ಶಿಗ್ಗಾವಿ ಕಾಂಗ್ರೆಸ್ಸಿನಲ್ಲಿ ಭಿನ್ನಮತ; ಸಚಿವ ಜಮೀರ್ ಕಾರಿಗೆ ಕಲ್ಲು, ಪಕ್ಷೇತರ ಅಭ್ಯರ್ಥಿಯಾಗಿ ಕುನ್ನೂರ ಕಣಕ್ಕೆ

ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹಾಗೂ ಮಂಜುನಾಥ ಕುನ್ನೂರ ಪಕ್ಷದ ವಿರುದ್ಧ ಬಂಡಾಯ ಸಾರಿ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.;

Update: 2024-10-25 14:35 GMT

ಶಿಗ್ಗಾವಿ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ಖಾನ್ ಪಠಾಣ ನಾಮಪತ್ರ ಸಲ್ಲಿಕೆ ದಿನವೇ ಬಂಡಾಯದ ಬಿಸಿ ತಟ್ಟಿದೆ.

ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹಾಗೂ ಮಂಜುನಾಥ ಕುನ್ನೂರ ಪಕ್ಷದ ವಿರುದ್ಧ ಬಂಡಾಯ ಸಾರಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಾಜು ಕುನ್ನೂರಗೆ ಟಿಕೆಟ್ ಸಿಗದ ಕಾರಣ ಬೇಸರಗೊಂಡಿರುವ ಮಂಜುನಾಥ ಕುನ್ನೂರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ ವಿರುದ್ಧ ಈ ಇಬ್ಬರು ನಾಯಕರು ಬಹಿರಂಗವಾಗಿ ಬಂಡಾಯ ಸಾರಿದ್ದು ‘ರೌಡಿಶೀಟರ್ ಪಠಾಣಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಪಕ್ಷದ ನಾಯಕರ ಬಂಡಾಯದ ಹೊರತಾಗಿಯೂ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ ಅವರು ಬೃಹತ್ ರೋಡ್ ಶೋ ನಡೆಸಿ, ನಾಮಪತ್ರ ಸಲ್ಲಿಸಿದರು. ಈ ವೇಳೆ ಸಚಿವರಾದ ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಈಶ್ವರ ಖಂಡ್ರೆ ಭಾಗಿಯಾಗಿದ್ದರು. ರೋಡ್ ಶೋ ಸಮಯ, ಸ್ಥಳದ ಕುರಿತು ಕಾರ್ಯಕರ್ತರಲ್ಲೇ ಗೊಂದಲ ಏರ್ಪಟ್ಟ ಕಾರಣ ಕಾರ್ಯಕರ್ತರ ಸಂಖ್ಯೆ ಕಡಿಮೆ ಇತ್ತು.

ಸಚಿವ ಜಮೀರ್ ಕಾರಿಗೆ ಕಲ್ಲು

ಶಿಗ್ಗಾವಿ ಕಾಂಗ್ರೆಸ್ ಟಿಕೆಟ್ ವಂಚಿತ ಅಜ್ಜಂಪೀರ್ ಖಾದ್ರಿ ಬೆಂಬಲಿಗರು ತಾಲೂಕಿನ ಹುಲಗೂರ ಗ್ರಾಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಕಾರಿಗೆ ಕಲ್ಲು ತೂರಿ ಗಾಜು ಒಡೆದಿರುವ ಘಟನೆ ನಡೆದಿದೆ.

ಅಜ್ಜಂಪೀರ್ ಖಾದ್ರಿ ಮನವೊಲಿಕೆಗೆ ಸಚಿವ ಜಮೀರ ಅಹ್ಮದ್ ಖಾನ್ ಅವರು ಹುಲಗೂರಿನ ಖಾದ್ರಿ ಅವರ ನಿವಾಸಕ್ಕೆ ಬಂದಿದ್ದರು. ಈ ವೇಳೆ ಆಕ್ರೋಶಗೊಂಡಿದ್ದ ಬೆಂಬಲಿಗರು ಸಚಿವರ ಫಾರ್ಚುನರ್ ಕಾರಿಗೆ (ಕೆಎ 27ಎನ್ 8960) ಕಲ್ಲು ತೂರಿದರು. ಇದರಿಂದ ಕಾರಿನ ಹಿಂಬದಿ ಗಾಜು ಪುಡಿ ಪುಡಿಯಾಗಿದೆ.

ಈ ಮಧ್ಯೆ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು, ಮಧ್ಯಾಹ್ನ 2.45ಕ್ಕೆ ತಹಶೀಲ್ದಾರ್ ಕಚೇರಿಗೆ ಓಡೋಡಿ ಬಂದು ಚುನಾವಣಾಧಿಕಾರಿಗೆ ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿದರು.

Tags:    

Similar News