ಮೀಸಲಾತಿ ಹಂಚಿಕೆಗೆ ದಲಿತರಲ್ಲೇ ಅಸಮಾಧಾನ; ಅಲೆಮಾರಿಗಳಿಗೆ ಚರಮಗೀತೆ ಹಾಡಿತೇ ಸರ್ಕಾರ?

ರಾಜ್ಯ ಸರ್ಕಾರ ಅಲೆಮಾರಿ ಸಮುದಾಯಗಳನ್ನು ಮೀಸಲಾತಿಯನ್ನು ಸ್ಪೃಶ್ಯ ಜಾತಿಗಳಿಗೆ ಒಪ್ಪಿಸಿದ್ದು, ಸಾಮಾಜಿಕ ತಾರತಮ್ಯಕ್ಕೆ ಮುನ್ನುಡಿ ಬರೆದಿದೆ ಎಂದು ದಲಿತ ಸಂಘಟನೆಗಳೇ ಆಕ್ರೋಶ ವ್ಯಕ್ತಪಡಿಸಿವೆ.;

Update: 2025-08-22 02:30 GMT

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡುವ ಮೂಲಕ ರಾಜ್ಯ ಸಚಿವ ಸಂಪುಟ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಅಂಗೀಕಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ, ಮೀಸಲಾತಿ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.  

ನಿವೃತ್ತ ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದ ಏಕಸದಸ್ಯ ಆಯೋಗ ನೀಡಿದ್ದ ವರದಿಯನ್ನು ತುಸು ಪರಿಷ್ಕರಿಸಿರುವ ಸಚಿವ ಸಂಪುಟವು ಐದು ಪ್ರವರ್ಗಗಳನ್ನು ಮೂರಕ್ಕೆ ಇಳಿಸಿ, 6:6:5 ಸೂತ್ರ ದಂತೆ ಮೀಸಲಾತಿ ಹಂಚಿಕೆ ಮಾಡಿದೆ. ಈ ಪ್ರಕ್ರಿಯೆಯಲ್ಲಿ 59 ಅಲೆಮಾರಿ ಜಾತಿಗಳನ್ನು ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಿ ಶೇ 5 ರಷ್ಟು ಮೀಸಲಾತಿ ಒದಗಿಸಿರುವುದು ಚರ್ಚೆಗೆ ಕಾರಣವಾಗಿದೆ.  

2012ರಲ್ಲಿ ನ್ಯಾ.ಎ.ಜೆ. ಸದಾಶಿವ ಆಯೋಗ, ಈಗಿನ ನಿವೃತ್ತ ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗವು ಪರಿಶಿಷ್ಟ ಜಾತಿಯ ಲ್ಲಿನ ಸಣ್ಣ ಸಮುದಾಯಗಳ ಆರ್ಥಿಕ ಹಾಗೂ ರಾಜಕೀಯ ಪರಿಸ್ಥಿತಿ ಅವಲೋಕಿಸಿ ಶೇ 1 ರಷ್ಟು ಮೀಸಲಾತಿ ಒದಗಿಸಿದ್ದವು. ಆದರೆ, ರಾಜ್ಯ ಸರ್ಕಾರ ಅಲೆಮಾರಿ ಸಮುದಾಯಗಳ ಮೀಸಲಾತಿಯನ್ನು ಸ್ಪೃಶ್ಯ ಜಾತಿಗಳಿಗೆ ಒಪ್ಪಿಸಿದ್ದು, ಸಾಮಾಜಿಕ ತಾರತಮ್ಯಕ್ಕೆ ಮುನ್ನುಡಿ ಬರೆದಿದೆ ಎಂದು ದಲಿತ ಸಂಘಟನೆಗಳೇ ಆಕ್ರೋಶ ವ್ಯಕ್ತಪಡಿಸಿವೆ. 

ನಾಗಮೋಹನ್‌ ದಾಸ್‌ ವರದಿಯು ಅಲೆಮಾರಿ ಹಾಗೂ ಇತರೆ 59  ಜಾತಿಗಳ ಗುಂಪನ್ನು ಪ್ರವರ್ಗ-ಎ ಎಂದು ರಚಿಸಿ, ಶೇ 1 ರಷ್ಟು ಮೀಸಲಾತಿ ಒದಗಿಸಿತ್ತು. ಈಗ ಆ ಸಮುದಾಯಗಳು ಹಾಗೂ ಮೀಸಲಾತಿಯನ್ನು ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಿ ಶೇ 5 ರಷ್ಟು ಮೀಸಲಾತಿ ನಿಗದಿ ಮಾಡಿರುವುದು ಅಸಂವಿಧಾನಿಕ ಎಂದು ಹಲವು ಹೋರಾಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ.    

ಸುಪ್ರೀಂ ಆಶಯಕ್ಕೆ ವಿರುದ್ಧವಾದ ನಿರ್ಣಯ

ಪರಿಶಿಷ್ಟ ಜಾತಿಗಳನ್ನು ಉಪ ವರ್ಗೀಕರಿಸಿ ಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗಿದೆಯಾದರೂ ಮೀಸಲಾತಿ ಹಂಚಿಕೆ ವೇಳೆ ಉಪ ವರ್ಗೀಕರಣವು ರಾಜಕೀಯ ಕಾರಣಕ್ಕಿಂತಲೂ ದತ್ತಾಂಶ ಹಾಗೂ ಹಿಂದುಳಿದಿರುವಿಕೆ ಆಧಾರದ ಮೇಲೆ ಇರಬೇಕು ಎಂದು ಸುಪ್ರೀಂಕೋರ್ಟ್‌ ತನ್ನ ಐತಿಹಾಸಿಕ ತೀರ್ಪಿನಲ್ಲಿ ತಿಳಿಸಿತ್ತು.

ಮೀಸಲಾತಿ ಕೇವಲ ಸಂಖ್ಯಾತ್ಮಕ ಹಂಚಿಕೆ ಆಗಬಾರದು, ಬದಲಿಗೆ ಪರಿಣಾಮಕಾರಿ ಪ್ರಾತಿನಿಧ್ಯ (Effective Representation) ಒಳಗೊಂಡಿರಬೇಕು ಎಂಬ ಸುಪ್ರೀಂಕೋರ್ಟ್‌ ಆಶಯಕ್ಕೆ ರಾಜ್ಯ ಸರ್ಕಾರದ ತೀರ್ಮಾನ ತದ್ವಿರುದ್ಧವಾಗಿದೆ. ಶತಮಾನಗಳಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ಬಲಾಢ್ಯರೊಂದಿಗೆ ಸ್ಪರ್ಧೆಗಿಳಿಸಿರುವುದು ಸರಿಯಲ್ಲ ದಲಿತ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.   

20 ವರ್ಷಗಳ ಹಿಂದೆ ನ್ಯಾ.ಎ.ಜೆ.ಸದಾಶಿವ ಅವರು ಒಳಮೀಸಲಾತಿಗಾಗಿ ಅಲೆಮಾರಿಗಳು ಮತ್ತು ಸಣ್ಣ ಸಮುದಾಯಗಳಿಂದ ಅಹವಾಲು ಸ್ವೀಕರಿಸಿದ್ದರು. ಕಲಬುರಗಿಯ ಮಾಂಗ್‌ ಗಾರುಡಿ ಸಮುದಾಯದ ಪ್ರತಿನಿಧಿಗಳು  ತಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯ ಹೇಳಿಕೊಂಡ ಕಾರಣ ಸದಾಶಿವ ಆಯೋಗದ ವರದಿಯಲ್ಲಿ ಶೇ1 ರಷ್ಟು ಮೀಸಲಾತಿ ಒದಗಿಸಲಾಗಿತ್ತು. ನ್ಯಾ.ನಾಗಮೋಹನ್‌ ದಾಸ್‌ ಅವರೂ ಕೂಡ ಈ ಸಮುದಾಯಗಳಿಗೆ ಶೇ 1ರಷ್ಟು ಮೀಸಲಾತಿ ನೀಡಿ ನ್ಯಾಯ ಒದಗಿಸಿದ್ದರು. ಆದರೆ, ಈಗ ರಾಜ್ಯ ಸರ್ಕಾರ ಅಲೆಮಾರಿಗಳ ವಿಷಯದಲ್ಲಿ ಕ್ರೌರ್ಯ ಪ್ರದರ್ಶಿಸಿದೆ.  ಇದು ಏಕೆಂಬುದೇ ಅರ್ಥವಾಗುತ್ತಿಲ್ಲ ಎಂದು ದಲಿತ ಹೋರಾಟಗಾರ ಸಂತೋಷ್‌ ಕೋಡಿಹಳ್ಳಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಸ್ಪೃಶ್ಯ ಜಾತಿಗಳ ಮೂಲವೇನು?

1920ರಲ್ಲಿ ಮೈಸೂರು ಮಹಾರಾಜರ ಔದಾರ್ಯದಿಂದ ಸಣ್ಣ ಸಂಖ್ಯೆಯಲ್ಲಿದ್ದ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳು ಕರ್ನಾಟಕದಲ್ಲಿ ಎಸ್ಸಿ ಪಟ್ಟಿಗೆ ಸೇರಿದವು. ಬೇರೆ ರಾಜ್ಯಗಳಲ್ಲಿ ಈ ಜಾತಿಗಳು ಪರಿಶಿಷ್ಟ ಪಂಗಡ, ಒಬಿಸಿ ಪಟ್ಟಿಯಲ್ಲಿವೆ.   

1956 ರಲ್ಲಿ ಭಾಷಾವಾರು ಪ್ರಾಂತ್ಯ ರಚಿಸುವ ಸಂದರ್ಭದಲ್ಲಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಕೆಲ ಭಾಗಗಳು ಕರ್ನಾಟಕಕ್ಕೆ ಸೇರ್ಪಡೆಯಾದವು. ಅಲ್ಲಿಯವರೆಗೆ ಪರಿಶಿಷ್ಟ ಪಂಗಡ(ST), ಒಬಿಸಿ ಸ್ಥಾನಮಾನ ಹೊಂದಿದ್ದ ಸ್ಪೃಶ್ಯರು, ಏಕೀಕೃತ ಕರ್ನಾಟಕದಲ್ಲಿ ಪರಿಶಿಷ್ಟರ ಪಟ್ಟಿಗೆ ಸೇರ್ಪಡೆಯಾದರು.

1935 ಹಾಗೂ 1950ರ ಪರಿಶಿಷ್ಟರ ಕಾಯಿದೆ ಪ್ರಕಾರ, ಪರಿಶಿಷ್ಟರಿಗೆ ಅಸ್ಪೃಶ್ಯತೆಯೇ ಏಕೈಕ ಮಾನದಂಡವಾಗಿ ಪರಿಗಣಿಸಲಾಯಿತು.1956ರಲ್ಲಿ ಕರ್ನಾಟಕ ಏಕೀಕರಣ ಹಾಗೂ 1965ರ ಲೋಕೂರ್ ಸಮಿತಿ ವರದಿಯಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಪರಿಶಿಷ್ಟ ಜಾತಿಗೆ ಸೇರಿಸಬಹುದು ಎಂಬ ಅಭಿಪ್ರಾಯವು ಎಲ್ಲವನ್ನೂ ಅಯೋಮಯಗೊಳಿಸಿತು. 

2014 ರಲ್ಲಿ ಕೇಂದ್ರ ಸರ್ಕಾರವೇ ಲೋಕೂರ್ ಸಮಿತಿಯ ಬಹುತೇಕ ಶಿಫಾರಸ್ಸುಗಳನ್ನು ಅನರ್ಥಕಾರಿ, ಅಸಹಜ ಎಂದು ಹೇಳಿದೆ. ಹೀಗಿರುವಾಗ ರಾಜಾಶ್ರಯ, ಸ್ವತಂತ್ರ ಭಾರತದ ವಿವಿಧ ಆಯೋಗ - ಸರ್ಕಾರಗಳ ದ್ವಂದ್ವ ನಿಲುವುಗಳ ತಾಂತ್ರಿಕ ಲಾಭ ಪಡೆದ ಸ್ಪೃಶ್ಯ ಜಾತಿಗಳು(ಕೊಲಂಭೋ) ರಾಜಕೀಯ ಕೃತ್ರಿಮ ಆಟದಿಂದಾಗಿ ಪರಿಶಿಷ್ಟರಾದರು ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ.  

ಕೋರ್ಟ್‌ ಅಂಗಳ ತಲುಪುವ ಆತಂಕ

ಈ ಹಿಂದೆ ಆರ್‌ಪಿಐ ನಂತಹ ರಾಜಕೀಯ ಪಕ್ಷಗಳು ಸ್ಪೃಶ್ಯಗಳನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡಬೇಕೆಂದು ತಕರಾರುಗಳು ಎತ್ತಿದ್ದವು. ಈಗ ಒಳ ಮೀಸಲಾತಿ ಕುರಿತು ಕರ್ನಾಟಕ ಸರ್ಕಾರವು ಸುಪ್ರೀಂಕೋರ್ಟ್‌ ಆಶಯಕ್ಕೆ  ವಿರುದ್ಧವಾಗಿ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಅಲೆಮಾರಿ ಸಮುದಾಯಗಳು ನ್ಯಾಯಾಲಯದ ಕಟಕಟೆಗೆ ಏರಲು ಸಿದ್ಧತೆ ನಡೆಸಿವೆ ಎನ್ನಲಾಗಿದೆ. 

ಸ್ಪೃಶ್ಯ ಜಾತಿಗಳನ್ನು(ಕೊಲಂಭೋ) ಇತರೆ ರಾಜ್ಯಗಳಂತೆ ಎಸ್‌ಸಿ ಪಟ್ಟಿಯಿಂದ ಹೊರಗಿಟ್ಟು, ಅಲೆಮಾರಿಗಳಿಗೆ ಅವರ ಹಕ್ಕನ್ನು ಒದಗಿಸಿಕೊಡಲು ಎಡಗೈ ಹಾಗೂ ಬಲಗೈ ಸಮುದಾಯಗಳು ಪ್ರಯತ್ನಿಸಬೇಕು. ಆ ಮೂಲಕ ಅಲೆಮಾರಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು. ಆಗಷ್ಟೇ ತಳ ಸಮುದಾಯಗಳಿಗೆ ನಿಜವಾದ ನ್ಯಾಯ ಸಿಗಲಿದೆ ಎಂದು ದಲಿತ ಹೋರಾಟಗಾರ ಸಂತೋಷ್‌ ಕೋಡಿಹಳ್ಳಿ ಅಭಿಪ್ರಾಯಪಟ್ಟರು. 

ಸಿಎಂ ವಿರುದ್ಧ ಅಸಮಾಧಾನ

ನ್ಯಾ. ನಾಗನೋಹನದಾಸ್ ಅವರು ಅಲೆಮಾರಿಗಳಿಗೆ ಹಂಚಿಕೆ ಮಾಡಿದ್ದ ಶೇ1 ರಷ್ಟು ಮೀಸಲಾತಿಗೆ ಯಾರೂ ಕೂಡ ಕೈ ಹಾಕದಂತೆ  ಎಲ್ಲಾ ಸಮುದಾಯಗಳ ಮುಖಂಡರ ಬಳಿ ಅಂಗಲಾಚಿದ್ದೆವು. ಆದರೆ, ಕೆಲವು ಪ್ರಬಲ ಜಾತಿಗಳು ಸಿಎಂ ಅವರ ಮೇಲೆ ಒತ್ತಡ ತಂದು, ಅಲೆಮಾರಿಗಳ ಹಕ್ಕು ಕಸಿದಿದ್ದಾರೆ. 

ಸಮಾಜವಾದಿ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಕೂಡ ಅತ್ಯಂತ ಹಿಂದುಳಿದ ಜಾತಿಗಳಿಗೆ ಮೋಸ ಮಾಡಿದ್ದಾರೆ ಎಂದು ಹಲವು ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಅಲೆಮಾರಿಗಳಿಗೆ ಅನ್ಯಾಯ ಮಾಡಲ್ಲ ಎಂದುಕೊಂಡಿದ್ದೆವು. ಕೊನೆಗೆ ಅವರ ಬಾಯಿಂದಲೇ ಸಾಮಾಜಿಕ ನ್ಯಾಯಕ್ಕೆ ಚರಮಗೀತೆ ಹಾಡಿಸಲಾಗಿದೆ. ಸ್ಪೃಶ್ಯ ಮಂತ್ರಿಯ ಎದುರು ನಮ್ಮ ಅಷ್ಟೂ ಜನ ಅಸ್ಪೃಶ್ಯ ಮಂತ್ರಿಗಳು ಮಂಡಿಯೂರಿದ್ದಾರೆ.  ಸರ್ಕಾರದಿಂದ ಆಗಿರುವ ಅನ್ಯಾಯವನ್ನು ನಾವೇ ಸರಿಮಾಡಬೇಕು. ಅದಕ್ಕಾಗಿ ಹೋರಾಟ ರೂಪಿಸಬೇಕು ಎಂದು ದಲಿತ ಚಿಂತಕರೊಬ್ಬರು ಪೋಸ್ಟ್‌ ಮಾಡಿದ್ದಾರೆ.

Tags:    

Similar News