ಬಿಜೆಪಿಯಿಂದ 100 ಕೋಟಿ ರೂಪಾಯಿ ಆಮಿಷ ಬಂದಿಲ್ಲ; ಆರೋಪ ಸುಳ್ಳು ಎಂದ ಕಾಂಗ್ರೆಸ್ ಶಾಸಕರು
ಬಿಜೆಪಿ ನಾಯಕರು ನಮ್ಮನ್ನು ಎಲ್ಲಿಯೂ ಸಂಪರ್ಕಸಿಲ್ಲ. ಯಾವುದೇ ಹಣದ ಆಮಿಷವೊಡ್ಡಿಲ್ಲ ಎಂದು ಕಾಂಗ್ರೆಸ್ ಶಾಸಕರಾದ ಬಾಬಾ ಸಾಹೇಬ ಪಾಟೀಲ ಹಾಗೂ ಎಚ್.ಡಿ. ತಮ್ಮಯ್ಯ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕರಾದ ಎಚ್.ಡಿ.ತಮ್ಮಯ್ಯ ಹಾಗೂ ಬಾಬಾ ಸಾಹೇಬ ಪಾಟೀಲ ಅವರಿಗೆ ಬಿಜೆಪಿ ನಾಯಕರು 100 ಕೋಟಿ ರೂ. ಆಫರ್ ನೀಡಿದ್ದರು ಎಂಬ ಮಂಡ್ಯ ಶಾಸಕ ಪಿ.ರವಿಕುಮಾರ್ (ಗಣಿಗ) ಆರೋಪವನ್ನು ಸ್ವತಃ ಶಾಸಕರು ನಿರಾಕರಿಸಿದ್ದಾರೆ.
ನಾನೇನು ಮಾರಾಟಕ್ಕಿಲ್ಲ, ನನಗೆ ಪಕ್ಷ ನಿಷ್ಠೆ ಇದೆ. ಆದರೆ, ಬಿಜೆಪಿ ನಾಯಕರು ಬಹಳ ದಿನಗಳ ಹಿಂದೆ ಆಪರೇಷನ್ ಕಮಲಕ್ಕಾಗಿ ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ, ಹಣದ ಆಮಿಷವೊಡ್ಡಿರಲಿಲ್ಲ. ಸೂಕ್ತ ಸ್ಥಾನಮಾನದ ಮಾತನಾಡಿದ್ದರು ಎಂದು ಕಾಂಗ್ರೆಸ್ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದ್ದಾರೆ.
ಸೋಮವಾರ ಬೆಳಗಾವಿಯ ಚನ್ನಮ್ಮನ ಕಿತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಸಂಪರ್ಕಿಸಿದ್ದ ವಿಷಯವನ್ನು ಕಾಂಗ್ರೆಸ್ ನಾಯಕರ ಗಮನಕ್ಕೆ ತಂದಿದ್ದೇನೆ. ಕಾಂಗ್ರೆಸ್ ಸರ್ಕಾರ ಕ್ಷೇತ್ರಕ್ಕೆ ಅಗತ್ಯವಾದ ಅನುದಾನ ಹಾಗೂ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಆದ್ದರಿಂದ ಪಕ್ಷ ತೊರೆಯುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಪ್ರತಿಕ್ರಿಯಿಸಿ, ರವಿ ಗಣಿಗ ಅವರು ಹೇಳಿಕೆ ಸುಳ್ಳು. ನನ್ನನ್ನು ಯಾವ ಬಿಜೆಪಿ ನಾಯಕರೂ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ಹಣದ ಆಮಿಷವೊಡ್ಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರು ಹೇಳಿದ್ದಾರೆಯೋ ಅವರನ್ನೇ ಕೇಳಬೇಕು. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 136 ಶಾಸಕರ ಬಲವಿದೆ. ಸಿದ್ದರಾಮಯ್ಯ ಸರ್ಕಾರದ ಪರ ಜನಾದೇಶವಿದೆ. ಆಫರ್ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಖಂಡಿತವಾಗಿ ನನ್ನ ಯಾರು ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರನ್ನು ಭೇಟಿಯಾಗಿ 100ಕೋಟಿ ರೂ. ಆಫರ್ ನೀಡಿದ್ದರು ಎಂದು ಈ ಇಬ್ಬರು ಶಾಸಕರ ಹೆಸರು ಉಲ್ಲೇಖಿಸಿ ಮಂಡ್ಯ ಶಾಸಕ ರವಿ ಗಣಿಗ ಆರೋಪ ಮಾಡಿದ್ದರು.