ಲೋಕ ಸ್ವಾರಸ್ಯ | ಕಣದಲ್ಲಿದ್ದಾರೆ ಕೋಟಿ ಕುಳಗಳು; ಪ್ರಮುಖರ ಆಸ್ತಿ ವಿವರ ಇಲ್ಲಿದೆ

ಚಿನ್ನ ಬಿಸ್ಕೆಟ್, ಲಕ್ಷ ಮೌಲ್ಯದ ಪುಸ್ತಕ, ಪತಿಗಿಂತ ಪತ್ನಿ ಬಳಿ ಹೆಚ್ಚು ಆಸ್ತಿ, ಕೋಟ್ಯಾಂತರ ರೂಪಾಯಿ ಇದ್ದರೂ ಸ್ವಂತ ವಾಹನ ಇಲ್ಲ,.. ಇಂತಹ ಹಲವುಆಸಕ್ತಿಕರ ಮಾಹಿತಿ ಇಲ್ಲಿದೆ...;

Update: 2024-04-05 11:49 GMT
ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಸ್ತಿ ವಿವರ

ಲೋಕಸಭೆ ಚುನಾವಣೆಗೆ ಕರ್ನಾಟಕದಿಂದ ಘಟಾನುಘಟಿ ನಾಯಕರು ಈ ಬಾರಿ ಸ್ಪರ್ಧಿಸುತ್ತಿದ್ದು, ಮೊದಲ ಸುತ್ತಿನ ನಾಮನಿರ್ದೇಶನ ಅಂತ್ಯವಾಗಿದೆ. ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಒಬ್ಬರಿಗಿಂತ ಒಬ್ಬರ ಆಸ್ತಿ ವಿವರ ಆಚ್ಚರಿ ಮೂಡಿಸಿದೆ.

ಇನ್ನು ಕಳೆದ ಐದು ವರ್ಷದ ಅವಧಿಯಲ್ಲಿ ಹಲವು ಸಂಸದರ ಆಸ್ತಿ ಹೆಚ್ಚಳವಾಗಿದೆ. ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಅಭ್ಯರ್ಥಿಗಳ ಬಳಿ ಕೋಟ್ಯಾಂತರ ರೂಪಾಯಿ ಇದ್ದರೂ, ಸ್ವಂತ ವಾಹನ, ಕಾರು ಇಲ್ಲ. ಎಚ್.ಡಿ ಕುಮಾರಸ್ವಾಮಿ ಅವರಿಗಿಂತ ಅವರ ಪತ್ನಿಯ ಬಳಿಯೇ ಹೆಚ್ಚು ಆಸ್ತಿ ಇದೆ. ಕುಮಾರಸ್ವಾಮಿಗಿಂತ ಅನಿತಾ ಕುಮಾರಸ್ವಾಮಿಯೇ ಶ್ರೀಮಂತರು. ಅಭ್ಯರ್ಥಿಗಳ ಬಳಿ ಗೋಲ್ಡ್‌ ಬಿಸ್ಕೆಟ್‌, ಲಕ್ಷ ಮೌಲ್ಯದ ಬುಕ್ಸ್‌ ಇವೆ. ಲೋಕಸಭಾ ಚುನಾವಣೆಯ ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ.

ಮಾಜಿ ಸಿಎಂಗಿಂತ ಅವರ ಶ್ರೀಮತಿಯೇ ಶ್ರಿಮಂತೆ!

ಜೆಡಿಎಸ್‌ನ ರಾಜ್ಯಘಟಕದ ಅಧ್ಯಕ್ಷ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 56 ಕೋಟಿ ರೂಪಾಯಿ. 19.12 ಕೋಟಿ ರೂಪಾಯಿ ಸಾಲ ಇದೆ. ಆದರೆ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಬಳಿ 155 ಕೋಟಿ ರೂಪಾಯಿ, 51 ಕ್ಯಾರೆಟ್ ವಜ್ರ, 3.85 ಕೆ.ಜಿ ಚಿನ್ನ ಹಾಗೂ 17 ಕೆ.ಜಿ ಬೆಳ್ಳಿ ಇದೆ. ಇನ್ನು ಕುಮಾರಸ್ವಾಮಿ ಅವರು ಕೇತಗಾನಹಳ್ಳಿಯ ತೋಟದಲ್ಲಿ 52 ಬಂಡೂರು ಕುರಿ, 20 ಹಸು ಹೊಂದಿದ್ದಾರೆ. ಹಸುಗಳ ಮೌಲ್ಯ 6.40 ಲಕ್ಷ ರೂಪಾಯಿ, ಬಂಡೂರು ಕುರಿ ಮೌಲ್ಯ 6.14 ಲಕ್ಷ ರೂಪಾಯಿ. ಇನ್ನು ಅವರು 1.49 ಕೋಟಿ ರೂಪಾಯಿ ಮೌಲ್ಯದ ಡೇರಿ ಉಪಕರಣಗಳನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ.

ಹೃದಯ ತಜ್ಞರ ಬಳಿ ಲಕ್ಷ ಮೌಲ್ಯದ ಪುಸ್ತಕ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹೃದ್ರೋಗ ತಜ್ಞ ಡಾ.ಸಿ ಎನ್ ಮಂಜುನಾಥ್ ಅವರಿಗಿಂತಲೂ ಅವರ ಪತ್ನಿ ಅನುಸೂಯ ಅವರ ಬಳಿಯೇ ಹೆಚ್ಚು ಆಸ್ತಿ ಇದೆ. ಮಂಜುನಾಥ್ ಅವರ ಒಟ್ಟು ಆಸ್ತಿ ಮೌಲ್ಯ 43.64 ಕೋಟಿ ರೂಪಾಯಿ, ಸಾಲ 3.74 ಕೋಟಿ ರೂಪಾಯಿ. ಅವರ ಪತ್ನಿ ಅನುಸೂಯ ಅವರ ಆಸ್ತಿ ಮೌಲ್ಯ 52.93 ಕೋಟಿ ರೂಪಾಯಿ. ವೈದ್ಯಕೀಯಕ್ಕೆ ಸಂಬಂಧಿಸಿದ 100ಕ್ಕೂ ಹೆಚ್ಚು ಪುಸ್ತಕ ಅವರ ಬಳಿ ಇದ್ದು ಅವುಗಳ ಮೌಲ್ಯ 1 ಲಕ್ಷ ರೂಪಾಯಿ ಎಂದು ಅವರು ಘೋಷಿಸಿದ್ದಾರೆ.

ತೇಜಿಯಾಗಿದೆ ತೇಜಸ್ವಿ ಆಸ್ತಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಒಟ್ಟು ಆಸ್ತಿ ಮೌಲ್ಯ 7.80 ಕೋಟಿ ರೂಪಾಯಿ ಇದೆ. ಅಲ್ಲದೇ ಅವರು 4.10 ಕೋಟಿ ರೂಪಾಯಿ ಮೊತ್ತದ ಮ್ಯುಚುವಲ್ ಫಂಡ್ ಹೂಡಿಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯ 13 ಲಕ್ಷ ರೂಪಾಯಿನಿಂದ 4 ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ!

ಸಾಮಾನ್ಯ ಅಭ್ಯರ್ಥಿ ಎಂ. ಲಕ್ಷಣ ಆಸ್ತಿ 1.96 ಕೋಟಿ!

ಮೈಸೂರು– ಮಡಿಕೇರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ರಾಜಮನೆತನದ ಯಧುವೀರ್‌ ವಿರುದ್ಧ ತಾವು ಸಾಮಾನ್ಯ ಅಭ್ಯರ್ಥಿ ಎಂದು ಕಣಕ್ಕಿಳಿದಿರುವ ಕಾಂಗ್ರೆಸ್‌ನ ಎಂ. ಲಕ್ಷಣ ಅವರ ಒಟ್ಟು ಆಸ್ತಿ ಮೌಲ್ಯ 1.96 ಕೋಟಿ ರೂಪಾಯಿ. ಪತ್ನಿ ರೂಪಶ್ರೀ ಅವರ ಬಳಿ 39.50 ಲಕ್ಷ, ಪುತ್ರಿ ಎಲ್. ವರ್ಷಿತಾ ಅವರ ಬಳಿ 45.90 ಲಕ್ಷ ರೂಪಾಯಿ ಹಾಗೂ ಪುತ್ರ ಆದಿತ್ಯ ಲಕ್ಷಣ ಬಳಿ 18.96 ಲಕ್ಷ ರೂಪಾಯಿ ಇದೆ.

ಚಿನ್ನದ ಬಿಸ್ಕೆಟ್ ಇಟ್ಟಿದ್ದಾರೆ ಫೈರ್‌ ಬ್ರಾಂಡ್‌ ನಾಯಕಿ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ, ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಬಳಿ 1 ಕೆ.ಜಿ ಮೌಲ್ಯದ ಚಿನ್ನದ ಬಿಸ್ಕೆಟ್ ಹಾಗೂ 650 ಗ್ರಾಂ ಆಭರಣ ಇದೆ. ಶೋಭಾ ಕರಂದ್ಲಾಜೆ ಅವರ ಒಟ್ಟು ಆಸ್ತಿ ಮೌಲ್ಯ 16.02 ಕೋಟಿ ರೂಪಾಯಿ, ಸಾಲ 4.06 ಕೋಟಿ ರೂಪಾಯಿ ಇದೆ ಎಂದು ಘೋಷಿಸಿದ್ದಾರೆ.

ಕಡುಬಡವರೆಂದು ಬಿಂಬಿಸಿದ ಕೋಟಾ ಕೋಟಿ ಕುಳ!

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು ತಮ್ಮನ್ನು ತಾವು ಬಡವ, ಸಾಮಾನ್ಯರಲ್ಲಿ ಸಾಮಾನ್ಯ ಎಂದುಕೊಳ್ಳುತ್ತಾರೆ. ಬಿಜೆಪಿ ಕೂಡ ಚುನಾವಣಾ ಪ್ರಚಾರದಲ್ಲೇ ಅದನ್ನೇ ಹೇಳುತ್ತಿದೆ. ಆದರೆ ಅವರ ಒಟ್ಟು ಆಸ್ತಿ ಮೌಲ್ಯ 1.12 ಕೋಟಿ ರೂಪಾಯಿ ಇದ್ದರೆ, ಅವರ ಪತ್ನಿ ಶಾಂತ ಅವರ ಬಳಿ 1.73 ಕೋಟಿ ರೂಪಾಯಿ ಇದೆ.

ಬುದ್ದಿಜೀವಿ ಅಭ್ಯರ್ಥಿಯ ಆಸ್ತಿ ನೂರು ಕೋಟಿ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಬುದ್ಧಿಜೀವಿ ನಾಯಕ ಎಂ.ವಿ ರಾಜೀವ್ ಗೌಡ ಅವರ ಒಟ್ಟು ಆಸ್ತಿ ಮೌಲ್ಯ 34.58 ಕೋಟಿ ರೂಪಾಯಿ. ಆದರೆ ಅವರ ಪತ್ನಿ ಶರ್ಮಿಳಾ ಭಕ್ತರಾಮ್ ಅವರ ಬಳಿ ಬರೋಬ್ಬರಿ 99.42 ಕೋಟಿ ರೂಪಾಯಿ ಇದೆ. ಅಂದರೆ ರಾಜೀವ್ ಗೌಡ ಅವರಿಗಿಂತ ಅವರ ಪತ್ನಿ ಎರಡು ಪಟ್ಟು ಆಸ್ತಿ ಹೊಂದಿದ್ದಾರೆ.

ಮನ್ಸೂರ್ ಅಲಿಖಾನ್ ಕೋಟ್ಯಾಧಿಪತಿ!

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 92.81 ಕೋಟಿ ರೂಪಾಯಿ. ಇನ್ನು ಅವರ ಪತ್ನಿ ತಸ್ಬಿಯಾ ಖಾನಂ ಅವರ ಬಳಿ ಬರೋಬ್ಬರಿ 27.15 ಕೋಟಿ ರೂಪಾಯಿ ಇರುವುದಾಗಿ ಘೋಷಿಸಿದ್ದಾರೆ.

ಹಲವರ ಬಳಿ ಕಾರೇ ಇಲ್ಲ!

ಲೋಕಸಭಾ ಚುನಾವಣಾ ಕಣದಲ್ಲಿ ಇರುವ ಹಲವರ ಬಳಿ ಕಾರು ಇಲ್ಲ. ಇನ್ನೂ ಕೆಲವು ನಾಯಕರು ನಾಲ್ಕು ಕಾರುಗಳನ್ನು ಹೊಂದಿದ್ದಾರೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಬಳಿ ಒಂದೂ ಕಾರು ಇಲ್ಲ. ತುಮಕೂರಿನ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ ಮುದ್ದಹನುಮೇಗೌಡ ಅವರ ಒಟ್ಟು ಆಸ್ತಿ ಮೌಲ್ಯ 8.55 ಕೋಟಿ ರೂಪಾಯಿ ಇದೆ. ಇವರು ಎರಡು ಬಾರಿ ಶಾಸಕರಾಗಿ ಹಾಗೂ ಸಂಸದರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಮುದ್ದಹನುಮೇಗೌಡರ ಬಳಿ ಕಾರು ಇಲ್ಲ. ಮಾಜಿ ಸಚಿವ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಯಾವುದೇ ಸಾಲವಿಲ್ಲ. ಅವರ ಬಳಿ ಸ್ವಂತ ವಾಹನವೂ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ.

ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರ ಒಟ್ಟು ಆಸ್ತಿ ಮೌಲ್ಯ 7.84 ಕೋಟಿ ರೂಪಾಯಿ. ಆದರೆ, ಸುನೀಲ್ ಬಳಿ ಯಾವುದೇ ವಾಹನ ಇಲ್ಲ ಎಂದು ಘೋಷಿಸಿದ್ದಾರೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯ ಪ್ರಕಾಶ್ ಹೆಗ್ಡೆ ಅವರ ಒಟ್ಟು ಆಸ್ತಿ ಮೌಲ್ಯ 13.47 ಕೋಟಿ ರೂಪಾಯಿ. ಆದರೆ, ಇವರ ಬಳಿ ಯಾವುದೇ ವಾಹನ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಬಳಿ ಆಡಿ ಕಾರು ಇದೆ. ಅವರ ಪತ್ನಿ ತಸ್ಬಿಯಾ ಖಾನಂ ಅವರ ಬಳಿ ಬಿಎಂಡಬ್ಲು ಕಾರು, ಹುಂಡೈ ಕೆಟ್ರಾ ಕಾರು ಇದೆ. ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಅವರ ಬಳಿ ನಾಲ್ಕು ಕಾರುಗಳಿವೆ. ಅವರ ಒಟ್ಟು ಆಸ್ತಿ ಮೌಲ್ಯ 13.04 ಕೋಟಿ ರೂಪಾಯಿ. ಸಾಲ 3.57 ಕೋಟಿ ರೂಪಾಯಿ ಇದೆ.  

Tags:    

Similar News