ಚಿಕ್ಕಮಗಳೂರು | ದಲಿತರು ದೇವಸ್ಥಾನ ಪ್ರವೇಶಿಸಿದ್ದಕ್ಕೆ 2 ದಿನ ಪೂಜೆ ಸ್ಥಗಿತ
ಚಿಕ್ಕಮಗಳೂರು ತಾಲೂಕಿನ ನರಸೀಪುರ ಗ್ರಾಮದಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಿದ್ದಕ್ಕೆ 2 ದಿನ ಪೂಜೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಪೂಜೆ ಪುನರ್ ಆರಂಭಿಸಲು ಗ್ರಾಮಸ್ಥರ ಮನವೊಲಿಸಲು ಅಧಿಕಾರಿಗಳು ಪ್ರಯತ್ನಿಸಿದ್ದು, ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ತಾಲೂಕಿನ ನರಸೀಪುರ ಗ್ರಾಮದಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಿದರು ಎಂಬ ಕಾರಣಕ್ಕೆ ಎರಡು ದಿನ ಪೂಜೆ ಸ್ಥಗಿತಗೊಳಿಸಲಾಗಿತ್ತು. ಬಳಿಕ ಅಧಿಕಾರಿಗಳ ಮಧ್ಯಪ್ರವೇಶದಿಂದಾಗಿ ಪೂಜೆ ಪುನರ್ ಆರಂಭಿಸಿ ಸಮಸ್ಯೆ ಪರಿಹರಿಸಲಾಗಿದೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಸಮೀಪದ ನರಸೀಪುರ ಗ್ರಾಮದಲ್ಲಿ 250ಕ್ಕೂ ಹೆಚ್ಚು ಕುರುಬ ಸಮುದಾಯದ ಕುಟುಂಬಗಳಿದ್ದು, ಪರಿಶಿಷ್ಟ ಜಾತಿಯ 13 ಕುಟುಂಬಗಳಿವೆ.
ಗ್ರಾಮದ ತಿರುಮಲೇಶ್ವರ ದೇವಸ್ಥಾನಕ್ಕೆ ಹಿಂದಿನಿಂದಲೂ ಪರಿಶಿಷ್ಟ ಜಾತಿಯವರು ಪ್ರವೇಶಿಸುತ್ತಿರಲಿಲ್ಲ ಎನ್ನಲಾಗಿದೆ. ಆದರೆ, ಗ್ರಾಮದ ಇಬ್ಬರು ಪರಿಶಿಷ್ಟ ಜಾತಿ ಯುವಕರು ದೇವಸ್ಥಾನದೊಳಗೆ ಹೋಗುತ್ತೇವೆಂದು ಮಂಗಳವಾರ ತಹಶೀಲ್ದಾರ್ ಡಾ.ಸುಮಂತ್ ಅವರಿಗೆ ಮನವಿ ಸಲ್ಲಿಸಿದ್ದು, ದೇವಸ್ಥಾನದೊಳಗೆ ಪ್ರವೇಶಿಸಲು ನಮ್ಮ ಅಭ್ಯಂತರವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆನ್ನಲಾಗಿದೆ.
ಮಂಗಳವಾರ ಪೂಜೆ ನಡೆಯುತ್ತಿದ್ದ ವೇಳೆ ಯುವಕರು ದೇವಸ್ಥಾನದೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಕುರುಬ ಸಮುದಾಯದವರು ಪೂಜೆ ಸಲ್ಲಿಸದೆ ಹಿಂದಿರುಗಿದ್ದಾರೆಂದು ತಿಳಿದು ಬಂದಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್ ಡಾ.ಸುಮಂತ್, ರಾಜಸ್ವ ನಿರೀಕ್ಷಕರು ಭೇಟಿ ನೀಡಿ ತಿರುಮಲೇಶ್ವರ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆಂದು ತಿಳಿದು ಬಂದಿದೆ.
ಇದಾದ ನಂತರ ದಲಿತರು ದೇವಸ್ಥಾನ ಪ್ರವೇಶಕ್ಕೆ ಅನುಮತಿ ಕೋರಿ ತಹಸೀಲ್ದಾರ್ ಸುಮಂತ್ ಅವರನ್ನು ಸಂಪರ್ಕಿಸಿದರು. ಇದಕ್ಕೆ ಸ್ಪಂದಿಸಿದ ಕಂದಾಯ, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಎರಡು ಗುಂಪುಗಳ ನಡುವೆ ಸಂಧಾನ ನಡೆಸಿದರು. ಇದೀಗ ಸಮಸ್ಯೆಯನ್ನು ಬಗೆಹರಿಸಿದ್ದು, ಶುಕ್ರವಾರದಿಂದ ದಲಿತರಿಗೆ ಧಾರ್ಮಿಕ ಸ್ಥಳಕ್ಕೆ ಪ್ರವೇಶಿಸಲು ಅವಕಾಶ ನೀಡಲು ಕುರುಬ ಸಮುದಾಯವು ಒಪ್ಪಿಗೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.