Census -2025| ಸಮೀಕ್ಷೆಗೆ ಹೊಸ ಜಾತಿಗಳ ಪರಿಗಣನೆ; ಮತಾಂತರವಾದ ಉಪಜಾತಿಗಳ ಗಣನೆಗೆ ಹೆಚ್ಚಿದ ಅಸಹನೆ
ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಸೇರಿದಂತೆ ಹಲವಾರು ಜಾತಿಗಳನ್ನು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಜಾತಿ ಪಟ್ಟಿಯಲ್ಲಿರುವ ಮೂಲ ಜಾತಿಗಳೇ ಅಸಹನೆ ವ್ಯಕ್ತಪಡಿಸಿವೆ.;
ಎಚ್.ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ 2015 ರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಗುರುತಿಸಿದ ಹೊಸ ಜಾತಿಗಳನ್ನು ಹೊಸ ಸಮೀಕ್ಷೆಗೆ ಪರಿಗಣಿಸುವ ವಿಚಾರ ರಾಜಕೀಯ ಮೇಲಾಟಕ್ಕೆ ಕಾರಣವಾಗಿವೆ.
ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಸೇರಿದಂತೆ ಹಲವಾರು ಜಾತಿಗಳನ್ನು ಈ ಹಿಂದಿನ ಸಮೀಕ್ಷೆಯಲ್ಲಿ ಸೃಷ್ಟಿಸಲಾಗಿದೆ. ಆ ಜಾತಿಗಳನ್ನು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸಲು ವರದಿ ಶಿಫಾರಸು ಕೂಡ ಮಾಡಿದೆ. ರಾಜ್ಯ ಸರ್ಕಾರವೇನೋ ವರದಿ ಒಪ್ಪಿಕೊಂಡಿಲ್ಲ. ಆದರೆ, ಹಳೆಯ ವರದಿಯಲ್ಲಿ ಉಲ್ಲೇಖವಾಗಿರುವ ಮಾಹಿತಿಯನ್ನೇ ಹೊಸ ಸಮೀಕ್ಷೆಗೆ ಬಳಸಿಕೊಂಡರೆ ಹೊಸ ಜಾತಿಗಳಿಗೆ ಕಾನೂನು ಮಾನ್ಯತೆ ದೊರೆತು ಮೂಲ ಜಾತಿಗಳ ಮೀಸಲಾತಿಗೆ ಧಕ್ಕೆಯಾಗುವ ಆತಂಕ ಹಿಂದುಳಿದ ವರ್ಗಗಳ ಸಮುದಾಯಗಳನ್ನು ಕಾಡುತ್ತಿದೆ.
ರಾಜಕೀಯ ಲಾಭಕ್ಕಾಗಿ ಹೊಸ ಜಾತಿಗಳನ್ನು ಸೃಷ್ಟಿಸಿರುವ ಸರ್ಕಾರದ ಕ್ರಮಕ್ಕೆ ಮೂಲ ಜಾತಿಗಳು ಅಸಹನೆ ಕೂಡ ವ್ಯಕ್ತಪಡಿಸಿವೆ. ಸೆ.22 ರಿಂದ ಆರಂಭವಾಗುವ ಹೊಸ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಯಾವುದೇ ಕಾರಣಕ್ಕೂ ಹೊಸ ಜಾತಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಬಾರದು. ಮೂಲ ಜಾತಿಗಳಲ್ಲೇ ಗಣನೆಗೆ ತೆಗೆದುಕೊಳ್ಳಬೇಕು ಎಂದು ರಾಜಕೀಯ ಪಕ್ಷಗಳು ಕೂಡ ಒತ್ತಡ ಹಾಕುತ್ತಿವೆ.
ಕಾಂತರಾಜು ಆಯೋಗದ ವರದಿಯಲ್ಲಿ ಅನ್ಯ ಧರ್ಮಗಳಿಗೆ ಮತಾಂತರವಾದ ಜಾತಿಗಳನ್ನು ಬ್ರಾಹ್ಮಣ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಹೆಸರಿನಲ್ಲಿ ಉಪಜಾತಿ ಸೃಷ್ಟಿಸಲಾಗಿದೆ. ಮತಾಂತರದಿಂದ ಸೃಷ್ಟಿಯಾದ ಇಂತಹ ಜಾತಿಗಳನ್ನು ಹಿಂದುಳಿದ ವರ್ಗಗಳ ಮೀಸಲಾತಿಗೆ ಸೇರಿಸದೇ ಆಯಾ ಮೂಲ ಜಾತಿಗಳಲ್ಲೇ ಮೀಸಲಾತಿಯಲ್ಲಿ ಮುಂದುವರಿಸಬೇಕು ಎಂದು ಒಬಿಸಿ ಪಟ್ಟಿಯಲ್ಲಿರುವ ಜಾತಿಗಳ ಮುಖಂಡರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಆಯೋಗವು ಹಿಂದುಳಿದ ವರ್ಗಗಳಲ್ಲಿ 1400ಕ್ಕೂ ಹೆಚ್ಚು ಜಾತಿಗಳಿದ್ದು, ಮಾರ್ಪಾಡು ಕುರಿತಂತೆ ಆಕ್ಷೇಪಣೆ ಆಹ್ವಾನಿಸಿತ್ತು. ಹಾಗಾಗಿ ಹೊಸ ಜಾತಿಗಳಿಗೆ ಅದರ ಮೂಲ ಜಾತಿಗಳಲ್ಲೇ ಮೀಸಲಾತಿ ನೀಡಬೇಕು ಎಂದು ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಮನವಿ ಮಾಡಿವೆ.
ಹೊಸ ಜಾತಿಗಳಿಗೆ ಜಾತಿ ಸಂಖ್ಯೆ
ಹೊಸ ಜಾತಿಗಳಿಗೆ ಕೋಡ್ ನಂಬರ್ ನೀಡಲಾಗಿದೆ. ಹಿಂದೂ ಜಾತಿಗಳ ಮುಂದೆ ಮಡಿವಾಳ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಸೇರಿಸಿ ಮೀಸಲಾತಿ ವಿಭಜಿಸುವ ಹುನ್ನಾರ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಇದು ಮತಾಂತರಕ್ಕೆ ಉತ್ತೇಜನ ನೀಡುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಹೊಸ ಜಾತಿ ಪಟ್ಟಿಯನ್ನು ಹಿಂಪಡೆಯಬೇಕು. ಮತಾಂತರ ರಾಜಕೀಯ ನಿಲ್ಲಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಅಲ್ಲದೇ ಈ ಸಂಬಂಧ ಹಿಂದುಳಿದ ವರ್ಗಗಳ ಆಯೋಗಕ್ಕೂ ಮನವಿ ಸಲ್ಲಿಸಿದ್ದಾರೆ.
ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆಯ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ ಗಣತಿ ಕೈಗೊಂಡಿದ್ದರೂ ಹೊಸ ಜಾತಿ ವರ್ಗೀಕರಣದಲ್ಲಿ ರಾಜಕೀಯ ಲಾಭ -ನಷ್ಟದ ಲೆಕ್ಕಾಚಾರ ಅಡಗಿದೆ ಎಂದು ದೂರುಗಳು ಕೇಳಿ ಬರುತ್ತಿವೆ.
ಕ್ರಿಶ್ಚಿಯನ್ನರಲ್ಲೂ ಗಣತಿಗೆ ವಿರೋಧ
2015ರಲ್ಲಿ ಕಾಂತರಾಜು ನೇತೃತ್ವದ ಆಯೋಗವು 165 ಕೋಟಿ ರೂ ವೆಚ್ಚದಲ್ಲಿ ಸಮೀಕ್ಷೆ ನಡೆಸಿದೆ. 2011ರ ಜನಗಣತಿಯಲ್ಲಿ 11.44 ಲಕ್ಷ ಕ್ರಿಶ್ಚಿಯನ್ನರ ಜನಸಂಖ್ಯೆ ನಮೂದಾಗಿದೆ. ಆದರೆ, 2015 ರ ಸಮೀಕ್ಷೆಯಲ್ಲಿ ಕೇವಲ 9.47 ಲಕ್ಷ ಕ್ರಿಶ್ಚಿಯನ್ನರನ್ನು ಮಾತ್ರ ತೋರಿಸಲಾಗಿದೆ.
ಪ್ರಸ್ತುತ, ರಾಜ್ಯದಲ್ಲಿ ಸುಮಾರು 35 ಲಕ್ಷ ಕ್ರಿಶ್ಚಿಯನ್ನರಿದ್ದರೂ ಸಮೀಕ್ಷೆಯಲ್ಲಿ ಕಡಿಮೆ ತೋರಿಸಲಾಗಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದವರನ್ನು ಉಪ ಜಾತಿಗಳ ಹೆಸರಲ್ಲಿ ಪ್ರತ್ಯೇಕಿಸಿ ಹಿಂದುಳಿದ ವರ್ಗಗಳಿಗೆ ಸೇರಿಸಲಾಗಿದೆ ಎಂಬುದು ಕ್ರಿಶ್ಚಿಯನ್ ಧರ್ಮದ ಮುಖಂಡರ ಆರೋಪವಾಗಿದೆ.
ಜಾತಿ ಪಟ್ಟಿಯಲ್ಲಿಲ್ಲದ ಜಾತಿಗಳಿಗೆ ಬೇಡ ಆದ್ಯತೆ
ದಲಿತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಎಂದು ಹಿಂದೂ ಸಮಾಜದ ನಾನಾ ಜಾತಿಗಳ ಮುಂದೆ ಕ್ರಿಶ್ಚಿಯನ್ ಸೇರ್ಪಡೆಗೊಳಿಸಿ ಸೃಷ್ಟಿಸಿರುವ ಹೊಸ ಜಾತಿಗಳಿಗೆ ಆಯೋಗ ಪ್ರಾಮುಖ್ಯತೆ ನೀಡಬಾರದು. ಸರ್ಕಾರದ ಜಾತಿ ಪಟ್ಟಿಯಲ್ಲಿ ಇಲ್ಲದ ಹಾಗೂ ಯಾವುದೇ ಆಯೋಗದ ಜಾತಿ ಪಟ್ಟಿಯಲ್ಲಿ ಇಲ್ಲದ ಹೊಸ ಜಾತಿಗಳನ್ನುಪರಿಗಣಿಸಬಾರದು ಎಂಬುದು ಹಿಂದುಳಿದ ವರ್ಗಗಳು ಒತ್ತಾಯವಾಗಿದೆ.
ಕ್ರಿಶ್ಚಿಯನ್ ಸಮುದಾಯದಲ್ಲಿ ಕೇವಲ ಎರಡರಿಂದ ಮೂರು ಉಪ ಜಾತಿಗಳು ಮಾತ್ರ ಇವೆ. ಅದೇ ರೀತಿ ಮುಸ್ಲಿಮರಲ್ಲಿ ಕೆಲವೇ ಉಪ ಜಾತಿಗಳಿವೆ. ಎಲ್ಲ ಹಿಂದೂ ಉಪ ಜಾತಿಗಳಿಗೆ ಕ್ರಿಶ್ಚಿಯನ್, ಮುಸ್ಲಿಂ ಎಂದು ಹಾಕಿ ಮತ್ತೊಂದು ರೀತಿ ಮತಾಂತರಕ್ಕೆ ಸರ್ಕಾರವೇ ಪ್ರೇರಣೆ ನೀಡುತ್ತಿರುವ ಅನುಮಾನ ಮೂಡುತ್ತಿದೆ ಎಂದು ದೂರಲಾಗಿದೆ.
ಪ್ರಸ್ತುತ, 57 ಉಪಜಾತಿಗಳಿರುವ ಕ್ರಿಶ್ಚಿಯನ್ ಸಮುದಾಯವನ್ನು ಲಿಂಗಾಯತ ಸಮುದಾಯಕ್ಕೆ ನೀಡುವ 3ಬಿ ಮೀಸಲಾತಿಯಲ್ಲಿ ಸೇರಿಸಿ, ಶೇ 8 ರಷ್ಟು ಮೀಸಲಾತಿ ಒದಗಿಸಲು ಆಯೋಗ ಶಿಫಾರಸು ಮಾಡಿತ್ತು. 9.47 ಕ್ರಿಶ್ಚಿಯನ್ನರಲ್ಲಿ 7.71 ಲಕ್ಷ ಮಂದಿ ಮೂಲ ಕ್ರಿಶ್ಚಿಯನ್ನರಿದ್ದರೆ, ಉಳಿದವರು ವಿವಿಧ ಜಾತಿಗಳ ಹೆಸರಿನೊಂದಿಗೆ ಮತಾಂತರವಾದ ಕ್ರಿಶ್ಚಿಯನ್ನರಿದ್ದಾರೆ. ಇವರಲ್ಲಿ ಕ್ರಿಶ್ಚಿಯನ್‌ಗೆ ಮತಾಂತರವಾದ ಪರಿಶಿಷ್ಟ ಜಾತಿಯವರಿರುವ ಉಪಜಾತಿಗಳನ್ನು ಪ್ರವರ್ಗ -1ಕ್ಕೆ ಸೇರಿಸಲಾಗಿದೆ ಎಂದು ಎನ್ನಲಾಗಿದೆ.
ಯಾರೆಲ್ಲಾ ಮತಾಂತರ ಕ್ರಿಶ್ಚಿಯನ್ನರು?
ಮಾದಿಗ ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್, ಕಮ್ಮ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಮತ್ತು ವಾಲ್ಮೀಕಿ ಕ್ರಿಶ್ಚಿಯನ್ ಸೇರಿದಂತೆ ಒಟ್ಟು 107 ಮತಾಂತರದ ಕ್ರಿಶ್ಚಿಯನ್ ಜಾತಿಗಳಿವೆ.
ರಾಜ್ಯ ಸರ್ಕಾರ 165 ಕೋಟಿ ರೂ ಖರ್ಚು ಮಾಡಿ ವರದಿ ಸಿದ್ಧಪಡಿಸಿದ್ದರೂ ಅಂತಿಮವಾಗಿ ವರದಿ ತಿರಸ್ಕರಿಸಿದೆ. 110 ಕೋಟಿ ರೂ. ಖರ್ಚು ಮಾಡಿ ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ಒಳ ಮೀಸಲಾತಿ ಸಮೀಕ್ಷೆಯ ವರದಿಯನ್ನೂ ಯಥಾವತ್ತಾಗಿ ಸ್ವೀಕರಿಸಲಿಲ್ಲ. ಸರ್ಕಾರವೇ ಏಕಪಕ್ಷಿಯವಾಗಿ ಮೀಸಲಾತಿ ಹಂಚಿಕೆ ಮಾಡಿದೆ. ಹಾಗಾಗಿ ಎರಡೂ ವರದಿಗಳಿಗೆ ವ್ಯಯಿಸಿದ ಹಣ ಪೋಲಾಗಿದೆ. ಈಗ ಹಳೆಯ ವರದಿಯಲ್ಲಿ ದಾಖಲಿಸಿರುವ ಹೊಸ ಜಾತಿಗಳನ್ನೂ ಸಮೀಕ್ಷೆಗೆ ಒಳಪಡಿಸುವ ಪ್ರಯತ್ನ ನಡೆದಿದೆ ಎಂದು ಹಿಂದುಳಿದ ವರ್ಗಗಳ ಮುಖಂಡ ಎಣ್ಣೆಗೆರೆ ವೆಂಕಟರಾಮಯ್ಯ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.