ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋದ ಮಗಳು; ಕೆರೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಹೆಚ್.ಡಿ. ಕೋಟೆ ತಾಲೂಕಿನ ಬೂದನೂರು ಗ್ರಾಮದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಹದೇವಸ್ವಾಮಿ ಅವರ ಹಿರಿಯ ಪುತ್ರಿ ಅರ್ಪಿತಾ ಇತ್ತೀಚೆಗೆ ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿದ್ದರಿಂದ ಮನನೊಂದು ಮೂವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.;
ಪ್ರಿಯಕರನೊಂದಿಗೆ ಮಗಳು ಮನೆ ಬಿಟ್ಟು ಹೋಗಿದ್ದರಿಂದ ತೀವ್ರ ಮನನೊಂದ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.
ಬೂದನೂರು ಗ್ರಾಮದ ಮಹದೇವಸ್ವಾಮಿ, ಮಂಜುಳಾ, ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮಹದೇವಸ್ವಾಮಿ ಅವರ ಹಿರಿಯ ಪುತ್ರಿ ಅರ್ಪಿತಾ ಇತ್ತೀಚೆಗೆ ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಮಹದೇವಸ್ವಾಮಿ ಹಾಗೂ ಮಂಜುಳಾ ತೀವ್ರ ನೊಂದಿದ್ದರು.
ಮಹದೇವಸ್ವಾಮಿ, ಮಂಜುಳಾ ಹಾಗೂ ಹರ್ಷಿತಾ ಅವರು ಮನೆಯಿಂದ ದಿಢೀರ್ ಕಾಣೆಯಾಗಿದ್ದರು. ಶನಿವಾರ ಈ ಮೂವರ ಚಪ್ಪಲಿ, ಬಟ್ಟೆ ಹಾಗೂ ಬೈಕ್ ಬೂದನೂರು ಕೆರೆಯ ದಡದಲ್ಲಿ ಪತ್ತೆಯಾಗಿತ್ತು. ಮೂವರೂ ಕೆರೆಗೆ ಹಾರಿ ಮೃತಪಟ್ಟಿರುವ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದಾಗ ಶವಗಳು ಕೆರೆಯಲ್ಲಿ ಪತ್ತೆಯಾಗಿವೆ.
ಮೂವರು ಕೂಡ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಮೂರು ಮೃತದೇಹಗಳು ಒಂದೇ ಕಡೆ ಪತ್ತೆಯಾದವು ಎಂದು ಪೊಲೀಸರು ತಿಳಿಸಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.