Bengaluru Chitra Sante | ಹೋಳಿ ಮುನ್ನವೇ ಬಂತು ʻಚಿತ್ರಸಂತೆʼಯ ಬಣ್ಣದ ಓಕುಳಿ
ಹೊಸ ವರ್ಷದ ಆರಂಭದಲ್ಲೇ, ಬೆಂಗಳೂರಿನಲ್ಲಿ ಬಣ್ಣಗಳ ಲೋಕವೊಂದು ಅನಾವರಣಗೊಳ್ಳಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕರ್ನಾಟಕ ಚಿತ್ರಕಲಾ ಪರಿಷತ್ ಸುತ್ತಮುತ್ತ ಜನವರಿ 5 ರಂದು ಬಣ್ಣಬಣ್ಣದ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.;
ಈ ಬಾರಿ ಮಾರ್ಚ್ ತಿಂಗಳ 13 ರಂದು ಹೋಳಿ ಹಬ್ಬ. ಅಂದರೆ ಬಣ್ಣಗಳ ಹಬ್ಬ ಗುಲಾಬಿ ಕೆಂಪು, ಕಡುಗೆಂಪು ಬಣ್ಣದ ಚಿಗುರು; ಹಳದಿ, ನೀಲಿ, ಬಿಳಿ ಹೂವುಗಳ ಪರಿಮಳ ಎಲ್ಲೆಲ್ಲೂ ಆವರಿಸುತ್ತಿದೆ. ಪ್ರಕೃತಿಯ ಒಡಲೇ ವರ್ಣಮಯವಾಗುತ್ತದೆ. ನಿಸರ್ಗ ಹೋಳಿ ಹಬ್ಬಕ್ಕೆ ಸಜ್ಜಾಗುತ್ತಿದೆ. ಹೋಳಿ ಹುಣ್ಣಿಮೆ ಎಂದರೆ ಸಂಭ್ರಮ. ಬಣ್ಣಗಳ ಓಕುಳಿಯಾಟಕ್ಕೆ ಬೆಂಗಳೂರು ಇನ್ನೂ ಮೂರು ತಿಂಗಳು ಕಾಯಬೇಕು.
ಆದರೆ, ಜನವರಿ 5 ರಂದು (ಭಾನುವಾರ) ಚುಮುಚುಮು ಬೆಳಗಾಗುತ್ತಿದ್ದಂತೆ ಕೊರೆಯುವ ಚಳಿಯನ್ನು ಬೇಧಿಸಿ, ಬೆಂಗಳೂರು ನಗರದ ಹೃದಯ ಭಾಗದ ಶಿವಾನಂದ ವೃತ್ತದ ಸುತ್ತಲಿನ ಪ್ರದೇಶ ವಿವಿಧ ಛಾಯೆಗಳ ನೂರಾರು ಬಣ್ಣಗಳಿಂದ ತುಂಬಿ ತುಳುಕುತ್ತದೆ. ಅಂದರೆ ಬಣ್ಣಬಣ್ಣದ ದೇಶದ ನೂರಾರು ಕಲಾ ಪರಂಪರೆಗಳನ್ನು ಪ್ರತಿನಿಧಿಸುವ ಕಲಾಕೃತಿಗಳು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾತ್ಮಕ ಕಟ್ಟಡದ ಎಡಭಾಗದ ವಿಂಡ್ಸರ್ ಮ್ಯಾನರ್ ವೃತ್ತದಿಂದ, ಬಲಭಾಗದ ಶಿವಾನಂದ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳು ರಸ್ತೆಗಳ ಬದಿಗಳನ್ನು ಆಕ್ರಮಿಸಿಕೊಳ್ಳುತ್ತದೆ. ಒಂದರ್ಥದಲ್ಲಿ ಹಳ್ಳಿ ಸಂತೆಯಂಥಾ ವಾತಾವರಣ ನಿರ್ಮಾಣವಾಗುತ್ತದೆ. ಕಲಾರಾಧಕರು, ಇಡೀ ಪ್ರದೇಶವನ್ನು ಬೆಲ್ಲಕ್ಕೆ ಇರುವೆ ಮುತ್ತುವಂತೆ ಮುತ್ತಿಕೊಳ್ಳುತ್ತಾರೆ. ಮೇಲಕ್ಕೆ ಸಾಸಿವೆ ಎಸೆದರೆ, ಅವು ನೆಲಕ್ಕೆ ತಲುಪದಷ್ಟು ಜನಸಂದಣಿ ಎಂದರೆ ಎಷ್ಟು ಜನ ಸೇರಬಹುದೆಂದು ಯಾರು ಬೇಕಾದರೂ ಊಹಿಸಬಹುದು.
ಮತ್ತೆ ಬಂತು ಚಿತ್ರ ಸಂತೆ
ಹೌದು. ಕಳೆದ ಇಪ್ಪತ್ತೊಂದು ವರ್ಷದಿಂದ ನಡೆದುಕೊಂಡು ಬಂದಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸುವ ಚಿತ್ರಸಂತೆಯ 22ನೇ ಅವೃತ್ತಿಗೆ ಚಿತ್ರಕಲಾ ಪರಿಷತ್ತು ಸಿದ್ಧವಾಗುತ್ತಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಬಿ.ಎಲ್. ಶಂಕರ್ ಅವರು ಹೇಳುವಂತೆ, ಈ ಬಾರಿ ನಾಲ್ಕು ಲಕ್ಷಕ್ಕೂ ಹೆಚ್ಚು ಕಲಾರಾಧಕರು ಚಿತ್ರಸಂತೆಗೆ ಬಂದು, ಎಲ್ಲ ಬಗೆಯ ಕಲಾಕೃತಿಗಳನ್ನು ನೋಡಿ, ತಮಗಿಷ್ಟವಾದ, ತಮ್ಮ ಕೈಗೆ ಎಟಕುವ ಬೆಲೆಯ ಕಲಾಕೃತಿಗಳನ್ನು ಕೊಂಡು ಎದೆಗಪ್ಪಿಕೊಂಡು ತೆರಳಲಿದ್ದಾರೆ.
ಈ ರೀತಿಯ ವರ್ಣರಂಜಿತ ಬೀದಿ ಕಲಾ ಸಂತೆ ದೇಶದ ಹಲವು ಕಡೆ ನಡೆಯುತ್ತದೆ. ದೆಹಲಿಯ ಲೋಧಿ ಕಲಾ ಪ್ರದೇಶದ ಬಯಲು ಕಲಾ ಗ್ಯಾಲರಿ, ಮುಂಬೈನ ಕಾಲಾ ಘೋಡಾ ಉತ್ಸವ, ದೆಹಲಿಯ ಹಝ್ ಖಾಸ್ ಹಾಗೂ ಶಾಂತಿನಿಕೇತನದ ಕಲಾಮೇಳದ ಮಾದರಿದೇ ಆಗಿದ್ದು ಬೆಂಗಳೂರಿನ ಈ ಚಿತ್ರಸಂತೆ.
ಕಲೆ ಎಲ್ಲರಿಗಾಗಿ
ಎರಡು ದಶಕಗಳ ಹಿಂದೆ ಅಂದರೆ 2003ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರ ಸಂತೆ ಎಂಬ ಈ ಪ್ರಯತ್ನ ಇಂದು ಬೃಹದಾಕಾರವಾಗಿ ಬೆಳೆದು ದೇಶದ ಇಪ್ಪತ್ತಕ್ಕೂ ಹೆಚ್ಚು ಪ್ರದೇಶಗಳಿಂ ನೂರಾರು ಕಲಾವಿದರು ತಮ್ಮ ದೇಸಿ ಹಾಗೂ ಮಾರ್ಗ, ಆಧುನಿಕ ಶೈಲಿಯ ಕಲಾಕೃತಿಗಳನ್ನು ಇಲ್ಲಿ ಬೀದಿಬೀದಿಗಳಲ್ಲಿ ಪ್ರದರ್ಶಿಸುತ್ತಾರೆ. ಮೊದಲಬಾರಿಗೆ ನಡೆದಾಗ ಚಿತ್ರಕಲೆಯ ಬಗ್ಗೆ ವಿಚಾರ ಸಂಕಿರಣಗಳು, ಕಲಾವಿದರ ಮುಖಾಮುಖಿ ಕಾರ್ಯಕ್ರಮಗಳು, ಕಲೆಯ ವಿವಿಧ ಪ್ರಕಾರಗಳ ಬಗ್ಗೆ ದೀರ್ಘವಾದ ಚರ್ಚೆಗಳು ನಡೆದದ್ದು ಚಿತ್ರ ಸಂತೆಯ ಹೆಗ್ಗಳಿಕೆಯನ್ನು ಹೆಚ್ಚಿಸಿತು.
ಇದು ಜನಸಾಮಾನ್ಯರಿಗೂ, ಕಲೆಯನ್ನು ತಲುಪಿಸುವ ಒಂದು ಪ್ರಯತ್ನ. ಯಾವ ಕಲೆ ಕೇವಲ ಉನ್ನತ ಸಮಾಜದ ಆಸ್ತಿಯೆಂದು ಭಾವಿಸಲಾಗಿ, ಅವುಗಳು ಕೇವಲ ಕಲಾ ಗ್ಯಾಲರಿಗಳ ಪ್ರದರ್ಶನಕ್ಕೆ ಸೀಮಿತಗೊಂಡಿರುತ್ತದೆಯೋ, ಅವೆಲ್ಲವೂ ಶ್ರೀಸಾಮಾನ್ಯರಿಗೂ ಸೇರಿದ್ದು ಎಂಬ ಭಾವನೆಯನ್ನು ಚಿತ್ರ ಸಂತೆ ಮೂಡಿಸುತ್ತಾ ಬಂದಿರುವುದು. ಈ ಪ್ರಯತ್ನದ ಹೆಗ್ಗಳಿಕೆ. ಡ್ರಾಯಿಂಗ್ಸ್, ಪೇಂಟಿಂಗ್ಸ್, ಗ್ರಾಫಿಕ್ ಪ್ರಿಂಟ್ಸ್, ಮಿನಿಯೇಚರ್ ಪೇಂಟಿಂಗ್ಸ್, ಕ್ಯಾರಿಕೇಚರ್ಸ್, ಮ್ಯೂರಲ್ಸ್ ಗಳು ಸೇರಿದಂತೆ, ಎಲ್ಲ ಕಲಾಪ್ರಿಯರಿಗೂ ಅವರವರ ಆಯ್ಕೆಗೆ ಇಲ್ಲಿ ಅವಕಾಶವಿರುತ್ತದೆ. ಒಂದು ರೀತಿಯಲ್ಲಿ ʻಎಲ್ಲರಿಗಾಗಿ ಕಲೆʼ ಕಲ್ಪನೆಯಿಂದ ಹುಟ್ಟಿದ ಯೋಚನೆ ಇದು..
ಕಲಾ ಮನಸ್ಸುಗಳ ಸಂಕಲನ
ಕಲೆ ಇಲ್ಲಿ ನಿಜಾರ್ಥದಲ್ಲಿ ಬೀದಿಗಿಳಿಯುತ್ತದೆ. ರಸ್ತೆಯ ಎರಡೂ ಬದಿಗಳೂ ಕಲಾ ಮಳಿಗೆಗಳಿಂದ ತುಂಬಿ ಹೋಗಿರುತ್ತವೆ. ಬಂದವರು ಒಂದಾದರೂ ತಮ್ಮ ಕೈಗೆಟಕುವ ಕಲಾಕೃತಿಯನ್ನು ಕೊಂಡು ತಮ್ಮ ಜೋಳಿಗೆಗೆ ಹಾಕಿಕೊಳ್ಳದೇ ಹಿಂದಿರುಗುವುದಿಲ್ಲ ಎನ್ನುವುದು ಈ ಚಿತ್ರ ಸಂತೆಯ ಹೆಗ್ಗಳಿಕೆ. ಏನೂ ಕೊಳ್ಳದಿದ್ದರೂ, ತಮ್ಮ ಓದಿನ ಮೇಜಿನ ಮೇಲೆ ಇಡಲು, ತಮ್ಮ ಅಧ್ಯಯನ ಕೊಠಡಿಗೆ ಅರ್ಥಪೂರ್ಣ ರೂಪ ಕೊಡುವ ಜಲವರ್ಣ, ತೈಲ ವರ್ಣ, ಅಕ್ರಿಲಿಕ್, ಪೆನ್ಸಿಲ್, ಇಂಕ್, ಫೈಬರ್ ಗ್ಲಾಸ್, ಪ್ಲಾಸ್ಟರ್ ಆಫ್ ಪ್ಯಾರಿಸ್ ಎಲ್ಲ ಕೃತಿಗಳೂ, ನೂರು ರೂಪಾಯಿಯಿಂದ ಲಕ್ಷಾಂತರ ರೂಪಾಯಿವರೆಗಿನ ವ್ಯಾಪ್ತಿಯಲ್ಲಿ ಮಾರಾಟವಾಗುತ್ತವೆ. ಒಂದು ಕಲಾ ಮಳಿಗೆಯಿಂದ ಮತ್ತೊಂದು ಮಳಿಗೆಗೆ ಸಾಗುವುದೇ ಕಷ್ಟ ಎನ್ನುವಂಥ ಮನಸ್ಸುಗಳ ಸಂಕಲನ ಅದು. ಸೂರ್ಯೋದಯದ ವೇಳೆಗೆ ತೆರೆ ಏಳಲಿರುವ ಈ ಚಿತ್ರ ಸಂತೆ ಕತ್ತಲೆ ಕವಿದು, ಕಲಾಸಕ್ತರಿಗೆ ಸುತ್ತಿಸುತ್ತಿ ಸುಸ್ತಾಗುವವರೆಗೂ ಹೆಚ್ಚೂ ಕಡಿಮೆ ರಾತ್ರಿ 9ರವರೆಗೂ ತನ್ನ ರಂಗನ್ನು ಉಳಿಸಿಕೊಂಡಿರುತ್ತದೆ. ಬೀದಿ ದೀಪದ ಹಾಗೂ ವಿಶೇಷ ದೀಪದ ಬೆಳಕಿನಲ್ಲಿ ಮತ್ತಷ್ಟ ಕಲಾತ್ಮಕವಾಗಿ ಮನಸೆಳೆಯುತ್ತದೆ.
ಈ ಆವೃತ್ತಿ ಹೆಣ್ಣು ಲೋಕಕ್ಕೆ ಸಮರ್ಪಣೆ
ಎಂಥದ್ದೇ ಸಾಂಸ್ಕೃತಿಕ ಕಾರ್ಯಕ್ರಮವಿದ್ದರೂ, ಅದನ್ನು ಉದ್ಘಾಟಿಸುವವರು ರಾಜಕಾರಣಿಗಳೇ ಆಗಿರುವುದರಿಂದ ಹಾಗೂ ಕರ್ನಾಟಕ ಸರ್ಕಾರ ಸುಮಾರು ಐವತ್ತು ಲಕ್ಷ ರೂಪಾಯಿಗಳನ್ನು ಚಿತ್ರಸಂತೆಗೆ ನೀಡಿರುವುದರಿಂದ, ಈ ಆವೃತ್ತಿಯ ಚಿತ್ರಸಂತೆಯನ್ನೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉದ್ಘಾಟಿಸಲಿದ್ದಾರೆ. ಚಿತ್ರಸಂತೆಯ ಪ್ರತಿ ಆವೃತ್ತಿಯೂ, ಒಂದೊಂದು ಸಾಮಾಜಿಕ ಕಾಳಜಿಯ ಮೇಲೆ ಒತ್ತು ನೀಡುತ್ತದೆ. ಈ ಬಾರಿಯ ಆವೃತ್ತಿ ಹೆಣ್ಣು ಲೋಕಕ್ಕೆ ಸೀಮಿತವಾಗಿದೆ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣಿನ ಮೇಲೆ ಸತತವಾಗಿ ನಡೆಯುತ್ತಿರುವ ಅತ್ಯಾಚಾರ, ಶೋಷಣೆ ಮತ್ತಿತರ ಸಂಗತಿಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿವೆ. ಹಾಗಾಗಿ ಹೆಣ್ಣು ಮತ್ತು ಹೆಣ್ಣು ಮಗು ಈ ಆವೃತ್ತಿಯ ಕೇಂದ್ರಬಿಂದು. “ಈ ಚಿತ್ರಸಂತೆಯ ಆವೃತ್ತಿಯನ್ನು ಹೆಣ್ಣು ಮಗುವಿಗೆ ಅರ್ಪಿಸಲಾಗಿದೆ” ಎನ್ನುತ್ತಾರೆ ಬಿ.ಎಲ್. ಶಂಕರ್.
ಸಂವಿಧಾನದ ಪೀಠಿಕೆಯ ಪ್ರದರ್ಶನ
ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ದುಡಿದ ಮಹನೀಯರು, ಹೆಣ್ಣು ಮಕ್ಕಳ ಸಾಕ್ಷರತೆಗೆ ಒತ್ತು ನೀಡಿದವರು ಮುಂತಾದವರ ಚಿತ್ರಗಳನ್ನೊಳಗೊಂಡಂತೆ ವಿಶೇಷ ಪರಿಕಲ್ಪನೆಯಡಿಯಲ್ಲಿ ಈ ಆವೃತ್ತಿಯನ್ನು ಆಯೋಜಿಸಲಾಗಿದೆ. ಸಂವಿಧಾನವೇ ಗಂಭೀರ ಸ್ಥಿತಿಯಲ್ಲಿರುವ ಇಂದಿನ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಪ್ರದರ್ಶಿಸಲಾಗುತ್ತದೆ. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಕಲಾ ರಸಿಕರು, ಜನಸಾಮಾನ್ಯರು, ಈ ಮುಂಜಾನೆಯಿಂದ ರಾತ್ರಿಯವರೆಗೆ ನಡೆಯಲಿರುವ ಕಲಾ ಸಂತೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ಆವೃತ್ತಿಗಳಿಗೆ ಹೋಲಿಸಿದರೆ, ಈ ಬಾರಿ ಹೆಚ್ಚು, ಅಂದರೆ ಹೆಚ್ಚು ಕಡಿಮೆ ನಾಲ್ಕು ಕೋಟಿ ರೂಪಾಯಿಗಳಷ್ಟು ವಹಿವಾಟು ಈ ಸಂತೆ ನಡೆಸಲಿದೆ. ದೇಶದ ವಿವಿಧ ಭಾಗಗಳಿಂದ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಬರುವ ಕಲಾವಿದರಿಗೆ ತಮ್ಮ ಕೃತಿಗಳನ್ನು ಪ್ರದರ್ಶಿಸಲು ಉಚಿತ ವ್ಯವಸ್ಥೆ, ಅವರ ಅತಿಥ್ಯದ ಎಲ್ಲ ಸೌಲಭ್ಯಗಳನ್ನು ಆಯೋಜರಕು ಮಾಡಿದ್ದಾರೆ.
ವಿಶೇಷಚೇತನರ ಕಲಾಕೃತಿ ಲಭ್ಯ
ಆಯೋಜಕರ ಪ್ರಕಾರ, ದೇಶದ 22 ರಾಜ್ಯಗಳ ಒಂದೂವರೆ ಸಾವಿರಕ್ಕೂ ಹೆಚ್ಚು ಕಲಾವಿದರು, ಈ ಚಿತ್ರಸಂತೆಯಲ್ಲಿ ಭಾಗವಹಿಸಲಿದ್ದಾರೆ. “ಕಲಾಕೃತಿಗಳ ಪ್ರದರ್ಶನಕ್ಕೆ ಅರ್ಜಿ ಸಲ್ಲಿಸಿದವರು ಮೂರು ಸಾವಿರಕ್ಕೂ ಹೆಚ್ಚು. ಈ ಪೈಕಿ ಆಯ್ದ ಒಂದೂವರೆ ಸಾವಿರ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಈ ಪೈಕಿ 189 ಮಂದಿ ಹಿರಿಯ ಕಲಾವಿದರು ಮತ್ತು 152 ಮಂದಿ ವಿಶೇಷ ಚೇತನ ಕಲಾವಿದರಿದ್ದಾರೆ.
ಈ ಬಾರಿ ಒಂದು ಕೊರತೆ ಕಾಡಲಿದೆ. ಕಳೆದ ಬಾರಿ ಶೇಷಾದ್ರಿಪುರಂ ಮೇಲು ಸೇತುವೆ ಸಮೀಪವೂ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಸಂಚಾರ ವ್ಯವಸ್ಥೆಗೆ ಅನಾನುಕೂಲವಾಗುವುದೆಂಬ ಯೋಚನೆಯಿಂದ ಅಲ್ಲಿ ಚಿತ್ರಕೃತಿಗಳ ಪ್ರದರ್ಶನ ಇರುವುದಿಲ್ಲ. ಹಾಗಾಗಿ ಕೆಲವು ಮಂದಿ ಕಲಾವಿದರಿಗೆ ಅವಕಾಶ ನೀಡಲು ಸಾಧ್ಯವಾಗಿಲ್ಲ ಎನ್ನುವುದು ಆಯೋಜಕರ ಸಮಝಾಯಿಷಿ. ಆದರೆ, ಪ್ರದರ್ಶನದಲ್ಲಿ ಭಾಗವಹಿಸಲು ಸಾಧ್ಯವಾಗದ ಕಲಾವಿದರಿಗಾಗಿ ಆನ್ ಲೈನ್ ಮೂಲಕ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಜನವರಿ 5ರಿಂದ ಫೆಬ್ರುವರಿ 5ರ ವರೆಗೆ ಒಂದು ತಿಂಗಳ ಕಾಲ ಅವರ ಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. (www̤̤.chitrasante.com)
ಚಿತ್ರಸಂತೆಯ ದಿನ ಜನದಟ್ಟಣೆ ಇರುವುದರಿಂದ ಒಂದು ದಿನ ಮುಂಚಿತವಾಗಿ ಅಂದರೆ ಜನವರಿ 4 ಶನಿವಾರದಂದು ಕಲಾವಿದರಾದ ಡಾ ಎಂ.ಎಸ್. ಮೂರ್ತಿ, ಎ. ರಾಮಕೃಷ್ಣಪ್ಪ, ಜಿ.ಎಲ್. ಭಟ್, ಸೂರ್ಯಪ್ರಕಾಶ್ ಗೌಡ, ನಿರ್ಮಲ್ ಕುಮಾರ್ ಸಿ ಎಸ್ ಅವರುಗಳಿಗೆ, ದೇವರಾಜ ಅರಸ್, ನಾಗರತ್ನಮ್ಮ, ವೈ ಸುಬ್ರಹ್ಮಣ್ಯರಾಜು, ಎಚ್.ಕೆ. ಕೇಜ್ರೀವಾಲ್ ಹಾಗೂ ಆರ್ಯಮೂರ್ತಿ ಅವರ ಹೆಸರುಗಳಲ್ಲಿ ಸ್ಥಾಪಿಸಲಾಗಿರುವ ಪ್ರತಿಷ್ಠಿತ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಪಾರ್ಕಿಂಗ್ ಗೆ ತೊಂದರೆ ಇಲ್ಲ
ಹಾಗಾದರೆ ವಾಹನಗಳಲ್ಲಿ ಬರುವವರ ಗತಿ ಏನು? ಎಂದು ಯೋಚಿಸಬೇಕಿಲ್ಲ. ಕ್ರೆಸೆಂಟ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಬಿಡಿಎ ಆವರಣ, ರೇಲ್ವೆ ಸಮಾನಾಂತರ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಪ್ಪತ್ತು ಆಯ್ದ ಸ್ಥಳಗಳಲ್ಲಿ ಮೊಬೈಲ್ ಶೌಚಾಲಯ ವ್ಯವಸ್ಥೆ, ಕಸದ ನಿರ್ವಹಣೆಗೆ ಕಸದ ಡಬ್ಬಿಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಹಿರಿಯ ನಾಗರಿಕರಿಗಾಗಿ ಸಂತೆಯಲ್ಲಿ ಬಗ್ಗಿ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಹಣವಿಲ್ಲವೆಂದು ಪರದಾಡುವ ಅಗತ್ಯವೂ ಇಲ್ಲ. ಏಕೆಂದರೆ ಸಂಚಾರಿ ಎಟಿಎಂ ವ್ಯವಸ್ಥೆಯೂ ಇಲ್ಲಿ ಲಭ್ಯ.
ವಾಹನ ಸೌಲಭ್ಯವಿಲ್ಲದವರು ನೊಂದುಕೊಳ್ಳುವ ಅಗತ್ಯವಿಲ್ಲ. ಚಿತ್ರಸಂತೆಗೆ ಆಗಮಿಸುವ ಕಲಾವಿದರು, ಕಲಾಸಕ್ತರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಿಂದ ಶಿವಾನಂದ ವೃತ್ತದ ಮೂಲಕ ವಿಧಾನ ಸೌಧದ ವರೆಗೆ ಫಿಡರ್ ಬಸ್ ಸೇವೆಯನ್ನು ಕಲ್ಪಿಸಲಾಗಿದೆ. ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಈ ಬಸ್ ಸಂಚಾರ ವ್ಯವಸ್ಥೆ ಇರುತ್ತದೆ.
ಹಾಗೆಂದು ಚಿತ್ರಸಂತೆಯ ಚಟುವಟಿಕೆಗಳು ಬೆಳಿಗ್ಗೆ 6 ಗಂಟೆಯಿಂದಲೇ ಆರಂಭಗೊಳ್ಳಲಿದೆ. ಹಾಗಾಗಿ ಸ್ವೆಟರ್, ಶಾಲು ಉಣ್ಣೆ ಟೋಪಿ ಹೊರತೆಗೆದು, ಚಳಿಯನ್ನು ಮೀರಿ ಕಲೆಯನ್ನು ಪ್ರೀತಿಸಲು ಸಜ್ಜಾಗಿ...