ಆಳಂದ 'ಮತಗಳ್ಳತನ' ಪ್ರಕರಣ: ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಗುಡುಗು

ಫಾರ್ಮ್-7 ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಹಿಂದೆ ಚುನಾವಣಾ ಆಯೋಗವೇ ಒಪ್ಪಿಕೊಂಡಿತ್ತು. ಈಗ ಯಾಕೆ ಮಾತು ತಿರುಗಿಸುತ್ತಿದ್ದೀರಿ ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕರು, ಈ ಪ್ರಕರಣದ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿದರು.

Update: 2025-09-19 12:48 GMT

ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣಾ ಪೂರ್ವದಲ್ಲಿ ನಡೆದಿದೆ ಎನ್ನಲಾದ 'ಮತಗಳ್ಳತನ' ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಕಾಂಗ್ರೆಸ್ ಸರ್ಕಾರವು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಆಳಂದ ಶಾಸಕ ಬಿ.ಆರ್. ಪಾಟೀಲ್, ಚುನಾವಣಾ ಆಯೋಗವು ಸಿಐಡಿ ತನಿಖೆಗೆ ಸಹಕರಿಸದೆ, ಸತ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2023ರ ಫೆಬ್ರವರಿಯಲ್ಲಿ, ಆಳಂದ ಕ್ಷೇತ್ರದಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿಗಳನ್ನು ರದ್ದುಗೊಳಿಸಲು ಬೋಗಸ್ ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಬಗ್ಗೆ ತಮಗೆ ಮಾಹಿತಿ ಬಂದಿತ್ತು ಎಂದು ಶಾಸಕ ಬಿ.ಆರ್. ಪಾಟೀಲ್ ವಿವರಿಸಿದರು. "ಕಾಮನಹಳ್ಳಿ ಎಂಬ ಗ್ರಾಮದ ವ್ಯಕ್ತಿಯೊಬ್ಬರು ಕರೆ ಮಾಡಿ, ತಮ್ಮ ಗಮನಕ್ಕೆ ಬಾರದಂತೆ ತಮ್ಮ ಕುಟುಂಬದ 12 ಜನರ ಮತದಾರರ ಚೀಟಿಗಳನ್ನು ಡಿಲೀಟ್ ಮಾಡಲು ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ತಕ್ಷಣವೇ ನಾವು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿ, 2023ರ ಫೆಬ್ರವರಿ 20ರಂದು ಮುಖ್ಯ ಚುನಾವಣಾ ಆಯುಕ್ತರಿಗೂ ದೂರು ಸಲ್ಲಿಸಿದೆವು," ಎಂದು ಪಾಟೀಲ್ ಹೇಳಿದರು.

ಈ ಅಕ್ರಮದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು ಮತ್ತು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಯಿತು. "ನನ್ನನ್ನು ಸೋಲಿಸಲೇಬೇಕೆಂದು ವ್ಯವಸ್ಥಿತವಾಗಿ ಈ ಸಂಚು ರೂಪಿಸಲಾಗಿತ್ತು. ಒಂದೇ ಫೋನ್ ನಂಬರ್ ಬಳಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆ ಸಂಖ್ಯೆಯನ್ನು ಪರಿಶೀಲಿಸಿದಾಗ, ಅದು ತಮಿಳುನಾಡು, ಜಾರ್ಖಂಡ್ ರಾಜ್ಯಗಳಿಗೆ ಸೇರಿದ್ದು ಎಂದು ತಿಳಿದುಬಂತು," ಎಂದು ಪಾಟೀಲ್ ಆರೋಪಿಸಿದರು.

ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ರಾಹುಲ್ ಗಾಂಧಿ ಅವರು ಈ 'ಮತಗಳ್ಳತನ'ದ ಬಗ್ಗೆ ಮಾತನಾಡಿದ ನಂತರ, ಚುನಾವಣಾ ಆಯೋಗವು ತಾವೇ ಈ ಅಕ್ರಮವನ್ನು ತಡೆದಿದ್ದೇವೆ ಎಂದು ಹೇಳಿಕೆ ನೀಡುತ್ತಿದೆ, ಇದು ಶುದ್ಧ ಸುಳ್ಳು. ನಾವು ದೂರು ನೀಡಿ ಒತ್ತಡ ತಂದ ನಂತರವೇ ಎಫ್‌ಐಆರ್ ದಾಖಲಾಗಿತ್ತು," ಎಂದು ಸ್ಪಷ್ಟಪಡಿಸಿದರು.

"ಸಿಐಡಿ ತನಿಖಾ ತಂಡವು, ಅರ್ಜಿಗಳು ಸಲ್ಲಿಕೆಯಾದ ಐಪಿ ಅಡ್ರೆಸ್, ಯಾರು ಅಕ್ಸೆಸ್ ಹೊಂದಿದ್ದರು ಎಂಬಂತಹ ತಾಂತ್ರಿಕ ಮಾಹಿತಿಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ 18 ಬಾರಿ ಪತ್ರ ಬರೆದಿದೆ. ಆದರೆ, ಆಯೋಗವು ಒಂದೇ ಒಂದು ಪತ್ರಕ್ಕೂ ಸಮರ್ಪಕ ಉತ್ತರ ನೀಡಿಲ್ಲ. ಹೀಗಿದ್ದರೂ, ನಾವು ಎಲ್ಲಾ ಮಾಹಿತಿ ನೀಡಿದ್ದೇವೆ ಎಂದು ಆಯೋಗ ಸುಳ್ಳು ಹೇಳುತ್ತಿದೆ. ಆಯೋಗ ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ? ಯಾರ ಅಣತಿಯಂತೆ ನಡೆಯುತ್ತಿದೆ?" ಎಂದು ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರಶ್ನಿಸಿದರು.

ಬಿಜೆಪಿಗೆ ತಿರುಗೇಟು

ಚುನಾವಣಾ ಆಯೋಗದ ಪರವಾಗಿ ಬಿಜೆಪಿ ನಾಯಕರು ವಕಾಲತ್ತು ವಹಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್, "ರಾಹುಲ್ ಗಾಂಧಿ ಅವರು ಬಿಜೆಪಿ ಮೇಲೆ ಆರೋಪ ಮಾಡಿಲ್ಲ, ಆದರೆ ಬಿಜೆಪಿ ನಾಯಕರು ಉತ್ತರ ನೀಡುತ್ತಿದ್ದಾರೆ. ಇವರು ಚುನಾವಣಾ ಆಯೋಗದ ವಕ್ತಾರರೇ? ಆರ್. ಅಶೋಕ್ ಅವರು ನಮಗೆ ಕಾಮನ್‌ಸೆನ್ಸ್ ಇಲ್ಲ ಎನ್ನುತ್ತಾರೆ, ಅವರಿಗೆ ಸಾಮಾನ್ಯ ಪ್ರಜ್ಞೆ ಇದೆಯೇ? ನಾವು ದಾಖಲೆ ಇಟ್ಟು ಮಾತನಾಡುತ್ತಿದ್ದೇವೆ. ಅಂದು ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿತ್ತು, ನಿಮ್ಮ ಅಧಿಕಾರಿಗಳೇ ಇದ್ದರು. ಆಗ ನೀವೇನು ಕತ್ತೆ ಕಾಯುತ್ತಿದ್ದೀರಾ?" ಎಂದು ಖಾರವಾಗಿ ಪ್ರಶ್ನಿಸಿದರು.

ಫಾರ್ಮ್-7 ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಹಿಂದೆ ಚುನಾವಣಾ ಆಯೋಗವೇ ಒಪ್ಪಿಕೊಂಡಿತ್ತು. ಈಗ ಯಾಕೆ ಮಾತು ತಿರುಗಿಸುತ್ತಿದ್ದೀರಿ ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕರು, ಈ ಪ್ರಕರಣದ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿದರು. 

Tags:    

Similar News