧ್ಯತೆಯೂ ಇದೆ ಎನ್ನುವ ಅಭಿಪ್ರಾಯವೂ ಕೇಳಿಬಂದಿದೆ.

ರಾಜ್ಯ ಶಿಕ್ಷಣ ನೀತಿ ಆಯೋಗ ರಚನೆ

ಕರ್ನಾಟಕ ಸರ್ಕಾರವು 2023ರ ಅಕ್ಟೋಬರ್‌ನಲ್ಲಿ ʼರಾಜ್ಯ ಶಿಕ್ಷಣ ನೀತಿ(SEP)ʼಯ ಕರಡು ರೂಪಿಸುವ ಉದ್ದೇಶದಿಂದ ಶಿಕ್ಷಣ ತಜ್ಞ, ಯುಜಿಸಿ ಮಾಜಿ ಅಧ್ಯಕ್ಷರಾದ ಪ್ರೊ.ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ 11 ಸದಸ್ಯರನ್ನು ಒಳಗೊಂಡ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಿತ್ತು. ಅಲ್ಲದೇ 2024ರ ಫೆ.28ರ ಒಳಗಾಗಿ ಕರ್ನಾಟಕ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆಯೋಗಕ್ಕೆ ಕಾಲಾವಕಾಶ ನೀಡಲಾಗಿತ್ತು. ಈಗಾಗಲೇ ಆಯೋಗ ಪ್ರಥಮ ವರದಿಯನ್ನು ನೀಡಿದೆ. ಆದರೆ, ಇನ್ನಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡಲು ಆಯೋಗ ಕೋರಿರುವುದರಿಂದ ಆಯೋಗದ ಅವಧಿಯನ್ನು ಸರ್ಕಾರ ವಿಸ್ತರಿಸಿದೆ.

Tags:    

Similar News