Basanagouda Patil Yatnal Expelled | ಯತ್ನಾಳ್ ಬೆನ್ನಿಗೆ ನಿಂತ ಪಂಚಮಸಾಲಿ ಸಮುದಾಯ, ಭಿನ್ನಮತೀಯರು
ಯತ್ನಾಳ್ ಉಚ್ಚಾಟನೆ ಆದೇಶವನ್ನು ಏ.10ರೊಳಗೆ ವಾಪಸ್ ಪಡೆಯದೇ ಹೋದರೆ ಇಡೀ ಸಮುದಾಯವೇ ಬಿಜೆಪಿ ವಿರುದ್ಧ ತಿರುಗಿಬೀಳಲಿದೆ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯೂಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.;
ಬಿಜೆಪಿ ನಾಯಕತ್ವದ ವಿರುದ್ಧ ಬಹಿರಂಗ ಸಮರ ಸಾರಿ ಉಚ್ಚಾಟಿತರಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆನ್ನಿಗೆ ಮಠಾಧೀಶರು, ಸ್ವಪಕ್ಷೀಯ ನಾಯಕರೇ ನಿಂತಿದ್ದು, ಬಿಜೆಪಿಯ ಪರಿಸ್ಥಿತಿ ಒಡೆದ ಮನೆಯಂತಾಗಿದೆ.
ಹೈಕಮಾಂಡ್ ಕ್ರಮದಿಂದ ತೀವ್ರ ಬೇಸರಗೊಂಡಿರುವ ಹಲವು ನಾಯಕರು ಯತ್ನಾಳ್ ಉಚ್ಚಾಟನೆ ನಿರ್ಧಾರ ಮರು ಪರಿಶೀಲಿಸುವಂತೆ ಪಟ್ಟು ಹಿಡಿದಿದ್ದು, ಹೈಕಮಾಂಡ್‌ಗೆ ತಲೆ ನೋವಾಗಿ ಪರಿಣಮಿಸಿದೆ. ಈ ಮಧ್ಯೆ ಪಂಚಮಸಾಲಿ ಸಮುದಾಯದ ಮಠಾಧೀಶರು ಉಚ್ಚಾಟನೆ ಆದೇಶ ಹಿಂಪಡೆಯಲು ಗಡುವು ನೀಡಿರುವುದು ಸಂಚಲನ ಸೃಷ್ಟಿಸಿದೆ.
ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಯತ್ನಾಳ್ ಬೆಂಬಲಿಗರು ಟೀಕಾಪ್ರಹಾರ ನಡೆಸಿದ್ದಾರೆ. ಉಚ್ಛಾಟನೆ ಆದೇಶ ಮರುಪರಿಶೀಲನೆಗೆ ಆಗ್ರಹಿಸಿ ಭಿನ್ನಮತೀಯ ನಾಯಕರು ವರಿಷ್ಠರಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಬಿಜೆಪಿಯಲ್ಲಿ ಮತ್ತೆ ಬಂಡಾಯದ ಬಿರುಗಾಳಿ ಎಬ್ಬಿಸುವ ಸಾಧ್ಯತೆಯನ್ನು ಅಂದಾಜಿಸಿವೆ.
ಉಗ್ರ ಪ್ರತಿಭಟನೆ ಎಚ್ಚರಿಕೆ
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಉಚ್ಚಾಟನೆ ಆದೇಶ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಕೂಡಲ ಸಂಗಮದ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಎಚ್ಚರಿಕೆ ರವಾನಿಸಿದ್ದಾರೆ.
ಏ.10ರೊಳಗೆ ಆದೇಶ ವಾಪಸ್ ಪಡೆಯದೇ ಹೋದರೆ ಇಡೀ ಸಮುದಾಯವೇ ಬಿಜೆಪಿ ವಿರುದ್ಧವಾಗಿ ನಿಲ್ಲಲಿದೆ. ಮೀಸಲಾತಿ ಹೋರಾಟವನ್ನು ಕೊನೆಯವರೆಗೂ ಬೆಂಬಲಿಸಿದ ಯತ್ನಾಳ್ ಪರವಾಗಿ ಸಮುದಾಯದ ಎಲ್ಲ ಸಂಸದರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.
ಈ ಸಂಬಂಧ ಬೆಳಗಾವಿಯಲ್ಲಿ ಗುರುವಾರ ಸಭೆ ನಡೆಸಿದ ಶ್ರೀಗಳು, ಉಚ್ಚಾಟನೆ ಆದೇಶ ವಾಪಸ್ ಪಡೆಯದೇ ಹೋದರೆ ಏ. 13ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ್ ಸೇರಿ ಹಲವು ನೈತಿಕ ಬೆಂಬಲ ನೀಡಿದ್ದು, ಎಲ್ಲ ಹಿಂದೂ ಪರ ಕಾರ್ಯಕರ್ತರು, ಸಮಾಜದ ಮುಖಂಡರು ಸತ್ಯಾಂಶ ಹೇಳುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಯತ್ನಾಳ್ ಪರವಾಗಿ ಸಮುದಾಯದ ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹಾಕದಿದ್ದರೆ ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಬಹುತೇಜಕರು ಸಮಾಜದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ನಂತರ ಸಮುದಾಯವನ್ನು ನಿರ್ಲಕ್ಷಿಸುತ್ತಾರೆ. ಆದರೆ, ಯತ್ನಾಳ್ ಮಾತ್ರ ಮೀಸಲಾತಿ ಹೋರಾಟ ಕೈ ಬಿಡಲಿಲ್ಲ. ಹೀಗಾಗಿ ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಯತ್ನಾಳ್ ಇಲ್ಲದೇ ಅಧಿಕಾರಕ್ಕೇರುವ ಕನಸು
ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸಿ ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಬಿಜೆಪಿಯ ಕನಸು ಬರೀ ಭ್ರಮೆ. ಲಿಂಗಾಯತರು ಮಾತ್ರವಲ್ಲದೇ ಎಲ್ಲ ವರ್ಗದ ಜನ ಯತ್ನಾಳ್ ಪರವಾಗಿದ್ದಾರೆ. ಲಿಂಗಾಯತರಲ್ಲಿ ಪಂಚಮಸಾಲಿ ಸಮುದಾಯ ಅತಿದೊಡ್ಡ ಪಂಗಡ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಸಂಪೂರ್ಣವಾಗಿ ಬಿಜೆಪಿ ಪರ ವಾಲುವುದಕ್ಕೆ ಯತ್ನಳ್ ಅವರು ಕಾರಣ. ಹಾಗಾಗಿ ಯತ್ನಾಳ್ ಅವರನ್ನು ಬಿಜೆಪಿ ಕಡೆಗಣಿಸಿದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಭಿನ್ನಮತೀಯರ ಸಭೆ ನಾಳೆ
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆ ಪುನರ್ ಪರಿಶೀಲಿಸುವಂತೆ ಕೋರಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ನಾಳೆ(ಮಾ.28) ಬೆಂಗಳೂರಿನಲ್ಲಿ ಭಿನ್ನಮತೀಯ ನಾಯಕರು ಸಭೆ ನಡೆಸಲಿದ್ದಾರೆ.
ಬೆಂಗಳೂರಿನ ಕುಮಾರ್ ಬಂಗಾರಪ್ಪ ಅವರ ಮನೆಯಲ್ಲಿ ಶುಕ್ರವಾರ ಸಭೆ ಕರೆಯಲಾಗಿದೆ. ಬಸನಗೌಡ ಪಾಟೀಲ ಯತ್ನಾಳ್ ಅವರು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಾವೆಲ್ಲರೂ ಸೇರಿ ಚರ್ಚೆ ನಡೆಸಲಿದ್ದೇವೆ. ಯತ್ನಾಳ್ ವಿರುದ್ಧ ಜರುಗಿಸಿರುವ ಕ್ರಮವನ್ನು ಮರು ಪರಿಶೀಲಿಸುವಂತೆ ಕೋರಿ ಹೈಕಮಾಂಡ್‌ಗೆ ಪತ್ರ ಬರೆಯಲಾಗುವುದು ಏಂದು ಮಾಜಿ ಸಚಿವ ಹಾಗೂ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಹೈಕಮಾಂಡ್ ನಿರ್ಧಾರ ಏನೇ ಇದ್ದರೂ ಯತ್ನಾಳ್ ಸೇರಿದಂತೆ ನಾವೆಲ್ಲರೂ ಬಿಜೆಪಿಯಲ್ಲೇ ಇರುತ್ತೇವೆ. ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ಸಲ ನಮ್ಮದೇ ಸರ್ಕಾರ ತರಲು ಪ್ರಯತ್ನಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ನಾಯಕರ ಜೊತೆ ಮಾತುಕತೆ
ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಈಗಾಗಲೇ ಕೇಂದ್ರದ ಪ್ರಮುಖ ನಾಯಕರೊಬ್ಬರ ಜೊತೆ ಮಾತನಾಡಿದ್ದೇನೆ. ಬಿಜೆಪಿ ನಮಗೆ ತಂದೆ-ತಾಯಿ ಸಮಾನ. ರಾಷ್ಟ್ರೀಯ ನಾಯಕರು ಯತ್ನಾಳ್ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಹಿಂದೂಗಳಿಗೆ ನೋವು ತಂದಿದೆ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಲಿಂಗಾಯತ ಸಮುದಾಯದ ಪ್ರಭಾವಿ ವ್ಯಕ್ತಿ. ಅಲ್ಲದೇ ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸುವ ನಾಯಕ. ಅವರ ಉಚ್ಚಾಟನೆಯು ಹಿಂದೂಗಳಿಗೆ ನೋವು ತಂದಿದೆ. ಹಾಗಾಗಿ ಉಚ್ಚಾಟನೆ ನಿರ್ಧಾರವನ್ನು ವರಿಷ್ಠರು ಮರು ಪರಿಶೀಲಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಒತ್ತಾಯಿಸಿದ್ದಾರೆ.
ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂದು ನಂಬಿರುವವರಲ್ಲಿ ಯತ್ನಾಳ್ ಪ್ರಮುಖರು. ಅವರ ಉಚ್ಚಾಟನೆಯಿಂದ ಪಕ್ಷ ಬಲ ಕುಂದಲಿದೆ. ಕೂಡಲೇ ಕೇಂದ್ರದ ವರಿಷ್ಠರು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
ವರಿಷ್ಠರ ಜೊತೆ ಚರ್ಚೆ; ಬೊಮ್ಮಾಯಿ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಉಚ್ಚಾಟನೆ ಕುರಿತಂತೆ ವರಿಷ್ಠರ ಜೊತೆ ಚರ್ಚಿಸಲಾಗುವುದು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವ ದೆಹಲಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ತನ್ನದೇ ಆದ ನೀತಿ ನಿರ್ಧಾರಗಳನ್ನು ಹಾಕಿಕೊಂಡಿದೆ. ಕರ್ನಾಟಕದ ವಿಚಾರದಲ್ಲಿ ಕಳೆದ ಒಂದು ವರ್ಷದಿಂದ ಪಕ್ಷದ ಹೈಕಮಾಂಡ್ ಎಲ್ಲರನ್ನು ಕರೆದು ಮಾತನಾಡಿಸಿ ಒಗ್ಗೂಡಿಸುವ ಪ್ರಯತ್ನ ಮಾಡಿದೆ. ಆದಷ್ಟು ಎಲ್ಲರನ್ನು ಒಂದುಗೂಡಿಸಿ ಕರೆದುಕೊಂಡು ಹೋಗುವುದು ಇಂದಿಗೆ ಅನಿವಾರ್ಯವಾಗಿದೆ. ಹಾಗಾಗಿ ಯತ್ನಾಳ್ ವಿರುದ್ಧ ಕೈಗೊಂಡಿರುವ ಕ್ರಮದ ಕುರಿತು ವರಿಷ್ಠರ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರುವುದು ಸುಲಭವಲ್ಲ
ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಾಂಗ್ರೆಸ್ ಸೇರ್ಪಡೆ ಮಾತುಗಳ ಕುರಿತು ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಯತ್ನಾಳ್ ಅವರು ಈಗ 'ಪಾರ್ಟಿ ಲೆಸ್'. ಅವರು ಎಲ್ಲಾ ಪಕ್ಷದವರ ವಿರುದ್ಧವೂ ಮಾತನಾಡಿದ್ದಾರೆ. ಕಾಂಗ್ರೆಸ್ ಸೇರಲು ಅರ್ಜಿ ಹಾಕಿಲ್ಲ. ಜೊತೆಗೆ ಅದು ಸರಳವೂ ಅಲ್ಲ ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಎಲ್ಲರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮಗಿಂತ ಹೆಚ್ಚು ಅವರ ಪಕ್ಷದ ವಿರುದ್ಧವೇ ಕಿಡಿಕಾರಿದವರು. ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ನಿರ್ಧರಿಸಲಿದೆ. ಆದರೆ, ಅಷ್ಟು ಸಲೀಸಲ್ಲ ಎಂದು ಹೇಳಿದ್ದಾರೆ.