ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಿ: ಅಧಿಕಾರಿಗಳಿಗೆ ಸಿಎಂ ಸೂಚನೆ
ರಾಜ್ಯದಲ್ಲಿ 1.27 ಕೋಟಿ ಬಿಪಿಎಲ್ ಕುಟುಂಬಗಳಿವೆ. ಹೊಸ ಬಿಪಿಎಲ್ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿಗಳು ಬಂದಿವೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಿಪಿಎಲ್ ಪ್ರಮಾಣ ಶೇ.5.67 ಇರಬೇಕು ಎಂದು ಸಿಎಂ ಹೇಳಿದ್ದಾರೆ;
ಅನರ್ಹರನ್ನು ಬಿಪಿಎಲ್ ಕಾರ್ಡ್‌ನಿಂದ ಕೈಬಿಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಜೊತೆಗೆ ಮೃತ ಸದಸ್ಯರ ಹೆಸರುಗಳನ್ನು ರೇಷನ್ ಕಾರ್ಡ್‌ನಿಂದ ತೆಗೆದು ಹಾಕುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಪ್ರಧಾನ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ʻʻರಾಜ್ಯದಲ್ಲಿ 4,37,23,911 ಜನ ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆದುಕೊಂಡಿದ್ದಾರೆ. 1.27 ಕೋಟಿ ಬಿಪಿಎಲ್ ಕುಟುಂಬಗಳಿವೆ. ಹೊಸ ಬಿಪಿಎಲ್ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿಗಳು ಬಂದಿವೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ಆದರೆ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಿದ್ದೇವೆ. ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದುಪಡಿಸಿ, ಅರ್ಹರಿಗೆ ಬಿಪಿಎಲ್ ಕಾರ್ಡು ಒದಗಿಸಬೇಕುʼʼ ಎಂದು ಸಿಎಂ ಸೂಚಿಸಿದರು.
"ಮುಂದುವರಿದು ತಮಿಳುನಾಡಿನಲ್ಲಿ ಬಿಪಿಎಲ್ ಪ್ರಮಾಣ ಶೇ.40 ರಷ್ಟಿದೆ. ನಮ್ಮ ರಾಜ್ಯದಲ್ಲಿ ಶೇ. 80 ರಷ್ಟಿದೆ ಈ ಕುರಿತು ಪರಿಶೀಲನೆ ನಡೆಸಿ, ಅನರ್ಹರನ್ನು ಕೈಬಿಡುವ ಕೆಲಸ ಮಾಡಬೇಕು. ಜೊತೆಗೆ ಮೃತ ಸದಸ್ಯರ ಹೆಸರುಗಳನ್ನು ರೇಷನ್ ಕಾರ್ಡ್‌ನಿಂದ ತೆಗೆದು ಹಾಕುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕುʼʼ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಪಿಂಚಣಿ ಅರ್ಜಿಗಳು ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಬಾಕಿ ಇವೆ ಎನ್ನುವ ಪಟ್ಟಿ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಆಯಾ ಜಿಲ್ಲಾಧಿಕಾರಿಗಳು ಕಾಲಮಿತಿಯೊಳಗೆ ಇತ್ಯರ್ಥ ಮಾಡಬೇಕು. ಕಾಲ ಮಿತಿ ಮೀರಿದ ಅರ್ಜಿಗಳು ಏಕೆ ಇದೆ ಎಂದು ಇದೇ ವೇಳೆ ಆಯಾ ಜಿಲ್ಲಾಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿ ಇತ್ಯರ್ಥ ಮಾಡಲು ಸೂಚಿಸಿದರು. ಪಿಂಚಣಿಗಳ ಅರ್ಜಿಯನ್ನು ವಿಲೇವಾರಿ ಮಾಡಲು ಅವಧಿ ಸದ್ಯ 45 ದಿನ ಇದೆ. ಇದನ್ನು 30 ದಿನಕ್ಕೆ ಇಳಿಸಲಾಗುವುದು ಎಂದು ತಿಳಿಸಿದರು.