Bangalore water crisis| ಬೆಂಗಳೂರಿನಲ್ಲಿ ಕುಸಿದ ಅಂತರ್ಜಲ; ಭವಿಷ್ಯ ಭಯಾನಕ!

ಇನ್ನೂ ಮೂರು ತಿಂಗಳು ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ | ಎಲ್ಲೆಲ್ಲಿ ಕುಸಿದಿದೆ ಅಂತರ್ಜಲ?;

By :  Hitesh Y
Update: 2024-03-06 07:28 GMT
ಬೆಂಗಳೂರಿನಲ್ಲಿ ಕುಸಿದ ಅಂತರ್ಜಲ ಪ್ರಮಾಣ

ಬೆಂಗಳೂರಿನಲ್ಲಿ  (Bangalore water crisis) ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣಿಸುತ್ತಲ್ಲೇ ಇದೆ. ಇದರ ನಡುವೆ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಾಗಲಿದೆ ಎಂದು ಎಚ್ಚರಿಸುತ್ತಿದ್ದಾರೆ ಜಲ ತಜ್ಞರು.

ಬೆಂಗಳೂರಿನಲ್ಲಿ ಈ ಬಾರಿ ನೀರಿನ ಸಮಸ್ಯೆ ಹೆಚ್ಚಳವಾಗುವುದಕ್ಕೆ ಮುಖ್ಯ ಕಾರಣ 2022-23ನೇ ಸಾಲಿನಲ್ಲಿ ಹಾಗೂ 2023-24ನೇ ಪ್ರಾರಂಭದ ಹಂತದಲ್ಲಿ ಮಳೆ ಆಗದಿರುವುದು. ಅಲ್ಲದೇ ಬೆಂಗಳೂರಿನ ಜಲಮೂಲಗಳು ಹಾಗೂ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಸಹ ಬೋರ್‌ವೆಲ್‌ಗಳು ಬತ್ತಲು ಕಾರಣವಾಗುತ್ತಿದೆ. ಬೋರ್‌ವೆಲ್‌ಗಳು ಬತ್ತುತ್ತಿರುವ ಬೆನ್ನಲ್ಲೇ ಕಾವೇರಿ ನೀರಿನ ಮೇಲೆ ಅವಲಂಬನೆ ಹೆಚ್ಚಾಗಿದೆ.

ರಾಜ್ಯದಲ್ಲಿ ಈ ಬಾರಿ ಸಮರ್ಪಕ ಮಳೆ ಆಗದೆ ಇರುವುದು ಹಾಗೂ ಕೆರೆಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳದೆ ಇರುವುದು ಬೆಂಗಳೂರಿನಲ್ಲಿ ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಪ್ರಮುಖವಾಗಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಯಲಹಂಕ ಹಾಗೂ ಆನೇಕಲ್‌ ವ್ಯಾಪ್ತಿಯಲ್ಲಿ ಅಂತರ್ಜಲ ಪ್ರಮಾಣವು ಗಣನೀಯವಾಗಿ ಇಳಿಕೆ ಕಂಡಿದೆ ಎಂದು ಸಣ್ಣ ನೀರಾವರಿ ಇಲಾಖೆಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಎಷ್ಟು ಪ್ರಮಾಣದಲ್ಲಿ ಇಳಿಕೆ ?

ಬೆಂಗಳೂರು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂತರ್ಜಲ ಕುಸಿತ ಆಗಿರುವುದು ಆನೇಕಲ್‌ನಲ್ಲಿ ಈ ಭಾಗದಲ್ಲಿ 7.42 ಮೀಟರ್, ಯಲಹಂಕ ವ್ಯಾಪ್ತಿಯಲ್ಲಿ 7.31 ಮೀಟರ್, ಬೆಂಗಳೂರು ಪೂರ್ವದಲ್ಲಿ 5.81 ಮೀಟರ್ ಅಂತರ್ಜಲ ಮಟ್ಟ ಕುಸಿದಿದೆ. ಇನ್ನುಳಿದಂತೆ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಭಾಗದಲ್ಲಿ ಒಂದು ಮೀಟರ್‌ಗಿಂತ ಕಡಿಮೆ ಅಂತರ್ಜಲ ಕುಸಿದಿರುವುದು ವರದಿ ಆಗಿದೆ.

ಬೆಂಗಳೂರಿನಲ್ಲಿ ಕುಸಿತ ಕಂಡ ಅಂತರ್ಜಲ

ಬೆಂಗಳೂರಿನಲ್ಲಿ ಅಂತರ್ಜಲ ಪ್ರಮಾಣ (Groundwater has fallen in Bangalore) ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. 2023ರ ಜನವರಿಯಿಂದ 2024ರ ಜನವರಿ ವರೆಗಿನ ಅಂತರ್ಜಲ ಪ್ರಮಾಣವನ್ನು ಗಮನಿಸಿದರೆ, ಬೆಂಗಳೂರಿನ ಎಲ್ಲ ಭಾಗದಲ್ಲೂ ಅಂತರ್ಜಲ ಇಳಿಕೆಯಾಗಿದೆ. 10 ವರ್ಷಗಳ ಸರಾಸರಿ ನೋಡಿದರೂ ಅಂತರ್ಜಲ ಪ್ರಮಾಣ ಕುಸಿತ ಕಂಡಿದೆ ಎಂದು  ಅಟಲ್‌ ಭೂ ಜಲ ಯೋಜನೆ (ಅಟಲ್‌ ಜಲ್‌)ಯ ಕರ್ನಾಟಕದ ಯೋಜನಾ ನಿರ್ದೇಶಕ ರಾಮಚಂದ್ರಯ್ಯ ಬಿ.ಜಿ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಅಂತರ್ಜಲ ಪ್ರಮಾಣವು 1.38 ಮೀಟರ್‌ನಿಂದ 9.28 ಮೀಟರ್‌ನವರೆಗೆ ಕುಸಿತ ಕಂಡಿದೆ ಎಂದು ವಿವರಿಸಿದರು.

ಅಂತರ್ಜಲ ಅತಿ ಬಳಕೆ ಮಾಡಿರುವ ಪ್ರದೇಶ

ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅಂತರ್ಜಲ ಅತಿಯಾಗಿ ಬಳಸಲಾಗುತ್ತಿದೆ ಎಂದು ಡೈನಾಮಿಕ್‌ ಗ್ರೌಂಡ್‌ ವಾಟರ್‌ ರಿಸೋರ್ಸ್‌ ಆಫ್‌ ಇಂಡಿಯಾ ಈಚೆಗೆ ವರದಿ ಮಾಡಿದೆ. ಈ ವರದಿಯ ಪ್ರಕಾರ ಕರ್ನಾಟಕದಲ್ಲಿ ಕೋಲಾರದಲ್ಲಿ ಅತಿ ಹೆಚ್ಚು ಅಂತರ್ಜಲ ಬಳಸಲಾಗುತ್ತಿದೆ.



ಜಿಲ್ಲಾವಾರು ಅಂತರ್ಜಲ ಬಳಕೆ(ಶೇ.)

ಕೋಲಾರ 172

ಬೆಂಗಳೂರು ಗ್ರಾಮಾಂತರ 154

ಚಿಕ್ಕಬಳ್ಳಾಪುರ 153

ಬೆಂಗಳೂರು ನಗರ 150

ಚಿತ್ರದುರ್ಗ 132

ಚಾಮರಾಜನಗರ 96.53

ರಾಮನಗರ 95.77

ತುಮಕೂರು 91.77

ದಾವಣಗೆರೆ 88.91

ಬಾಗಲಕೋಟೆ 88.71

10 ವರ್ಷಗಳ ಹಿಂದೆಯೇ ಅಂತರ್ಜಲ ಅಲರ್ಟ್‌ 


ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಬಗ್ಗೆ ಹತ್ತು ವರ್ಷಗಳ ಮುಂಚೆಯೇ ಕೇಂದ್ರೀಯ ಅಂತರ್ಜಲ ಮಂಡಳಿ -2013ನೇ ವರದಿಯಲ್ಲಿ ಎಚ್ಚರಿಸಿತ್ತು. ಸುಸ್ಥಿರ ಅಂತರ್ಜಲ ನಿರ್ವಹಣೆ ವರದಿಯಲ್ಲಿ ಕರ್ನಾಟಕದ ಅಂತರ್ಜಲ ಮಟ್ಟದ ಆಧಾರದ ಮೇಲೆ ನಾಲ್ಕು ವಿಭಾಗಗಳನ್ನಾಗಿ ಮಾಡಲಾಗಿತ್ತು. ಅವುಗಳಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿ ಇರುವ ಪ್ರದೇಶಗಳನ್ನು ಸುರಕ್ಷಿತ, ಅರೆ ಶೋಷಿತ ಎಂದೂ, ಅಂತರ್ಜಲ ಮಟ್ಟ ಕುಸಿಯುತ್ತಿರುವ ಪ್ರದೇಶಗಳನ್ನು ಶೋಷಿತ ಹಾಗೂ ಅತಿ ಶೋಷಿತ ಎಂದು ಗುರುತಿಸಲಾಗಿತ್ತು. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳು ಅತಿ ಶೋಷಿತ ಅಂತರ್ಜಲ ಮಟ್ಟದಲ್ಲಿ ಗುರುತಿಸಿಕೊಂಡಿದ್ದವು.

ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಹೇಗಿದೆ ?

2023ರ ಜನವರಿಯಿಂದ 2024ರ ಜನವರಿಯ ವರೆಗೆ 211 ತಾಲ್ಲೂಕುಗಳಲ್ಲಿ ಅಂತರ್ಜಲ ಪ್ರಮಾಣ ಇಳಿಕೆಯಾಗಿದ್ದರೆ, 25 ತಾಲ್ಲೂಕುಗಳಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಳವಾಗಿದೆ. ಇನ್ನು 10 ವರ್ಷಗಳ ಸರಾಸರಿಯನ್ನು ತೆಗೆದುಕೊಂಡರೆ, 128 ತಾಲ್ಲೂಕುಗಳಲ್ಲಿ ಅಂತರ್ಜಲ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, 108 ತಾಲ್ಲೂಕುಗಳಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಳವಾಗಿದೆ ಎನ್ನುತ್ತಾರೆ ರಾಮಚಂದ್ರಯ್ಯ ಬಿ.ಜಿ.

ಭವಿಷ್ಯದ ಬಗ್ಗೆ ಚಿಂತೆಯೇ ಇಲ್ಲ!

ರಾಜ್ಯದಲ್ಲಿ ಈಗಾಗಲೇ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಇಂದಿಗಿಂತ ತೀವ್ರವಾಗಲಿದೆ. ಬೆಂಗಳೂರಿನಲ್ಲಿ ಭವಿಷ್ಯದ ಬಳಕೆಗಾಗಿ ನಿವ್ವಳ ಅಂತರ್ಜಲ ಲಭ್ಯತೆಯು ಸೂನ್ನೆಗೆ ಇಳಿದಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆ ಎದುರಾಗಲಿದೆ ಎನ್ನುತ್ತಾರೆ ಜಲತಜ್ಞರು.

Tags:    

Similar News