ದೇವನಹಳ್ಳಿಯಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ | ರೈತ ನಿಯೋಗದೊಂದಿಗೆ ಸಿಎಂ ಸಭೆ

ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಮಧ್ಯಾಹ್ನ 1ಗಂಟೆಗೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತರ ನಿಯೋಗದೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ರೈತರ ಸಾವಿರ ದಿನಗಳ ಹೋರಾಟದ ಕುರಿತು ʼದ ಫೆಡರಲ್‌ ಕರ್ನಾಟಕʼ ಎರಡು ವಾರದ ಹಿಂದೆ ಸಾಕ್ಷಾತ್‌ ವರದಿ ಪ್ರಕಟಿಸಿತ್ತು.

Update: 2024-12-23 06:30 GMT

ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ನಡೆಯುತ್ತಿರುವ ರೈತ ಹೋರಾಟದ ಕುರಿತು ಚರ್ಚಿಸಲು ಇಂದು (ಸೋಮವಾರ) ರೈತ ನಿಯೋಗದೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಒತ್ತಾಯಿಸಿ ಹೋಬಳಿಯ 13 ಗ್ರಾಮಗಳ ರೈತರು ಕಳೆದ ಮೂರು ವರ್ಷಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಸಾವಿರ ದಿನಗಳ ಹೋರಾಟದ ಕುರಿತು ಎರಡು ವಾರಗಳ ಹಿಂದೆ ʼದ ಫೆಡರಲ್ ಕರ್ನಾಟಕʼ ಸಾಕ್ಷಾತ್‌ ವರದಿ ಪ್ರಕಟಿಸಿತ್ತು.

ವರದಿಯಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈಗ ಭೂಸ್ವಾಧೀನ ವಿರೋಧಿ ಹೋರಾಟ ವೇದಿಕೆ ಮುಖಂಡರೊಂದಿಗೆ ಸಭೆ ನಡೆಸಲಿದೆ. ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಮಧ್ಯಾಹ್ನ 1ಗಂಟೆಗೆ ರೈತರ ನಿಯೋಗದ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ, ಚರ್ಚೆ ನಡೆಸಲಿದ್ದಾರೆ. ಈ ಹಿಂದೆ ಕೂಡ ತಮ್ಮನ್ನು ಭೇಟಿಯಾಗಿದ್ದ ರೈತರಿಗೆ ಭೂಸ್ವಾಧೀನ ಪ್ರಕ್ರಿಯೆ ಕುರಿತು ಅಂತಿಮ ನಿರ್ಧಾರ ಪ್ರಕಟಿಸುವ ಭರವಸೆಯನ್ನು ಸಿಎಂ ನೀಡಿದ್ದರು.

ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ 1777ಎಕರೆ ಫಲವತ್ತಾದ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು. ಈಗಾಗಲೇ ವಿಮಾನ ನಿಲ್ದಾಣ, ಕೆಐಎಡಿಬಿ ಮೊದಲ ಹಂತಕ್ಕೆ ಭೂಮಿ ಕಳೆದುಕೊಂಡಿದ್ದ ರೈತರು ಅಧಿಸೂಚನೆ ವಿರೋಧಿಸಿದ್ದರು. ಚನ್ನರಾಯಪಟ್ಟಣ ಹೋಬಳಿ ಕೇಂದ್ರದಲ್ಲಿ 1000ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರು. ರೈತರ ಹೋರಾಟಕ್ಕೆ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಬೆಂಬಲ ಸೂಚಿಸಿದ್ದರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆಯೂ ಒತ್ತಾಯಿಸಿದ್ದರು. ಈ ನಡುವೆ ಹೊಸಕೋಟೆಯ ನಂದಗುಡಿ ಭಾಗದ ರೈತರು, ರಾಜ್ಯ ರೈತ ಸಂಘ, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು ಕೂಡ ಭೂಸ್ವಾಧೀನ ವಿರೋಧಿ ಹೋರಾಟವನ್ನು ಬೆಂಬಲಿಸಿದ್ದವು.

ಕಳೆದ ಮೂರು ವರ್ಷಗಳಲ್ಲಿ ವಿವಿಧ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರು ಧರಣಿನಿರತ ರೈತರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಸರ್ಕಾರದ ಯಾವ ಮನವೊಲಿಕೆಯ ಪ್ರಯತ್ನಗಳಿಗೂ ರೈತರು ಸೊಪ್ಪು ಹಾಕದೆ, ಭೂ ಸ್ವಾಧೀನವನ್ನು ಕೈಬಿಡಬೇಕು ಎಂಬ ಒಂದಂಶದ ಬೇಡಿಕೆಯನ್ನು ಸಡಿಲಿಸಿರಲಿಲ್ಲ. ಆ ಹಿನ್ನೆಲೆಯಲ್ಲಿ ಈ ಹಿಂದಿನ ಎಲ್ಲಾ ಮಾತುಕತೆಗಳೂ ವಿಫಲವಾಗಿವೆ.

ಈಗಲೂ ಕೂಡ ಭೂಸ್ವಾಧೀನ ಕೈಬಿಡುವಂತೆ ರೈತರು ಪಟ್ಟುಹಿಡಿದಿರುವ ಹಿನ್ನೆಲೆಯಲ್ಲಿ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ. ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಭಾಗಿಯಾಗಿರುವ ವಿವಿಧ ರೈತ ಸಂಘಟನೆಗಳು ಮುಖಂಡರು, ಸ್ಥಳೀಯ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ರೈತರ ಸಾವಿರ ದಿನಗಳ ಅಹೋರಾತ್ರಿ ಧರಣಿ ಹೋರಾದ ಕುರಿತು ʼದ ಫೆಡರಲ್‌ ಕರ್ನಾಟಕʼ ಮಾಡಿರುವ ಸಾಕ್ಷಾತ್‌ ವರದಿಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ..

Full View

Tags:    

Similar News