ಜಾತಿಗಣತಿ -2025 | ಸಮೀಕ್ಷೆಯಲ್ಲಿ ಭಾಗಿ ಜನರ ಇಚ್ಛೆಗೆ ಬಿಟ್ಟ ಆಯೋಗ ; ವಿಶ್ವಾಸ ಕಳೆದುಕೊಳ್ಳಲಿದೆಯೇ ಜಾತಿಗಣತಿ?

ಪ್ರತಿಯೊಬ್ಬ ನಾಗರಿಕರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯ ದತ್ತಾಂಶವನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಉದ್ದೇಶವಿದ್ದರೂ ಸಮೀಕ್ಷೆಯಲ್ಲಿ ಭಾಗಿಯಾಗುವುದನ್ನು ಜನರ ಸ್ವಇಚ್ಛೆಗೆ ಬಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.

Update: 2025-09-27 09:44 GMT

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ಹೊಸ ವಿವಾದ, ಚರ್ಚೆಗೆ ವೇದಿಕೆ ಒದಗಿಸಿದೆ. ಸಮೀಕ್ಷೆಯಲ್ಲಿ ಭಾಗಿಯಾಗುವುದು, ಮಾಹಿತಿ ನೀಡುವುದು ʼಐಚ್ಛಿಕʼ ಎಂಬ ಹಿಂದುಳಿದ ವರ್ಗಗಳ ಆಯೋಗದ ಸ್ಪಷ್ಟನೆ ಸಮೀಕ್ಷೆಯ ಆಶಯವನ್ನೇ ಬುಡಮೇಲು ಮಾಡುವ ಸಾಧ್ಯತೆಗಳಿವೆ. 

2015 ರಲ್ಲಿ ನಡೆಸಿದ ಎಚ್‌.ಕಾಂತರಾಜು ಸಮೀಕ್ಷೆ ಹಾಗೂ 2024ರಲ್ಲಿ ಜಯಪ್ರಕಾಶ್ ಹೆಗ್ಡೆ ಸಮೀಕ್ಷೆ ವರದಿಗಳು ಸಂಪೂರ್ಣ ಅವೈಜ್ಞಾನಿಕ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಳೆಯ ವರದಿ ಕೈ ಬಿಟ್ಟು ಹೊಸ ಸಮೀಕ್ಷೆ ಆರಂಭಿಸಿದೆ. ಪ್ರತಿಯೊಬ್ಬ ನಾಗರಿಕರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ದತ್ತಾಂಶವನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಉದ್ದೇಶವಿದ್ದರೂ ಸಮೀಕ್ಷೆಯಲ್ಲಿ ಭಾಗಿಯಾಗುವುದನ್ನು ಜನರ ಸ್ವಇಚ್ಛೆಗೆ ಬಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.

ಕಾಂತರಾಜು ವರದಿ ಹತ್ತು ವರ್ಷ ಹಳೆಯ ಅಂಕಿ ಅಂಶ ಒಳಗೊಂಡಿದೆ. ತಮ್ಮ ಸಮುದಾಯಗಳ ಜನಸಂಖ್ಯೆಯನ್ನು ನಿಖರವಾಗಿ ದಾಖಲಿಸಿಲ್ಲ ಎಂದು ಪ್ರಬಲ ಸಮುದಾಯಗಳಾದ ಲಿಂಗಾಯತರು  ಹಾಗೂ ಒಕ್ಕಲಿಗರು ವರದಿ ವಿರೋಧಿಸಿದ್ದರು. ವರದಿ ಜಾರಿ ಮಾಡದಂತೆ ಸರ್ಕಾರದ ಮೇಲೂ ತೀವ್ರ ಒತ್ತಡ ಹೇರಲಾಗಿತ್ತು. ಇದಕ್ಕೆ ಮಣಿದ ರಾಜ್ಯ ಸರ್ಕಾರವು ಹೊಸದಾಗಿ ಸಮೀಕ್ಷೆ ನಡೆಸಲು ತೀರ್ಮಾನ ಕೈಗೊಂಡು, ಸೆ.22 ರಿಂದ ಸಮೀಕ್ಷೆಯನ್ನೂ ಆರಂಭಿಸಿದೆ.

ವಿವಾದ ಸೃಷ್ಟಿಸಿದ ಹೊಸ ಜಾತಿಗಳು

ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿದ ಜಾತಿಪಟ್ಟಿಯಲ್ಲಿ ಹಿಂದೂ ಹೆಸರಿನ ಮತಾಂತರ ಕ್ರಿಶ್ಚಿಯನ್‌ ಜಾತಿಗಳನ್ನೂ ಸಮೀಕ್ಷೆಗೆ ಸೇರಿಸಲಾಗಿತ್ತು. ಇದಕ್ಕೆ ದಲಿತರು, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ವರ್ಗದ ಜಾತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಬಳಿಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಹೊಸ ಜಾತಿಗಳನ್ನು ಸಮೀಕ್ಷೆಯಿಂದ ಕೈ ಬಿಟ್ಟರೂ ಆಯೋಗದ ಕಾರ್ಯವಿಧಾನ ಪ್ರಶ್ನಿಸಿ ಹಾಗೂ ಜಾತಿಗಣತಿಯನ್ನೇ ರದ್ದು ಮಾಡುವಂತೆ ವಿವಿಧ ಸಮುದಾಯಗಳು ಹಾಗೂ ಜಾತಿ ಸಂಘಟನೆಗಳು ಹೈಕೋರ್ಟ್‌ ಮೊರೆ ಹೋಗಿದ್ದವು.

ವಕೀಲ ಕೆ.ಎನ್‌.ಸುಬ್ಬಾರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿಸರ್ಕಾರವು, ಜಾತಿ ಮತ್ತು ಉಪಜಾತಿಗಳ ನಡುವೆ ಎತ್ತಿ ಕಟ್ಟುತ್ತಿದೆ. ಆದ್ದರಿಂದ ಸರ್ಕಾರದ ಜಾತಿ ಜನಗಣತಿ ರದ್ದು ಮಾಡಬೇಕು ಎಂದು ಕೋರಲಾಗಿತ್ತು. ಜಾತಿ ಗಣತಿ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ, 15 ದಿನಗಳಲ್ಲಿ ಸರ್ಕಾರ ತರಾತುರಿಯಲ್ಲಿ ಜಾತಿಗಣತಿ ಅಥವಾ ಸಮೀಕ್ಷೆ ನಡೆಸಲು ಮುಂದಾಗಿದೆ. ದಸರಾ ರಜೆಯಲ್ಲಿ ಜನರು ಹಬ್ಬ ಹರಿದಿನಗಳಲ್ಲಿ ಭಾಗಿಯಾಗಿರುವಾಗ ಗಣತಿ ಮಾಡುವುದು ಸರಿಯಲ್ಲ ಎಂದು ವಾದಿಸಿದ್ದರು.

ಮತ್ತದೇ ಗೊಂದಲ ಮುಂದುವರಿಯುವ ಆತಂಕ

ಕಾಂತರಾಜು ಆಯೋಗದ ವರದಿಯಲ್ಲಿ ಜಾತಿವಾರು ಜನಸಂಖ್ಯೆಯ ಅಂಕಿ ಅಂಶ ಸಮರ್ಪಕವಾಗಿಲ್ಲ ಎಂಬ ನೆಪವೊಡ್ಡಿ ವರದಿ ಜಾರಿಗೆ ಪ್ರಬಲ ವರ್ಗಗಳ ವಿರೋಧ ವ್ಯಕ್ತಪಡಿಸಿದ್ದವು.

ಈಗ ಸಮೀಕ್ಷೆಯಲ್ಲಿ ಭಾಗಿಯಾಗುವುದನ್ನು ಜನರ ಇಚ್ಛೆಗೆ ಬಿಟ್ಟಿರುವುದರಿಂದ ಜನಸಂಖ್ಯೆಯಲ್ಲಿ ಮತ್ತದೇ ಏರುಪೇರು ಆಗುವ ಸಾಧ್ಯತೆ ಇದ್ದು, ಗೊಂದಲ ಮುಂದುವರಿಯುವ ಮುನ್ಸೂಚನೆ ಎದುರಾಗಿದೆ.

ಜಾತಿಗಣತಿ ರದ್ದುಪಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದ ಸಮುದಾಯಗಳು ಈಗ ಜಾತಿಗಣತಿಯಿಂದ ದೂರ ಉಳಿಯುವ ಆತಂಕವಿದ್ದು, ಮತ್ತದೇ ವಿರೋಧಾಭಾಸಗಳು ಎದುರಾಗುವ ಆತಂಕವಿದೆ. ಕೇಂದ್ರ ಸರ್ಕಾರ ನಡೆಸುವ ಜಾತಿಗಣತಿಯಲ್ಲಿ ಮಾಹಿತಿ ನೀಡಬಹುದು ಎಂಬ ಉಡಾಫೆಯಿಂದ ರಾಜ್ಯ ಸರ್ಕಾರ ಸಮೀಕ್ಷೆಯಲ್ಲಿ ಪಾಲ್ಗೊಳ್ಳದಿರುವ ಸಾಧ್ಯತೆಯೂ ಹೆಚ್ಚಿದೆ ಎನ್ನಲಾಗಿದೆ.

ಸಮೀಕ್ಷೆಯಲ್ಲಿ ಜನ ಭಾಗಿಯಾಗದಿದ್ದರೆ ಏನಾಗಲಿದೆ?

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಜನರು ಭಾವಹಿಸುವುದನ್ನು ಐಚ್ಛಿಕಗೊಳಿಸಿದ ಆಯೋಗದ ನಿರ್ಧಾರದಿಂದ ವರದಿಯಲ್ಲಿ ಸಂಗ್ರಹವಾಗುವ ಅಂಕಿ ಅಂಶಗಳು ಅಪೂರ್ಣವಾಗುವ ಸಾಧ್ಯತೆ ಇದೆ. ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಿದರೆ ಮಾತ್ರ ವರದಿ ವೈಜ್ಞಾನಿಕವಾಗಿರಲಿದೆ. ಐಚ್ಛಿಕವಾದರೆ ಗಣತಿಯ ಫಲಿತಾಂಶ ಅರೆಬರೆ ಎನಿಸಲಿದೆ. ಸಮುದಾಯಗಳ ಜನಸಂಖ್ಯೆ ಏರುಪೇರಾಗಿ ಮತ್ತೆ ಸಂಘರ್ಷವಾಗಬಹುದು, ವರದಿ ಮೂಲೆಗುಂಪಾಗಬಹುದು ಎಂಬ ಆತಂಕವೂ ಎದುರಾಗಿದೆ.

ಸಮೀಕ್ಷೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯದ ಸ್ಥಿತಿಗತಿಯ ಚಿತ್ರಣವೇ ಬದಲಾಗಬಹುದು. ಇದರಿಂದ ಸಮುದಾಯಗಳಿಗೆ ಮೀಸಲಾತಿ ಹಾಗೂ ಯೋಜನೆ ಜಾರಿಗೂ ಸರ್ಕಾರಕ್ಕೆ ತೊಡಕಾಗುವ ಸಾಧ್ಯತೆ ಇದೆ.

ಮೂರರಲ್ಲಿ ಮತ್ತೊಂದು ವರದಿ

ನೂರಾರು ಕೋಟಿ ಖರ್ಚು ಮಾಡಿ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ದತ್ತಾಂಶ ದಾಖಲಿಸಿದರೂ ವರದಿಗಳು ಮೂಲೆಗುಂಪಾಗುತ್ತಿವೆ. ಈಗ ಹೊಸ ಸಮೀಕ್ಷೆ ಕೂಡ ವೈಜ್ಞಾನಿಕವಾಗಿ ಇರದಿದ್ದರೆ ಮೂರರಲ್ಲಿ ಮತ್ತೊಂದು ವರದಿಯಾಗುವ ಭೀತಿ ಎದುರಾಗಿದೆ. 

ಸಮೀಕ್ಷೆ ಬಗ್ಗೆ ಜನರಲ್ಲಿ ವಿಶ್ವಾಸ ಕುಂದಲಿದೆ. ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದಾದರೆ ಸಮೀಕ್ಷೆ ನಡೆಸುವ ಅನಿವಾರ್ಯತೆ ಏನಿತ್ತು ಎಂಬ ಪ್ರಶ್ನೆ ಎದುರಾಗಿದೆ.

ಮಾನವ ಹಕ್ಕುಗಳು ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ದೃಷ್ಟಿಯಿಂದ ಹೈಕೋರ್ಟ್‌ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಸೂಚನೆ, ಸ್ಪಷ್ಟನೆಗಳು ಸರಿ ಕಂಡರೂ ಪ್ರಾಯೋಗಿಕವಾಗಿ ಸಮೀಕ್ಷೆಯ ಮೂಲ ಆಶಯವೇ ಈಡೇರುವುದಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ನ್ಯಾಯಾಲಯ ಹೇಳಿದ್ದೇನು?

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರದ್ದುಪಡಿಸುವಂತೆ ಕೋರಿದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಸೆ.25ರಂದು ಮಧ್ಯಂತರ ಆದೇಶ ನೀಡಿತ್ತು. ಜಾತಿಗಣತಿ ನಿಲ್ಲಿಸಲು ಆಗುವುದಿಲ್ಲ, ಆದರೆ, ಸಮೀಕ್ಷೆಯಲ್ಲಿ ಜನರ ಭಾಗಿತ್ವವು ಸಂಪೂರ್ಣ ಸ್ವಯಂಪ್ರೇರಿತ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಯಾರ ಮೇಲೂ ಒತ್ತಡ ಹೇರಕೂಡದು. ಮಾಹಿತಿಗಾಗಿ ಬಲವಂತ ಮಾಡಬಾರದು. ಸಂಗ್ರಹಿಸುವ ದತ್ತಾಂಶವನ್ನು ಹಿಂದುಳಿದ ವರ್ಗಗಳ ಆಯೋಗ ಹೊರತುಪಡಿಸಿ ಬೇರೆ ಯಾರಿಗೂ ಸೋರಿಕೆ ಆಗದಂತೆ ಗೌಪ್ಯವಾಗಿಡಬೇಕು ಎಂದು ಸೂಚಿಸಿತ್ತು.

ಹಿಂದುಳಿದ ವರ್ಗಗಳ ಆಯೋಗದ ಸ್ಪಷ್ಟನೆ ಏನು?

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ ಸ್ವಇಚ್ಛೆಗೆ ಬಿಡಲಾಗಿದೆ. ಭಾಗವಹಿಸಬೇಕೆಂದು ಯಾರನ್ನೂ ಬಲವಂತಪಡಿಸುವುದಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗವು ಶನಿವಾರ ಸ್ಪಷ್ಟನೆ ಹೊರಡಿಸಿದೆ.

ಸಮೀಕ್ಷೆಯಲ್ಲಿ ಎಲ್ಲರನ್ನೂ ಒಳಪಡಿಸುವ ಉದ್ದೇಶವಿದ್ದರೂ ಮಾಹಿತಿ ನೀಡುವಂತೆ ಯಾರನ್ನೂ ಒತ್ತಾಯ ಮಾಡುತ್ತಿಲ್ಲ. ಜನರು ಸ್ವ ಇಚ್ಛೆಯಿಂದ ಭಾಗವಹಿಸಬಹುದು ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.


Tags:    

Similar News