ಭ್ರಷ್ಟಾಚಾರ | ಲೋಕಾಯುಕ್ತ ದಾಳಿಗೆ ಹೆದರಿ ಸಿಎಂ ಪದಕಕ್ಕೆ ಆಯ್ಕೆಯಾದ ಇನ್‌ಸ್ಪೆಕ್ಟರ್ ಪರಾರಿ!
ದಾಳಿಯ ವಿಚಾರ ತಿಳಿದ ಇನ್‌ಸ್ಪೆಕ್ಟರ್ ಕುಮಾರ್ ಪೊಲೀಸ್ ವಾಹನವನ್ನು ಮನೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಾಗಿ ಮಂಗಳವಾರ ಸಂಜೆಯಿಂದ ಬುಧವಾರ ಮುಂಜಾನೆವರೆಗೂ ಶೋಧ ನಡೆಸಿದರೂ ಪತ್ತೆಯಾಗಲಿಲ್ಲ.;
ಪೊಲೀಸ್ ಇಲಾಖೆಯಲ್ಲಿ ಅತುತ್ತಮ ಸೇವೆ ಸಲ್ಲಿಸಿ ಪದಕ ಪಡೆದ ಅಧಿಕಾರಿಗಳು ಬೇರೆಯವರಿಗೆ ಪ್ರೇರಣೆ ಆಗುವಂತಿರಬೇಕು ಹಾಗೂ ಸಿಎಂ ಪದಕ ಪಡೆಯಲು ದಕ್ಷತೆ, ಪ್ರಾಮಾಣಿಕತೆಯಿಂದ ವೃತ್ತಿಪರತೆ ತೋರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪದಕ ಪ್ರದಾನ ಸಂದರ್ಭದಲ್ಲಿ ಹೇಳಿದ್ದರು.
ಆದರೆ, ಅವರ ಆಶಯಕ್ಕೆ ವಿರೋಧಾಭಾಸ ಎನ್ನುವಂತೆ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ! ಮುಖ್ಯಮಂತ್ರಿ ಪದಕ ಪ್ರದಾನ ದಿನಕ್ಕೆ ಮುನ್ನಾ ದಿನವೇ ಅವರು ಲೋಕಾಯುಕ್ತ ಬಲೆಗೆ ಬಿದ್ದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಕುಮಾರ್ ಲೋಕಾಯುಕ್ತ ಪೊಲೀಸರ ಬಂಧನದಿಂದ ಪಾರಾಗಲು ಠಾಣೆಗೆ ಬರದೇ ಪರಾರಿಯಾಗಿದ್ದಾರೆ.
ಮುಖ್ಯಮಂತ್ರಿಗಳ ಪೊಲೀಸ್ ಪದಕಗಳನ್ನು ಬುಧವಾರ ಸಿಎಂ ಸಿದ್ದರಾಮಯ್ಯ ಪದಕ ಪುರಸ್ಕೃತರಿಗೆ ಪ್ರದಾನ ಮಾಡಿದರು.
ಗುತ್ತಿಗೆದಾರರೊಬ್ಬರ ಮೇಲೆ ಸುಳ್ಳು ಕೇಸ್ ದಾಖಲಿಸಿ 4 ಕೋಟಿ ರೂ. ಮೌಲ್ಯದ ಮನೆಯನ್ನು ಬಲವಂತವಾಗಿ ಮಾರಾಟ ಮಾಡುವಂತೆ ನಾಗರಬಾವಿಯ ಖಾಸಗಿ ಹೋಟೆಲ್‌ನಲ್ಲಿ ಒತ್ತಡ ಹಾಕಿದ ಪ್ರಕರಣ ಇದಾಗಿದ್ದು, ಇನ್ಸ್ಪೆಕ್ಟರ್ ಬಂಧಿಸಲು ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಮಂಗಳವಾರ ಸಿವಿಲ್ ಕಂಟ್ರ್ಯಾಕ್ಟರ್ ಚನ್ನೇಗೌಡ ಎಂಬುವರ ಪತ್ನಿ ಅನುಷಾ ಅವರನ್ನು ನಾಗರಬಾವಿಯ ಹೋಟೆಲ್‌ಗೆ ಕರೆಸಿ, ಒಪ್ಪಂದಕ್ಕೆ ಸಹಿ ಹಾಕಿಸಲು ಮುಂದಾದಾಗ ಪೊಲೀಸ್ ಠಾಣೆಯ ಮೇಲೆ ದಿಢೀರ್ ಲೋಕಾಯುಕ್ತ ದಾಳಿ ನಡೆದಿದೆ. ವಿಚಾರ ತಿಳಿದ ಆರೋಪಿ ಇನ್‌ಸ್ಪೆಕ್ಟರ್ ಕುಮಾರ್ ಪೊಲೀಸ್ ವಾಹನವನ್ನು ಮನೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಅವರಿಗಾಗಿ ಮಂಗಳವಾರ ಸಂಜೆಯಿಂದ ಬುಧವಾರ ಮುಂಜಾನೆವರೆಗೂ ಶೋಧ ನಡೆಸಿದರೂ ಪತ್ತೆಯಾಗಲಿಲ್ಲ.
ಮನೆ ಮಾರಾಟಕ್ಕೆ ಒತ್ತಡ ಆರೋಪ
ಸಿವಿಲ್ ಕಂಟ್ರ್ಯಾಕ್ಟರ್ ಚನ್ನೇಗೌಡ ಅವರ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಿ ರಿಪೋರ್ಟ್ ಹಾಕಲು ನಾಗರಬಾವಿಯಲ್ಲಿರುವ ಚನ್ನೇಗೌಡ ಅವರಿಗೆ ಸೇರಿರುವ 4ಕೋಟಿ ರೂ. ಮೌಲ್ಯದ ಮನೆ ಮಾರಾಟ ಮಾಡುವಂತೆ ಕುಮಾರ್ ಒತ್ತಡ ಹಾಕಿದ್ದರು. ಚನ್ನೇಗೌಡ ಅವರನ್ನು ಠಾಣೆಗೆ ಕರೆಸಿ, ಬಲವಂತವಾಗಿ ಅಗ್ರಿಮೆಂಟ್‌ಗೆ ಸಹಿ ಹಾಕಿಸಿದ್ದರು. ಅಲ್ಲದೇ ತಮ್ಮ ಖಾತೆಗೆ 4ಲಕ್ಷ ರೂ, ವರ್ಗಾವಣೆ ಮಾಡಿಸಿಕೊಂಡಿದ್ದರು.
ತಮ್ಮ ಸೋದರ ಸಂಬಂಧಿ ಗವಿಗೌಡ, ದಿವ್ಯಾ ಹೆಸರಿಗೆ ಮನೆ ನೋಂದಣಿ ಮಾಡಿಕೊಡುವಂತೆ ಇನ್‌ಸ್ಪೆಕ್ಟರ್ ಒತ್ತಡ ಹಾಕಿದ್ದಲ್ಲದೆ, ಚನ್ನೇಗೌಡ ಅವರ ಪತ್ನಿ ಅನುಷಾ ಅವರಿಗೆ ಕಿರುಕುಳ ನೀಡಿದ್ದರು. ಮನೆ ಮಾರಾಟಕ್ಕೆ ಒಪ್ಪದ ಚನ್ನೇಗೌಡ ಅವರ ಮನೆಗೆ ಕೆಲ ದಿನಗಳ ಹಿಂದೆ ಪುಂಡರನ್ನು ನುಗ್ಗಿಸಿ ಗಲಾಟೆಯೂ ಮಾಡಿಸಿದ್ದರು.
ಚನ್ನೇಗೌಡ ಅವರು ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದರು. ಮಂಗಳವಾರ ಸಂಜೆ ಚನ್ನೇಗೌಡ ಅವರ ಪತ್ನಿ ಅನುಷಾರನ್ನು ಖಾಸಗಿ ಹೋಟೆಲ್‌ಗೆ ಕರೆಸಿ, ಅಗ್ರಿಮೆಂಟ್‌ಗೆ ಸಹಿ ಮಾಡಿಸಿಕೊಳ್ಳಲು ಮುಂದಾದ ವೇಳೆ ಪೊಲೀಸ್ ಠಾಣೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರು ಕಾನ್ಸ್ಟೇಬಲ್‌ಗಳಾದ ಉಮೇಶ್, ಅನಂತ್ ಸೋಮಶೇಖರ್ ಆರಾಧ್ಯ, ಖರೀದಿದಾರ ಗವಿಗೌಡ, ದಿನೇಶ್ ಅವರನ್ನು ಬಂಧಿಸಲಾಗಿದೆ.