ಮಕ್ಕಳಿಲ್ಲದ ದಂಪತಿಗೆ ಆಶಾಕಿರಣ | ಉತ್ತರ ಕರ್ನಾಟಕದ ಮೊದಲ ಸರ್ಕಾರಿ ಐವಿಎಫ್‌ ಕೇಂದ್ರಕ್ಕೆ ಕ್ಷಣಗಣನೆ

ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಇರುವ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಕೆಎಂಸಿಆರ್‌ಐ (ಕಿಮ್ಸ್)‌ಯಲ್ಲಿ ಶೀಘ್ರದಲ್ಲಿಯೇ ಐವಿಎಫ್‌(In- vitro fertilization) ಮೂಲಕ ಮಗು ಪಡೆಯುವ ಸೌಲಭ್ಯ ಕೇಂದ್ರ ಪ್ರಾರಂಭವಾಗಲಿದೆ.

Update: 2024-09-24 02:00 GMT
IVF

ಮದುವೆಯಾಗಿ ವರ್ಷಗಳ ನಂತರವೂ ಹಲವು ಕಾರಣಗಳಿಂದ ಮಕ್ಕಳು ಪಡೆಯಲು ಸಾಧ್ಯವಾಗದ ನೋವು ಅನುಭವಿಸುವ ಮತ್ತು ಸಮಾಜದ ಕೊಂಕು ನುಡಿ ಕೇಳಿ, ಬೇರೆಯವರು ಮಕ್ಕಳನ್ನು ಮುದ್ದಾಡುವುದನ್ನು ನೋಡಿ ಬೇಸರಿಕೊಳ್ಳುವ ದಂಪತಿಗಳಿಗೆ ಇಲ್ಲೊಂದು ನೆಮ್ಮದಿಯ ಸುದ್ದಿ ಇದೆ. ಅದರಲ್ಲೂ ಆಧುನಿಕ ವೈದ್ಯಕೀಯ ನೆರವಿನಿಂದ ಮಗುವನ್ನು ಪಡೆಯುವ ಬಯಕೆ ಇದ್ದರೂ ಆರ್ಥಿಕ ಪರಿಸ್ಥಿತಿಯಿಂದ ಹಿಂಜರಿಯುವ ದಂಪತಿಗಳಿಗೆ ಖಂಡಿತವಾಗಿಯೂ ಇದು ಸಂತಸದ ಸುದ್ದಿ.

ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಹೊಂದಿರುವ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಕೆಎಂಸಿಆರ್ ಐ-ಕಿಮ್ಸ್)‌ ಯಲ್ಲಿ ಶೀಘ್ರದಲ್ಲಿಯೇ ಐವಿಎಫ್‌(In vitro fertilization-ಪ್ರನಾಳ ಶಿಶು ಮೂಲಕ ಮಗು ಪಡೆಯುವ ಸೌಲಭ್ಯ) ಕೇಂದ್ರ ಪ್ರಾರಂಭವಾಗಲಿದೆ. ಇದು ಉತ್ತರ ಕರ್ನಾಟಕದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿಯೇ ಅಂತಹ ಅತ್ಯಾಧುನಿಕ ಸೌಲಭ್ಯ ಹೊಂದುವ ಮೊದಲನೆಯ ಕೇಂದ್ರವಾಗಲಿದೆ.

ಸಾಮಾನ್ಯವಾಗಿ ಐವಿಎಫ್‌ ಮೂಲಕ ಮಗು ಪಡೆಯಲು ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ತಗಲುತ್ತದೆ. ಸ್ತ್ರೀರೋಗ ತಜ್ಞೆ ಡಾ.ನಾಗರೇಖಾ ಹೆಬಸೂರ ಅವರ ಪ್ರಕಾರ "ಒಂದು ಸಾರಿ ಮಹಿಳೆ ಈ ಪ್ರಕಿಯೆಗೆ ಒಳಪಡಲು ಸುಮಾರು 1.50 ಲಕ್ಷದಿಂದ 2 ಲಕ್ಷದ ವರೆಗೆ ಖರ್ಚು ತಗಲುತ್ತದೆ. ಈ ಪ್ರಕಿಯೆಗೆ ಒಳಗಾದ ಮಹಿಳೆ ಪ್ರಥಮ ಪ್ರಯತ್ನದಲ್ಲಿಯೇ ಗರ್ಭಧರಿಸುವ ಸಾಧ್ಯತೆ ಕಡಿಮೆ. ಇಡೀ ಪ್ರಪಂಚದಲ್ಲಿ ನೂರು ಮಹಿಳೆಯರು ಈ ಪ್ರಕಿಯೆಗೆ ಒಳಪಟ್ಟರೆ ಕೇವಲ 25 ಮಹಿಳೆಯರು ಗರ್ಭ ಧರಿಸುತ್ತಾರೆ. ಐವಿಎಫ್‌ ಕೇಂದ್ರ ಕೆಎಂಸಿ-ಆರ್‌ಐ ನಂತಹ ಸರ್ಕಾರಿ ಸಂಸ್ಥೆಗಳಲ್ಲಿ ಸ್ಥಾಪಿತವಾದರೆ ಲಕ್ಷಾಂತರ, ಬಡ ಹಾಗೂ ಮಧ್ಯಮ ವರ್ಗದ ದಂಪತಿಗಳು ಇದರ ಉಪಯೋಗ ಪಡೆದುಕೊಳ್ಳಬಹುದು. ಇದೊಂದು ಮಾನವೀಯ ಕಾರ್ಯ ಕೂಡಾ ಹೌದು" ಎಂದರು.

ಮೆಡಿಸನ್‌ವಿಭಾಗದ ಡಾ.ಪ್ರಮೋದ್‌ ಎನ್ ಅವರ ಪ್ರಕಾರ, "ಐವಿಎಫ್‌ನ ಮೊದಲ ಪ್ರಯತ್ನ ವಿಫಲವಾದರೆ ಎರಡನೆಯ ಪಯತ್ನಕ್ಕೆ ತಗಲುವ ವೆಚ್ಚ ಅಧಿಕವಾಗುತ್ತದೆ. ವೈದ್ಯರು ಮೊದಲನೆಯ ಪ್ರಯತ್ನ ವಿಫಲವಾಗಿರುವ ಕಾರಣ ಹುಡುಕಾಟ, ಮತ್ತು ಹೆಚ್ಚುವರಿ ರೋಗ ನಿರ್ಣಯ ಪರೀಕ್ಷೆ ಮಾಡುವುದರಿಂದ ಸಹಜವಾಗಿ ವೆಚ್ಚವು ಅಧಿಕವಾಗುತ್ತದೆ" ಎನ್ನುತ್ತಾರೆ ಅವರು. "ಇದು ಸಹಜವಾಗಿಯೇ ದಂಪತಿಗಳಿಗೆ ಹೊರೆಯಾಗಲಿದೆ. ಕೆಎಂಸಿ-ಆರ್‌ಐ ನಲ್ಲಿ ಈ ಸೌಲಭ್ಯ ಒದಗಿಸಲು ಯೋಚಿಸಿರುವುದು ತುಂಬಾ ಒಳ್ಳೆಯದು" ಎಂದರು.

ಒಬ್ಬ ಮಹಿಳೆ ಮೂರು ಸಾರಿ ಈ ಪ್ರಯತ್ನಕ್ಕೆ ಒಳಗಾಗಬಹುದು, ಇದಾದ ಬಳಿಕ ದಂಪತಿಗಳು ದತ್ತು ಪಡೆದುಕೊಳ್ಳುವ ಕುರಿತು ಯೋಚಿಸುವುದು ಒಳಿತು ಎಂದು ಡಾ.ಪ್ರಮೋದ್‌ ಹೇಳಿದರು.

"ಬಂಜೆತನದ ಸಮಸ್ಯೆ ಎದರಿಸುತ್ತಿರುವ ಮಧ್ಯಮ ಹಾಗೂ ಬಡ ಕುಟುಂಬದ ದಂಪತಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಅಪಾರ ಖರ್ಚು ಆರ್ಥಿಕ ಹೊರೆಯಲ್ಲದೆ, ಮಕ್ಕಳನ್ನು ಹೊಂದುವ ಬಯಕೆಯನ್ನೆ ಬಿಡುವ ಸಾಧ್ಯತೆ ಅಧಿಕ. ಇದಲ್ಲದೆ ದಂಪತಿಗಳು ನಕಲಿ ವೈದ್ಯರು, ನಾಟಿ ಹಾಗೂ ಇನ್ನಿತರ ಚಿಕಿತ್ಸೆ ಮೊರೆಹೋಗಿ, ಹಣ ಹಾಗೂ ಆರೋಗ್ಯ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ದಂಪತಿಗಳ ಈ ಸಮಸ್ಯೆಯನ್ನು ಮನಗಂಡು, ಅತಿ ಕಡಿಮೆ ಖರ್ಚಿನಲ್ಲಿ ಐವಿಎಫ್‌ ಮೂಲಕ ಮಗವನ್ನು ಪಡೆಯಲು ಸಾಧ್ಯವಾಗಲು ಈ ಕೇಂದ್ರ ತೆರಯಲಾಗುತ್ತಿದೆ" ಎನ್ನುತ್ತಾರೆ ಕೆ.ಎಂ.ಸಿ.ಆರ್. ಐ ನಿರ್ದೇಶಕ ಡಾ. ಎಸ್‌.ಎಫ್.‌ಕಮ್ಮಾರ.

"ಈ ಕೇಂದ್ರವು ಮುಂದಿನ ಆರು ತಿಂಗಳಲ್ಲಿಆಸ್ಪತ್ರೆಯ ಸ್ತ್ರೀರೋಗ ವಿಭಾಗದಲ್ಲಿ ಸ್ಥಾಪನೆಯಾಗಲಿದ್ದು. ಇದಕ್ಕೆ ಕಲಬುಗಿ೯ ಮೂಲದ ಮಾನವೀಯ ಕಲ್ಯಾಣ ಟ್ರಸ್ಟ್‌ ರೂ 90 ಲಕ್ಷ ರೂ. ಅನುದಾನ ನೀಡಲಿದೆ ಹಾಗೂ ಹಟ್ಟಿ ಗೋಲ್ಡ್‌ ಮೈನ್ಸ್‌ 47.6 ಲಕ್ಷ ರೂ. ಧನ ಸಹಾಯ ಒದಗಿಸಲಿದೆ. ಕೇಂದ್ರಕ್ಕೆ ಬೇಕಾದ ಅಗತ್ಯ ಯಂತ್ರಗಳನ್ನು ಖರೀದಿಸಲಾಗಿದೆ, ಹಾಗೂ ಕಟ್ಟಡ ಒಳಾಂಗಣ ನಿಮಾ೯ಣ ಕಾಯ೯ ಇನ್ನು ಪ್ರಾರಂಭವಾಗಲಿದೆ" ಎಂದು ಡಾ.ಕಮ್ಮಾರ ಮಾಹಿತಿ ನೀಡಿದರು.

ಸಾಮಾನ್ಯವಾಗಿ IVF (ಇನ್ ವಿಟ್ರೋ ಫರ್ಟಿಲೈಸೇಶನ್) ಅನ್ನು ಮಹಿಳೆಯ ಗರ್ಭಧಾರಣೆಗೆ ಸಹಾಯ ಮಾಡಲು ಬಳಸಲಾಗುತ್ತದೆ. ಮಹಿಳೆಯರಲ್ಲಿ ಗರ್ಭ ಧಾರಣೆಗೆ ಅಡೆತಡೆ ಉಂಟಾಗುವ ಹಲವು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಐವಿಎಫ್‌ ಚಿಕಿತ್ಸೆ ನೀಡಲಾಗುತ್ತದೆ ಎನ್ನುತ್ತಾರೆ ಸ್ತ್ರೀರೋಗ ತಜ್ಞ ಡಾ. ರಾಮಲಿಂಗಪ್ಪ ಅಂತರತಾನಿ.

“ಇತ್ತೀಚಿನ ದಿನಗಳಲ್ಲಿ ಮಹಿಳೆ ವಯಸ್ಸು ಮೂವತ್ತು ದಾಟಿದ ನಂತರ ಮದುವೆಯಾಗುವುದು, ವಾಯುಮಾಲಿನ್ಯ, ಪೋಷಕಾಂಶ ರಹಿತ ಆಹಾರ ಸೇವನೆಯಿಂದ ಪುರುಷರಲ್ಲಿ ಶುಕ್ರಾಣುಗಳ ಸಂಖ್ಯೆ ಇಳಿಮುಖವಾಗುತ್ತಿರುವದನ್ನು ನಾವು ಗಮನಿಸುತ್ತಿದ್ದೇವೆ. ಈ ಕಾರಣಗಳಲ್ಲದೆ, ಮಹಿಳೆಯರಲ್ಲಿ ಹಾನಿಗೊಳಗಾದ ಫೆಲೋಪಿಯನ್‌ ಟ್ಯೂಬ್ಸ್‌, ಎಂಡೋಮೆಟ್ರಿಯಾಸಿಸ್‌, ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ ಮಹಿಳೆಯರಲ್ಲಿ ಗರ್ಭಧಾರಣೆಗೆ ತೊಡಕನ್ನುಂಟು ಮಾಡುತ್ತವೆ,” ಎನ್ನುತ್ತಾರೆ ಡಾ. ಅಂತರತಾನಿ.

ಸುನೀತಾ (ಹೆಸರು ಬದಲಾಯಿಸಲಾಗಿದೆ) ಮದುವೆಯಾದ 12 ವರ್ಷದ ನಂತರ ಐವಿಎಫ್‌ ಮೂಲಕ ನಾಲ್ಕನೆಯ ಪ್ರಯತ್ನದಲ್ಲಿ ಹೆಣ್ಣು ಮಗುವಿಗೆ ತಾಯಿ ಯಾಗಿದ್ದಾರೆ. “ನಾನು 22 ನೇ ವಯಸ್ಸಿನಲ್ಲಿ ಮದುವೆಯಾದೆ, ಮದುವೆಯಾದ ಒಂದು ವರ್ಷದಲ್ಲಿ ನನ್ನ ಗರ್ಭಹೋಯಿತು (Abortion) ಇದಾದ ಬಳಿಕ ಮತ್ತೆ ಗರ್ಭ ನಿಲ್ಲಲೇ ಇಲ್ಲ, ಹಲವು ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿಐವಿಎಫ್‌ ಚಿಕಿತ್ಸೆಗೆ ಒಳಗಾದೆ. ಆದರೆ ಅದು ಯಶಸ್ಸು ಕಾಣಲಿಲ್ಲ, ನಂತರ ಬೆಳಗಾವಿಯಲ್ಲಿ ಎರಡು ಸರಿ ಐವಿಎಫ್‌ ಮೊರೆ ಹೋದೆ. ಯಶಸ್ಸು ಸಿಗಲಿಲ್ಲ. ಅದಾದ ಬಳಿಕ ಬೆಂಗಳೂರಿನ ಆಸ್ಪತ್ರೆಯಲ್ಲಿ ನಾಲ್ಕನೆಯ ಬಾರಿ ಈ ಚಿಕಿತ್ಸೆಗೆ ಒಳಗಾದೆ. ಆ ಬಾರಿ ಗರ್ಭ ನಿಂತಿತು. ಹುಬ್ಬಳ್ಳಿಯಲ್ಲಿ ಮಗುವಿಗೆ ಜನ್ಮ ನೀಡಿದೆ,” ಎಂದು ಸುನೀತಾ ಹೇಳಿದರು.

ಮಗು ಆಗದಿರುವ ಕೊರಗಿನ ಬಗ್ಗೆ ಮಾತನಾಡಿದ ಅವರು, ಸಮಾಜದಲ್ಲಿ ಮಕ್ಕಳಿಲ್ಲದಿರುವ ಮಹಿಳೆಯನ್ನು ತಿರಸ್ಕಾರದಿಂದ ನೋಡುತ್ತಾರೆ ಹಾಗೂ ಮನೆಯಲ್ಲಿ ಹಿರಿಯರ ಕೊಂಕುನುಡಿ ಕೇಳುವುದು ಮನಸ್ಸಿಗೆ ಬೇಸರ ಹಾಗೂ ಕಿರಿಕಿರಿ ಉಂಟುಮಾಡುತ್ತದೆ ಎನ್ನುತ್ತಾರೆ. ಐವಿಎಫ್‌ ಸೆಂಟರ್‌ಗಳಲ್ಲಿ ಕೆಲವು ಮಹಿಳೆಯರು ಮಕ್ಕಳಿಲ್ಲದಿರುವುದಕ್ಕೆ ಆತ್ಮಹತ್ಯೆ ಪ್ರಯತ್ನ ಪಟ್ಟವರು ಸಿಕ್ಕರು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

Tags:    

Similar News