Maternal Deaths | ಪರಿಣಾಮಕಾರಿ ಚಿಕಿತ್ಸಾ ಕ್ರಮಗಳ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವು; ವರದಿ ಬಹಿರಂಗ

ಈ ಸಾವುಗಳಲ್ಲಿ ಸುಮಾರು 80% ರಷ್ಟು 19 ಮತ್ತು 30 ವರ್ಷ ವಯಸ್ಸಿನ ಮಹಿಳೆಯರಲ್ಲಿ ಸಂಭವಿಸಿವೆ ಮತ್ತು ಪ್ರಸವಪೂರ್ವ ಆರೈಕೆಯ ಸಮಯದಲ್ಲಿ ಸಾವನ್ನಪ್ಪಿದ ಮಹಿಳೆಯರಲ್ಲಿ ಸುಮಾರು 62.6% ರಷ್ಟು ಸಿಸೇರಿಯನ್ ಹೆರಿಗೆಗೆ ಒಳಗಾಗಿದ್ದರು. ಈ ಅವಧಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಳು ಹುಡುಗಿಯರು ಸಹ ಸಾವನ್ನಪ್ಪಿದ್ದಾರೆ.;

Update: 2025-04-05 05:44 GMT

ಬಾಣಂತಿ 

ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಆತಂಕ ಸೃಷ್ಟಿಸಿ, ರಾಜಕೀಯ ಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದ್ದ ಬಾಣಂತಿಯರ ಸಾವಿನ ಪ್ರಕರಣಗಳ ಕುರಿತು ತನಿಖೆ ನಡೆಸಿರುವ ರಾಜ್ಯ ಮಟ್ಟದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ಹಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. 

2024 ಏ.1 ರಿಂದ ಡಿ. 31ರ ಅವಧಿಯಲ್ಲಿ ರಾಜ್ಯದಲ್ಲಿ ಪ್ರಸವ ಪೂರ್ವ ಮತ್ತು ಪ್ರಸವದ ನಂತರ ಒಟ್ಟು 464 ಬಾಣಂತಿಯರ ಸಾವು ಸಂಭವಿಸಿದೆ. ಆದರೆ, ಪರಿಣಾಮಕಾರಿ ಚಿಕಿತ್ಸಾ ವಿಧಾನಗಳಿಂದ ಶೇ 70ರಷ್ಟು ಸಾವುಗಳನ್ನು ತಡೆಯಬಹುದಾಗಿತ್ತು ಎಂದು ತಜ್ಞರ ಸಮಿತಿ ವರದಿಯಲ್ಲಿ ತಿಳಿಸಿದೆ.

ಕಳೆದ ನ.9 ರಿಂದ 11 ರ ವರೆಗೆ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು ಸಂಭವಿಸಿತ್ತು. ಈ ಎಲ್ಲಾ ಸಾವುಗಳು ಸಿಸೇರಿಯನ್ ಶಸ್ತ್ರಚಿಕಿತ್ಸೆ ನಂತರ ಸಂಭವಿಸಿದ್ದ ಕಾರಣ ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬಾಣಂತಿಯರ ಸಾವಿನ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡಲು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಸವಿತಾ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚಿಸಿತ್ತು. 

ಈ ಸಂಬಂಧ ಶುಕ್ರವಾರ 18 ಪುಟಗಳ ಮಧ್ಯಂತರ ವರದಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸುದ್ದಿಗೋಷ್ಟಿಯಲ್ಲಿ ಬಹಿರಂಗಪಡಿಸಿದ್ದಾರೆ.

2024 ಏ.1 ರಿಂದ ಡಿ.31ರ ಅವಧಿಯಲ್ಲಿ ಒಟ್ಟು 464 ತಾಯಂದಿರ ಸಾವುಗಳು ಸಂಭವಿಸಿವೆ. ಬೆಂಗಳೂರು ನಗರದಲ್ಲಿ 71, ಬಳ್ಳಾರಿಯಲ್ಲಿ 38, ಧಾರವಾಡ-35, ಕಲಬುರಗಿ-33 ಹಾಗೂ ಬೆಳಗಾವಿಯಲ್ಲಿ 31 ಬಾಣಂತಿಯರ ಸಾವು ದಾಖಲಾಗಿವೆ. ಈ ಸಾವುಗಳಲ್ಲಿ ಇತರ ರಾಜ್ಯಗಳ 18 ಮಹಿಳೆಯರ ಸಾವುಗಳು ಸೇರಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

19-30ವರ್ಷದವರೇ ಹೆಚ್ಚು ಸಾವು

ಬಾಣಂತಿಯರ ಸಾವುಗಳಲ್ಲಿ ಸುಮಾರು ಶೇ 80 ರಷ್ಟು 19 ರಿಂದ 30 ವರ್ಷ ವಯಸ್ಸಿನ ಮಹಿಳೆಯಲ್ಲಿ ಇದ್ದಾರೆ.  ಪ್ರಸವಪೂರ್ವ ಆರೈಕೆಯ ಸಮಯದಲ್ಲಿ ಸಾವನ್ನಪ್ಪಿದ ಮಹಿಳೆಯರಲ್ಲಿ ಸುಮಾರು ಶೇ 62.6 ರಷ್ಟು ಸಿಸೇರಿಯನ್ ಹೆರಿಗೆಗೆ ಒಳಗಾಗಿದ್ದರು. ಈ ಅವಧಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಳು ಹುಡುಗಿಯರು ಸಹ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.  

ಕಳಪೆ ಔಷಧ ಪರಿಣಾಮ

ಬಳ್ಳಾರಿಯಲ್ಲಿ ಸಂಭವಿಸಿದ ಐವರು ತಾಯಂದಿರ ಸಾವಿನ ನಂತರ ಆರೋಗ್ಯ ಇಲಾಖೆ 15 ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿತು. ಈ ಪ್ರಕರಣದಲ್ಲಿ ಎಂಡೋಟಾಕ್ಸಿನ್ ಕಾರಣದಿಂದಲೇ ಬಾಣಂತಿಯರ ಸಾವು ಸಂಭವಿಸಿದೆ ಎಂದು ತಜ್ಞರ ಸಮಿತಿಯ ತನಿಖೆಯಿಂದ ದೃಢಪಟ್ಟಿದೆ.

ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಕಳಪೆ ಗುಣಮಟ್ಟದ ರಿಂಗರ್ಸ್ ಲ್ಯಾಕ್ಟೇಟ್ ದ್ರಾವಣ ಪೂರೈಸಿತ್ತು. ಇದೇ ದ್ರಾವಣದಿಂದ 13 ಮಂದಿ ತಾಯಂದಿರ ಸಾವುಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿವೆ. ರಾಯಚೂರು ಮತ್ತು ಬೆಂಗಳೂರು ನಗರದಲ್ಲಿ ತಲಾ ನಾಲ್ಕು, ಉತ್ತರ ಕನ್ನಡದಲ್ಲಿ ಮೂರು ಮತ್ತು ಯಾದಗಿರಿ ಮತ್ತು ಬೆಳಗಾವಿಯಲ್ಲಿ ತಲಾ ಒಂದು ಸಾವು ರಿಂಗರ್ಸ್‌ ಲ್ಯಾಕೇಟ್‌ ದ್ರಾವಣದಿಂದ ಸಂಭವಿಸಿದೆ ಎಂದು ವರದಿ ಬೊಟ್ಟು ಮಾಡಿದೆ.  

ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಯೋಜನೆ 

2024-25 ರಲ್ಲಿ ರಾಜ್ಯಾದ್ಯಂತ ತಾಯಂದಿರ ಮರಣ ಪ್ರಮಾಣ (ಎಂಎಂಆರ್‌) ಶೇ 57 ಇದೆ. ಮುಂದಿನ ಎರಡು ವರ್ಷಗಳಲ್ಲಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಇಲಾಖೆಯು ರೂ.320 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ತಿಳಿಸಿದ್ದಾರೆ.

2025ರ ಮೊದಲ ತ್ರೈಮಾಸಿಕದಲ್ಲಿ 102 ತಾಯಂದಿರ ಸಾವುಗಳು ಸಂಭವಿಸಿವೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿದ್ದ 148 ಸಾವಿನೊಂದಿಗೆ ಹೋಲಿಕೆ ಮಾಡಿದರೆ ಪ್ರಮಾಣ ಕುಸಿದಿದೆ ಎಂದು ಹೇಳಿದ್ದಾರೆ. 

ಸಾವನ್ನಪ್ಪಿದ 319 ಮಹಿಳೆಯರು ಶೇ 68.75 ಕ್ಕಿಂತ ಹೆಚ್ಚಿನ ಅಪಾಯದ ಗರ್ಭಧಾರಣೆ ಹೊಂದಿದ್ದರು. ಶೇ ೩೩ ರಷ್ಟು ಮಹಿಳೆಯರು (153) ಅಧಿಕ ರಕ್ತದೊತ್ತಡ ಹೊಂದಿದ್ದರು. ಶೇ 27ರಷ್ಟು ಮಹಿಳೆಯರು (125) ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಶೇ 9ರಷ್ಟು ಸೆಪ್ಸಿಸ್, ಶೇ 4ರಷ್ಟು ಹೃದಯ ಸಮಸ್ಯೆ, ಶೇ 4ರಷ್ಟು ಸೋಂಕು, ಶೇ 3 ರಷ್ಟು ಪಲ್ಮನರಿ ಎಂಬಾಲಿಸಮ್ ಸೇರಿ ಇನ್ನಿತರೆ ಕಾರಣಗಳಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.  

ವರದಿಯ ಶಿಫಾರಸುಗಳೇನು? 

ತಜ್ಞರ ಸಮಿತಿಯು ತಾಯಂದಿರ ಸಾವು ತಡೆಗಟ್ಟಲು 27 ಪ್ರಮುಖ ಶಿಫಾರಸುಗಳನ್ನು ಮಾಡಿದೆ. 

  • ಪ್ರತಿ ಗರ್ಭಿಣಿಯ ಅಪಾಯಕಾರಿ ಅಂಶಗಳ ಆರಂಭಿಕ ತಪಾಸಣೆ
  • ಸೋಂಕುಗಳ ನಿಯಂತ್ರಣ ಹಾಗೂ ಮೇಲ್ವಿಚಾರಣೆ (HIV, ಸಿಫಿಲಿಸ್, ಟಿಬಿ, ಹೆಪಟೈಟಿಸ್ ಮುಂತಾದವು)
  • ರಾಜ್ಯಾದ್ಯಂತ ರಕ್ತ ಭಂಡಾರ ಹಾಗೂ ವೈದ್ಯಕೀಯ ಉಪಕರಣಗಳ ಸುಧಾರಣೆ
  • ಸಾಮಾನ್ಯ ಹೆರಿಗೆ ನಂತರ ಕನಿಷ್ಠ 3 ದಿನ ಮತ್ತು ಸಿಸೇರಿಯನ್ ನಂತರ 7 ದಿನಗಳ ಆಸ್ಪತ್ರೆ ವಾಸ್ತವ್ಯ ಕಡ್ಡಾಯಗೊಳಿಸುವುದು
  • FCM (ಫೆರಿಕ್ ಕಾರ್ಬಾಕ್ಸಿಮಾಲ್ಟೋಸ್) ಇಂಜೆಕ್ಷನ್ ಬಳಕೆ ಮೂಲಕ ರಕ್ತಹೀನತೆಯ ತಡೆವೈದ್ಯರ ನಿರ್ಲಕ್ಷ್ಯ ಪ್ರಕರಣಗಳು

ನಿರ್ಲಕ್ಷ್ಯ ವಹಿಸಿದವರಿಗೆ ನೋಟಿಸ್‌

ಕಳೆದ ಐದು ವರ್ಷಗಳಲ್ಲಿ ತಾಯಂದಿರ ಮರಣ ಪ್ರಮಾಣ ಕುಸಿದಿದ್ದರೂ ವ್ಯವಸ್ಥಿತ ವೈಫಲ್ಯಗಳಿಂದಾಗಿ ಬಾಣಂತಿಯರ ಸಾವು ಸಂಭವಿಸಿದೆ. ಇದನ್ನು ತಡೆಯಲು ಮತ್ತಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಸಂಭವಿಸಿರುವ 464ಬಾಣಂತಿಯರ ಸಾವಿನಲ್ಲಿ ಶೇ 65.7 ರಷ್ಟು ಸಾವುಗಳು ಸರ್ಕಾರಿ ಸೌಲಭ್ಯ ಹೊಂದಿರುವಲ್ಲೇ ಸಂಭವಿಸಿದೆ. ಅದೇ ರೀತಿ ಶೇ 22.1 ಸಾವುಗಳು ಖಾಸಗಿ ಸೌಲಭ್ಯದಲ್ಲಿ, ಶೇ 10 ರಷ್ಟು ಮನೆಯಿಂದ ಆಸ್ಪತ್ರೆ ಅಥವಾ ಆಸ್ಪತ್ರೆಗಳ ನಡುವಿನ ಸಾರಿಗೆಯಲ್ಲಿ ಸಂಭವಿಸಿವೆ. 10 ಪ್ರಕರಣಗಳಲ್ಲಿ ವೈದ್ಯರ ನಿರ್ಲಕ್ಷ್ಯ ಸಾಬೀತಾಗಿದೆ. ಈ ಬಗ್ಗೆ ಇಲಾಖಾ ವಿಚಾರಣೆ ನಡೆಸಿ ಅವರಿಗೆ ನೋಟಿಸ್‌ ನೀಡಿದ್ದೇವೆ ಎಂದು ವಿವರಿಸಿದ್ದಾರೆ.

ಸಕಾಲಿಕ ನಿರ್ವಹಣೆ, ಅಗತ್ಯ ಸೌಲಭ್ಯಗಳ ಲಭ್ಯತೆ ಹಾಗೂ ಆರೋಗ್ಯ ಕಾರ್ಯಕರ್ತರ ತರಬೇತಿಯಿಂದ ತಾಯಂದಿರ ಸಾವಿನ ಶೇ 70ಕ್ಕೂ ಹೆಚ್ಚು ಪ್ರಮಾಣ ತಡೆಗಟ್ಟಬಹುದಾಗಿತ್ತು. ಇದೀಗ ಇಂತಹ ದುರಂತಗಳನ್ನು ತಡೆಯಲು ಸರ್ಕಾರ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. 

ವರ್ಷವಾರು ತಾಯಂದಿರ ಮರಣ ಪ್ರಮಾಣ (ಪ್ರತಿ 1 ಲಕ್ಷ ಜೀವಂತ ಜನನಕ್ಕೆ)

2020-21: 714 ಸಾವು

2021-22: 635 ಸಾವು

2022-23: 594 ಸಾವು

2023-24: 550 ಸಾವು

2024-25: 530 ಸಾವು

Tags:    

Similar News