ಜಾತಿ ಸಮೀಕ್ಷೆಗೆ ವಿಘ್ನಗಳ ಸರಮಾಲೆ: ಮೊದಲ ನೀರಸ ಆರಂಭ, ತಾಂತ್ರಿಕ ದೋಷಗಳೇ ಅಡ್ಡಿ

ಸಮೀಕ್ಷೆಯ ಪ್ರಗತಿಯು ರಾಜ್ಯದಾದ್ಯಂತ ಅತ್ಯಂತ ನಿಧಾನಗತಿಯಲ್ಲಿತ್ತು. ಸುಮಾರು 15 ಜಿಲ್ಲೆಗಳಲ್ಲಿ ಸಮೀಕ್ಷೆಗೊಳಪಟ್ಟ ಕುಟುಂಬಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು.

Update: 2025-09-23 04:45 GMT

ಸಾಂದರ್ಭಿಕ ಚಿತ್ರ

Click the Play button to listen to article

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು (ಜಾತಿವಾರು ಸಮೀಕ್ಷೆ) ಸೋಮವಾರ ಆರಂಭದಲ್ಲೇ ಹಲವು ವಿಘ್ನಗಳನ್ನು ಎದುರಿಸಿದೆ. ರಾಜ್ಯಾದ್ಯಂತ ತಾಂತ್ರಿಕ ದೋಷ, ಸಿಬ್ಬಂದಿ ತರಬೇತಿ ಕೊರತೆ ಮತ್ತು ಸಮುದಾಯಗಳ ವಿರೋಧದ ನಡುವೆ ಸಮೀಕ್ಷಾ ಕಾರ್ಯವು ನೀರಸ ಆರಂಭ ಕಂಡಿದೆ. ಮೊದಲ ದಿನದ ಅಂತ್ಯಕ್ಕೆ ಕೇವಲ 2,765 ಕುಟುಂಬಗಳ 10,642 ಮಂದಿಯ ದತ್ತಾಂಶವನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ.

ಸಮೀಕ್ಷೆಯ ಪ್ರಗತಿಯು ರಾಜ್ಯದಾದ್ಯಂತ ಅತ್ಯಂತ ನಿಧಾನಗತಿಯಲ್ಲಿತ್ತು. ಸುಮಾರು 15 ಜಿಲ್ಲೆಗಳಲ್ಲಿ ಸಮೀಕ್ಷೆಗೊಳಪಟ್ಟ ಕುಟುಂಬಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ವಿಜಯಪುರ, ಉತ್ತರ ಕನ್ನಡ, ಉಡುಪಿ, ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ತಲಾ ಏಳು ಕುಟುಂಬಗಳ ಸಮೀಕ್ಷೆಯಾದರೆ, ಬೆಂಗಳೂರು ನಗರ, ಮೈಸೂರು ಮತ್ತು ತುಮಕೂರಿನಂತಹ ಪ್ರಮುಖ ಜಿಲ್ಲೆಗಳಲ್ಲಿ ತಲಾ ಒಂದು ಕುಟುಂಬದ ಸಮೀಕ್ಷೆಯಷ್ಟೇ ನಡೆದಿದೆ ಎಂಬುದು ಸಿದ್ಧತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಆದರೆ, ಹಾವೇರಿ ಜಿಲ್ಲೆಯು 680 ಕುಟುಂಬಗಳ ಸಮೀಕ್ಷೆ ನಡೆಸುವ ಮೂಲಕ ಮೊದಲ ದಿನ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡಿದೆ.

ತೀವ್ರ ಆಕ್ಷೇಪ

ಈ ನಡುವೆ, ಸಮೀಕ್ಷೆಯ ಕಾರ್ಯವಿಧಾನದ ಬಗ್ಗೆ ಸಮುದಾಯಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿಯು, ಸರಿಯಾದ ಸಿದ್ಧತೆಗಳಿಲ್ಲದೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಈ ಪ್ರಕ್ರಿಯೆಯನ್ನು ಮೂರು ತಿಂಗಳು ಮುಂದೂಡಬೇಕೆಂದು ಆಗ್ರಹಿಸಿದೆ. ಸಮಿತಿಯ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಗಣತಿದಾರರಿಗೆ ಸೂಕ್ತ ತರಬೇತಿ ನೀಡಿಲ್ಲ ಮತ್ತು ಸಮೀಕ್ಷೆಯ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ.

ಮತ್ತೊಂದೆಡೆ, ರಾಜ್ಯ ಹಳ್ಳಿಕಾರ ಸಂಘವು ತಮ್ಮ ಸಮುದಾಯದ ಜನರು ಜಾತಿ ಕಾಲಂನಲ್ಲಿ ಕಡ್ಡಾಯವಾಗಿ 'ಹಳ್ಳಿಕಾರ' ಎಂದೇ ನಮೂದಿಸುವಂತೆ ಕರೆ ನೀಡಿದೆ. ಇದರಿಂದ ಸಣ್ಣ ಸಮುದಾಯವಾಗಿರುವ ತಮಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಸಂಘವು ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 12.43 ಲಕ್ಷ ಕುಟುಂಬಗಳ ಸಮೀಕ್ಷೆ ಗುರಿ ಹೊಂದಲಾಗಿದ್ದು, ಬೆಸ್ಕಾಂ ಮೀಟರ್‌ಗಳ ಆರ್.ಆರ್. ಸಂಖ್ಯೆ ಬಳಸಿ ಜಿಯೋ-ಟ್ಯಾಗಿಂಗ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ. ಆದಾಗ್ಯೂ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ತರಬೇತಿ ಪೂರ್ಣಗೊಳ್ಳದ ಕಾರಣ ಸಮೀಕ್ಷೆ ಆರಂಭ ವಿಳಂಬವಾಗಿದೆ ಎಂದು ವರದಿಯಾಗಿದೆ.

Tags:    

Similar News