CET | ಮೇ 16ರಿಂದ ಕ್ರೀಡಾ ಕೋಟಾ ದಾಖಲೆ ಪರಿಶೀಲನೆ; ರಾಜ್ಯದಲ್ಲಿ ಓದಿದವರು ಅಂಕ ದಾಖಲಿಸುವ ಅಗತ್ಯ ಇಲ್ಲ -ಕೆಇಎ
ಎ ಮತ್ತು ವೈ ಕ್ಲಾಸ್ ಹೊರತುಪಡಿಸಿ, ಉಳಿದ ಕ್ಲಾಸ್‌ಗಳ ದಾಖಲೆಗಳ ಪರಿಶೀಲನೆಯನ್ನು ಇದೇ 20ರವರೆಗೆ ವಿಸ್ತರಿಸಲಾಗಿದೆ. ಮೇ 15ಕ್ಕೆ ಕೊನೆ ದಿನವಾಗಿತ್ತು. ಮೇ 20ರೊಳಗೆ ಸಮಯ ನಿಗದಿ ಮಾಡಿಕೊಂಡು ಬಂದು ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಕೆಇಎ ತಿಳಿಸಿದೆ.;
ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕ್ರೀಡಾ ಕೋಟಾದಡಿ ಸೀಟು ಪಡೆಯಲು ಇಚ್ಛಿಸುವವರ ಮೂಲ ದಾಖಲೆಗಳ ಪರಿಶೀಲನೆ ಮೇ 16ರಿಂದ 20ರವರೆಗೆ ನಡೆಯಲಿದೆ. ಕ್ರೀಡೆಗಳಲ್ಲಿ ಭಾಗವಹಿಸಿದ ಅರ್ಹರ ಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಅರ್ಹರು ಲಿಂಕ್‌ಗೆ ಹೋಗಿ ದಿನಾಂಕ ಮತ್ತು ಸಮಯವನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡು ಪರಿಶೀಲನೆಗೆ ಕೆಇಎ ಕಚೇರಿಗೆ ಬರಬೇಕು ಎಂದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಕ್ರೀಡಾ ಪ್ರವರ್ಗದಲ್ಲಿ ವಿದ್ಯಾರ್ಥಿಗಳ ಅರ್ಹತೆ ನಿರ್ಣಯಿಸುವುದಕ್ಕೆ ಸಂಬಂಧಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ತೀರ್ಮಾನವೇ ಅಂತಿಮ ಆಗಿರಲಿದೆ. ಈ ವಿಷಯದಲ್ಲಿ ಪ್ರಾಧಿಕಾರದ ಪಾತ್ರ ಏನೂ ಇರುವುದಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ದಾಖಲೆ ಪರಿಶೀಲನೆ ದಿನಾಂಕ ವಿಸ್ತರಣೆ
ಎ ಮತ್ತು ವೈ ಕ್ಲಾಸ್ ಹೊರತುಪಡಿಸಿ, ಉಳಿದ ಕ್ಲಾಸ್‌ಗಳ ದಾಖಲೆಗಳ ಪರಿಶೀಲನೆಯನ್ನು ಇದೇ 20ರವರೆಗೆ ವಿಸ್ತರಿಸಲಾಗಿದೆ. ಮೇ 15ಕ್ಕೆ ಕೊನೆ ದಿನವಾಗಿತ್ತು. ಮೇ 20ರೊಳಗೆ ಸಮಯ ನಿಗದಿ ಮಾಡಿಕೊಂಡು ಬಂದು ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕು.
ಹೊರಗಿನವರು ಅಂಕ ದಾಖಲಿಸಬೇಕು
ಕರ್ನಾಟಕದ ಹೊರಗಿನ ರಾಜ್ಯಗಳಲ್ಲಿ ವ್ಯಾಸಂಗ ಮಾಡಿರುವ ಆಯಾ ರಾಜ್ಯ ಮಂಡಳಿ, ಸಿಬಿಎಸ್‌ಸಿ, ಸಿಐಎಸ್‌ಸಿಇ ಬೋರ್ಡ್‌ಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ, ಅಂತಹವರು ಮಾತ್ರ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳನ್ನು ಲಿಂಕ್ ನಲ್ಲಿ ನಮೂದಿಸಬೇಕು.
ಕರ್ನಾಟಕದ ಪಿಯುಸಿ ಮಕ್ಕಳು ಸೇರಿ ರಾಜ್ಯದಲ್ಲಿ ಓದಿರುವ ಸಿಬಿಎಸ್‌ಸಿ, ಸಿಐಎಸ್‌ಸಿಇ ಬೋರ್ಡ್‌ಗಳ ವಿದ್ಯಾರ್ಥಿಗಳು ಲಿಂಕ್‌ನಲ್ಲಿ ಅಂಕಗಳನ್ನು ದಾಖಲಿಸುವ ಅಗತ್ಯ ಇರುವುದಿಲ್ಲ. ಅಂತಹವರು ಕೇವಲ ಪರೀಕ್ಷೆಯ ನೋಂದಣಿ ಸಂಖ್ಯೆಯನ್ನು ತಪ್ಪಿಲ್ಲದೆ ನಮೂದಿಸಬೇಕು. ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾಗಿದ್ದರೂ ಅಂತಹವರು ಕೂಡ ನೋಂದಣಿ ಸಂಖ್ಯೆ ನಮೂದಿಸಿದರೆ ಸಾಕು. ಒಂದು ವೇಳೆ ನೋಂದಣಿ ಸಂಖ್ಯೆ ತಪ್ಪಾಗಿದ್ದರೂ ಈಗ ಅದನ್ನು ಸರಿಪಡಿಸಿಕೊಳ್ಳಬಹುದು.
ಡಿಸಿಇಟಿ/ಪಿಜಿಸಿಇಟಿ ದಿನಾಂಕ ವಿಸ್ತರಣೆ
ಪಿಜಿಸಿಇಟಿ ಮತ್ತು ಡಿಸಿಇಟಿ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಿರುವವರಿಗೆ ಶುಲ್ಕ ಕಟ್ಟಲು ಮೇ 15ರವರೆಗೆ ಅವಕಾಶ ನೀಡಲಾಗಿದೆ. ಸಿಇಟಿಯಲ್ಲಿ ನೋಂದಣಿ ಮಾಡಿ ಅರ್ಜಿ ಸಲ್ಲಿಸಿರುವ ಹಾಗೂ ನಾಟಾ-25 ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ‍್ಯರ್ಥಿಗಳು ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಾತಿಗಾಗಿ ನಾಟಾ ಅಂಕಗಳನ್ನು ದಾಖಲಿಸಲು ಸದ್ಯದಲ್ಲೇ ಲಿಂಕ್ ಬಿಡುಗಡೆ ಮಾಡಲಾಗುವುದು ಎಂದು ಕೆಇಎ ತಿಳಿಸಿದೆ.