
ಶಾಸಕರ ವಿಶ್ವಾಸ ಗಳಿಕೆಗೆ ಸಿಎಂ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಆಹ್ವಾನವಿಲ್ಲವೇ?
ಮಹತ್ವದ ಸಭೆಗಳಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡಿಲ್ಲ ಎನ್ನಲಾಗಿದ್ದು, ಅವರು ಸಭೆಗಳಲ್ಲಿ ಭಾಗವಹಿಸುತ್ತಿಲ್ಲ. ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಶಾಸಕರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ಜಿಲ್ಲಾವಾರು ಶಾಸಕರ ಸಭೆ ಆರಂಭಿಸಿದ್ದಾರೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಸಚಿವರೊಂದಿಗಿನ ಅಸಮಾಧಾನ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಶಾಸಕರು ನೇರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳುವುದು ಈ ಸಭೆಗಳ ಮುಖ್ಯ ಉದ್ದೇಶವಾಗಿದೆ. ಇದು ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರ ಕುಂದುಕೊರತೆಗಳನ್ನು ಆಲಿಸಲು ಸಿಎಂ ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ.
ಈ ಮಹತ್ವದ ಸಭೆಗಳಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡಿಲ್ಲ ಎನ್ನಲಾಗಿದ್ದು, ಅವರು ಸಭೆಗಳಲ್ಲಿ ಭಾಗವಹಿಸುತ್ತಿಲ್ಲ. ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವದ ಸ್ಪರ್ಧೆಯ ಹಿನ್ನೆಲೆಯಲ್ಲಿ, ಈ ಸಭೆಗಳಿಂದ ಡಿ.ಕೆ. ಶಿವಕುಮಾರ್ ಅವರನ್ನು ಹೊರಗಿಟ್ಟಿರುವುದು ಹಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ. ಇತ್ತೀಚೆಗಷ್ಟೇ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದ ಮುಖ್ಯಮಂತ್ರಿಗಳು, ಇದೀಗ ಸರಣಿ ಜಿಲ್ಲಾ ಪ್ರವಾಸಗಳ ನಡುವೆಯೇ ಅವರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಲು ಮುಂದಾಗಿದ್ದಾರೆ.
ಇಂದು ಮೊದಲ ದಿನ ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳ ಸಭೆಗಳು ನಡೆಯಲಿವೆ. ಈ ಸಭೆಗಳು ಶಾಸಕರ ಅಸಮಾಧಾನವನ್ನು ಶಮನಗೊಳಿಸುವ ಬಲವಾದ ಪ್ರಯತ್ನ ಎಂಬುದು ರಾಜಕೀಯ ವಿಶ್ಲೇಷಕರ ಅಂಬೋಣ.