ಬೆಂಗಳೂರಿನ ರಸ್ತೆ ಗುಂಡಿ, ಸಂಚಾರ ದಟ್ಟಣೆ: ಇಂದು ಹಿರಿಯ ಅಧಿಕಾರಿಗಳೊಂದಿಗೆ ಸಿ.ಎಂ ಸಭೆ
ಈ ಸಭೆಯಲ್ಲಿ ಗ್ರೇಟರ್ ಬೆಂಗಳೂರು, ಬಿಡಿಎ, ಬಿಡಬ್ಲ್ಯೂಎಸ್ಎಸ್‌ಬಿ , ಮೆಟ್ರೋ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆಗುಂಡಿಗಳು ಮತ್ತು ಸಂಚಾರ ದಟ್ಟಣೆಯ ಸಮಸ್ಯೆಯ ಕುರಿತು ಸಾರ್ವಜನಿಕರು ಮತ್ತು ಉದ್ಯಮಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಿದ್ದಾರೆ. ಈ ಬಗ್ಗೆ ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ರಸ್ತೆಗಳ ಸುಧಾರಣೆ ಮತ್ತು ಸಂಚಾರ ವ್ಯವಸ್ಥೆಯ ಕುರಿತು ಚರ್ಚಿಸಲು ಅವರು ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ.
ಈ ಸಭೆಯಲ್ಲಿ ಗ್ರೇಟರ್ ಬೆಂಗಳೂರು, ಬಿಡಿಎ, ಬಿಡಬ್ಲ್ಯೂಎಸ್ಎಸ್‌ಬಿ , ಮೆಟ್ರೋ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವಿಕೆ, ಸಂಚಾರ ದಟ್ಟಣೆ ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಬೆಂಗಳೂರಿನ ಮೂಲಸೌಕರ್ಯವನ್ನು ಸುಧಾರಿಸುವ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವ ನಿರೀಕ್ಷೆಯಿದೆ.
ಕಳೆದ ಕೆಲವು ದಿನಗಳ ಹಿಂದೆ ಬ್ಲ್ಯಾಕ್‌ಬಕ್ ಸಿಇಒ ಹಾಗೂ ಸಹ ಸಂಸ್ಥಾಪಕ ರಾಜೇಶ್ ಯಬಾಜಿ ಬೆಂಗಳೂರಿನಲ್ಲಿ ಮೂಲಸೌಕರ್ಯ ಹದಗೆಡುತ್ತಿದೆ. ಬೆಂಗಳೂರಿನ ಹೊರವರ್ತುಲ ರಸ್ತೆಯ ಬೆಳ್ಳಂದೂರಿನಲ್ಲಿ ನಮ್ಮ ಕಚೇರಿಯಿದೆ. ಗುಂಡಿ ಬಿದ್ದ ರಸ್ತೆಗಳು, ವಿಪರೀತ ದೂಳಿನಿಂದಾಗಿ ಕಚೇರಿಗೆ ಬರಲು ಸಹೋದ್ಯೋಗಿಗಳು ನಿತ್ಯ ಒಂದೂವರೆ ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕಂಪನಿಯನ್ನು ಇಲ್ಲಿಂದ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಐಟಿ ದಿಗ್ಗಜರಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ ಸೇರಿ ಹಲವರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದಾಗಿ ಸಮಸ್ಯೆಯನ್ನು ಪರಿಶೀಲಿಸಲು ಮುಂದಾಗಿದ್ದಾರೆ.