ದೇವನಹಳ್ಳಿ ಭೂಸ್ವಾಧೀನ | ಪಟ್ಟು ಸಡಿಲಿಸದ ಹೋರಾಟಗಾರರು: ಜನವರಿ ಮೊದಲ ವಾರದಲ್ಲಿ ಸ್ಪಷ್ಟ ನಿರ್ಧಾರ ಎಂದ ಸಿಎಂ

ಚನ್ನರಾಯಪಟ್ಟಣ ರೈತ ಹೋರಾಟಗಾರರ ನಿಯೋಗದೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಸದಾ ರೈತರ ಪರವಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಭೂಸ್ವಾಧೀನ ಅಧಿಸೂಚನೆ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ, ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದ್ದಾರೆ

Update: 2024-12-23 12:55 GMT

ಕೆಐಎಡಿಬಿ(ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಬಲವಂತದ ಭೂಸ್ವಾಧೀನ ವಿರೋಧಿಸಿ ಸಾವಿರ ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಸ್ವಾಧೀನ ಕೈಬಿಡುವ ಕುರಿತು ಅಭಯ ನೀಡಿದ್ದಾರೆ.

ಬೆಂಗಳೂರಿನ ತಮ್ಮ ಅಧಿಕೃತ ನಿವಾಸ ಕೃಷ್ಣಾದಲ್ಲಿ ಸೋಮವಾರ ಚನ್ನರಾಯಪಟ್ಟಣದ ರೈತ ನಿಯೋಗದೊಂದಿಗೆ ಸಭೆ ನಡೆಸಿದ ಅವರು, ರಾಜ್ಯ ಸರ್ಕಾರ ರೈತರ ಪರವಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಭೂಸ್ವಾಧೀನ ಅಧಿಸೂಚನೆ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ, ಜನವರಿ ಮೊದಲ ವಾರದಲ್ಲಿ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಭೆಯಲ್ಲಿ ಸಿಎಂ ಹೇಳಿದ್ದೇನು?

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯಲ್ಲಿ 1777 ಎಕರೆ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಎರಡು ಗ್ರಾಮಗಳ ವ್ಯಾಪ್ತಿಯ 430 ಎಕರೆ ಭೂಸ್ವಾಧೀನಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹಾಗಾಗಿ ಅಂತಿಮ ಅಧಿಸೂಚನೆಯನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದಾಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಂತಿಮ ಅಧಿಸೂಚನೆ ಕೈಬಿಡುವ ಕುರಿತಂತೆ ಸರ್ಕಾರದ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆಯಲಾಗುವುದು. ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ಜನವರಿ ಮೊದಲ ವಾರದೊಳಗೆ ನಿರ್ಧಾರ ಪ್ರಕಟಿಸಲಾಗುವುದು. ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಸಿಎಂ ರೈತ ಮುಖಂಡರಿಗೆ ಅಭಯ ನೀಡಿದ್ದಾರೆ.

ಸಿಎಂ ಮುಂದೆ ರೈತರ ವಾದವೇನು?

ಕೆಐಎಡಿಬಿ ಭೂಸ್ವಾಧೀನ ಕೈಬಿಡುವ ಹಾಗೂ ಮುಂದುವರಿಸುವ ಅಧಿಕಾರ ಸರ್ಕಾರಕ್ಕಿದೆ. ಈಗಾಗಲೇ ಮೂರು ಹಂತದಲ್ಲಿ ರೈತರು ಭೂಮಿ ಕಳೆದುಕೊಂಡಿದ್ದಾರೆ. ಅಳಿದುಳಿದ ಜಾಗವನ್ನೂ ಸ್ವಾಧೀನಪಡಿಸಿಕೊಂಡರೆ ನಾವು ಎಲ್ಲಿಗೆ ಹೋಗಬೇಕು. ಸರ್ಕಾರ ನೀಡುವ ಯಾವುದೇ ಪರಿಹಾರ, ಪುನರ್ವಸತಿ ನಮಗೆ ಬೇಕಾಗಿಲ್ಲ. ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟರೆ ಅಷ್ಟೇ ಸಾಕು ಎಂದು ರೈತ ಮುಖಂಡರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

"ಈಗಾಗಲೇ ಮೂರು ಬಾರಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಈಗಲೂ ಸಾಕಷ್ಟು ಜಮೀನು ಖಾಲಿ ಉಳಿದಿದೆ. ಹಾಗಾಗಿ ಹೊಸದಾಗಿ ಭೂಸ್ವಾಧೀನ ನಡೆಸಬಾರದು. ಹೊಸ ಉದ್ಯಮಗಳಿಗೆ ಭೂಮಿ ಬೇಕಿದ್ದರೆ ಕೆಐಎಡಿಬಿ ಬಳಿ ಖಾಲಿ ಇರುವ ಜಮೀನನ್ನೇ ಹಂಚಬೇಕು. ಭೂಸ್ವಾಧೀನ ಪ್ರಕ್ರಿಯೆ ಕೈಬಿಡದ ಹೊರತು ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ. ಸಿಎಂ ಅವರು ಅಭಯ ನೀಡಿದ್ದಾರೆ. ಕಾದು ನೋಡುತ್ತೇವೆ" ಎಂದು ರೈತರ ಹೋರಾಟದಲ್ಲಿ ಭಾಗಿಯಾಗಿರುವ ಮುಖಂಡ ಕಾರಹಳ್ಳಿ ಶ್ರೀನಿವಾಸ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.  

ರೈತರ ಪರ ಕೆಎಚ್ ಮುನಿಯಪ್ಪ ಹೇಳಿದ್ದೇನು?

ರೈತ ನಿಯೋಗ ಭೇಟಿ ವೇಳೆ ಹಾಜರಿದ್ದ ದೇವನಹಳ್ಳಿ ಶಾಸಕರೂ ಆಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವ ಕೆ ಎಚ್‌ ಮುನಿಯಪ್ಪ ಅವರು, ದೇವನಹಳ್ಳಿ ಕ್ಷೇತ್ರದಲ್ಲಿ ಈಗಾಗಲೇ ವಿವಿಧ ಯೋಜನೆಗಳಿಗಾಗಿ ಸಾವಿರಾರು ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಚನ್ನರಾಯಪಟ್ಟಣ ಹೋಬಳಿ 13 ಗ್ರಾಮಗಳ ರೈತರು ಸಾವಿರ ದಿನದಿಂದ ಭೂಸ್ವಾಧೀನ ವಿರೋಧಿಸಿ ಶಾಂತ ರೀತಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ರೈತರ ಮನವಿಯನ್ನು ಪರಿಗಣಿಸಬೇಕು. ಕೃಷಿಯನ್ನೇ ಅವಲಂಬಿಸಿರುವ ರೈತರ ಭೂಮಿ ಕಿತ್ತುಕೊಂಡರೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಹಾಗಾಗಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದೇನು?

ಭೂಸ್ವಾಧೀನ ಬೆಂಬಲಿಸಿ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ರೈತರ ಭೂಮಿಗೆ ಹೊಸ ಕಾಯ್ದೆಯಂತೆ ಪರಿಹಾರ ನೀಡಲಾಗುವುದು. ಭೂಮಿ ಕಳೆದುಕೊಂಡವರಿಗೆ ಉದ್ಯೋಗ, ವಸತಿ ಸೌಲಭ್ಯ ಕಲ್ಪಿಸಲಾಗುವುದು. ಕೈಗಾರಿಕೆಗಳು ಬಂದಷ್ಟೂ ದೇವನಹಳ್ಳಿ ಅಭಿವೃದ್ಧಿ ಹೊಂದಲಿದೆ. ಹಾಗಾಗಿ ರೈತರು ವಿರೋಧ ವ್ಯಕ್ತಪಡಿಸಬಾರದು ಎಂದು‌ ನಿಯೋಗದಲ್ಲಿದ್ದ ಮುಖಂಡರನ್ನು ಮನವೊಲಿಕೆ ಪ್ರಯತ್ನ ಮಾಡಿದರು. ಆದರೆ, ಇದಕ್ಕೆ ಸೊಪ್ಪು ಹಾಕದ ಮುಖಂಡರು, ನಮಗೆ ಯಾವ ಪರಿಹಾರವೂ ಬೇಡ, ವಸತಿ ಸೌಲಭ್ಯವೂ ಬೇಡ. ಯಾವುದೇ ಕಾರಣಕ್ಕೂ ಭೂಮಿ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಸಭೆಯಲ್ಲಿ ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ರೈತ ಮುಖಂಡರಾದ ಜಿ.ಸಿ. ಬಯ್ಯಾರೆಡ್ಡಿ, ನಂಜಪ್ಪ, ಚನ್ನಹಳ್ಳಿ ರಾಜಣ್ಣ, ವಿವಿಧ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಕಾರಹಳ್ಳಿ ಶ್ರೀನಿವಾಸ್, ಪ್ರಭಾ ಬೆಳವಂಗಲ, ಸ್ಥಳೀಯ ರೈತ ಮುಖಂಡರಾದ ಮಾರೇಗೌಡ, ಪ್ರಮೋದ್, ಮುಕುಂದ ಇತರರು ಭಾಗವಹಿಸಿದ್ದರು.

ರೈತರ ಹೋರಾಟದ ಸ್ಟೋರಿಗೆ ಈ ವಿಡಿಯೋ ನೋಡಿ

Full View

Tags:    

Similar News