ರೈತರ ಕಣ್ಣೀರು ಒರೆಸಿದ್ದು ಕಾಂಗ್ರೆಸ್ಸಾದರೆ, ಮೊಸಳೆ ಕಣ್ಣೀರು ಯಾರದ್ದು?

ಬಿಜೆಪಿ ಅವಧಿಯಲ್ಲಿ ಕಲಬುರಗಿ ಜಿಲ್ಲೆಗೆ ಒಂದು ಸಚಿವ ಸ್ಥಾನವನ್ನೂ ನೀಡಿರಲಿಲ್ಲ. ಇದ್ದ ಉಸ್ತುವಾರಿ ಸಚಿವರು ಕೂಡ ಜಿಲ್ಲೆಯ ಸಮಸ್ಯೆಗಳ ಕಡೆಗೆ ತಲೆ ಹಾಕಿರಲಿಲ್ಲ. ಇಂತಹ ಪಕ್ಷಕ್ಕೆ ಬೆರಳು ತೋರಿಸುವ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದ್ದಾರೆ.

Update: 2025-10-01 08:14 GMT

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ

Click the Play button to listen to article

ಕಲಬುರಗಿಯಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರವಾಹ ಪೀಡಿತರಿಗೆ ವೈಮಾನಿಕ ಸಮೀಕ್ಷೆಯ ಫೋಟೊ ಶೂಟ್‌ ಬೇಡ, ಪರಿಹಾರ ಕೊಡಿ ಎಂದು ಟೀಕಿಸಿದ್ದ ಬಿಜೆಪಿ ನಾಯಕರಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ಅಧಿಕಾರದಲ್ಲಿದ್ದಾಗ ರೈತರಿಗೆ ದ್ರೋಹ ಎಸಗಿದ ಬಿಜೆಪಿ ನಾಯಕರು ಈಗ ಪ್ರತಿಭಟನೆ ಮೂಲಕ ನಾಟಕ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅವಧಿಯಲ್ಲಿ ಕಲಬುರಗಿ ಜಿಲ್ಲೆಗೆ ಒಂದೇ ಒಂದು ಸಚಿವ ಸ್ಥಾನ ನೀಡಿರಲಿಲ್ಲ. ಆಗಿನ ಉಸ್ತುವಾರಿ ಸಚಿವರು ಕೂಡ ಜಿಲ್ಲೆಯ ಸಮಸ್ಯೆಗಳ ಕಡೆಗೆ ತಲೆ ಹಾಕದೆ ನಿರ್ಲಕ್ಷ್ಯ ತೋರಿದ್ದರು. ಇಂತಹ ಪಕ್ಷಕ್ಕೆ ಇಂದು ಬೆರಳು ತೋರಿಸುವ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದ್ದಾರೆ. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ನೀಡಿದ ಪರಿಹಾರದ ಬಗ್ಗೆಯೂ ಅಂಕಿ ಅಂಶಗಳ ಸಮೇತ ದಾಖಲೆ ಬಿಡುಗಡೆ ಮಾಡಿದ್ದಾರೆ.  

2019-20 ರಲ್ಲಿ 38,248 ರೈತರಿಗೆ 16.65 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2020-21ರಲ್ಲಿ 37,145 ರೈತರಿಗೆ 22.97 ಕೋಟಿ ರೂ., 2021-22ರಲ್ಲಿ 66,234 ರೈತರಿಗೆ 57.95 ಕೋಟಿ ರೂ.,2022-23ರಲ್ಲಿ 1,88,600 ರೈತರಿಗೆ 108.6 ಕೋಟಿ ರೂ. ಪರಿಹಾರ ನೀಡಲಾಗಿದೆ. ಒಟ್ಟು 4 ವರ್ಷಗಳಲ್ಲಿ206.17 ಕೋಟಿ ರೂ. ಪರಿಹಾರವನ್ನು ಬಿಜೆಪಿ ಅವಧಿಯಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ 2023-24 ರಲ್ಲಿ 1,59,622 ರೈತರಿಗೆ 189.40 ಕೋಟಿ ರೂ., 2024-25 ರಲ್ಲಿ 2,03,746 ರೈತರಿಗೆ 656.63 ಕೋಟಿ ರೂ. ನೀಡಲಾಗಿದೆ.

ಎರಡು ವರ್ಷಗಳಲ್ಲಿ ಒಟ್ಟು 3,63,368 ರೈತರಿಗೆ 846.03 ಕೋಟಿ ರೂ. ಪರಿಹಾರ ಒದಗಿಸಿದೆ. ಇದಲ್ಲದೆ, ತೊಗರಿಯ ನೆಟೆ ರೋಗದ ಸಮಸ್ಯೆ ನಿರ್ಲಕ್ಷಿಸಿದ ಬಿಜೆಪಿ ಬದಲು, ಕಾಂಗ್ರೆಸ್ ಸರ್ಕಾರ 2023-24ರಲ್ಲಿ 1,78,354 ರೈತರಿಗೆ 181.86 ಕೋಟಿ ರೂ. ಪರಿಹಾರ ಒದಗಿಸಿದೆ ಎಂದು ಅಂಕಿ ಅಂಶ ಮುಂದಿಟ್ಟಿದ್ದಾರೆ.

ಇನ್‌ಪುಟ್ ಸಬ್ಸಿಡಿ ರೂಪದಲ್ಲಿ 3,49,555 ರೈತರಿಗೆ 389.14 ಕೋಟಿ ರೂ. ಸಹಾಯ ನೀಡಲಾಗಿದೆ. ಎರಡು ವರ್ಷಗಳಲ್ಲಿ 8,91,277 ರೈತರು ಫಲಾನುಭವಿಗಳಾಗಿ, 1,417.02 ಕೋಟಿ ರೂ. ಹಣವನ್ನು ಪಡೆಯುವಂತಾಗಿದೆ. ಕೇವಲ ಎರಡೇ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ, ಬಿಜೆಪಿಯ ನಾಲ್ಕು ವರ್ಷದ ಅವಧಿಯ ಏಳು ಪಟ್ಟು ಹೆಚ್ಚು ಪರಿಹಾರ ಒದಗಿಸಿದೆ ಎಂದು ಅಂಕಿ-ಅಂಶಗಳು ತೋರಿಸುತ್ತವೆ ಎಂದು ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. 

ಪ್ರಸ್ತುತ ಕಲಬುರಗಿಯಲ್ಲಿ ನೆರೆ ಪರಿಸ್ಥಿತಿ ಉಂಟಾಗಿರುವುದರಿಂದ, ಬಿಜೆಪಿ ನಾಯಕರ “ನಕಲಿ ಮೊಸಳೆ ಕಣ್ಣೀರು” ರೈತರ ಸಂಕಷ್ಟವನ್ನು ಹೆಚ್ಚಿಸುವಷ್ಟೇ ಹೊರತು, ಪರಿಹಾರ ನೀಡುವುದಿಲ್ಲ  ಎಂದು ಅವರು ಟೀಕಿಸಿದ್ದಾರೆ. 

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಭೀಮಾ ಮತ್ತು ಕೃಷ್ಣಾ ನದಿಗಳ ಉಕ್ಕಿ ಹರಿವು ಪರಿಣಾಮವಾಗಿ ಭಾರೀ ಪ್ರವಾಹ ಉಂಟಾಗಿದೆ. ಮಹಾರಾಷ್ಟ್ರದ ಉಜಾಣಿ ಅಣೆಕಟ್ಟಿನಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿರುವುದರಿಂದ ಅಫ್ಜಲ್ಪುರ ಮತ್ತು ಜೇವರ್ಗಿ ತಾಲೂಕುಗಳಲ್ಲಿ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಅನೇಕ ಮನೆಗಳು ಹಾನಿಗೊಂಡಿದ್ದು, ಬೆಳೆಗಳು ಮುಳುಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 1,000 ಕೋಟಿ ರೂ. ಹಾನಿ ಸಂಭವಿಸಿದೆ ಎಂದು ಸರ್ಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಯು ಸಮೀಕ್ಷೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದು, ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸರ್ಕಾರ ಈಗಾಗಲೇ ಜಿಲ್ಲಾಡಳಿತಕ್ಕೆ ತುರ್ತು ನಿಧಿ ಬಿಡುಗಡೆ ಮಾಡಿದ್ದು, ಪ್ರವಾಹ ಪೀಡಿತರಿಗೆ ಆಹಾರ, ವಸತಿ, ಪಶು ಆಹಾರ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸಲು ಶಿಬಿರಗಳನ್ನು ಸ್ಥಾಪಿಸಿದೆ. ಜೊತೆಗೆ, ಕೃಷಿ ಹಾನಿಗೊಳಗಾದ ರೈತರಿಗೆ ಹೆಚ್ಚುವರಿ ಪರಿಹಾರ ಘೋಷಣೆ ಮಾಡಲಾಗಿದೆ. 

Tags:    

Similar News