ದಲಿತ ಮಹಿಳೆಗೆ ಅವಹೇಳನ: ಶಾಸಕ ಯತ್ನಾಳ ವಿರುದ್ಧ ಕೊಪ್ಪಳದಲ್ಲಿ ಎಫ್‌ಐಆರ್‌

ಸನಾತನ ಧರ್ಮದವರು ಮಾತ್ರ ದಸರಾದಲ್ಲಿ ಚಾಮುಂಡಿ ದೇವಿಗೆ ಹೂ ಮುಡಿಸಬೇಕು, ದಲಿತ ಮಹಿಳೆಗೆ ಇದಕ್ಕೆ ಅವಕಾಶವಿಲ್ಲ" ಎಂದು ಅವರು ಹೇಳಿದ್ದರು ಎನ್ನಲಾಗಿದೆ;

Update: 2025-09-16 17:48 GMT

ದಲಿತ ಮಹಿಳೆ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್‌ ದಾಖಲಾಗಿದೆ.

ನಾಡಹಬ್ಬ ದಸರಾ ಉದ್ಘಾಟನೆ ಕುರಿತು ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡುವಾಗ ಯತ್ನಾಳ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಸನಾತನ ಧರ್ಮದವರು ಮಾತ್ರ ದಸರಾದಲ್ಲಿ ಚಾಮುಂಡಿ ದೇವಿಗೆ ಹೂ ಮುಡಿಸಬೇಕು, ದಲಿತ ಮಹಿಳೆಗೆ ಇದಕ್ಕೆ ಅವಕಾಶವಿಲ್ಲ" ಎಂದು ಅವರು ಹೇಳಿದ್ದರು ಎನ್ನಲಾಗಿದೆ.

ಯತ್ನಾಳ ಅವರ ಈ ಹೇಳಿಕೆಯು ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಆರೋಪಿಸಿ ದಲಿತ ಯುವ ಮುಖಂಡ ಮಲ್ಲಿಕಾರ್ಜುನ ಪೂಜಾರ ಅವರು ದೂರು ನೀಡಿದ್ದಾರೆ. "ಯತ್ನಾಳ ಅವರು ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡುವ ಮೂಲಕ ದಲಿತ ಸಮುದಾಯವನ್ನು ಅವಮಾನಿಸಿದ್ದಾರೆ. ಅವರು ನಿರಂತರವಾಗಿ ಪ್ರಚೋದನಕಾರಿ ಹಾಗೂ ಕೋಮು ಸಂಘರ್ಷ ಉಂಟುಮಾಡುವ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು" ಎಂದು ಪೂಜಾರ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ದೂರಿನ ಅನ್ವಯ ಪೊಲೀಸರು ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Tags:    

Similar News