ರಸಗೊಬ್ಬರ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಎಲ್ಲಿಯೂ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಯಾಗಬಾರದು. ಈ ರೀತಿ ಅಭಾವ ಸೃಷ್ಟಿಸುತ್ತಿರುವವರ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ಇಟ್ಟು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.;

Update: 2025-07-31 12:58 GMT

ಸಚಿವರು ಹಾಗೂ ಶಾಸಕರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದ ರಸಗೊಬ್ಬರ ಸರಬರಾಜು ಮಾಡದೆ ಅನ್ಯಾಯ ಎಸಗಿರುವ ಸಂದರ್ಭದಲ್ಲಿ ಕಾಳಸಂತೆಕೋರರು ತಲೆ ಎತ್ತದಂತೆ ತೀವ್ರ ನಿಗಾ ವಹಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವರು ಹಾಗೂ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಸಹಾಕಾರದ ನಡುವೆಯೂ ರಾಜ್ಯದ ರೈತರಿಗೆ ಅನಾನುಕೂಲ ಆಗದಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ನಡುವೆ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಸಿ ದುರ್ಲಾಭ ಮಾಡಿಕೊಳ್ಳಲು ಕಾಳಸಂತೆಕೋರರು ಪ್ರಯತ್ನಿಸುತ್ತಿರುವ ಬಗ್ಗೆ ತೀವ್ರ ನಿಗಾ ವಹಿಸುವಂತೆ ಪೊಲೀಸ್‌ ಮಹಾನಿರ್ದೇಶಕ ಡಾ. ಎಂ. ಎ. ಸಲೀಂ ಅವರಿಗೆ ದೂರವಾಣಿ ಮೂಲಕ ತಿಳಿಸಿದರು.

ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಎಲ್ಲಿಯೂ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಯಾಗಬಾರದು. ಈ ರೀತಿ ಅಭಾವ ಸೃಷ್ಟಿಸುತ್ತಿರುವವರ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ಇಟ್ಟು ಕ್ರಮ ಕೈಗೊಳ್ಳಬೇಕು ಎಂದರು.

ಕೇಂದ್ರ ಸಚಿವ ಜೆಪಿ ನಡ್ಡಾಗೆ ಪತ್ರ ಬರೆದಿದ್ದ ಸಿಎಂ 

ಕಳೆದ ವರ್ಷಕ್ಕಿಂತ ಈ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆ ವ್ಯಾಪ್ತಿಯೂ ಹೆಚ್ಚಾಗಿದೆ. ರೈತರಿಗೆ ಅಗತ್ಯ ಸಮಯಕ್ಕೆ ರಸಗೊಬ್ಬರ ಪೂರೈಸಬೇಕಾಗಿರುವುದರಿಂದ ಪ್ರಸಕ್ತ ವರ್ಷಕ್ಕೆ ಹಂಚಿಕೆಯಾಗಿರುವ ಗೊಬ್ಬರವನ್ನು ತ್ವರಿತಗತಿಯಾಗಿ ಪೂರೈಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರಿಗೆ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಪತ್ರ ಬರೆದಿದ್ದರು. 

ಕೊಪ್ಪಳ, ವಿಜಯಪುರ, ಬೀದರ್‌ ಹಾಸನ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ರಸಗೊಬ್ಬರಕ್ಕಾಗಿ ರೈತರು ಅಂಗಡಿಗಳ ಬಳಿ ದಿನವಿಡಿ ಸರತಿ ಸಾಲಿನಲ್ಲಿ ನಿಂತು ಕಾದರೂ ಗೊಬ್ಬರ ದೊರೆಯುತ್ತಿಲ್ಲ ಎಂದು ರೈತರು ಇತ್ತೀಚೆಗೆ ಅಸಮಧಾನ ವ್ಯಕ್ತಪಡಿಸಿ ಕೆಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದರು.  

Tags:    

Similar News