Garbage Problem Part 2 | ಗ್ರಾಮಸ್ಥರಿಗೆ ವಿಷವುಣಿಸುವ ಎಂಎಸ್‌ಜಿಪಿ ಎಂಬ ರʼಕ್ಕಸʼ ಘಟಕ !
ದೊಡ್ಡಬಳ್ಳಾಪುರ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಗರೇನಹಳ್ಳಿಯಲ್ಲಿರುವ ಎಂಎಸ್‌ಜಿಪಿ ಘಟಕದಿಂದ ಬರುವ ದುರ್ವಾಸನೆ, ನೊಣಗಳ ಹಾವಳಿಗೆ ಇಲ್ಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಪರಿಸ್ಥಿತಿ ಹೇಳತೀರದಾಗಿದೆ.;
ಮಾವು, ಹಲಸು, ವಿವಿಧ ಹೂಗಳಿಂದ ಕಂಪು ಸೂಸುತ್ತಿದ್ದ ಗ್ರಾಮಗಳು ಇಂದು ತ್ಯಾಜ್ಯದ ದುರ್ವಾಸನೆಗೆ ಹೈರಾಣಾಗಿವೆ. ಮೂಗು ಮುಚ್ಚಿಕೊಂಡರೂ ದುರ್ವಾಸನೆ ಸಹಿಸಲು ಆಗುತ್ತಿಲ್ಲ.
ಅವೈಜ್ಞಾನಿಕ ಕಸ ವಿಲೇವಾರಿಯಿಂದಾಗಿ ಕುಡಿಯುವ ನೀರಿನ ಮೂಲಗಳು ಹಸಿರು ಹಾಗೂ ಕಪ್ಪು ಬಣ್ಣಕ್ಕೆ ತಿರುಗಿ ಜಾನುವಾರುಗಳೂ ಸೇವಿಸಲು ಯೋಗ್ಯವಾಗಿಲ್ಲ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಏದುಸಿರು ಬಿಡುತ್ತಿರುವುದು ಯಾವುದೋ ಒಂದು ಗ್ರಾಮವಲ್ಲ. ಹತ್ತರಿಂದ ಹದಿನೈದು ಗ್ರಾಮಗಳಲ್ಲಿ ಕಂಡು ಬರುತ್ತಿರುವ ವಾಸ್ತವ.
ಬೆಂಗಳೂರಿನಿಂದ 75 ಕಿ.ಮೀ ಹಾಗೂ ದಾಬಸ್ ಪೇಟೆ ಕೈಗಾರಿಕಾ ವಲಯದಿಂದ ಕೇವಲ 20 ಕಿ.ಮೀ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಘೋಷಿತ ಯೋಜನೆ ʼಕ್ವಿನ್ ಸಿಟಿʼ ಹಾಗೂ ಬಳಕೆಗೆ ಮುಕ್ತವಾಗಿರುವ ಉಪನಗರ ವರ್ತುಲ ರಸ್ತೆಯಿಂದ (STRR) 10ಕಿ.ಮೀ ದೂರದಲ್ಲಿರುವ ಚಿಗರೇನಹಳ್ಳಿ ಸೇರಿ ಸುಮಾರು 12 ಗ್ರಾಮಗಳು ಸಮಸ್ಯೆಯ ಕೂಪದಲ್ಲಿ ಮುಳುಗಿವೆ.
ಚಿಗರೇನಹಳ್ಳಿಯಲ್ಲಿ ಸುಮಾರು 150-200 ಎಕರೆ ವಿಸ್ತೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಎಸ್‌ಜಿಪಿ ತ್ಯಾಜ್ಯ ಘಟಕದಿಂದ ಅಂತರ್ಜಲ, ಹಳ್ಳಿಯ ಪರಿಸರ ಸಂಪೂರ್ಣ ಕಲುಷಿತಗೊಂಡಿದೆ. ಘಟಕದ ದುರ್ವಾಸನೆ, ಕಲುಷಿತ ನೀರಿನ ಸೇವನೆಯಿಂದ ಸಾಕಷ್ಟು ಜನರು ರೋಗಗಳಿಗೆ ತುತ್ತಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯದಲ್ಲಿ 500 ಟನ್ ತ್ಯಾಜ್ಯವನ್ನು ಈ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದರೂ ಪ್ರಸ್ತುತ ದಿನಕ್ಕೆ 1500-2000 ಟನ್ ಕಸವನ್ನು ಅನಧಿಕೃತವಾಗಿ ತಂದು ಸುರಿಯಲಾಗುತ್ತಿದೆ. ಶೇ. 20 ರಷ್ಟು ತ್ಯಾಜ್ಯದ ಭೂ ಭರ್ತಿಗೆ ಅವಕಾಶವಿದೆ. ಆದರೆ, ಎಂಎಸ್‌ಜಿಪಿ ಘಟಕದಲ್ಲಿ ಶೇ. 50 ರಷ್ಟು ತ್ಯಾಜ್ಯವನ್ನು ಭೂ ಭರ್ತಿ ಮಾಡುತ್ತಿರುವುದೇ ಅಂತರ್ಜಲ ಕಲುಷಿತಕ್ಕೆ ಕಾರಣ ಎಂಬುದು ಪರಿಸರವಾದಿಗಳ ಆರೋಪ.
ಎಂಎಸ್‌ಜಿಪಿ ಘಟಕ ಏನು, ಎಲ್ಲಿದೆ ?
ಬೆಂಗಳೂರಿನಲ್ಲಿ ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸರ್ಕಾರ 2014ರಲ್ಲಿ ʼಮಲ್ಟಿ ಸೆಕ್ಟರ್ ಜನರಲ್ ಪರ್ಮಿಟ್ʼ (ಎಂಎಸ್ಜಿಪಿ) ಸಂಸ್ಥೆಗೆ ಪರವಾನಗಿ ನೀಡಿದೆ. ಪ್ರತಿ ದಿನ ತ್ಯಾಜ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ನಿಯಮ ರೂಪಿಸಿದೆ. ಆದರೆ, ಎಂಎಸ್ಜಿಪಿ ಘಟಕವು ನಿಯಮ ಉಲ್ಲಂಘಿಸಿ ಪ್ರತಿ ದಿನ ಸುಮಾರು 2000 ಟನ್ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಪ್ರತಿದಿನ ಸುಮಾರು ಕನಿಷ್ಠ 150ಕ್ಕೂ ಹೆಚ್ಚು ಲಾರಿಗಳು ಸಂಚರಿಸುತ್ತಿರುವುದರಿಂದ ಅಪಘಾತಗಳು ಸಾಮಾನ್ಯವಾಗಿವೆ.
ದೊಡ್ಡಬೆಳವಂಗಲ ಹೋಬಳಿಯ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಘಟಕದ ಸುತ್ತಲೂ ಸುಮಾರು 15ಕ್ಕೂ ಹೆಚ್ಚು ದೊಡ್ಡ ಗ್ರಾಮಗಳು ಹಾಗೂ 20ಕ್ಕೂ ಹೆಚ್ಚು ಸಣ್ಣ ಗ್ರಾಮಗಳಿದ್ದು, ಅಂದಾಜು 8 -10 ಸಾವಿರ ಜನಸಂಖ್ಯೆ ಇದೆ. ಈ ಗ್ರಾಮಗಳ ಜನರು ಎಂಎಸ್‌ಜಿಪಿ ಘಟಕದ ಕಾರಣದಿಂದಾಗಿ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುವಂತಾಗಿದೆ.
ಒಂದೇ ಪಂಚಾಯಿತಿಗೆ ಎರಡು ತ್ಯಾಜ್ಯ ಘಟಕದ ಭಾಗ್ಯ
ದೊಡ್ಡಬಳ್ಳಾಪುರ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಗೆ ಎರಡು ತ್ಯಾಜ್ಯ ಘಟಕಗಳನ್ನು ಮಂಜೂರು ಮಾಡುವ ಮೂಲಕ ರಾಜ್ಯ ಸರ್ಕಾರ ಸುಮಾರು 10 ಸಾವಿರ ಜನರಿಗೆ ಅನಾರೋಗ್ಯ ಭಾಗ್ಯ ನೀಡಿದೆ.
2008 ರಲ್ಲಿ ಗುಂಡ್ಲಹಳ್ಳಿ ಸಮೀಪ ಟೆರ್ರಾ ಫಾರಂ ಘಟಕ ಸ್ಥಾಪಿಸಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ನಾನಾ ಸಮಸ್ಯೆಗಳಿಗೆ ಒಳಗಾದ ಹಿನ್ನೆಲೆ ಪ್ರತಿಭಟನೆಗಳು ತೀವ್ರಗೊಂಡವು. ಟೆರ್ರಾ ಫಾರಂ ಸುತ್ತಲಿನ ಗ್ರಾಮಗಳ ಜನರ ಪ್ರತಿಭಟನೆಗೆ ಹೆದರಿದ ರಾಜ್ಯ ಸರ್ಕಾರ 2024 ರಲ್ಲಿ ಘಟಕವನ್ನು ಸ್ಥಗಿತಗೊಳಿಸಿತು. ಆದರೆ, ಇದೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಂಎಸ್ಜಿಪಿ ಘಟಕ ಆರಂಭಿಸಿತು. ಹಾಗಾಗಿ ಒಂದೇ ಪಂಚಾಯಿತಿಗೆ ಎರಡು ತ್ಯಾಜ್ಯ ಘಟಕಗಳನ್ನು ನೀಡುವ ಮೂಲಕ ಸರ್ಕಾರ ಹಳ್ಳಿಗರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಬೊಮ್ಮಹಳ್ಳಿ ಗ್ರಾಮಸ್ಥ ಗುರುರಾಜು ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.
ಆರು ತಿಂಗಳಿಗೆಂದು ಬಂದು ಶಾಶ್ವತವಾಗಿ ಉಳಿದ ಘಟಕ
ದೊಡ್ಡಬೆಳವಂಗಲ ಹೋಬಳಿಯ ಚಿಗರೇನಹಳ್ಳಿ ಬಳಿ ಎಂಎಸ್ಜಿಪಿ ಘಟಕ ಆರಂಭಿಸುವ ಮುನ್ನ ಟೆರ್ರಾ ಫಾರಂ ನಿಂದ ಉಂಟಾಗುತ್ತಿದ್ದ ಸಮಸ್ಯೆಗಳನ್ನು ತಡೆಯಲಾಗದೇ ಸ್ಥಳೀಯರು ಹೆದ್ದಾರಿ ತಡೆ ನಡೆಸಿದ್ದರು. ಅದರ ಫಲವಾಗಿ 2014 ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಟೆರ್ರಾ ಫಾರಂ ಸ್ಥಗಿತಗೊಳಿಸಿದರು. ಆದರೆ ತಕ್ಷಣದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂಎಸ್‌ಜಿಪಿ ಘಟಕಕ್ಕೆ ಚಾಲನೆ ನೀಡಿದ್ದರು. ಕೇವಲ ಆರು ತಿಂಗಳು ಮಾತ್ರ ತ್ಯಾಜ್ಯ ವಿಲೇವಾರಿ ಮಾಡಿ ನಂತರ ಘಟಕ ಮುಚ್ಚುವುದಾಗಿ ಸಿಎಂ ವಾಗ್ದಾನ ನೀಡಿದ್ದರು.
ಆರು ತಿಂಗಳ ಮಟ್ಟಿಗೆಂದು ಶುರುವಾದ ಘಟಕ ಈಗ ಬರೋಬ್ಬರಿ 11 ವರ್ಷಗಳವರೆಗೆ ಮುಂದುವರಿದಿದ್ದು, ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಘಟಕ ಮುಚ್ಚುವಂತೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ರಾಜಕೀಯ ದಾಳವಾದ ಕಸದ ಸಮಸ್ಯೆ
2014ರಲ್ಲಿ ಆರಂಭವಾದ ಎಂಎಸ್‌ಜಿಪಿ ತ್ಯಾಜ್ಯ ಸಂಸ್ಕರಣಾ ಘಟಕವು ಕಳೆದ ಒಂದು ದಶಕದಿಂದ ತಾಲೂಕು ರಾಜಕೀಯ ಬೆಳವಣಿಗೆಗಳ ಸುತ್ತವೇ ತಿರುಗುತ್ತಿದೆ. ವಿಧಾನಸಭಾ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹತ್ತಿರವಾದರೆ ತಾಲೂಕಿನ ರಾಜಕೀಯ ನಾಯಕರು ಬಳಸುವ ಪ್ರಮುಖ ಅಸ್ತ್ರವೇ ಎಂಎಸ್‌ಜಿಪಿ ಘಟಕದ ತ್ಯಾಜ್ಯದ ಸಮಸ್ಯೆ. ಜನರಿಗೆ ತ್ಯಾಜ್ಯದಿಂದ ಮುಕ್ತಿ ದೊರಕಿಸುತ್ತೇವೆ ಎಂಬ ಆಶ್ವಾಸನೆ ನೀಡುತ್ತಾರೆ. 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಧೀರಜ್ ಮುನಿರಾಜು ಅವರು ಎಂಎಸ್‌ಜಿಪಿ ಘಟಕದ ವಿರುದ್ಧ ಬೃಹತ್ ಪ್ರತಿಭಟನೆ ಕೈಗೊಂಡರು. ಲಾರಿಗಳನ್ನು ತಡೆದು, ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸಿದ್ದರು. ಇದರ ಫಲವಾಗಿ ಅವರು ಎರಡು ಬಾರಿ ಶಾಸಕರಾಗಿದ್ದ ಕಾಂಗ್ರೆಸ್ ಪಕ್ಷದ ಅಪಕಾರನಹಳ್ಳಿಯ ಟಿ. ವೆಂಕಟರಮಣಯ್ಯ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು.
ಈಗ ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಎಂಎಸ್‌ಜಿಪಿಯನ್ನೇ ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ನಿಯಮ ಗಾಳಿಗೆ ತೂರಿದ ಎಂಎಸ್‌ಜಿಪಿ
ಎಂಎಸ್‌ಜಿಪಿ ಘಟಕವು ಸರ್ಕಾರದ ನಿಯಮ ಮೀರಿ ಸಾಮರ್ಥ್ಯಕ್ಕಿಂತ ಹೆಚ್ಚು ತ್ಯಾಜ್ಯವನ್ನು ಭೂ ಭರ್ತಿ ಮಾಡುತ್ತಿದೆ. ಪ್ರತಿದಿನ ಸುಮಾರು 1500 - 2000 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ಘಟಕದಲ್ಲಿ ಸಂಗ್ರಹವಾಗುವ ತ್ಯಾಜ್ಯದಲ್ಲಿ ಶೇ.20 ರಷ್ಟು ತ್ಯಾಜ್ಯವನ್ನು ಮಾತ್ರ ಗೊಬ್ಬರ ತಯಾರಿಕೆಗೆ ಬಳಸುತ್ತಿದೆ. ಉಳಿದ ತ್ಯಾಜ್ಯವನ್ನು ಭೂ ಭರ್ತಿ ಮಾಡುತ್ತಿದ್ದು, ಅಂತರ್ಜಲವನ್ನು ಸಂಪೂರ್ಣ ಕಲುಷಿತಗೊಳಿಸುತ್ತಿದೆ.
ಎಂಎಸ್‌ಜಿಪಿ ಘಟಕದಲ್ಲಿ ಇಲ್ಲಿಯವರೆಗೂ ಸುಮಾರು 5.60 ಲಕ್ಷ ಟನ್ ತ್ಯಾಜ್ಯವನ್ನು ಮಣ್ಣಿನಡಿ ಹೂಳಲಾಗಿದೆ. ಕಳೆದ ಒಂದು ದಶಕದಿಂದ ಅಂತರ್ಜಲ ಕೂಡ ಕಲುಷಿತಗೊಂಡು ಜನರು ಬವಣೆ ಅನುಭವಿಸುವಂತಾಗಿದೆ ಎಂದು ಭಕ್ತರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಸಿದ್ದಲಿಂಗಯ್ಯ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
( ಮಂಗಳವಾರ ಮೊದಲ ಸಂಚಿಕೆಯಲ್ಲಿ "ಮದುವೆಗೆ ಕಸವೇ ಕಗ್ಗಂಟು: ಈ ಗ್ರಾಮಗಳ ಯುವಕರಿಗೆ ಹೆಣ್ಣು ಕೊಡೋರೆ ಇಲ್ಲ; ಹುಡುಗಿಗೆ ಗಂಡು ಸಿಗೋದೂ ಇಲ್ಲ!" ವರದಿ ಪ್ರಕಟವಾಗಿತ್ತು. ಗುರುವಾರದ ಸಂಚಿಕೆಯಲ್ಲಿ "ಎಂಎಸ್‌ಜಿಪಿ ಘಟಕದ ಸುತ್ತಲಿನ 30ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಕಲುಷಿತ" ವರದಿ ಪ್ರಕಟವಾಗಲಿದೆ.)