ಆರು ಜಿಲ್ಲೆಯ ಸಚಿವರು, ಶಾಸಕರೊಂದಿಗೆ ಸಿಎಂ ಸಭೆ : ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಸಚಿವರು ಮತ್ತು ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದರು.;

Update: 2025-07-29 15:50 GMT

ಕ್ಷೇತ್ರವಾರು ಬಿಡುಗಡೆಯಾಗಿರುವ ಅನುದಾನ, ಇಲಾಖಾವಾರು ಅನುದಾನ ಬಳಕೆ, ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳ ಜಾರಿಯ ಸ್ಥಿತಿ ಗತಿ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚಿಸಲು ಸಚಿವರ ಮತ್ತು ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಆರಂಭಿಸಿದ್ದಾರೆ. ನಾಲ್ಕು ದಿನಗಳ ಕಾಲ  ಸಭೆ ನಡೆಯಲಿದೆ. ಮೊದಲ ದಿನವಾದ ಮಂಗಳವಾರ ಆರು ಜಿಲ್ಲೆಗಳ ಸಚಿವರು, ಶಾಸಕರ ಜತೆ ಸಮಾಲೋಚನೆ ನಡೆಸಿದರು. ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಸಚಿವರು ಮತ್ತು ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದರು. ಈ ವೇಳೆ ಜಿಲ್ಲೆಯ ಪ್ರಗತಿಯ ಜತೆಗೆ ಸಚಿವರ ಮತ್ತು ಶಾಸಕರ ನಡುವಿನ ಭಿನ್ನಾಭಿಪ್ರಾಯ ಕುರಿತು ಮಾಹಿತಿ ಪಡೆದು ಶಮನ ಮಾಡುವ ಪ್ರಯತ್ನ ಕೈಗೊಂಡರು. 

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪ್ರತ್ಯೇಕವಾಗಿ ನಡೆದ ಸಭೆಯಲ್ಲಿ ಪ್ರತಿ ಜಿಲ್ಲೆಗೆ ಅರ್ಧಗಂಟೆಗಳ ಸಮಯ ನಿಗದಿ ಮಾಡಿ ಸಮಸ್ಯೆಗಳನ್ನು ಆಲಿಸಿದರು. ಸಚಿವರು, ಶಾಸಕರು ಸಮನ್ವಯತೆಯಿಂದ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಪ್ರಮುಖವಾಗಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಸ್ಥಿತಿ ಗತಿ, ಕೃಷಿ ಚಟುವಟಿಕೆಗಳು ಮತ್ತು ಬಿಡುಗಡೆಯಾಗಿರುವ ಅನುದಾನದಲ್ಲಿ ವೆಚ್ಚವಾಗಿರುವ ಹಣದ ಪ್ರಮಾಣ, ಕಾಮಗಾರಿ ಪೂರ್ಣಗೊಳಿಸಲು ಕಾಲಾವಧಿ ನಿಗಧಿ ಮಾಡುವ ಕುರಿತು ಸಮಾಲೋಚನೆ ನಡೆಸಿದರು. 

ಕ್ಷೇತ್ರವಾರು ಬಿಡುಗಡೆಯಾಗಿರುವ ಅನುದಾನ, ಇಲಾಖಾವಾರು ಅನುದಾನಗಳ ಬಗ್ಗೆ ಚರ್ಚೆ, ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳ ಜಾರಿಯ ಸ್ಥಿತಿಗತಿ. ಶಾಸಕರ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು, ಪ್ರಮುಖವಾಗಿ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಮಾಹಿತಿ ಪಡೆದು ಸಲಹೆ, ಸೂಚನೆಗಳನ್ನು ನೀಡಿದರು. 

ಗ್ಯಾರಂಟಿಗಳ ಯಶಸ್ವಿ ಜಾರಿಯಿಂದ ಜಿಲ್ಲೆಯ ಆರ್ಥಿಕತೆ ಮೇಲೆ ಆಗಿರುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಶಾಸಕರ ಗಮನ ಸೆಳೆದರು. ಸರ್ಕಾರ ಪ್ರತಿ ಕ್ಷೇತ್ರಕ್ಕೂ ಸಾವಿರ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕೆಲಸಗಳನ್ನು ಒದಗಿಸಿದ್ದು, ಇದನ್ನು ಕ್ಷೇತ್ರದ ಜನರ, ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಜೊತೆಗೆ ಅವರ ಫಲಾನುಭವಿಗಳ ಜೊತೆ ಸಂಪರ್ಕದಲ್ಲಿ ಇರಬೇಕು. ಎಲ್ಲಾ ಕೆಡಿಪಿ ಸಭೆಗಳಲ್ಲೂ ಶಾಸಕರು, ಸಚಿವರು ಅರ್ಥಪೂರ್ಣವಾಗಿ ಪಾಲ್ಗೊಳ್ಳಬೇಕು. ಅದಕ್ಕೆ ಮೊದಲು‌ ಜನರ ಸಮಸ್ಯೆಗಳ ಬಗ್ಗೆ, ಕಾಮಗಾರಿಗೆ ಇರುವ ತಾಂತ್ರಿಕ ತೊಂದರೆಗಳ ಬಗ್ಗೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು‌ ನಿಧಾನ ಧೋರಣೆ ಬಗ್ಗೆ ಎಡಿಪಿ ಸಭೆಗಳಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು. 

Tags:    

Similar News