
ಸಿಎಂ ಸಿದ್ದರಾಮಯ್ಯ
ಶಾಸಕರ ವಿಶ್ವಾಸ ಗಳಿಸಲು ನಾಳೆಯಿಂದ ಸಿಎಂ ನೇತೃತ್ವದಲ್ಲಿ ಜಿಲ್ಲಾವಾರು ಸಚಿವರು, ಶಾಸಕರ ಸಭೆ
ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಸಭೆಗಳಲ್ಲಿ ಜಿಲ್ಲಾವಾರು ಪ್ರತ್ಯೇಕವಾಗಿ ಸಚಿವರು ಮತ್ತು ಶಾಸಕರ ಜೊತೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ (ಜುಲೈ 29) ಸಚಿವರು ಮತ್ತು ಶಾಸಕರೊಂದಿಗೆ ಸರಣಿ ಜಿಲ್ಲಾವಾರು ಸಭೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಸಭೆಗಳಲ್ಲಿ ಜಿಲ್ಲಾವಾರು ಪ್ರತ್ಯೇಕವಾಗಿ ಸಚಿವರು ಮತ್ತು ಶಾಸಕರ ಜೊತೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ.
ಶಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಚಿವರೊಂದಿಗಿನ ಸಮಸ್ಯೆಗಳು, ಸರ್ಕಾರ ಹಾಗೂ ಅಧಿಕಾರಿಗಳ ಹಂತದಲ್ಲಿರುವ ಸಮಸ್ಯೆಗಳ ಬಗ್ಗೆ ಈ ಸಭೆಗಳಲ್ಲಿ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಪಕ್ಷದ ಶಾಸಕರಿಗೆ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಇದೀಗ ಸರಣಿ ಜಿಲ್ಲಾ ಪ್ರವಾಸದ ನಡುವೆಯೇ ಶಾಸಕರು ಮತ್ತು ಸಚಿವರ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ.
ಸಭೆಗಳ ವಿವರ
ಮಂಗಳವಾರ (ಜುಲೈ 29) ಮೊದಲ ದಿನ ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶಾಸಕರು ಮತ್ತು ಸಚಿವರ ಜೊತೆ ಸಭೆ ನಡೆಯಲಿದೆ. ಉಳಿದಂತೆ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಶಾಸಕರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.
ಶಾಸಕರ ಅಸಮಧಾನಕ್ಕೆ ಕಾರಣಗಳೇನು?
ಅನೇಕ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಣ ನೀಡುತ್ತಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜು ಕಾಗೆ ಸೇರಿದಂತೆ ಹಲವರು ಶಾಸಕರು ಅನುದಾನ ಲಭ್ಯವಾಗದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು. ನಿಧಿಯ ಕೊರತೆಯಿಂದಾಗಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ರಸ್ತೆ, ಕುಡಿಯುವ ನೀರು, ಶಾಲಾ ಕಟ್ಟಡಗಳಂತಹ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದರು.
ಶಾಸಕರು, ಸಚಿವರ ಅಸಮಧಾನದ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ರಂದೀಪ್ ಸುರ್ಜೇವಾಲಾ ರಾಜ್ಯಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಇತರ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ್ದರು. ಇದರೊಂದಿಗೆ ಅಸಮಾಧಾನಗೊಂಡಿದ್ದ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ ಅವರ ದೂರುಗಳನ್ನು ಆಲಿಸಿದ್ದರು.