ರಾಜ್ಯದಲ್ಲಿದ್ದಾರೆ 19,690 ಶ್ರೀಮಂತ ಬಡವರು..! ಸಿಇಒ, ನಿರ್ದೇಶಕರ ಬಳಿ ಬಿಪಿಎಲ್ ಕಾರ್ಡ್..!
ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಅನರ್ಹರು ಬಿಪಿಎಲ್ ಕಾರ್ಡ್‌ದಾರರು ಇದ್ದಾರೆ.;
ರಾಷ್ಟ್ರದಲ್ಲಿ ಬಿಪಿಎಲ್ ಕಾರ್ಡ್ ಎಂದರೆ ಕೇವಲ ಪಡಿತರ ನೀಡುವ ಕಾರ್ಡ್ ಅಲ್ಲ... ಬದಲಿಗೆ ಬಡವರಿಗೆ ಆರೋಗ್ಯ, ವಸತಿ ಸೇರಿದಂತೆ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಇರುವ ಪ್ರಮುಖ ಅಸ್ತ್ರ..! ಹೀಗಾಗಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗೆ ಬಹಳಷ್ಟು ಬೇಡಿಕೆ ಇದೆ. ಬಿಪಿಎಲ್ ಕಾರ್ಡ್ ಇರುವವರಿಗೆ ಯೋಜನೆಗಳನ್ನು ಪಡೆಯಲು ರಿಯಾಯಿತಿ ಲಭ್ಯವಾಗುತ್ತದೆ.
ಆದರೆ, ರಾಜ್ಯದಲ್ಲಿ ಹಲವು ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಓ) ಸಹ ಬಡವರು..! ಆಶ್ಚರ್ಯ ಎನಿಸಿದರೂ ಇದು ಸತ್ಯ.. ಬಿಪಿಎಲ್ ಕಾರ್ಡ್ ಹೊಂದಿರುವವರ ಬಗ್ಗೆ ಆಹಾರ ಮತ್ತುನಾಗರಿಕ ಸರಬರಾಜು ಇಲಾಖೆ ಪರಿಶೀಲನಾ ಕಾರ್ಯ ನಡೆಸಿತು. ಈ ಸಂದರ್ಭದಲ್ಲಿ ಸಿಇಒಗಳು ಸಹ ಬಿಪಿಎಲ್ ಕಾರ್ಡ್ ಹೊಂದಿರುವುದು ಬೆಳಕಿಗೆ ಬಂದಿದೆ. ವಿವಿಧ ಕಂಪನಿಯ 19,690 ಸಿಇಒ/ನಿರ್ದೇಶಕರ ಬಳಿ ಬಿಪಿಎಲ್ ಕಾರ್ಡ್ ಇರುವುದು ಗೊತ್ತಾಗಿದೆ. ಬಿಪಿಎಲ್ ಪಡಿತರ ಕಾರ್ಡ್ ಪಡೆಯಲು ಕೆಲವು ಮಾನದಂಡಗಳನ್ನು ಸರ್ಕಾರವು ನಿಗದಿಪಡಿಸಿದೆ. ಅದು ಬಡವರಿಗೆ ಸಿಗಬೇಕು ಎಂಬುದು ಸರ್ಕಾರದ ನಿಯಮ. ಆದರೆ ಕಾರ್ಪೋರೇಟ್ ಕಂಪನಿಗಳ ಸಿಇಒಗಳು, ನಿರ್ದೇಶಕರು ಸಹ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಈ ಬಗ್ಗೆ ವಿಶೇಷ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿರುವ ಆಹಾರ ಇಲಾಖೆಯು ಇದೀಗ ಅವುಗಳ ರದ್ದತಿಗೆ ಮುಂದಾಗಿದೆ.
ಬೆಂಗಳೂರಿನಲ್ಲಿಯೇ ಅಧಿಕ ಅನರ್ಹ ಬಿಪಿಎಲ್ ಕಾರ್ಡ್
ಸಿಲಿಕಾನ್ ಸಿಟಿ ಬೆಂಗಳೂರು ಐಟಿ-ಬಿಟಿಯಲ್ಲಿ ವಿಶ್ವ ಖ್ಯಾತಿ ಪಡೆದಿದೆ. ಶ್ರೀಮಂತಿಕೆಯ ಜತೆ ಜತೆಗೆ ಬಡತನವನ್ನೂ ಸಹ ಹೊದ್ದು ಕೊಂಡಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ ಬೆಂಗಳೂರಲ್ಲಿಯೇ ಅತ್ಯಧಿಕ ಬಿಪಿಎಲ್ ಕಾರ್ಡ್ ಹೊಂದಿರುವುದು ಗಮನಾರ್ಹ. ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಅನರ್ಹರು ಬಿಪಿಎಲ್ ಕಾರ್ಡ್‌ದಾರರು ಇದ್ದಾರೆ ಎಂಬುದು ಆಹಾರ ಮತ್ತು ಸರಬರಾಜು ಇಲಾಖೆಯ ಲೆಕ್ಕಾಚಾರವಾಗಿದೆ. ಇದರಲ್ಲಿ ಕಾರ್ಪೋರೇಟ್ ಕಂಪನಿಯ ಸಿಇಒಗಳ ಬಳಿ ಬಿಪಿಎಲ್ ಕಾರ್ಡ್ ಇದೆ. ಶೀಘ್ರದಲ್ಲಿಯೇ ಆಹಾರ ಇಲಾಖೆಯು ಸರ್ಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಕೆ ಮಾಡಲಿದೆ.
ಆರ್ಥಿಕವಾಗಿ ಬಡ ಕುಟುಂಬಗಳಿಗೆ ಮಾತ್ರ ಮೀಸಲಾಗಿರುವ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ ಬೆಂಗಳೂರಿನಲ್ಲಿ ನಿರಂತರವಾಗಿ ಹೆಚ್ಚುತ್ತಿರುವುದು ಚರ್ಚೆಗಗೂ ಕಾರಣವಾಗಿದೆ. ನಗರದಲ್ಲಿ ಜೀವನಮಟ್ಟ ಉತ್ತಮವಾಗಿದ್ದು, ಲಕ್ಷಾಂತರ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದಿರುವುದು ಅಧಿಕಾರಿಗಳಿಗೆ ಅಚ್ಚರಿಯಾಗಿದೆ. ಅನೇಕರ ಬಳಿ ಖಾಸಗಿ ಮನೆ, ವಾಹನ, ಹಾಗೂ ಉತ್ತಮ ಆದಾಯ ಇದ್ದರೂ ಸಹ ಬಿಪಿಎಲ್ ಕಾರ್ಡ್ ಬಳಸಿ ಪಡಿತರ ಧಾನ್ಯ ಮತ್ತು ಅನಿಲ ಸಬ್ಸಿಡಿ ಪಡೆಯುತ್ತಿರುವುದಾಗಿ ಇಲಾಖೆಗೆ ದೂರುಗಳು ಬಂದಿವೆ. ಹೀಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮರುಪರಿಶೀಲನೆ ಅಭಿಯಾನ ಕೈಗೊಂಡಿದ್ದು, ನಿಜವಾಗಿಯೂ ಬಡ ಕುಟುಂಬಗಳಿಗೆ ಮಾತ್ರ ಕಾರ್ಡ್ ತಲುಪುವಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಕ್ರಮವಾಗಿ ಕಾರ್ಡ್ ಪಡೆದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
19,690ಮಂದಿ ಬಳಿಕ ಬಿಪಿಎಲ್ ಕಾರ್ಡ್
ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಸಿಇಒ ಮತ್ತು ನಿರ್ದೇಶಕರಾಗಿರುವ 19,690 ಮಂದಿ ಕಾನೂನುಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಗೊತ್ತಾಗಿದೆ. 25 ಲಕ್ಷ ರೂ.ಗಿಂತ ಅಧಿಕ ವಹಿವಾಟು ಹೊಂದಿರುವ 2,684 ಜನರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅಷ್ಟೇ ಅಲ್ಲ ಮೃತಪಟ್ಟವರ ಹೆಸರು ಮತ್ತು ನಕಲಿ ಬಿಪಿಎಲ್ ಕಾರ್ಡ್‌ಗಳನ್ನು ಬಳಸಿ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡಿತರ ಪಡೆಯುತ್ತಿರುವ ಅಘಾತಕಾರಿ ಸಂಗತಿಯೂ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ರೇಷನ್ ಕಾರ್ಡ್‌ಗಳು ಇಲಾಖೆಯಿಂದಲೇ ವಿತರಿಲ್ಪಟ್ಟಿರುವು ದು ವಿಶೇಷವಾಗಿದೆ. ಈ ಬಗ್ಗೆ ವಿಶೇಷ ಕಾರ್ಯಾಚರಣೆಯಲ್ಲಿ ರದ್ದು ಪಡಿಸಲು ಇಲಾಖೆ ಮುಂದಾಗಿದೆ.
ರದ್ದಾಗುವ ಪಟ್ಟಿಯಲ್ಲಿರುವ ಬಿಪಿಎಲ್ ಕಾರ್ಡ್‌ಗಳ ಅಂಕಿ-ಸಂಖ್ಯೆ
ಆಹಾರ ಇಲಾಖೆಯು ಅಕ್ರಮವಾಗಿರುವ ಪಡಿತರ ಚೀಟಿಗಳನ್ನು ಹೊಂದಿರುವವರ ಬಗ್ಗೆ ಪತ್ತೆ ಹಚ್ಚಿದ್ದು, ಯಾವೆಲ್ಲಾ ವರ್ಗಗಳಲ್ಲಿ ರದ್ದು ಮಾಡಬಹುದು ಎಂಬುದರ ಬಗ್ಗೆ ಪಟ್ಟಿ ಮಾಡಿದೆ. 6,16,196 ಮಂದಿ ಇ-ಕೆವೈಸಿ ಮಾಡಿಸದೆ ಇದ್ದು, ಅವರ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲು ಇಲಾಖೆ ಮುಂದಾಗಿದೆ. 1.20 ಲಕ್ಷ ರೂ.ಕ್ಕಿಂತ ಹೆಚ್ಚು ಆದಾಯದವರು 5,13,613 ಮಂದಿ ಇದ್ದು, ಅಂತಾರಾಜ್ಯ ಮೂಲಕ ಕಾರ್ಡ್ ಪಡೆದವರು 57,864 ಮಂದಿ ಇದ್ದಾರೆ. 7.5 ಎಕರೆಗೂ ಹೆಚ್ಚು ಭೂಮಿ ಇರುವವರು 33,456 ಮಂದಿ ಇದ್ದು, 6 ತಿಂಗಳಿಂದ ರೇಷನ್ ಪಡೆಯದವರು 19,893 ಮಂದಿ ಇದ್ದಾರೆ. ವಿವಿಧ ಕಂಪನಿಗಳ ನಿರ್ದೇಶಕರರು/ಸಿಇಒಗಳ ಬಳಿ19,690 ಕಾರ್ಡ್ ಇವೆ. 25ಲಕ್ಷ ರೂ. ವಹಿವಾಟು ಮೀರಿದವರ ಬಳಿ 2,684ಕಾರ್ಡ್ ಇವೆ. ಮೃತರ ಹೆಸರಲ್ಲಿ ರೇಷನ್ ಕಾರ್ಡ್ ಬಳಕೆ 1446 ಎಂಬುದು ಆಹಾರ ಇಲಾಖೆಯ ಅಂಕಿ-ಸಂಖ್ಯೆಯಾಗಿದೆ.
ಬಿಪಿಎಲ್ ಕಾರ್ಡ್ ವಿತರಣೆಗೆ ಇರುವ ಮಾನದಂಡಗಳು
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ವಿತರಣೆ ಪ್ರಕ್ರಿಯೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಬಡ ಕುಟುಂಬಗಳಿಗೆ ಮಾತ್ರ ಸೌಲಭ್ಯ ತಲುಪುವಂತೆ ಹಲವು ಕಟ್ಟುನಿಟ್ಟಿನ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಕುಟುಂಬದ ವಾರ್ಷಿಕ ಆದಾಯ, ಆಸ್ತಿ-ಭೂಮಿ ವಿವರಗಳು, ಹಾಗೂ ಜೀವನಮಟ್ಟ ಆಧಾರಿತ ಪರಿಶೀಲನೆ ನಡೆಸಿ ಕಾರ್ಡ್ ನೀಡಲಾಗುತ್ತದೆ. ಸ್ವಂತ ಮನೆ, ಕಾರು, ಟ್ರಾಕ್ಟರ್ ಅಥವಾ ಹೆಚ್ಚಿನ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್‌ಗೆ ಅರ್ಹರಾಗುವುದಿಲ್ಲ. ದಿನಗೂಲಿ ಕಾರ್ಮಿಕರು, ಅಸ್ಥಿರ ಉದ್ಯೋಗ ಹೊಂದಿರುವವರು, ವಿಧವೆ ಮಹಿಳೆಯರು, ಅಂಗವಿಕಲರು ಹಾಗೂ ನಿರ್ಗತಿಕ ವೃದ್ಧರಿಗೆ ಆದ್ಯತೆ ನೀಡಲಾಗುತ್ತದೆ. ಆಧಾರ್, ಆದಾಯ ಪ್ರಮಾಣ ಪತ್ರ ಮತ್ತು ಮನೆ-ಭೂಮಿ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿದ ಬಳಿಕವೇ ಕಾರ್ಡ್ ವಿತರಣೆ ನಡೆಯಲಿದೆ ಎಂಬುದು ಎಂಬುದು ಆಹಾರ ಇಲಾಖೆಯ ಅಭಿಪ್ರಾಯವಾಗಿದೆ.
ವಾರ್ಷಿಕ ಆದಾಯವು ನಗರ ಪ್ರದೇಶದಲ್ಲಿ1.20 ಲಕ್ಷ ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷ ರೂಪಾಯಿಕ್ಕಿಂತ ಕಡಿಮೆ ಇರಬೇಕು. ಅಲ್ಲದೆ ಆದಾಯ ತೆರಿಗೆ ಪಾವತಿಸಬಾರದು, 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರಬಾರದು ಮತ್ತು ಸ್ವಂತ ವಾಹನ (ಇಂಧನ ಚಾಲಿತ ದ್ವಿಚಕ್ರ ಅಥವಾ ತ್ರಿಚಕ್ರ ವಾಹನ ಹೊರತುಪಡಿಸಿ) ಹೊಂದಿರಬಾರದು. ಅನುದಾನಿತ ಶಾಲಾ-ಕಾಲೇಜು ನೌಕರರು ಕೂಡ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎಂದು ತಿಳಿಸಿದೆ.
ಮಾನದಂಡ ರಾಜ್ಯದ್ದಲ್ಲ, ಕೇಂದ್ರ ಸರ್ಕಾರದ್ದು
ಬಿಪಿಎಲ್ ಕಾರ್ಡು ಪಡೆಯಲು ವಾರ್ಷಿಕ ಆದಾಯ ಮಿತಿ 1.20 ಲಕ್ಷ ರು.ಗಿಂತ ಕಡಿಮೆ ಇರಬೇಕೆಂಬ ಮಾನದಂಡ ನಿಗದಿಮಾಡಿರುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ. ಈ ಬಗ್ಗೆ ಇತ್ತೀಚೆಗೆ ಆಹಾರ ಇಲಾಖೆಯ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಿಳಿಸಿದ್ದರು. ಅರ್ಹರಲ್ಲದವರು ಬಿಪಿಎಲ್ ಕಾರ್ಡು ಪಡೆದಿದ್ದರೆ ಅದನ್ನು ರದ್ದುಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಅರ್ಹರ ಬಿಪಿಎಲ್ ಕಾರ್ಡುಗಳು ರದ್ದಾಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ರದ್ದಾಗಿದ್ದರೆ ಅವರು ಮತ್ತೆ ಅರ್ಜಿ ಸಲ್ಲಿಸಿದಾಗ ಪರಿಶೀಲಿಸಿ ಹೊಸದಾಗಿ ನೀಡಬೇಕು ಎಂದು ಸಹ ಹೇಳಿದ್ದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಅರ್ಹ ಬಡವರಿಗೆ ಬಿಪಿಎಲ್ ಕಾರ್ಡ್‌ನಡಿ ರೇಷನ್ ಸಿಗಬೇಕೆಂಬುದು ನಮ್ಮ ಉದ್ದೇಶ. ದುರ್ಬಳಕೆ ಆಗುತ್ತಿರುವ ಮಾಹಿತಿ ಸಿಕ್ಕಿದ ಕಾರಣಕ್ಕೆ ವಿಶೇಷ ಕಾರ್ಯಾಚರಣೆ ಮೂಲಕ ಅನರ್ಹದಾರರನ್ನು ಪತ್ತೆ ಮಾಡಲಾಗಿದೆ. ಯಾವುದೇ ಮುಲಾಜಿಲ್ಲದೆ ಅಕ್ರಮ ಕಾರ್ಡ್‌ಗಳು ರದ್ದಾಗಲಿವೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ಕೋಟ್ಯಂತರ ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ ಮತ್ತು ಬಡವರ ಸಂಖ್ಯೆ ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕೇಂದ್ರ ಸರ್ಕಾರ ಹೇಳುವ ಬಡವರ ಸಂಖ್ಯೆಗಿಂತ ಅಧಿಕ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವುದು ಮಾತ್ರ ವಿಪರ್ಯಾಸ.