Caste Census Report | ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಭರವಸೆ

ಒಳಮೀಸಲಾತಿ ಜಾರಿಯ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಹಾಗೂ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ

Update: 2024-10-04 11:20 GMT

ಜಾತಿ ಗಣತಿ ವರದಿಯನ್ನು ಇಲಾಖೆಯ ಸಚಿವರೊಂದಿಗೆ ಹಾಗೂ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಜಾರಿ ಮಾಡುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೊಪ್ಪಳದ ಗಿಣಿಗೇರ ಏರ್ ಸ್ಟ್ರಿಪ್ ನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ಜಾತಿ ಗಣತಿ ಜಾರಿ ಮಾಡುವ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಯರೆಡ್ಡಿಯವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮುಂದಿನ ವಾರ ಹಿಂದುಳಿದ ವರ್ಗಗಳ ಇಲಾಖೆ ಸಚಿವರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಒಳಮೀಸಲಾತಿ ಜಾರಿ ಬಗ್ಗೆ ಪರಿಶೀಲನೆ

ಒಳಮೀಸಲಾತಿ ಜಾರಿ ತರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಒಳಮೀಸಲಾತಿ ಜಾರಿಯ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಹಾಗೂ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಜೆಡಿಎಸ್ ಕಾರ್ಯಾಧ್ಯಕ್ಷ ಜಿ.ಟಿ.ದೇವೇಗೌಡರು, ತಮ್ಮ ಪರ ಬ್ಯಾಟಿಂಗ್ ಮಾಡಿದ್ದಕ್ಕಾಗಿ ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದಾರೆ. ಜಿ.ಟಿ.ದೇವೇಗೌಡರು ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದು, ಅವರು ನೀಡಿದ ಹೇಳಿಕೆ ಸರಿಯಾಗಿಯೇ ಇರುತ್ತದೆ. ಬಿಜೆಪಿ ಮತ್ತು ಜೆಡಿಎಸ್ ನವರಿಗೆ ನನ್ನಿಂದಾಗಿ ಅವರ ಪಕ್ಷಗಳು ದುರ್ಬಲವಾಗುವ ಭಯ ಕಾಡುತ್ತಿದೆ ಎಂದರು.

ಊಹಾಪೋಹಗಳು ಬೇಡ

ಸಚಿವ ಸತೀಶ್ ಜಾರಕಿಹೊಳಿಯವರು ಪಕ್ಷದ ವರಿಷ್ಠರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆಯವರನ್ನು ಸತೀಶ್ ಜಾರಕಿಹೊಳಿಯವರು ಭೇಟಿಯಾಗುವುದು ತಪ್ಪೇನಲ್ಲ. ಇಲ್ಲಸಲ್ಲದ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದರು.

Tags:    

Similar News