ಸ್ವಾಯತ್ತ ಸಂಸ್ಥೆಯಾಗಿ ʼಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರʼ: ಪ್ರೊ. ಪುರುಷೋತ್ತಮ ಬಿಳಿಮಲೆ

The Federal Interview: "ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ"ವನ್ನು ಮೈಸೂರು ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್)ದಿಂದ ಬೇರ್ಪಡಿಸಿ ಬೆಂಗಳೂರಿನಲ್ಲಿ ಸ್ವಾಯತ್ತವಾಗಿ ಸ್ಥಾಪಿಸಲು ಕೇಂದ್ರ ಒಪ್ಪಿಕೊಂಡಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಬಿಳಿಮಲೆ ತಿಳಿಸಿದ್ದಾರೆ.;

Update: 2025-01-31 01:30 GMT

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಲಭಿಸಿ 17 ವರ್ಷಗಳು ಕಳೆದಿದ್ದರೂ, ಕನ್ನಡದ ಶಾಸ್ತ್ರೀಯ ಅಧ್ಯಯನಕ್ಕೊಂದು ಸ್ವಾಯತ್ತ ಕೇಂದ್ರ ರಾಜ್ಯದಲ್ಲಿಲ್ಲ. ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುತುವರ್ಜಿಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ "ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ"ವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಈ ಬಗ್ಗೆ "ದ ಫೆಡರಲ್‌ ಕರ್ನಾಟಕ"ಕ್ಕೆ ಮಾಹಿತಿ ನೀಡಿದ್ದಾರೆ. ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರೊ. ಬಿಳಿಮಲೆ ಅವರು, ಕೇಂದ್ರ ಸರ್ಕಾರ ಸ್ವಾಯತ್ತ  "ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ" (Centre of Excellence for Studies  in Classical Kannada)ವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ. "ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ವಿವರ ನೀಡಿದ್ದೇನೆ," ಎಂದು ಪ್ರೊ. ಬಿಳಿಮಲೆ ತಿಳಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಭೇಟಿಯಾಗಿದ್ದಾಗ  ಈ ಭರವಸೆ ಸಿಕ್ಕಿದೆ. ಈಗಾಗಲೇ ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಶಾಸ್ತ್ರೀಯ ಅಧ್ಯಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅದನ್ನು ಮೈಸೂರಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜ್ (CIIL) ಸಂಸ್ಥೆಯಡಿ ಜೋಡಿಸಲಾಗಿದೆ. ಹಾಗಾಗಿ ಶಾಸ್ತ್ರೀಯ ಅಧ್ಯಯನ ಕೇಂದ್ರವನ್ನು ಸಿಐಐಎಲ್‌ನಿಂದ ಪ್ರತ್ಯೇಕಿಸಿ ಸ್ವಾಯತ್ತ "ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ" ವನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಪ್ರಧಾನ್‌ ಭರವಸೆ ನೀಡಿರುವುದಾಗಿ ಪ್ರೊ. ಬಿಳಿಮಲೆ ತಿಳಿಸಿದ್ದಾರೆ.

ಶಾಸ್ತ್ರೀಯ ಸ್ಥಾನಮಾನ ನೀಡುವುದು ಕೇಂದ್ರದ ಯೋಜನೆಯಾಗಿದೆ. ತಮಿಳುನಾಡಿನಲ್ಲಿ ಆಗಿನ ರಾಜಕೀಯ ಪರಿಸ್ಥಿತಿಯಲ್ಲಿ ಯುಪಿಎ ಸರ್ಕಾರದ ಅಂಗ ಪಕ್ಷವಾದ ಡಿಎಂಕೆ ಸರ್ಕಾರ ತಮಿಳು ಅಧ್ಯಯನ ಕೇಂದ್ರ ಸ್ಥಾಪಿಸಿತು. ಆದರೆ, ಕನ್ನಡವೂ ಸೇರಿದಂತೆ ಇತರ ಹತ್ತು ಶಾಸ್ತ್ರೀಯ ಭಾಷೆಗಳ ಅಧ್ಯಯನ ಕೇಂದ್ರಗಳು ರಚನೆಯಾಗಿಲ್ಲ. ಹಾಗಾಗಿ ಕೇಂದ್ರ ಸರ್ಕಾರವೇ ಸ್ವಾಯತ್ತ ಸಂಸ್ಥೆ ರಚನೆಗೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಕನ್ನಡ ಅಧ್ಯಯನ ಕೇಂದ್ರಗಳು ಕನ್ನಡದ ಕೆಲಸ ಮಾಡುತ್ತಿದ್ದರೂ ಅನುದಾನ ಮತ್ತಿತರ ಕೊರತೆಯಿಂದ ಅಂತಹ ಕಾರ್ಯಗಳು ನಡೆಯುತ್ತಿಲ್ಲ. ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಜೋಡಿಸಲ್ಪಟ್ಟಿರುವ ಸಿಐಐಎಲ್‌ ನಿರ್ವಹಿಸುತ್ತಿರುವ ಕನ್ನಡ ಭಾಷಾ ಅಧ್ಯಯನ ಕೇಂದ್ರಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ಆದರೆ, ಅದು ಸ್ವಾಯತ್ತ ಸಂಸ್ಥೆಯಾಗಿ ಬೆಂಗಳೂರಿನಲ್ಲಿ ರಚನೆಯಾಗುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಗುರುತಿಸಲ್ಪಟ್ಟಂತಾಗುತ್ತದೆ ಎಂದು ಪ್ರೊ. ಬಿಳಿಮಲೆ ವಿವರಿಸಿದ್ದಾರೆ.

"ಕನ್ನಡ ಅಧ್ಯಯನ ಕೇಂದ್ರವನ್ನು ಪ್ರತ್ಯೇಕಿಸಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರವೂ ಸಾಕಷ್ಟು ಅನುದಾನ ನೀಡಲಿದೆ. ಹಾಗಾಗಿ ಶಾಸ್ತ್ರೀಯ ಕನ್ನಡ ಅಧ್ಯಯನ ಸಂಬಂಧ ಏನು ಕೆಲಸ ಮಾಡಬಬುದು ಎಂಬುದರ ಬಗ್ಗೆ ಯೋಜನೆಯನ್ನು ಮಾಡಿಕೊಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ  ಧರ್ಮೇಂದ್ರ ಪ್ರಧಾನ ಕೋರಿಕೊಂಡಿದ್ದಾರೆ,"  ಎಂದು ಪ್ರಾಧಿಕಾರದ ಅಧ್ಯಕ್ಷರು ವಿವರಿಸಿದರು.

"ಪುಸ್ತಕ ಪ್ರಕಟಣೆ ಇತ್ಯಾದಿ ಕೆಲಸ ಕಾರ್ಯಗಳನ್ನು ಸಾಹಿತ್ಯ ಅಕಾಡೆಮಿಗಳು, ಪ್ರಕಾಶಕರು ಮಾಡುತ್ತಾರೆ. ಅದರಲ್ಲಿ ಯಾವ ಹೊಸತನವಿಲ್ಲ. ಶಾಸ್ತ್ರೀಯ ಕನ್ನಡ ಪ್ರಚಾರ ಮಾಡುವ ಸಂಬಂಧ ತಂತ್ರಜ್ಞಾನವನ್ನು ಹೇಗೆ ಬಳಸುವುದು ಎಂಬ ಬಗ್ಗೆ ಯೋಜನೆ ಕೊಡಿ. ಈ ಸಂಬಂಧ ನಾವು ಬೆಂಗಳೂರಿನಲ್ಲೇ ಕನ್ನಡ ವಿಧ್ವಾಂಸರ ಸಭೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿ," ಎಂದೂ ಕೇಂದ್ರ ಸಚಿವರು ಹೇಳಿದ್ದಾರೆ ಎಂದು ಪ್ರೊ. ಬಿಳಿಮಲೆ ವಿವರಿಸಿದರು.

ಕೌಶಲಾಭಿವೃದ್ಧಿ

ಪ್ರೊ. ಬಿಳಿಮಲೆ ಇತರ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕನ್ನಡ ಮಾತಾಡುವವರ ಕೊರತೆ ಹಾಗೂ ಕನ್ನಡಿಗರ ಉದ್ಯೋಗಾವಕಾಶ ಕುಂಠಿತಗೊಂಡಿರುವ ಬಗ್ಗೆ ವಿವರವಾಗಿ ಹೇಳಿದರು. ಜತೆಗೆ, ಕನ್ನಡಿಗರೂ ಕೌಶಲ್ಯಗಳನ್ನು ತಮ್ಮ ಶಿಕ್ಷಣದ ಜತೆಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಬೆಳಕು ಚೆಲ್ಲಿದರು.

ಜತೆಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಜತೆ ಸೇರಿಕೊಂಡು ಹೇಗೆ ಕನ್ನಡಾಭಿವೃದ್ಧಿ ಸಂಬಂಧ ಕೆಲಸ ಮಾಡಲಿದೆ ಎಂಬ ಬಗ್ಗೆ ವಿವರಿಸಿದರು.

ಕೆಪಿಎಸ್‌ಸಿ ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸುವ ಪರೀಕ್ಷಾ ಪತ್ರಿಕೆಗಳಲ್ಲಿ ಕನ್ನಡಾನುವಾದ ಕಳಪೆಯಾಗಿದ್ದು, ಪರಿಣಿತ ಅನುವಾದಕರ ಬಳಕೆ ಆಗದಿರುವ ಬಗ್ಗೆ ಬೆಳಕು ಚೆಲ್ಲಿದ ಪ್ರೊ. ಬಿಳಿಮಲೆ, ಕೇಂದ್ರ ಸರ್ಕಾರದ್ದೇ ಆದ ಸಿಐಐಎಲ್‌ ಸಂಸ್ಥೆ ನೆರವು ಸೇರಿದಂತೆ ಹಲವು ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜತೆಗೆ, ಕೃತಕ ಬುದ್ಧಿಮತ್ತೆ ಆಧರಿತ ತಂತ್ರಜ್ಞಾನಗಳ ಬಳಕೆಯಿಂದ ಕನ್ನಡಾನುವಾದಕ್ಕೆ ಏಟು ಬಿದ್ದಿರುವುದನ್ನು ಒಪ್ಪಿಕೊಂಡ ಅವರು ಈ ಸಂಬಂಧ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ "ದ ಫೆಡೆರಲ್‌ ಕರ್ನಾಟಕ"ದ ಜತೆ ಚರ್ಚಿಸಿದರು.

ಆ ವಿವರದ ಬಗ್ಗೆ ಈ ಲಿಂಕ್‌ ಕ್ಲಿಕ್‌ ಮಾಡಿ, ಸಂದರ್ಶನದ ಪೂರ್ಣಪಾಠ ನೋಡಬಹುದು.


Full View


Tags:    

Similar News