ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ ವಿಜಯ ಕುಮಾರ್ ಕುಟುಂಬಕ್ಕೆ 5 ಲಕ್ಷ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಕುವೈತ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟ ಕರ್ನಾಟಕದ ವಿಜಯ ಕುಮಾರ್ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.;
ಇತ್ತೀಚೆಗೆ ಕುವೈತ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬ ಗ್ರಾಮದ 40 ವರ್ಷದ ವಿಜಯ ಕುಮಾರ್ ಬಿನ್ ಕೊಬ್ಬಣ್ಣ ಪ್ರಸನ್ನ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ವಿಜಯ ಕುಮಾರ್ ಅವರು ಕಳೆದ ಎಂಟು ವರ್ಷಗಳಿಂದ ಕುವೈತ್‌ನಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಅಣ್ಣ ತಮ್ಮಂದಿರುವ ಸೇರಿದಂತೆ 8 ಜನರ ಇಡೀ ಕುಟುಂಬ ಅವರ ಮೇಲೆ ಅವಲಂಬಿತರಾಗಿದ್ದರು.
ಕೇರಳ ಸರಕಾರ ಅಗ್ನಿ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಐದು ಲಕ್ಷ ಪರಿಹಾರ ಘೋಷಿಸಿತ್ತು. ವಿಜಯ ಕುಮಾರ್ ಅವರ ಕುಟುಂಬ ಜೀವನ ನಿರ್ವಹಣೆ ದುಸ್ತರವಾಗುವುದರಿಂದ ಕೇರಳ ಸರ್ಕಾರ ಪರಿಹಾರ ಘೋಷಿಸಿರುವಂತೆಯೇ ರಾಜ್ಯ ಸರ್ಕಾರವೂ ಆರ್ಥಿಕ ನೆರವು ಘೋಷಿಸಬೇಕೆಂದು ರಾಜ್ಯ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತ ವಿಜಯಕುಮಾರ್ ಕುಟುಂಬಕ್ಕೆ ಐದು ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒದಗಿಸಲು ಸೂಚಿಸಿದ್ದಾರೆ.
47 ಮಂದಿ ಭಾರತೀಯರ ಸಾವು
ಕುವೈತ್ನ ಮಂಗಾಫ್ ಪ್ರದೇಶದ ಬೃಹತ್ ಬಹುಮಹಡಿ ಕಟ್ಟಡದ ಆರನೇ ಅಂತಸ್ತಿನಲ್ಲಿ ಜೂನ್ 12ರಂದು ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ 46 ಜನ ಭಾರತೀಯರು ಸಾವನ್ನಪ್ಪಿದ್ದರು. ದುರಂತದಲ್ಲಿ ಪ್ರಾಣ ಕಳಕೊಂಡವರ ಪೈಕಿ ಕೇರಳ ರಾಜ್ಯದವರೇ ಹೆಚ್ಚಿನವರಾಗಿದ್ದು, ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬ ಗ್ರಾಮದ 40 ವರ್ಷ ವಯಸ್ಸಿನ ವಿಜಯಕುಮಾರ್ ಸಹ ಒಬ್ಬರಾಗಿದ್ದರು.