₹101 ಕೋಟಿ ಉಳಿಸಿದ ಮಹಿಳಾ ಅಧಿಕಾರಿಯೇ ಸಸ್ಪೆಂಡ್! ಲಕ್ಷ್ಮೀ ಹೆಬ್ಬಾಳ್ಕರ್​ ಸಚಿವಾಲಯದಲ್ಲಿ ದುರಾಡಳಿತ?

ಅಧಿಕಾರಿ ನಡೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಹ ಸಮರ್ಥಿಸಿಕೊಂಡಿದೆ. ಅಮಾನತು ಅಗತ್ಯ ಇಲ್ಲ, ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.;

Update: 2025-09-14 08:06 GMT
Click the Play button to listen to article

ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಂತರ ರೂಪಾಯಿ ಹಗರಣದ ತನಿಖೆಯ ಬಿಸಿ ಆರುವ ಮುನ್ನವೇ, ರಾಜ್ಯದಲ್ಲಿ ಮತ್ತೊಂದು ಬೃಹತ್ ಹಗರಣ ನಡೆಯುವುದು ಸ್ವಲ್ಪದರಲ್ಲೇ ತಪ್ಪಿಹೋಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಸುಮಾರು 100 ಕೋಟಿ ರೂಪಾಯಿ ಮೊತ್ತದ ಅವ್ಯವಹಾರಕ್ಕೆ ಕಡಿವಾಣ ಹಾಕಿದ ಪ್ರಾಮಾಣಿಕ ಕೆಎಎಸ್ ಅಧಿಕಾರಿ, ಸರ್ಕಾರದ ಹಣವನ್ನು ಉಳಿಸಿದ್ದಕ್ಕೇ ಅಮಾನತು ಶಿಕ್ಷೆಗೆ ಗುರಿಯಾದ ವಿಪರ್ಯಾಸವೂ ಈ ಸಂದರ್ಭದಲ್ಲಿ ನಡೆದು ಹೋಗಿದೆ. ಈ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್​ ಕಣ್ಣಳತೆಯಲ್ಲಿಯೇ ಬೃಹತ್ ಭ್ರಷ್ಟಾಚಾರದ ಪ್ರಯತ್ನ ನಡೆಯಿತೇ ಎಂಬ ಚರ್ಚೆಗಳು ಶುರುವಾಗಿವೆ. 

ಮಹಿಳಾ ಅಭಿವೃದ್ಧಿ ನಿಗಮದ ನಿರ್ದೇಶಕಿಯಾಗಿದ್ದ ಕೆಎಎಸ್ ಅಧಿಕಾರಿ ಪುಷ್ಪಲತಾ ಅವರು, ವಿವಿಧ ಯೋಜನೆಗಳಿಗೆ ನೀಡಿದ ಅನುದಾನದಲ್ಲಿ ಖರ್ಚಾಗದೆ ಉಳಿದಿದ್ದ ಕೋಟ್ಯಂತರ ರೂಪಾಯಿ ಮತ್ತು ಬ್ಯಾಂಕ್‌ಗಳಿಂದ ಬಂದಿದ್ದ ಬಡ್ಡಿ ಹಣವನ್ನು ನಿಯಮಾನುಸಾರ ಸರ್ಕಾರದ ಖಾತೆಗೆ ಹಿಂದಿರುಗಿಸಿದ್ದರು. ಈ ನಡೆಯು, ಉಳಿದ ಅನುದಾನವನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಿ ದುರ್ಬಳಕೆ ಮಾಡಿಕೊಳ್ಳಲು ಹೊಂಚು ಹಾಕಿದ್ದ ಕೆಲವರಿಗೆ ನುಂಗಲಾರದ ತುತ್ತಾಯಿತು ಎಂಬ ಮಾತುಗಳು ಕೇಳಿ ಬಂದಿವೆ.

ವರದಿಗಳ ಪ್ರಕಾರ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿಶೇಷ ಕರ್ತವ್ಯ ಅಧಿಕಾರಿ ಬಿ.ಎಚ್.ನಿಶ್ಚಲ್ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಮಹೇಶ್‌ಬಾಬು ಅವರು, ಪುಷ್ಪಲತಾ ಅವರ ನಿರ್ಧಾರಕ್ಎ ಕೆರಳಿದ್ದರು. ಸಚಿವರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ಅನುದಾನವನ್ನು ಹಿಂತಿರುಗಿಸಿದ್ದಾರೆ ಎಂಬ ಕಾರಣ ನೀಡಿ, ತಮ್ಮ ಅಧಿಕಾರ ಬಳಸಿ ಪುಷ್ಪಲತಾ ಅವರನ್ನು ಅಮಾನತುಗೊಳಿಸಿದ್ದರು. ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಈ ಅಮಾನತನ್ನು ವಿರೋಧಿಸಿತು. "ನಿಗಮದ ಅನುದಾನ ದುರ್ಬಳಕೆಯಾಗದಂತೆ ಕ್ರಮ ಕೈಗೊಂಡಿರುವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿ, ನಿಗಮವನ್ನು ತರಾಟೆಗೆ ತೆಗೆದುಕೊಂಡಿತು. ಡಿಪಿಎಆರ್‌ನ ಮಧ್ಯಪ್ರವೇಶದ ನಂತರ, ಪುಷ್ಪಲತಾ ಅವರ ಅಮಾನತನ್ನು ಹಿಂಪಡೆದು, ಅವರನ್ನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕಿಯಾಗಿ ವರ್ಗಾವಣೆ ಮಾಡಲಾಗಿದೆ.

ಈ ನಡುವೆ, ತಮಗೆ ಅಧಿಕಾರಿಗಳಿಂದ ಕಿರುಕುಳವಾಗಿದೆ ಎಂದು ಪುಷ್ಪಲತಾ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಆಯೋಗವು ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದೆ. ಈ ಇಡೀ ಪ್ರಕರಣವು, ವಾಲ್ಮೀಕಿ ನಿಗಮದ ಹಗರಣದಿಂದ ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಿದಂತೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಎದುರಾಗಬಹುದಾಗಿದ್ದ ದೊಡ್ಡ ರಾಜಕೀಯ ಮುಜುಗರವನ್ನು ತಪ್ಪಿಸಿದೆ ಎಂದೇ ಹೇಳಲಾಗುತ್ತಿದೆ. 

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಗೆ ಮುಖಭಂಗ..!

ಮಹಿಳೆಯರ ಕಲ್ಯಾಣಕ್ಕಾಗಿ ಸರ್ಕಾರವು ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಕೋಟ್ಯಂತರ ರೂ. ಅನುದಾನ ಒದಗಿಸುತ್ತದೆ. ಇದರಲ್ಲಿ ಖರ್ಚಾಗದೆ ಉಳಿದ ಮೊತ್ತವನ್ನು ಸಹಜವಾಗಿಯೇ ಸರ್ಕಾರಕ್ಕೆ ಹಿಂತಿರುಗಿಸಬೇಕು. ಅಂತೆಯೇ ಪುಷ್ಪಲತಾ ಅವರು 101.63 ಕೋಟಿ ರು. ವಾಪಸ್ ಮಾಡಿದ್ದಾರೆ. ಅಧಿಕಾರಿಯ ನಡೆಯ ಕ್ರಮವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಮರ್ಥಿಸಿಕೊಂಡಿದೆ. ಈ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮುಖಭಂಗವಾಗಿದೆ. ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ಹುನ್ನಾರ ಕೈತಪ್ಪಿದಂತಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಈ ವಿಚಾರದಲ್ಲಿ ಹೊರಡಿಸಿರುವ ಸುತ್ತೋಲೆಯು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಮುಜುಗರಕ್ಕೀಡು ಮಾಡಿದೆ ಎಂದು ಮೂಲಗಳು ಹೇಳಿವೆ.

ಸಿಬ್ಬಂದಿ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಸುತ್ತೋಲೆಯಲ್ಲಿ ಏನಿದೆ?

ಮಹಿಳಾ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡಿದ ಅನುದಾನದ ಪೈಕಿ ಖರ್ಚು ಮಾಡದೆ ಉಳಿಕೆಯಾಗಿದ್ದ 101.63 ಕೋಟಿ ರೂ. ಸರ್ಕಾರಕ್ಕೆ ವಾಪಸ್ ಮಾಡಿರುವ ಪ್ರಕರಣವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮತ್ತೊಂದು ಮುಖ ಅನಾವರಣಗೊಳಿಸಿದೆ. ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಮಾಡಿದ ಅಮಾನತು ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ತಳ್ಳಿ ಹಾಕಿದೆ. ಪುಷ್ಪಲತಾ ಅವರ ವಿರುದ್ಧ ಅಮಾನತು ಮಾಡಲು ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅನುಮೋದನೆ ನೀಡಿದ್ದರು ಎಂದು ನಿಗಮದ ಮೂಲಗಳು ಹೇಳಿವೆ. ಆದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮಹಿಳಾ ಅಧಿಕಾರಿಯ ವಿರುದ್ಧದ ಅಮಾನತು ಆದೇಶವನ್ನು ತಿರಸ್ಕಾರ ಮಾಡಿದೆ. ಪುಷ್ಪಲತಾ ಯಾವುದೇ ಕರ್ತವ್ಯ ಲೋಪವೆಸಗಿಲ್ಲ ಎಂದು ಹೇಳಿದೆ. ಇದು ಪುಷ್ಪಲತಾ ಅವರು ಸರ್ಕಾರಕ್ಕೆ ನಿಯಮಗಳ ಪ್ರಕಾರ 101.63 ಕೋಟಿ ರೂ. ವಾಪಸ್ ಮಾಡಿದ್ದರೂ ಸಹ ಅವರ ವಿರುದ್ಧ ಹೊರಡಿಸಿದ್ದ ಅಮಾನತು ಆದೇಶದ ಹಿಂದೆ ಷಡ್ಯಂತ್ರಗಳು ಇದ್ದವು ಎಂಬ ಅನುಮಾನಗಳು ವ್ಯಕ್ತವಾಗಿವೆ.

ಪುಷ್ಪಲತಾ ಅವರ ಅಮಾನತಿಗೆ ಇಲಾಖೆ ನೀಡಿದ ಕಾರಣಗಳೇನು?

ಮಹಿಳಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಪುಷ್ಪಲತಾ ಅವರನ್ನು ಅಮಾನತುಗೊಳಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರಮುಖವಾಗಿ ಮೂರು ಆರೋಪಗಳನ್ನು ಮುಂದಿಟ್ಟಿತ್ತು. ಮೊದಲನೆಯದಾಗಿ, ಮಹಿಳಾ ಸಬಲೀಕರಣ ಯೋಜನೆಗಳಿಗಾಗಿ ಬಿಡುಗಡೆಯಾಗಿದ್ದ 101 ಕೋಟಿ ರೂಪಾಯಿಗೂ ಅಧಿಕ ಅನುದಾನ ಸಮರ್ಪಕವಾಗಿ ಬಳಸದೆ, ದೀರ್ಘಕಾಲ ಬ್ಯಾಂಕ್ ಖಾತೆಗಳಲ್ಲೇ ಇರಿಸಲಾಗಿತ್ತು. ಸರ್ಕಾರದ ನಿರ್ದೇಶನದಂತೆ, ಬಳಕೆಯಾಗದ ಹಣ ಮತ್ತು ಅದರಿಂದ ಬಂದ ಬಡ್ಡಿಯನ್ನು ನಿಯಮಿತವಾಗಿ ಸರ್ಕಾರಕ್ಕೆ ಹಿಂತಿರುಗಿಸಬೇಕಿತ್ತು. ಆದರೆ, ಈ ಹಣದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಇಲಾಖೆ ಆರೋಪಿಸಿತ್ತು.

ಎರಡನೆಯದಾಗಿ, ಬ್ಯಾಂಕ್ ಖಾತೆಗಳಲ್ಲಿದ್ದ ಬಡ್ಡಿ ಹಣ, ನಿಶ್ಚಿತ ಠೇವಣಿ ಮತ್ತು ಫಲಾನುಭವಿಗಳಿಂದ ಮರುಪಾವತಿಯಾದ ಮೊತ್ತವನ್ನು ಆರ್ಥಿಕ ಇಲಾಖೆಗೆ ಹಿಂದಿರುಗಿಸುವಾಗ, ಆಡಳಿತ ಇಲಾಖೆಯ ಪೂರ್ವಾನುಮತಿ ಪಡೆದಿಲ್ಲ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿಲ್ಲ ಎಂದು ಆರೋಪಿಸಲಾಗಿತ್ತು. ಏಕಾಏಕಿ ಈ ಕ್ರಮ ಕೈಗೊಂಡಿರುವುದು ಸೂಕ್ತವಲ್ಲ ಮತ್ತು ಇದರಿಂದ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಲು ಅಡಚಣೆಯಾಗುತ್ತದೆ, ಇದು ಕರ್ತವ್ಯ ಲೋಪಕ್ಕೆ ಸಮನಾಗಿದೆ ಎಂದು ಇಲಾಖೆ ಪ್ರತಿಪಾದಿಸಿತ್ತು.

ಮೂರನೆಯದಾಗಿ, ನಿಗಮದ ಕಚೇರಿಯನ್ನು ಜಯನಗರದಿಂದ ಕೃಷಿ ಭವನಕ್ಕೆ ಸ್ಥಳಾಂತರಿಸುವಾಗ, ಕಟ್ಟಡದ ಬಾಡಿಗೆ ಪಾವತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ತಿಂಗಳಿಗೆ 5 ಲಕ್ಷ ರೂಪಾಯಿವರಗೆ ಬಾಡಿಗೆ ಪಾವತಿಸಲು ಅವಕಾಶವಿದ್ದರೂ, ನಿಯಮಗಳನ್ನು ಸೂಕ್ತವಾಗಿ ಪರಿಶೀಲಿಸದೆ ಹೆಚ್ಚುವರಿ ಬಾಡಿಗೆ ಪಾವತಿಸಲು ಕಾರಣರಾಗಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ಇಲಾಖೆ ದೂರಿತ್ತು. 

ಮಹಿಳಾ ಆಯೋಗಕ್ಕೆ ದೂರು ನೀಡಿದ ಪುಷ್ಪಲತಾ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಿರುವ ಆರೋಪಗಳಿಗೆ ಪುಷ್ಪಲತಾ ಸ್ಪಷ್ಟನೆಯ ಜತೆಗೆ ತಮಗೆ ಕಿರುಕುಳ ನೀಡುತ್ತಿದ್ದ ಅಧಿಕಾರಿಗಳ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ದೂರಿನಲ್ಲಿ ಹಲವು ಅಂಶಗಳನ್ನು ಸೇರಿಸಿದ್ದಾರೆ. 2021ರ ಮಾರ್ಚ್ ನಿಂದ 2025 ರ ಜೂನ್‌ವರೆಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದು, ಈ ಅವಧಿಯಲ್ಲಿ ಸರ್ಕಾರದ ನಿರ್ದೇಶನಗಳ ಅನ್ವಯ ಬಳಕೆಯಾಗದೆ ಬ್ಯಾಂಕ್‌ನಲ್ಲಿ ಜಮೆಯಾಗಿದ್ದ ಮೊತ್ತ ಮತ್ತು ಅದರ ಬಡ್ಡಿಯನ್ನು ನಿಯಮಾನುಸಾರ ಮರು ಪಾವತಿ ಮಾಡಲಾಗಿರುತ್ತದೆ. ನಿಗಮದ ಕಚೇರಿ ಸ್ಥಳಾಂತರ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ಹಾಗೂ ಸರ್ಕಾರದ ಅನಮೋದನೆಗಳನ್ನು ಪಡೆಯಲಾಗಿತ್ತು. 2024ರ ಆ.8ರಂದು ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. 2024ರ ಆಗಸ್ಟ್ 21ರಂದು ಅಧ್ಯಕ್ಷರಿಂದ ಕಡತದಲ್ಲಿ ಅನುಮೋದನೆಯನ್ನೂ ಪಡೆದುಕೊಳ್ಳಲಾಗಿತ್ತು. ಈ ಪ್ರಕ್ರಿಯೆ ಪಡೆದ ನಂತರ ಕ್ರೆಡಿಲ್ ಇವರಿಗೆ ಕೆಲಸ ನಿರ್ವಹಿಸಲು ಕಾರ್ಯಾದೇಶ ನೀಡಲಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಪತ್ರ ವ್ಯವಹಾರಗಳು ಆದೇಶಗಳು, ಅನುಮತಿ ಪತ್ರ ಇತ್ಯಾದಿ ಎಲ್ಲಾ ಮಾಹಿತಿಯನ್ನು ಇಲಾಖೆ ಸಚಿವರಿಗೆ ಸರ್ಕಾರದ ಏಕ ಕಡತದ ಮೂಲಕ 2024ರ ಡಿ.9ರಂದು ಗಮನಕ್ಕೆ ಸಲ್ಲಿಸಲಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆದರೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕ ಎನ್ ಮಹೇಶ್ ಬಾಬು ಮತ್ತು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ ಹೆಚ್ ನಿಶ್ಚಲ್ ಕರ್ಡಗಳನ್ನು ಕೂಲಂಕುಷವಾಗಿ ಪರಿಶೀಲಿಸಿಲ್ಲ. ಸರ್ಕಾರದಿಂದಾಗಲೀ ಅಥವಾ ಮೇಲಿನ ಅಧಿಕಾರಿಗಳಿಂದಾಗಲಿ ಯಾವುದೇ ಆದೇಶಗಳನ್ನು ಪಡೆಯದೇ ಅಮಾನತುಗೊಳಿಸಲು ಏಕ ಕಡತ ಮೂಲಕ ಶಿಫಾರಸ್ಸು ಮಾಡಿರುತ್ತಾರೆ. ಈ ಶಿಫಾರಸ್ಸು ಮಾಡುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ರೀತಿಯ ವಿವರಗಳನ್ನು ಸಹ ಪಡೆಯದೆ ಮನಸೊ ಇಚ್ಛೆಯಂತೆ ಕ್ರಮ ಕೈಗೊಂಡಿದ್ದಾರೆ. ಈ ಕ್ರಮಗಳು ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ವಿನಾ ಕಾರಣ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಕಳೆದ 15 ವರ್ಷಗಳಿಂದ ವಿವಿಧ ಇಲಾಖೆಗಳಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿಯೇ ಸರಿ ಸುಮಾರು 5 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುತ್ತೇನೆ. ಆದುದರಿಂದ ನನ್ನನ್ನು ಅಮಾನತು ಮಾಡುವಂತೆ ಶಿಫಾರಸ್ಸು ಮಾಡಿರುವ ಆದೇಶಗಳಿಂದ ನನ್ನ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ಘನತೆಗೆ ಧಕ್ಕೆಯಾಗಿರುತ್ತದೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿಯೇ ಮಹಿಳಾ ಅಧಿಕಾರಿಗಳಿಗೆ ಈ ರೀತಿ ಮಾನಸಿಕ ಹಿಂಸೆ ನೀಡುತ್ತಿರುವುದು ವಿಷಾದಕರವಾಗಿದ್ದು ಮನಸ್ಸಿಗೆ ಘಾಸಿಯಾಗಿರುತ್ತದೆ ಎಂದು ಹೇಳಿದ್ದಾರೆ.

ಸ್ಪಷ್ಟನೆ ಕೇಳಿದ ಮಹಿಳಾ ಆಯೋಗ

ಪುಷ್ಪಲತಾ ನೀಡಿರುವ ದೂರಿನ ಮೇರೆಗೆ ರಾಜ್ಯ ಮಹಿಳಾ ಆಯೋಗವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರ ಬರೆದು ಸ್ಪಷ್ಟನೆ ಕೇಳಿದೆ. ದೂರುದಾರರು ಸಲ್ಲಿಸಿರುವ ದೂರುಗಳನ್ನು ನಿಯಮಾನುಸಾರ ಪರಿಶೀಲನೆ ನಡೆಸಬೇಕು. ಒಂದು ವೇಳೆ ಅಧಿಕಾರಿಗಳು ತಪ್ಪಿತಸ್ಥರಾಗಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.

Tags:    

Similar News