Caste Census| ಜಾತಿ ಗಣತಿ ವರದಿ ಬಹಿರಂಗ: ಪರಿಶಿಷ್ಟರು ಮೊದಲು, ಎರಡನೇ ಸ್ಥಾನದಲ್ಲಿ ಲಿಂಗಾಯತರು ಮುಸ್ಲಿಮರು ನಾಲ್ಕನೇ ಸ್ಥಾನಕ್ಕೆ

ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯ ಪ್ರಮುಖ ಜಾತಿವಾರು ಅಂಕೆ-ಸಂಖ್ಯೆ ಸೋರಿಕೆಯಾಗಿದೆ.;

Update: 2025-04-12 14:44 GMT

ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯ ಪ್ರಮುಖ ಜಾತಿವಾರು ಅಂಕಿ-ಅಂಶ ಸೋರಿಕೆಯಾಗಿದೆ.

ಸಮೀಕ್ಷೆಯ ಪ್ರಕಾರ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮೊದಲ ಸ್ಥಾನದಲ್ಲಿದೆ. ಎರಡನೆಯ ಸ್ಥಾನದಲ್ಲಿ ಲಿಂಗಾಯತರು, ಮೂರನೇ ಸ್ಥಾನದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಹಾಗೂ ನಾಲ್ಕನೆಯ ಸ್ಥಾನದಲ್ಲಿ ಮುಸ್ಲಿಮರು , ಐದನೆಯ ಸ್ಥಾನದಲ್ಲಿ ಒಕ್ಕಲಿಗರು ಇದ್ದಾರೆ. 

ಆ ಪ್ರಕಾರ ಪರಿಶಿಷ್ಟ ಜಾತಿಯ ಜನಸಂಖ್ಯೆ 1,09,29,347 ಆಗಿದ್ದು, ಪ್ರವರ್ಗ 3ಬಿ ಯಲ್ಲಿ ಬರುವ ವೀರಶೈವ ಲಿಂಗಾಯತರು 81, 37,536 ಜನಸಂಖ್ಯೆ ಇದೆ. ಪ್ರವರ್ಗ 2ಎ ನಲ್ಲಿ ಬರುವ ಇತರೆ ಹಿಂದುಳಿದ ವರ್ಗಗಳ ಜನಸಂಖ್ಯೆ 77,78,209 ರಷ್ಟಿದೆ. ನಾಲ್ಕನೇ ಸ್ಥಾನದಲ್ಲಿ ಪ್ರವರ್ಗ 2ಬಿ ಯಲ್ಲಿ ಬರುವ ಮುಸ್ಲಿಂ ಜನಸಂಖ್ಯೆ 75, 25, 880 ಇದೆ. ಪ್ರವರ್ಗ 3ಎ ನಲ್ಲಿ ಬರುವ ಒಕ್ಕಲಿಗರು 72,99,577 ರಷ್ಟಿದ್ದಾರೆ.  ಪರಿಶಿಷ್ಟ ಪಂಗಡ 42, 81,289 ಜನಸಂಖ್ಯೆ ಹೊಂದಿದೆ.

ವರದಿಯಲ್ಲಿ ಪ್ರವರ್ಗ 1 ರಲ್ಲಿ ಬರುವ ಉಪ್ಪಾರ, ಗೊಲ್ಲ, ಗಂಗಮತಸ್ಥ ಸೇರಿ 99 ಜಾತಿಗಳನ್ನು ಪ್ರವರ್ಗ 1ಎ ಹಾಗೂ 1ಬಿ ಅಡಿ ವರ್ಗೀಕರಿಸಲಾಗಿದೆ. ಆ ಪ್ರಕಾರ ಪ್ರವರ್ಗ 1ಎ ಅಡಿ 34,69, 638 ಇದ್ದರೆ, ಪ್ರವರ್ಗ 1ಬಿ ಅಡಿ 73,92,313 ಜನಸಂಖ್ಯೆ ಇದೆ. ಪ್ರವರ್ಗ 1ಎ ಹಾಗೂ 1ಬಿ ಸೇರಿಸಿದರೆ 1,08, 88,951 ಜನಸಂಖ್ಯೆ ಹೊಂದಿದ್ದು, ಶೇ 13ರಷ್ಟು ಜನಸಂಖ್ಯೆ ಇದೆ. ಪ್ರವರ್ಗ ೨ಎ ಹಾಗೂ ೨ಬಿ ಸೇರಿ 1,53,04,089 ಜನಸಂಖ್ಯೆ ಇದೆ. ಪ್ರವರ್ಗ 3ಎ ಹಾಗೂ 3ಬಿ ಸೇರಿ ಒಟ್ಟು 1,54,37,113 ಜನಸಂಖ್ಯೆ ಹೊಂದಿವೆ.

ಒಟ್ಟಾರೆಯಾಗಿ ಸಿದ್ದರಾಮಯ್ಯನವರ ನಾಯಕತ್ವದ ಅಹಿಂದ ವರ್ಗ ಲಿಂಗಾಯತರು ಮತ್ತು ಒಕ್ಕಲಿಗರ ಜನಸಂಖ್ಯೆಯನ್ನು ಮೀರಿ ಬೆಳೆದಿದ್ದು, ಕಾಂಗ್ರೆಸ್‌ ಭದ್ರಕೋಟೆಯನ್ನಾಗಿಸುವ ಉತ್ಸಾಹವನ್ನು ಕಾಂಗ್ರೆಸ್‌ಗೆ ಹೆಚ್ಚಿಸಿದೆ. 

ಜಾತಿ ಜನಗಣತಿ ಮಾಹಿತಿ ಸೋರಿಕೆಯಿಂದ ತೀವ್ರ ವಿರೋಧ ಎದುರಿಸಿದ್ದ ರಾಜ್ಯ ಸರ್ಕಾರ ಕೊನೆಗೂ ಸಂಪುಟದ ಮುಂದೆ ವರದಿ ಮಂಡನೆ ಮಾಡಿತ್ತು. ಆದರೆ, ಈ ವರದಿಯ ವಿವರಗಳನ್ನು ಸೋರಿಕೆಯಾಗದಂತೆ ತಡೆಯುವುದು ಸರ್ಕಾರಕ್ಕೆ ಸವಾಲಾಗಿತ್ತು. ಈ ಹಿಂದೆ ವರದಿ ಅಂಶಗಳು ಸೋರಿಕೆಯಾದ ಕಾರಣ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಜಾರಿಗೆ ಪ್ರಬಲ ಜಾತಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಸೋರಿಕೆಯಾದ ಅಂಕಿ ಅಂಶಗಳು ಜಾತಿ ಜನಗಣತಿಯದ್ದಲ್ಲ ಎಂದು ಹೇಳುತ್ತಿರುವ ಹಿಂದುಳಿ ವರ್ಗಗಳ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಅವರು, ಮಂಡನೆಯಾಗಿರುವ ವರದಿಯ ರಹಸ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದರು.

ಸಂಪುಟದ ಮುಂದೆ ಮಂಡಿಸಿರುವ ವರದಿಯ ವಿವರಗಳು ಬಹಿರಂಗವಾದರೆ ಸಮಾಜದಲ್ಲಿ ಜಾತಿಗಳ ಮಧ್ಯೆ ಕಲಹಕ್ಕೆ ಕಾರಣವಾಗಬಹುದು. ಪ್ರಬಲ ಜಾತಿಗಳಾದ ಲಿಂಗಾಯತ ಹಾಗೂ ಒಕ್ಕಲಿಗರು ಸರ್ಕಾರದ ವಿರುದ್ಧ ತಿರುಗಿ ಬೀಳಬಹುದು ಎಂಬ ಆತಂಕದಿಂದ ವರದಿಯ ಅಂಶಗಳನ್ನು ಗೌಪ್ಯವಾಗಿಡಲು ನಿರ್ಧರಿಸಲಾಗಿತ್ತು.

ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರೇ ಖುದ್ದು ವರದಿಯ ಜವಾಬ್ದಾರಿ ಹೊತ್ತಿದ್ದು, ಗಣತಿಗೆ ಸಂಬಂಧಿಸಿದ ಸಾರಾಂಶವನ್ನು ಸಚಿವರಿಗೆ ತಲುಪಿಸುವ ಕಾರ್ಯ ನಿಭಾಯಿಸುತ್ತಿದ್ದಾರೆ. 

ಜಾತಿ ಜನಗಣತಿ ವರದಿಯ ಸಾರಾಂಶ ಪಡೆದ ಬಳಿಕ ಸಚಿವರು ಏ.17ರಂದು ನಡೆಯವ ವಿಶೇಷ ಸಂಪುಟ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡನೆ ಮಾಡಲಿದ್ದಾರೆ. ಆ ಬಳಿಕ ವರದಿ ಪರಿಶೀಲನೆ ನಡೆಸಲು ಸಂಪುಟ ಉಪ ಸಮಿತಿ ರಚಿಸುವ ಅಥವಾ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಿಂದ ಪರಿಶೀಲನೆ ನಡೆಸುವ ಕುರಿತು ತೀರ್ಮಾನಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಮಾಹಿತಿ ಸೋರಿಕೆ

ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಳಿಸಿದ ಕೆಲ ದಿನಗಳ ನಂತರ ಜಾತಿ ವಾರು ಅಂಕಿ ಅಂಶಗಳ ಮಾಹಿತಿ ಸೋರಿಕೆಯಾಗಿತ್ತು. ಅಂಕಿ ಅಂಶಗಳಲ್ಲಿ ಪರಿಶಿಷ್ಟರು, ಮುಸ್ಲಿಮರ ಸಂಖ್ಯೆ ಹೆಚ್ಚಿದ್ದು, ಪ್ರಬಲ ಸಮುದಾಯಗಳ ಸಂಖ್ಯೆ ಕಡಿಮೆ ಇತ್ತು. ವರದಿ ಬಹಿರಂಗವಾದರೆ ರಾಜಕೀಯ ಪ್ರಾತಿನಿಧ್ಯ ಕಳೆದುಕೊಳ್ಳಬಹುದು ಎಂಬ ಭೀತಿಯಿಂದ ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ವಿರೋಧ ವ್ಯಕ್ತಪಡಿಸಿದ್ದರು. 10 ವರ್ಷಗಳ ಹಿಂದೆ ನಡೆದ ಸಮೀಕ್ಷೆ ಇದಾಗಿದೆ. ಅಲ್ಲದೇ ಗಣತಿದಾರರು ಪ್ರತಿ ಮನೆ ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸದ ಕಾರಣ ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ್ದರು.

ಜಾತಿ  ಗಣತಿ ಮಾಹಿತಿ ಕುರಿತ ʼದ ಫೆಡರಲ್‌ ಕರ್ನಾಟಕʼ ವಿಶ್ಲೇಷಣೆ ಇಲ್ಲಿದೆ.


Full View



Tags:    

Similar News