ಮಿನರಲ್ಸ್ ಕಾರ್ಪೋರೇಷನ್‌ನಲ್ಲಿ 'ಅನುಕಂಪ' ದ ಹೆಸರಲ್ಲಿ ಅಕ್ರಮ: 15ರಿಂದ 20 ಲಕ್ಷಕ್ಕೆ ನೌಕರಿ ಬಿಕರಿ?

ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಅನರ್ಹಗೊಂಡಿದ್ದ 23 ಮಂದಿಗೆ ಅಕ್ರಮವಾಗಿ ನೇಮಕಾತಿ ಮಾಡಲಾಗಿದೆ. ಅನರ್ಹರಿಂದ ತಲಾ 15 ಲಕ್ಷ ರೂ. ನಿಂದ 20 ಲಕ್ಷ ರೂ. ಪಡೆಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.;

Update: 2025-09-12 14:36 GMT

ಕರ್ನಾಟಕ ಲೋಕಾಯುಕ್ತ

ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಲು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ ಅನರ್ಹರು ದಾಖಲೆ ತಿದ್ದುಪಡಿ, ಅಂಕಪಟ್ಟಿ ತಿದ್ದುಪಡಿ ಸೇರಿದಂತೆ ಹಲವಾರು ಅಕ್ರಮಗಳನ್ನು ಎಸಗಿರುವುದು ಬೆಳಕಿಗೆ ಬಂದಿದ್ದು, ಅನರ್ಹರಿಂದ ತಲಾ 15 ಲಕ್ಷ ರೂ. ನಿಂದ 20 ಲಕ್ಷ ರೂ. ಪಡೆದು ನೌಕರಿ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. 

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ, ವಕೀಲ ಹೊಳೇಬಸಪ್ಪ ಎಸ್ ಹಾಳಕೇರಿ ಎಂಬುವವರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯ ಮಾಡಲಾಗಿದೆ. ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್‌ನಲ್ಲಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡುವಲ್ಲಿ ಭ್ರಷ್ಟಾಚಾರ ನಡೆದಿದೆ. ನಿಗಮದ ಅಧಿಕಾರಿಗಳು ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಅನರ್ಹಗೊಂಡಿದ್ದ 23 ಮಂದಿಗೆ ಅಕ್ರಮವಾಗಿ ನೇಮಕಾತಿ ನೀಡಿ ಉದ್ಯೋಗ ನೀಡಿದ್ದಾರೆ. ಅನರ್ಹರನ್ನು ಅರ್ಹಗೊಳಿಸಲು ಹಲವಾರು ದಾಖಲೆ ತಿದ್ದುಪಡಿ, ಮೂಲ ಅರ್ಜಿ ತಿದ್ದುಪಡಿ, ಅಂಕಪಟ್ಟಿ ತಿದ್ದುಪಡಿ ಸೇರಿದಂತೆ ಹಲವಾರು ಅಕ್ರಮ ಎಸಗಲಾಗಿದೆ.  ಅನರ್ಹರಿಂದ ತಲಾ 15 ಲಕ್ಷ ರೂ. ನಿಂದ 20 ಲಕ್ಷ ರೂ. ಪಡೆಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.



ನಿಗಮದ ಆಡಳಿತ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಶಿಲ್ಪಾ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿ, ಕಾರ್ಯ ನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ, ವ್ಯವಸ್ಥಾಪಕ ನಿರ್ದೇಶಕರು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಇದೇ ಅಧಿಕಾರಿಗಳನ್ನೊಳಗೊಂಡ ತಂಡ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿತ್ತು. ಇದೀಗ ಅದೇ ವ್ಯಕ್ತಿಗಳನ್ನು ಅರ್ಹಗೊಳಿಸಿ ಉದ್ಯೋಗ ನೀಡಲಾಗಿದೆ. ಇದರಲ್ಲಿ ಮಂಜುನಾಥ್‌ ಎಚ್‌ .ಡಿ. ( ಅಂಕಪಟ್ಟಿ ತಿದ್ದುಪಡಿ), ಲೋಕೇಶ್ ವೈ. ( ಮೂಲ ಅರ್ಜಿ ಮಾರ್ಪಾಡು),  ಗೋಪಿ ( ಮೂಲ ಅರ್ಜಿ ಮಾರ್ಪಾಡು) ಇಬ್ರಾಹಿಂ ( ಮೂಲ ಅರ್ಜಿ ತಿದ್ದುಪಡಿ, ) ಕಿರಣ್ ಎಚ್‌.ಆರ್. ( ಮೂಲ ಅರ್ಜಿ ಮಾರ್ಪಾಡು ಮತ್ತು ದಾಖಲೆ ತಿರುಚಿರುವುದು) ಸೇರಿದಂತೆ 23 ಮಂದಿ ಅನರ್ಹರನ್ನು ನೇಮಕಗೊಳಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. 

ಅನುಕಂಪದ ಆಧಾರದ ಮೇಲೆ ಮೃತ ನೌಕರನ ಕುಟುಂಬ ಸದಸ್ಯರಿಗೆ ನೌಕರಿ ನೀಡಬೇಕಾದರೆ, ಮೃತ ನೌಕರನ ಕುಟುಂಬ ಸದಸ್ಯರು ಮೃತಪಟ್ಟ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗೆ ನೌಕರಿ ಕೋರಿ ನಿಗಮಕ್ಕೆ ಕಡ್ಡಾಯವಾಗಿ ಮನವಿ ಸಲ್ಲಿಸಬೇಕು. ಅಂತಹವರನ್ನು ಮಾತ್ರ ನೇಮಕಾತಿ ಮಾಡಬೇಕು ಎಂಬ ಸ್ಪಷ್ಟ ನಿಯಮಗಳಿವೆ. ಈ ನಿಯಮಗಳನ್ನೇ ಆಧರಿಸಿ ಅನರ್ಹಗೊಳಿಸಿದ್ದವರನ್ನು ಇದೀಗ ನೇಮಕ ಮಾಡಿ ಅದೇಶ ಹೊರಡಿಸಿರುವುದು ಭ್ರಷ್ಟಾಚಾರ ಆರೋಪಕ್ಕೆ ಪುಷ್ಟಿ ನೀಡಿದಂತಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.  

Tags:    

Similar News