ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮ?

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದಂತೆ ತೋರುತ್ತಿದೆ;

Update: 2024-02-10 10:50 GMT
ಪ್ರಾತಿನಿಧಿಕ ಚಿತ್ರ

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚುತ್ತಿದೆ. ಅದರಲ್ಲೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾರಿ ಕುತೂಹಲ ಹುಟ್ಟಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರ, ಈ ಬಾರಿ ಕೂಡ ಅಷ್ಟೇ ಕುತೂಹಲ ಮೂಡಿಸಿದೆ. ಕಳೆದ ಬಾರಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದ ಜೆಡಿಎಸ್, ಬಿಜೆಪಿ, ಈ ಬಾರಿ ಮೈತ್ರಿ ಮಾಡಿಕೊಂಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಕಾಂಗ್ರೆಸ್‌ ಪಕ್ಷದ್ದು ಏಕಾಂಗಿ ಹೋರಾಟ.

ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಎಂದೇ ಖ್ಯಾತಿ ಪಡೆದಿದ್ದ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು.. ಅದೇ ರೀತಿ ಲೋಕಸಭಾ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಚುನಾವಣೆ ಎದುರಿಸಲ್ ಸರ್ವಸನ್ನದ್ದವಾಗಿದೆ.

ಕಾಂಗ್ರೆಸ್ ಗೆ ಮಂಡ್ಯ ಜಿಲ್ಲೆಯನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ʼಸ್ಟಾರ್‌ ಚಂದ್ರುʼ

ಬಿಜೆಪಿ ಹಾಗು ಜೆಡಿಎಸ್ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಮಾತುಕತೆ ನಡೆಯುತ್ತಿದೆ. ಬಿಜೆಪಿ ಬೆಂಬಲಿತ ಸಂಸದೆ ಸುಮಲತಾ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಬಿಜೆಪಿಯಿಂದ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಮಾಜಿ ಸಚಿವ ನಾರಾಯಣ ಗೌಡ ಕೂಡ ಸುಮಲತಾ ಅವರಿಗೆ ಟಿಕೆಟ್ ನೀಡಿದರೆ ಮಾತ್ರ ಬಿಜೆಪಿಯಲ್ಲಿ ಇರುವುದಾಗಿ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. ಈ ಎಲ್ಲೆದರ ನಡುವೆ ಮಂಡ್ಯ ಕ್ಷೇತ್ರಕ್ಕೆ ಮತ್ತೆ ತಮ್ಮ ವಶಕ್ಕೆ ಪಡೆಯಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ಮಂಡ್ಯ ಅಭ್ಯರ್ಥಿಯನ್ನು ಹುಡುಕಿದ್ದು, ವೆಂಕಟರಮಣೇಗೌಡ ಸ್ಟಾರ್ ಚಂದ್ರು ಎಂದೇ ಜನಪ್ರಿಯವಾಗಿರುವ ವೆಂಕಟರಮಣೇಗೌಡ ಕಣಕ್ಕಿಳಿಸುವ ಸಾಧ್ಯತೆ ಕಾಣಿಸುತ್ತಿದೆ. “ಈ ಕುರಿತು ಅಧಿಕೃತವಾಗಿ ಘೋಷಣೆಯೊಂದೇ ಬಾಕಿ ಉಳಿದಿದೆ” ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದೆ.

ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಯನ್ನು ಪರಿಚಯ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕ್ರಮಕ್ಕೆ ವೆಂಕರಮಣೇಗೌಡ ಅವರನ್ನು ಕರೆತರಲಾಗುತ್ತಿದೆ. ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನವರಾದ ವೆಂಕಟರಮಣೇಗೌಡ ಜನಪ್ರಿಯ ಎಂದು ಹೇಳಲಾಗುತ್ತಿದೆ.

ಆಯ್ಕೆಗೆ ಕಾರಣ

ವೆಂಕಟರಮಣೇಗೌಡ ಅವರ ಸಹೋದರ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ ಅವರು. ಅಲ್ಲದೇ ಪುಟ್ಟಸ್ವಾಮಿಗೌಡ ಅಳಿಯ ಶರತ್ ಬಚ್ಚೇಗೌಡ ಆಗಿದ್ದು, ಈ ಮೂಲಕ ಅವರಿಗೆ ರಾಜಕೀಯದ ನಂಟು ಕೂಡ ಇದೆ. ಹೀಗಾಗಿ ಉದ್ಯಮಿಯಾಗಿರುವ ವೆಂಕಟರಮಣೇಗೌಡ ಅವರು ಸೂಕ್ತ ಅಭ್ಯರ್ಥಿ ಎಂದು ಸಚಿವ ಚಲುವರಾಯಸ್ವಾಮಿ ನೇತೃತ್ವದ ನಾಯಕರು ಆಯ್ಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದೆ.

ಸದ್ಯ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಕೂಟದ ನಾಯಕರು ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಗುದ್ದಾಟ ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಸದ್ದಿಲ್ಲದ್ ನಿರ್ಣಯಿಸಿದೆ ಎನ್ನಲಾಗುತ್ತಿದೆ. ಒಂದು ವೇಳೆ ವೆಂಕಟರಮಣೇಗೌಡ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರೆ, ಮಂಡ್ಯ ಜಿಲ್ಲೆಯನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆಯೇ? ಕಾದು ನೋಡಬೇಕಿದೆ.

Tags:    

Similar News