ಅಮೆರಿಕದಲ್ಲಿ ಚಿಕಿತ್ಸೆ | ನಟ ಶಿವರಾಜ್‌ ಕುಮಾರ್‌ಗೆ ಹಾರೈಸಿದ ಸಿಎಂ ಸಿದ್ದರಾಮಯ್ಯ

Update: 2024-12-24 14:02 GMT

ನಟ ಶಿವರಾಜ್ ಕುಮಾರ್ ಅವರು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಹಾರೈಸಿದ್ದಾರೆ.

ಶಿವರಾಜ್ ಕುಮಾರ್ ಅವರೊಂದಿಗೆ ಮಂಗಳವಾರ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗಿ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಅನಾರೋಗ್ಯದ ನಿಮಿತ್ತ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್‌ ಕುಮಾರ್ ಅವರಿಗೆ ಕರೆಮಾಡಿ ಮಾತನಾಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದೇನೆ. ನನಗೆ ತಿಳಿದಂತೆ ಶಿವರಾಜ್‌ ಕುಮಾರ್ ಅವರ ಆತ್ಮವಿಶ್ವಾಸ, ಧೈರ್ಯ ಮತ್ತು ಸಹೃದಯತೆ ಅವರನ್ನು ಈ ಹೋರಾಟದಲ್ಲಿ ಗೆಲ್ಲಿಸಿಕೊಂಡು ಬರಲಿದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

‘ಬದುಕಿನ ದಾರಿಯಲ್ಲಿ ಎದುರಾಗಿರುವ ಈ ಸಣ್ಣ ಸಂಕಷ್ಟವನ್ನು ನಿವಾರಿಸಿಕೊಂಡು ಆರೋಗ್ಯವಂತರಾಗಿ ಬರಲಿರುವ ಶಿವರಾಜ್‌ ಕುಮಾರ್ ಅವರ ಆಗಮನವನ್ನು ಎದುರು ನೋಡುತ್ತಿರುವ ಅವರ ಹಿತೈಷಿಗಳಲ್ಲಿ ನಾನೂ ಒಬ್ಬ. ನಾಡಿನ ಹಿರಿಯರ ಆಶೀರ್ವಾದ ಮತ್ತು ಕಿರಿಯರ ಶುಭಹಾರೈಕೆ ಶಿವರಾಜ್‌ ಕುಮಾರ್ ಅವರ ಜೊತೆಗಿದ್ದು ಅವರನ್ನು ಕಾಪಾಡಲಿದೆ’ ಎಂದು ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೂಡ ಶಿವರಾಜ್ ಕುಮಾರ್ ಅವರಿಗೆ ಶುಭ ಕೋರಿದ್ದು, ಆರೋಗ್ಯವಂತರಾಗಿ ಬೇಗ ಮರಳಲಿ ಎಂದು ಹಾರೈಸಿದ್ದಾರೆ.

ಅಲ್ಲದೆ, ರಾಜ್ಯದ ಉದ್ದಗಲಕ್ಕೂ ವಿವಿಧೆಡೆ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು, ಅವರ ಸ್ನೇಹಬಳಗ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಹೋಮ, ಪೂಜೆ ಸಲ್ಲಿಸಿದ್ದಾರೆ.

ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಉದ್ದೇಶದಿಂದ ಶಿವರಾಜ್‌ ಕುಮಾರ್ ಅವರು ಸದ್ಯ ತಮ್ಮ ಸಿನಿಮಾದ ಕೆಲಸಗಳಿಗೆ ಬಿಡುವು ಪಡೆದಿದ್ದಾರೆ. ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಅಮೆರಿಕದಲ್ಲಿ ಇರಲಿದ್ದಾರೆ.

Tags:    

Similar News