Caste Census | ಜಾತಿ ಗಣತಿ ವರದಿ ಮಾಹಿತಿ ಬಹಿರಂಗ: ಅಹಿಂದ ಬಲ ಹೆಚ್ಚಿಸುವ ʼಸಿದ್ಧʼತಂತ್ರ?
ಹಗರಣಗಳು, ನಾಯಕತ್ವ ಬದಲಾವಣೆ ಬೇಡಿಕೆ, ಹನಿಟ್ರ್ಯಾಪ್ ಹಗರಣ, ಆಂತರಿಕ ಕಚ್ಚಾಟಗಳಿಂದ ಕಂಗೆಟ್ಟಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ʼಅಟೆನ್ಷನ್ ಡೈವರ್ಟ್" ಮಾಡುವ ಉದ್ದೇಶವೇ ಜಾತಿ ಗಣತಿ ಅಂಶಗಳ ಸೋರಿಕೆ ಎಂಬ ಚರ್ಚೆ ಶುರುವಾಗಿದೆ.;
ಜಾತಿ ಜನಗಣತಿ ವರದಿಯನ್ನು ನಿಜವಾಗಿಯೂ ರಾಜ್ಯ ಸರ್ಕಾರ ಒಪ್ಪಿಕೊಳ್ಳುತ್ತದೆಯೇ? ವಿಧಾನಮಂಡಲದಲ್ಲಿ ಮಂಡನೆಯಾಗಿ, ಜಾತಿವಾರು ಪ್ರಮಾಣಕ್ಕೆ ಸರಿಯಾಗಿ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಮಾತ್ರವಲ್ಲ, ರಾಜಕೀಯದಲ್ಲೂ ಸಮಪಾಲು ಸಿಗಲಿದೆಯೇ?
ಇವೆಲ್ಲಾ ಚರ್ಚೆಗಳು ಸಹಜ. ಆದರೆ, ಅದರ ಹಿಂದಿದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ರಾಜಕೀಯದ ಒಳಮರ್ಮ? ಹೌದೆನ್ನುತ್ತವೆ ಮೂಲಗಳು. ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ(ಅಹಿಂದ) ಶಕ್ತಿಯನ್ನು ಕರ್ನಾಟಕ ರಾಜಕೀಯದಲ್ಲಿ ಛಾಪಿಸುವುದು, ನಿಜವಾದ ಅಹಿಂದ ಮೇಲುಗೈಯ ಶಕ್ತಿಯನ್ನು ಪ್ರದರ್ಶಿಸುವುದು ಹಾಗೂ ಕಾಂಗ್ರೆಸ್‌ಗೆ ಅಹಿಂದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುವುದ ಹಿಂದಿನ ಉದ್ದೇಶ ಎನ್ನಲಾಗಿದೆ.
ಜತೆಗೆ, ಜಾತಿ ಗಣತಿ ಸೋರಿಕೆ ಮಾಹಿತಿಗಳ ಬಗ್ಗೆ ಸಾರ್ವಜನಿಕ ಚರ್ಚೆಗಳಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಮತ್ತಷ್ಟು ಬಲಗೊಳ್ಳುವಂತೆ ಮಾಡುವುದು ಹಾಗೂ ಪ್ರಮುಖವಾಗಿ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿ ಡಿ.ಕೆ. ಶಿವಕುಮಾರ್ ಅವರಿಗೆ ಹಿನ್ನಡೆಯುಂಟು ಮಾಡುವುದೂ ಹಲವು ಉದ್ದೇಶಗಳಲ್ಲಿ ಒಂದಾಗಿರುವ ಸಾಧ್ಯತೆಗಳೂ ಇವೆ.
ಈ ವರದಿ ಜಾರಿಗೆ ಬರುತ್ತದೆ ಎನ್ನುವುದಕ್ಕೆ ಸ್ಪಷ್ಟತೆಯಿಲ್ಲ. ಅಥವಾ ರಾಜ್ಯ ರಾಜಕಾರಣದಲ್ಲಿ ಪ್ರಭಾವಿಗಳಾಗಿರುವ ಲಿಂಗಾಯತರು ಮತ್ತು ಒಕ್ಕಲಿಗರ ವಿರೋಧದ ನಡುವೆ ಅಹಿಂದ ಪರವಾಗಿರುವ ವರದಿಯನ್ನು ಸರ್ಕಾರ ಒಪ್ಪಿಕೊಳ್ಳುವ ಧಾವಂತವಂತೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದ್ದಂತಿಲ್ಲ. ಹಾಗೆಂದ ಮಾತ್ರಕ್ಕೆ ವರದಿ ಒಪ್ಪಿಕೊಳ್ಳುವುದು ರಾಜಕೀಯವಾಗಿ ಅಥವಾ ಕಾನೂನಾತ್ಮಕವಾಗಿಯೂ ಅಷ್ಟೇನೂ ಸುಲಭಸಾಧ್ಯವಲ್ಲ.
ಅಹಿಂದ ಬಲ ಹೆಚ್ಚಳ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದ ನಾಯಕರೊಬ್ಬರು ಹೇಳುವುದು ಹೀಗೆ: "ಜಾತಿ ಜನಗಣತಿ ಮಂಡನೆಯ ಉದ್ದೇಶ, ಹಂತಹಂತವಾಗಿ ಅಹಿಂದ ಸಮೂದಾಯಗಳನ್ನು ಮತ್ತಷ್ಟು ಗಟ್ಟಿಯಾಗಿ ಕಾಂಗ್ರೆಸ್ ಜತೆಗಿಟ್ಟುಕೊಳ್ಳುವುದು ಮತ್ತು ಸಣ್ಣಪುಟ್ಟ ಅತ್ಯಂತ ಹಿಂದುಳಿದ ಸಮುದಾಯಗಳೂ ಕಾಂಗ್ರೆಸ್ ಅನ್ನು ನೆಚ್ಚಿಕೊಳ್ಳುವಂತೆ ಮಾಡುವುದು ಹಾಗೂ ಸಿದ್ದರಾಮಯ್ಯ ಅವರ ಅಹಿಂದ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವುದನ್ನು ಕಾರ್ಯಗತಗೊಳಿಸುವುದೇ ಆಗಿದೆ."
ಏಪ್ರಿಲ್ 17ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವ ಮುನ್ನ ವಿಷಯದ ಬಗ್ಗೆ ಮನದಟ್ಟು ಮಾಡಿಕೊಳ್ಳುವ ಉದ್ದೇಶದಿಂದ ಪೂರ್ವ ನಿಗದಿಯಂತೆ ಎಲ್ಲಾ ಸಚಿವರ ಕೈಸೇರಬೇಕಾಗಿದ್ದ ಜಾತಿ ಗಣತಿ ಪ್ರಮುಖ ಅಂಶಗಳ ಪುಟಗಳು ಸೋರಿಕೆಯಾಗಿರುವುದು ಅಚ್ಚರಿಯುಂಟುಮಾಡಿದೆ. ಸಚಿವ ಸಂಪುಟ ಸಭೆ ನಿಗದಿಪಡಿಸಿದ ರೀತಿಯಲ್ಲಿ ಸಚಿವರ ಕೈಗೆ ತಲುಪಬೇಕಾದ ಟಿಪ್ಪಣಿಗಳು ಸೋರಿಕೆ ಆಗಿರುವುದು ಉದ್ದೇಶ ಪೂರ್ವಕವೇ ಎಂದು ರಾಜಕೀಯ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ.
ಒಕ್ಕಲಿಗ ಅಥವಾ ಲಿಂಗಾಯತ ಸಮುದಾಯಕ್ಕೆ ಸೇರಿದ ಸಚಿವರು ಈ ವರದಿ ಜಾರಿಗೆ ಬರುವುದನ್ನು ತಡೆಯಲು ಬಹಿರಂಗವಾಗಿ ಸಾರ್ವಜನಿಕವಾಗಿ ಸಮೂದಾಯಗಳ ಒಳಗೆ ಚರ್ಚೆಯಾಗಲಿ ಎಂಬ ಉದ್ದೇಶದಿಂದ ಸೋರಿಕೆ ಮಾಡಿರಬಹುದು ಅಥವಾ, ಸಿದ್ದರಾಮಯ್ಯ ಪರವಾಗಿರುವ ಸಚಿವರು, ವರದಿ ಅಂಶಗಳು ಬಹಿರಂಗವಾದರೆ, ಅಹಿಂದ ವರ್ಗ ಮತ್ತಷ್ಟು ಒಗ್ಗಟ್ಟಾಗಬಹುದು ಎಂಬ ಕಾರಣಕ್ಕೆ ಸೋರಿಕೆ ಮಾಡಿರಬಹುದು. ಒಟ್ಟಿನಲ್ಲಿ ಈ ವರದಿಯನ್ನು ಸರ್ಕಾರ ಒಪ್ಪಿಕೊಳ್ಳುವುದು ಅಷ್ಟೇನೂ ಸುಲಭವಲ್ಲದ ಕಾರಣ, ಸೋರಿಕೆ ಅಂಶಗಳ ಆಧಾರದಲ್ಲಿ ಜನಾಭಿಪ್ರಾಯ ಮೂಡಲಿ ಎಂಬ ಉದ್ದೇಶವಂತೂ ಎದ್ದು ಕಾಣಿಸುತ್ತಿದೆ.
ಹಿನ್ನಡೆಯಲ್ಲ?
ಲಿಂಗಾಯತರು ಈ ʼಸೋರಿಕೆ ಪಟ್ಟಿ"ಯ ಎರಡನೇ ಸ್ಥಾನದಲ್ಲಿರುವುದು, ಅವರು ʼಅಂದುಕೊಂಡಷ್ಟು" ಹಿನ್ನಡೆಯನ್ನೇನೂ ಕಂಡಂತಾಗಿಲ್ಲ. ಬದಲಿಗೆ ಒಕ್ಕಲಿಗ ಸಮುದಾಯ ಜನಸಂಖ್ಯೆಯಲ್ಲಿ ಐದನೇ ಸ್ಥಾನಕ್ಕೆ ತಳ್ಳಲ್ಪಪಟ್ಟು ಲಿಂಗಾಯತರ ಜತೆಗೂಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ಪಪಡಿಸುವಷ್ಟೂ ಶಕ್ತಿ ಪಡೆದುಕೊಂಡಿಲ್ಲ ಎಂದು ವಿಶ್ಲೇಷಿಸಲಾಗಿದೆ. ಒಕ್ಕಲಿಗರು ಮತ್ತು, ಲಿಂಗಾಯತರು ಅಹಿಂದ ವರ್ಗಗಳನ್ನು, ಪ್ರಮುಖವಾಗಿ ದಲಿತರ ಮೊದಲ ಸ್ಥಾನವನ್ನು ವಿರೋಧಿಸವ ಧೈರ್ಯ ತೋರುವುದೂ ಚುನಾವಣಾ ರಾಜಕಾರಣ್ಕಕೆ ಹಿನ್ನಡೆಯಾಗಬಹುದು ಎಂಬ ಅಂಶವನ್ನು ಅರಿತುಕೊಂಡಿದ್ದಾರೆ. ಕೇವಲ ವರದಿ ಅವೈಜ್ಞಾನಿಕ ಎಂಬ ಕಾರಣವಿಟ್ಟುಕೊಂಡು ವರದಿಯನ್ನು ವಿರೋಧಿಸಬೇಕಷ್ಟೇ!
ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡೇ ಸಿದ್ದರಾಮಯ್ಯ ತಂಡ ತಂತ್ರ ರೂಪಿಸಿದೆ ಎನ್ನಲಾಗಿದೆ. ಈ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯರಿಗೆ ಪರ್ಯಾಯವಾಗಿ ಬೆಳೆದುನಿಂತಿರುವ ಒಕ್ಕಲಿಗ ನಾಯಕರಾದ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಮಹದಾಸೆಗಳಿಗೆ ಅಡೆತಡೆ ಉಂಟು ಮಾಡುವ ಉದ್ದೇಶವೂ ಇರಬಹುದು. ಈಗಾಗಲೇ ರಾಜಕಾರಣಿಗಳ ಹನಿಟ್ರ್ಯಾಪ್, ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮೊದಲಾದ ವಿಷಯಗಳು ಮುನ್ನೆಲೆಗೆ ಬಂದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಒಂದರ್ಥದಲ್ಲಿ ಕ್ರಮೇಣವಾಗಿ ಹಿನ್ನಡೆ ಕಾಣುತ್ತಿರುವುದು ಸದ್ಯಕ್ಕಂತೂ ಸ್ಪಷ್ಟ.
ರಾಹುಲ್ ಬೆಂಬಲ
ಮೂಲಗಳ ಪ್ರಕಾರ ಪ್ರಮುಖವಾಗಿ ಡಿ.ಕೆ. ಶಿವಕುಮಾರ್ ಅವರು ಜಾತಿಗಣತಿ ವರದಿಯನ್ನು ಸಂಪುಟಸಭೆಯಲ್ಲಿ ಮಂಡನೆ ಮಾಡುವುದಕ್ಕೂ ವಿರೋಧಿಸಿದ್ದರು. ಆದರೆ, ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿ ಬಗ್ಗೆ ನಿಲುವು ಪ್ರತಿಪಾದಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಒಪ್ಪಿಗೆ ಪಡೆದೇ ಸಿದ್ದರಾಮಯ್ಯ ಅವರು ʼಜಾಣ ನಡೆ" ತೋರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ವರದಿ ಮಂಡನೆ ಮಾಡುವುದನ್ನು ವಿರೋಧಿಸಲು ಡಿ.ಕೆ. ಶಿವಕುಮಾರ್ ಅವರಿಗೂ ಅಷ್ಟೇನೂ ಇಷ್ಟವಿಲ್ಲ ಎನ್ನಲಾಗಿದೆ.
ಸಂಪುಟ ಸಭೆಯಲ್ಲಿ ವರದಿ ಮಂಡನೆ ಮಾಡುವ ಮುನ್ನ "ರಾಹುಲ್ ಗಾಂಧಿಯವರು ಹೇಳಿದ್ದಾರೆ," ಎಂಬರ್ಥದ ಮಾತುಗಳನ್ನು ಸಿದ್ದರಾಮಯ್ಯ ಹೇಳಿದ್ದರು ಎನ್ನಲಾಗಿದ್ದು, ಎಲ್ಲಾ ಪ್ರಬಲ ಸಮುದಾಯದ ನಾಯಕರೂ ಅದನ್ನು ವಿರೋಧಿಸಲು ಸಾಧ್ಯವಾಗದಿರುವ ವಾತಾವರಣ ನಿರ್ಮಾಣವಾಗಿತ್ತು ಎಂದು ಹೆಸರು ಹೇಳಲಿಚ್ಛಿಸದ ಸಚಿವರೊಬ್ಬರು ದ ಫೆಡರಲ್ ಕರ್ನಾಟಕಕ್ಕೆ ಹೇಳಿದ್ದಾರೆ.
ಏನೇ ಇದ್ದರೂ, ಜಾತಿ ಗಣತಿ ವರದಿ ಅಂಗೀಕೃತವಾಗುತ್ತದೆಯೇ ಅಥವಾ ಎಲ್ಲ ಸಮುದಾಯಗಳ ನಾಐಕರ, ಸಚಿವರ, ಮಠಗಳ ಮನಸ್ಸು ಗೆಲ್ಲಲದೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಪ್ರಮುಖವಾಗಿ ಅಹಿಂದ ವರ್ಗಗಳ ಜಾತಿಗಳಲ್ಲಿ, ಪ್ರಮುಖವಾಗಿ ದಲಿತ ಸಮುದಾಯದ ಜನರಲ್ಲಿ ಒಗ್ಗಟ್ಟನ್ನು ಉಂಟು ಮಾಡುವಲ್ಲಿ ಈ ತಂತ್ರಗಾರಿಕೆ ಯಶಸ್ವಿಯಾಗಬಹುದು. ಅಹಿಂದ ವರ್ಗಗಳಲ್ಲಿ ಮುಂದಿನ ದಿನಗಳಲ್ಲಿ ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿನ ಮೀಸಲಾತಿ ಮಾತ್ರವಲ್ಲದೆ, ರಾಜಕೀಯವಾಗಿಯೂ ಹೆಚ್ಚು ಪ್ರಾತಿನಿಧ್ಯ ಸಿಗಬೇಕು ಎನ್ನುವ ಬೇಡಿಕೆಗಳು ಬರುವಂತೆ ಮಾಡಬಹುದು ಎಂದು ಆ ಸಚಿವರು ಅಂದಾಜಿಸಿದ್ದಾರೆ.
ಒಕ್ಕಲಿಗರು, ಲಿಂಗಾಯತರು
ಈ ನಡುವೆ ಒಕ್ಕಲಿಗನ್ನು ಪ್ರಮುಖವಾಗ ನೆಚ್ಚಿಕೊಂಡಿರುವ ಜೆಡಿಎಸ್ ಹಾಗೂ ಲಿಂಗಾಯತರನ್ನು ಬಹುವಾಗಿ ಅವಲಂಬಿತವಾಗಿರುವ ಬಿಜೆಪಿಗೆ, ಸೋರಿಕೆ ಅಂಶಗಳ ಪ್ರಕಾರ ಇರುವ ದಲಿತರ ನಂಬರ್‌ಒನ್ ಸ್ಥಾನ ಅಥವಾ ಪ್ರವರ್ಗ 1 ರಲ್ಲಿರುವ ಅತಿ ಹಿಂದುಳಿದ ವರ್ಗಗಳ ಸಮುದಾಯಗಳ 1 ಕೋಟಿಗೂ ಮೀರಿದ ಸಂಖ್ಯೆಯನ್ನು ವಿರೋಧಿಸುವ ಶಕ್ತಿ ಅಷ್ಟೇನೂ ಇರಲಾರದು ಎನ್ನಲಾಗಿದೆ. ದಲಿತರ ಎಡ-ಬಲ ಕಲಹಗಳು ಕೊನೆಯಾಗಿ ಇನ್ನಷ್ಟು ಒಗ್ಗಟ್ಟಾಗಿದ್ದೇ ಆದಲ್ಲಿ ಸಿದ್ದರಾಮಯ್ಯ ಅಥವಾ ಅವರ ಪಕ್ಷದ ಬೇರುಗಳನ್ನು ಮತ್ತಷ್ಟು ಬಲಗೊಳಿಸಲು ಸಹಾಯವಾಗುವ ಸಾಧ್ಯತೆಯಿದೆ. ಇದು ದಲಿತ ನಾಯಕತ್ವದ ಬೇಡಿಕೆಗೆ ಮತ್ತಷ್ಟು ಶಕ್ತಿ ತುಂಬಲಿದ್ದು, ಸಿದ್ದರಾಮಯ್ಯ ಬಳಿಕ ದಲಿತ ನಾಯಕತ್ವ ಕಾಂಗ್ರೆಸ್‌ಗೆ ಬೇಕು ಎನ್ನುವ ಬೇಡಿಕೆಗೂ ಇಂಬಾಗುವ ಸಾಧ್ಯತೆಗಳು ಹೇರಳವಾಗಿವೆ, ಇದು, ತ್ತೊಮ್ಮೆ ಸಿಎಂ ಸ್ಥಾನಾಕಾಂಕ್ಷಿಗಳಿಗೆ (ಪ್ರಮುಖವಾಗಿ ಡಿ.ಕೆ. ಶಿವಕುಮಾರ್) ತೊಡಕಾಗವಹುದು.
ಜಾತಿ ಜಾಗೃತಿ
ಜಾತಿಗಳು, ಸಮುದಾಯಗಳು ಧೃವೀಕರಣವಾಗುವ ಮತ್ತು ಆ ಮೂಲಕ ಆಯಾ ಜಾತಿಗಳು ತಮ್ಮ ಮೀಸಲು ಪ್ರಮಾಣದ ಅವಕಾಶಗಳ ಬಗ್ಗೆ ಇನ್ನಷ್ಟು ಬೇಡಿಕೆ ಹೆಚ್ಚಿಸುವಂತೆ ಮಾಡುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ವರದಿ ಅಂಗೀಕಾರವಾಗುತ್ತದೆಯೇ ಅಥವಾ ಇಲ್ಲವೇ, ಎಲ್ಲ ಜಾತಿ ಸಮುದಾಯಗಳಲ್ಲಿ ಜಾತಿ ಜಾಗೃತಿಯನ್ನುಂಟು ಮಾಡುವ ಬೆಳವಣಿಗೆ ಜಾತಿಗಣತಿ ವರದಿಯ ಟಿಪ್ಪಣಿ ಸೋರಿಕೆಯಿಂದ ಉಂಟಾಗಿದೆ. ಹಗರಣಗಳು, ನಾಯಕತ್ವ ಬದಲಾವಣೆ ಬೇಡಿಕೆ, ಹನಿಟ್ರ್ಯಾಪ್ ಹಗರಣ ಮತ್ತಿತರ ಆಂತರಿಕ ಕಚ್ಚಾಟ ಚಟುವಟಿಕೆಗಳಿಂದ ಕಂಗೆಟ್ಟಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ʼಅಟೆನ್ಷನ್ ಡೈವರ್ಟ್" ಮಾಡುವ ಉದ್ದೇಶವಿದ್ದಲ್ಲಿ, ಅದು ʼಜಾತಿ ಗಣತಿ ವರದಿ ಪ್ರಮುಖಾಂಶಗಳು ಸೋರಿಕೆಯಾಗುವ ಮೂಲಕʼ ಆಗಿದೆ!