ಭೋವಿ ಅಭಿವೃದ್ಧಿ ನಿಗಮದ ಹಗರಣ | ಜೀವಾ ಆತ್ಮಹತ್ಯೆ ಪ್ರಕರಣ ತನಿಖೆ ಸಿಸಿಬಿ ಹೆಗಲಿಗೆ
ಸಿಐಡಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನ.22ರಂದು ಎಸ್.ಜೀವಾ ಅವರು ಬನಶಂಕರಿ ವ್ಯಾಪ್ತಿಯ ರಾಘವೇಂದ್ರ ಬಡಾವಣೆಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.;
ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಎಸ್. ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಆದೇಶಿಸಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಈಚೆಗೆ ಎಸ್.ಜೀವಾ ಅವರನ್ನು ಸಿಐಡಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಸಿಐಡಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಡೆತ್‌ನೋಟ್ ಬರೆದಿಟ್ಟು ನ.22ರಂದು ಎಸ್.ಜೀವಾ ಅವರು ಬನಶಂಕರಿ ವ್ಯಾಪ್ತಿಯ ರಾಘವೇಂದ್ರ ಬಡಾವಣೆಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ವಿರುದ್ಧ ಮೃತ ಜೀವಾ ಅವರ ಸೋದರಿ ಸಂಗೀತಾ ಬನಶಂಕರಿ ಠಾಣೆಗೆ ದೂರು ನೀಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಜೀವಾ ಅವರಿಗೆ ಡಿವೈಎಸ್ಪಿ ಕನಕಲಕ್ಷ್ಮಿ ಕಿರುಕುಳ ನೀಡಿದ್ದರು. ಅಲ್ಲದೇ 25 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಆ ಹಿನ್ನೆಲೆಯಲ್ಲಿ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಪ್ರಕರಣದ ತನಿಖೆಯನ್ನು ನಗರ ಪೊಲೀಸ್ ಆಯುಕ್ತರು ಸಿಸಿಬಿಗೆ ವಹಿಸಿದ್ದಾರೆ.
ಸಿಸಿಬಿಯ ಎಸಿಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಸದ್ಯ ಪ್ರಕರಣ ತನಿಖೆಯ ಎಲ್ಲ ದಾಖಲೆಗಳನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದೆ.
ಜೀವಾ ಬರೆದಿಟ್ಟಿದ್ದ 11 ಪುಟಗಳ ಡೆತ್‌ನೋಟನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುವುದು. ಜೀವಾ ಅವರ ಕೈ ಬರಹದ ಮಾದರಿ ಸಂಗ್ರಹಿಸಿ, ಡೆತ್‌ನೋಟ್ ನೈಜತೆ ತಿಳಿಯಲು ಬನಶಂಕರಿ ಠಾಣೆ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ನಂತರ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ನಡೆಸಲಾಗುವುದು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಭೋವಿ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ದಾಖಲೆಗಳನ್ನು ಒದಗಿಸುತ್ತಿದ್ದ 33 ವರ್ಷದ ಜೀವಾ ನ.22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದ ಅವ್ಯವಹಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಜೀವಾ ಅವರನ್ನು ನ.14 ರಿಂದ 23ರವರೆಗೆ ವೀಡಿಯೊ ಕಾನ್ಸರೆನ್ಸ್ ಮೂಲಕ ತನಿಖೆ ನಡೆಸುವಂತೆ ಸಿಐಡಿ ತನಿಖಾಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತ್ತು. ಆದರೆ, ನ.14 ರಂದು ಖುದ್ದು ವಿಚಾರಣೆಗೆ ಬರುವಂತೆ ಡಿವೈಎಸ್ಪಿ ಕನಕಲಕ್ಷ್ಮಿ ಹೇಳಿದ್ದರು. ಅದರಂತೆ ವಿಚಾರಣೆಗೆ ಹಾಜರಾದಾಗ ಜೀವಾ ಅವರ ಒಳ ಉಡುಪುಗಳನ್ನು ತೆಗೆಸಲಾಯಿತು. ಅಲ್ಲದೇ ಸೈನೇಡ್ ತಂದಿದ್ದೀರಾ?, ನೀವೆಲ್ಲಾ ಯಾಕೆ ಬದುಕಿದ್ದೀರಾ? ನೀನು ಮತ್ತು ನಿನ್ನ ತಂಗಿ ದುಡ್ಡು ಹೇಗೆ ಸಂಪಾದಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾಗಿ ಜೀವಾ ಸೋದರಿ ಬಳಿ ಹೇಳಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.