ಕೇಂದ್ರ ಉಕ್ಕು ಸಚಿವರ ಸ್ವಕ್ಷೇತ್ರದಲ್ಲೇ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ ಡಿಸಿಸಿ ಬ್ಯಾಂಕ್
ಜೆಡಿಎಸ್ ಕಾರ್ಯಕರ್ತರು ಸೋಲು-ಗೆಲುವನ್ನ ಸಮವಾಗಿ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಬೆಂಬಲಿತ ಮತ್ತೊಬ್ಬ ಪ್ರತಿನಿಧಿ ಆಯ್ಕೆಯಾಗುವ ಸಾಧ್ಯತೆ ಇದ್ದು, ಉಳಿದ ಮೂರು ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ
ಕೇಂದ್ರ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದಿಂದ ಎಂಟು ಜನ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಮಂಗಳವಾರ ನಗರದ ಸರ್. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಸೋಲು-ಗೆಲುವನ್ನ ಸಮವಾಗಿ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಬೆಂಬಲಿತ ಮತ್ತೊಬ್ಬ ಪ್ರತಿನಿಧಿ ಆಯ್ಕೆಯಾಗುವ ಸಾಧ್ಯತೆ ಇದ್ದು, ಉಳಿದ ಮೂರು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಶಾಸಕರು, ಪಕ್ಷದ ಮುಖಂಡರು ಜವಾಬ್ದಾರಿಯಿಂದ ಚುನಾವಣೆ ಮಾಡಿದ್ದಾರೆ. ಸಹಕಾರ ಕ್ಷೇತ್ರದ ಪರಿಕಲ್ಪನೆ ಕಟ್ಟಿದ್ದು ಶಂಕರೇಗೌಡರು, ನಾನೂ ಸ್ಥಳೀಯ ಸಂಸ್ಥೆಗಳಿಂದ ರಾಜಕೀಯಕ್ಕೆ ಬಂದವನು. ಸಹಕಾರ ಕ್ಷೇತ್ರ ಸಾರ್ವಜನಿಕರಿಗೆ ಹತ್ತಿರವಾಗಿದೆ ಎಂದು ತಿಳಿಸಿದರು.
ರಾಜಕೀಯ ಉದ್ದೇಶದಿಂದ ಟೀಕೆ
ಗೆಲುವಿಗೆ ಕಾರಣರಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ನಮ್ಮ ಕೆಲಸ. ಕಾಂಗ್ರೆಸ್ ಹೆಚ್ಚು ಸ್ಥಾನವನ್ನು ಗಳಿಸುವ ಮೂಲಕ ಅಧಿಕಾರ ಪಡೆದಿದೆ. ನಮ್ಮ ಪಕ್ಷ ಎಲ್ಲರಿಗೂ ಅವಕಾಶ ಕೊಟ್ಟು ಬೆಂಬಲಿಸುತ್ತಿದೆ. ರೈತರ ಸಾಲ ಮನ್ನಾಕ್ಕೆ ನೂರಾರು ಕೋಟಿ ರೂಪಾಯಿ ನೀಡಿದೆ. ಈಗಾಗಲೇ ಡಿಸಿಸಿ ಬ್ಯಾಂಕ್‌ನ 12 ಸ್ಥಾನಗಳ ಪೈಕಿ 8 ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕೈ ಹಿಡಿದ ಜನ
ಜಿಲ್ಲೆಯಲ್ಲಿ ಜೆಡಿಎಸ್ ಭದ್ರವಾಗಿದ್ದರು ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದೆ. ಚುನಾವಣೆ ಗೆದ್ದಾಗ ಹಿಗ್ಗುವುದು, ಸೋತಾಗ ಓಡಿ ಹೋಗುವುದು ಎರಡೂ ತಪ್ಪು. ನಾವು ಯಾವಾಗಲೂ ಹಿಗ್ಗುವುದಿಲ್ಲ. ಅವಕಾಶ ಸಿಕ್ಕಾಗ ಕೆಲಸ ಮಾಡುತ್ತೇವೆ. ನಾನು ಜೆಡಿಎಸ್‌ನಲ್ಲಿದ್ದಾಗಲೂ ನೂರಾರು ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೆ. ಕಾಂಗ್ರೆಸ್ ಪಕ್ಷ ಈಗ ಹೆಚ್ಚಿನ ಜವಾಬ್ದಾರಿ ಕೊಟ್ಟಿದ್ದು, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಜೆಡಿಎಸ್‌ನಂತೆ ಟೀಕಿಸುವುದಿಲ್ಲ
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಕಾಂಗ್ರೆಸ್ ಸೋತಿದ್ದರೆ ನಾವಾವೆಲ್ಲರು ಒಂದು ತಿಂಗಳು ಊರು ಬಿಡುವಂತೆ ಜೆಡಿಎಸ್ ಕಾರ್ಯಕರ್ತರು ಟೀಕಿಸುತ್ತಿದ್ದರು ಹಾಗೂ ಲಘುವಾಗಿ ಮಾತನಾಡುತ್ತಿದ್ದರು.ಆದರೆ ಅವರ ಹಾಗೆ ನಾವು ಟೀಕೆ ಮಾಡಿ ಲಘುವಾಗಿ ಮಾತನಾಡುವುದಿಲ್ಲ. ಜಿಲ್ಲೆಗೆ ಜೆಡಿಎಸ್ ಕೊಡುಗೆ ಏನು ಎಂದು ಪ್ರಶ್ನಿಸಿದರು.