ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಅಕ್ರಮ| ಶ್ವಾನದಳ ಸಹಿತ ದಾಳಿ ನಡೆಸಿದ ಸಿಸಿಬಿ

ಕೇಂದ್ರ ಕಾರಾಗೃಹದ ಮೇಲೆ ಬೆಂಗಳೂರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಶನಿವಾರ ದಾಳಿ ನಡೆಸಿದ್ದಾರೆ.

Update: 2024-08-25 06:36 GMT
ಪರಪ್ಪನ ಕಾರಾಗೃಹದ ಮೇಲೆ ಶ್ವಾನ ದಳದಿಂದ ತಪಾಸಣೆ ನಡೆಸಲಾಯಿತು.
Click the Play button to listen to article

ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಬೆಂಗಳೂರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಶನಿವಾರ ದಾಳಿ ನಡೆಸಿದ್ದಾರೆ. ಪರಪ್ಪನ ಅಗ್ರಹಾರದ ಮೇಲೆ ನಾಲ್ಕು ತಿಂಗಳಲ್ಲಿ ಇದು ಎರಡನೇ ಬಾರಿಗೆ ನಡೆಸಿದ ಸಿಸಿಬಿ ದಾಳಿಯಾಗಿದೆ. ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ದೂರಿನ ಮೇರಿಗೆ ಈ ದಾಳಿ ನಡೆದಿದೆ. 

ಕೈದಿಗಳಿಗೆ ಮಾದಕ ವಸ್ತು ಪೂರೈಕೆ, ಮೊಬೈಲ್ ಬಳಕೆ ಸೇರಿ ಕೆಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪದ ಮೇಲೆ ಪೊಲೀಸರು ಪರಿಶೀಲನೆ ನಡೆಸಿದರು. 'ರೌಡಿಗಳಾದ ಸುನೀಲ್, ವಿಲ್ಸನ್ ಗಾರ್ಡನ್ ನಾಗ ಸೇರಿ ಹಲವು ರೌಡಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೌಡಿಗಳು ಮೊಬೈಲ್ ಮೂಲಕ ಹೊರಗಡೆ ಸಂಪರ್ಕ ಸಾಧಿಸಿ ದುಷ್ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಇತ್ತು. ಮೊಬೈಲ್, ಮಾರಕಾಸ್ತ್ರ, ಮಾದಕ ಪದಾರ್ಥ ಸೇರಿ ಹಲವು ವಸ್ತುಗಳ ಪತ್ತೆಗೆ ಶೋಧ ಕಾರ್ಯ ನಡೆಸಲಾಯಿತು. ಜೈಲಿನಲ್ಲಿ ಯಾವುದೇ ನಿಷೇಧಿತ ವಸ್ತು ಪತ್ತೆಯಾಗಿಲ್ಲ' ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.

ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಕಮಿಷನರ್ (ಅಪರಾಧ) ಚಂದ್ರಗುಪ್ತ, ಇದು ಸಾಮಾನ್ಯ ತಪಾಸಣೆಯಾಗಿದ್ದು, ಜೈಲಿನಲ್ಲಿ ಯಾವುದೇ ನಿಷೇಧಿತ ವಸ್ತು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ಪೊಲೀಸ್ ಉಪ ಕಮಿಷನರ್ (ಡಿಸಿಪಿ) ಅಪರಾಧ 1 ರ ಅಬ್ದುಲ್ ಅಹದ್ ಅವರ ನೇತೃತ್ವದಲ್ಲಿ ದಾಳಿಗಳನ್ನು ನಡೆಸಲಾಗಿದ್ದು, ಸಿಸಿಬಿಯ ಎರಡು ತಂಡಗಳು ಮತ್ತು ಬೆಂಗಳೂರು ಶ್ವಾನದಳವು ಶೋಧಕಾರ್ಯ ನಡೆಸಿತು. 18 ಮಹಿಳಾ ಅಧಿಕಾರಿಗಳು ಸೇರಿದಂತೆ 118 ಪೊಲೀಸ್ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

ಪರಪ್ಪನ ಅಗ್ರಹಾರದಲ್ಲಿ 4,100 ಪುರುಷರು ಮತ್ತು 1,100 ಮಹಿಳೆಯರು ಸೇರಿದಂತೆ 5,200 ಕ್ಕೂ ಹೆಚ್ಚು ಆರೋಪಿಗಳು ಇದ್ದಾರೆ. ಎಲ್ಲಾ 18 ಸಿಸಿಬಿ ಮಹಿಳಾ ಅಧಿಕಾರಿಗಳು ಮಹಿಳೆಯರು ವಾಸವಾಗಿರುವ ಬ್ಯಾರಕ್‌ಗಳಲ್ಲಿ ಶೋಧ ನಡೆಸಿದ್ದಾರೆ. ಮುಂಜಾನೆ 4.30 ರಿಂದ 7.30 ರವರೆಗೆ ಮೂರು ಗಂಟೆಗಳ ಕಾಲ ದಾಳಿ ನಡೆಯಿತು. 

Tags:    

Similar News