ಶಾಸಕರ ಅಭಿಪ್ರಾಯ ಹೊತ್ತು ದೆಹಲಿಗೆ ತೆರಳಲಿದ್ದಾರೆ ಸಿಎಂ ಸಿದ್ದರಾಮಯ್ಯ
ಅಧಿಕೃತ ಕಾರ್ಯಕ್ರಮಗಳು ಬೇರೆ ಇದ್ದರೂ ಅದರ ನೆಪದಲ್ಲಿ ಶಾಸಕರ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವರಿಷ್ಠರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.;
ಸಿಎಂ ಸಿದ್ದರಾಮಯ್ಯ
ರಾಜ್ಯ ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಬಡಿದಾಟ ಮೇಲ್ನೋಟಕ್ಕೆ ಮುಕ್ತಾಯವಾದಂತೆ ಕಂಡರೂ ತೆರೆಮರೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ನಡುವಿನ ಒಳಜಗಳ ದೆಹಲಿ ವರಿಷ್ಠರ ಅಂಗಳಕ್ಕೆ ಆಗಾಗ್ಗೆ ತಲುಪುತ್ತಲೇ ಇರುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ತಿಂಗಳು ಒಂದು ಮತ್ತು ಎರಡರಂದು ದೆಹಲಿಗೆ ತೆರಳಲಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಅವರು ಪಕ್ಷದ ವರಿಷ್ಠರನ್ನು ಸಹ ಭೇಟಿ ನೀಡಲಿದ್ದಾರೆ. ಈ ವೇಳೆ ರಾಜ್ಯ ರಾಜಕೀಯ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಅಧಿಕೃತ ಕಾರ್ಯಕ್ರಮಗಳು ಬೇರೆ ಇದ್ದರೂ ಅದರ ನೆಪದಲ್ಲಿ ಶಾಸಕರ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವರಿಷ್ಠರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಮೂರು ದಿನಗಳ ಸತತವಾಗಿ ಸಚಿವರ ಮತ್ತು ಶಾಸಕರೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ. ಮಂಗಳವಾರ ಸಭೆ ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್‌ನಲ್ಲಿ ಭಿನ್ನಮತ ಹೆಚ್ಚಳವಾಗಿರುವುದರಿಂದ ಸಚಿವರ ಮತ್ತು ಶಾಸಕರ ಸಭೆ ಮಹತ್ವ ಪಡೆದುಕೊಂಡಿದೆ. ನಾಲ್ಕು ದಿನಗಳ ಕಾಲ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿ ಅದನ್ನು ದೆಹಲಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ವರಿಷ್ಠರೊಂದಿಗೆ ಚರ್ಚಿಸಲಾಗುತ್ತದೆ ಎಂದು ಹೇಳಲಾಗಿದೆ.
ಈ ಮೊದಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಶಾಸಕರ ಮತ್ತು ಸಚಿವರ ಜತೆ ಪ್ರತ್ಯೇಕವಾಗಿ ಸಭೆ ನಡೆಸಿ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದರು. ಸಚಿವರ ಮತ್ತು ಶಾಸಕರ ನಡುವೆ ಇರುವ ಭಿನ್ನಮತವನ್ನು ಶಮನಗೊಳಿಸುವ ಪ್ರಯತ್ನ ಮಾಡಿದ್ದರು. ಅಲ್ಲದೇ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದರು. ಇದೇ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜಿಲ್ಲಾವಾರು ಸಚಿವರ ಮತ್ತು ಶಾಸಕರ ಸಭೆ ಆರಂಭಿಸಿದ್ದಾರೆ. ಮೂರು ದಿನಗಳ ನಡೆಯುವ ಸಭೆಯಲ್ಲಿ ಸಚಿವ ಮತ್ತು ಶಾಸಕರ ಅಭಿಪ್ರಾಯಗಳನ್ನು ಪಡೆಯುವುದರ ಜತೆಗೆ ಭಿನ್ನಮತವನ್ನು ಶಮಗನಗೊಳಿಸುವ ಪ್ರಯತ್ನ ಕೈಗೊಂಡಿದ್ದಾರೆ. ಇದರ ವರದಿಯನ್ನು ಹೈಕಮಾಂಡ್‌ಗೆ ತಿಳಿಸಲು ದೆಹಲಿಗೆ ತೆರಳುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ಯಾವ ಕಾರ್ಯಕ್ರಮ?
ಈ ನಡುವೆ, ಸಿದ್ದರಾಮಯ್ಯ ಆ.1ರಂದು ಸಂಜೆ ಆರು ಗಂಟೆಗೆ ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಮಾಹಿತಿ ಮತ್ತ ತಂತ್ರಜ್ಞಾನ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ “ಬ್ರಿಡ್ಜ್ ಟು ಬೆಂಗಳೂರು” ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಾಯಭಾರಿಗಳು ಭಾಗವಹಿಸಲಿದ್ದಾರೆ. ಆ. 2ರಂದು ಎಐಸಿಸಿ ಕಾನೂನು, ಮಾಹಿತಿ ಹಕ್ಕು ವಿಭಾಗ ವಿಜ್ಞಾನ ಭವನದಲ್ಲಿ ಆಯೋಜಿಸಿರುವ ಸಾಮಾಜಿಕ ನ್ಯಾಯ, ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಕೋನ ಕುರಿತಾದ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತಿತರರ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ವರಿಷ್ಠರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ರಾಜ್ಯ ರಾಜಕೀಯ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.