ಧರ್ಮಸ್ಥಳ ಪ್ರಕರಣ | ಧರ್ಮಸ್ಥಳ ಅಪಪ್ರಚಾರ ವಿರೋಧಿಸಿ ಕೈ ಶಾಸಕರಿಂದಲೂ ಕಾರು ಜಾಥಾ

ಧರ್ಮಸ್ಥಳದ ಪರವಾಗಿ ಅಧಿವೇಶನ ಮುಗಿದ‌ ಬಳಿಕ ಬಹುಶಃ ಶನಿವಾರ 150 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಜಾಥಾ ಹೊರಡಲಾಗುವುದು ಎಂದು‌ ನೆಲಮಂಗಲ ಶಾಸಕ ಶ್ರೀನಿವಾಸ್ ಹೇಳಿದರು.;

Update: 2025-08-17 14:37 GMT

ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳ, ಶ್ರೀ ಮಂಜುನಾಥ ಸ್ವಾಮಿ ಹಾಗೂ ಧರ್ಮಾದಿಕಾರಿ ಪೀಠಕ್ಕೆ ಅಪಚಾರ, ಅಪಕೀರ್ತಿ ತರಲು‌ ನಡೆಯುತ್ತಿರುವ ಪ್ರಯತ್ನವನ್ನು ನಾವೂ ಕೂಡ ಸಹಿಸುವುದಿಲ್ಲ ಎಂದು ನೆಲಮಂಗಲ ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾಸ್ ಹೇಳಿದರು.

ನೆಲಮಂಗಲದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಬಗೆಗಿನ ಜನಸಾಮಾನ್ಯರ ಭಕ್ತಿ, ಧಾರ್ಮಿಕ ಭಾವನೆಗಳಿಗೆ ಚ್ಯುತಿ ಬರಬಾರದು. ಸತ್ಯವನ್ನು ವಿಕೃತಗೊಳಿಸುವ ಯಾವುದೇ ಹುನ್ನಾರವನ್ನು ಜನತೆ ತಿರಸ್ಕರಿಸಲಿದ್ದಾರೆ. ಮಂಜುನಾಥನ ಸನ್ನಿಧಿಯಲ್ಲಿ ಸತ್ಯ ಉಳಿಯಬೇಕು. ಅಪಪ್ರಚಾರದ ಹುನ್ನಾರ ವಿರೋಧಿಸಿ ಧರ್ಮಸ್ಥಳದ ಪರವಾಗಿ ಅಧಿವೇಶನ ಮುಗಿದ‌ ಬಳಿಕ ಬಹುಶಃ ಶನಿವಾರ 150 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಜಾಥಾ ಹೊರಡಲಾಗುವುದು ಎಂದು ಹೇಳಿದರು.

ಜಾಥಾದಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಪ್ರಮುಖ ಕಾರ್ಯಕರ್ತರು, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ನಾವೆಲ್ಲರೂ ಧರ್ಮಾಧಿಕಾರಿ ಪರ ಇದ್ದೇವೆ ಎಂಬುದನ್ನು ಸಾಬೀತುಪಡಿಸಲಿದ್ದೇವೆ ಎಂದು ತಿಳಿಸಿದರು.

ಧರ್ಮಸ್ಥಳದ ಸತ್ಯ, ಪರೋಪಕಾರಿ ಯೋಜನೆಗಳ ಪರವಾಗಿ ನೆಲಮಂಗಲ ಜನರು ಸದಾ ಬೆಂಬಲವಾಗಿ ನಿಲ್ಲಲಿದ್ದೇವೆ.  ಇಂದಿನಿಂದಲೇ ಜಾಥಾದಲ್ಲಿ ಹೊರಡುವ ಕಾರುಗಳ ನೋಂದಣಿ ಮಾಡಲಾಗುವುದು ಎಂದು ಹೇಳಿದರು.

ಸೌಜನ್ಯ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪತ್ತೆ ಮಾಡಿ, ಶಿಕ್ಷೆಗೆ ಒಳಪಡಿಸಬೇಕು ಎಂಬುದಕ್ಕೆ ನಮ್ಮ ಅಭ್ಯಂತರವಿಲ್ಲ. ಆರೋಪಿಗಳನ್ನು ಗಲ್ಲಿಗೇರಿಸಲಿ, ಆದರೆ, ಇದೇ ಪ್ರಕರಣವನ್ನು ನೆಪವಾಗಿಟ್ಟುಕೊಂಡು  ಧರ್ಮಸ್ಥಳದ ಅಪಪ್ರಚಾರ ಮಾಡಬಾರದು ಎಂದು ಕೋರಿದರು.

Tags:    

Similar News