Cabinet Meeting | ರಾಮನಗರ ಜಿಲ್ಲೆಗೆ ʼಬೆಂಗಳೂರು ದಕ್ಷಿಣʼ ಎಂದು ಮರು ನಾಮಕರಣ? ಕುಮಾರಸ್ವಾಮಿಗೆ ಡಿಕೆಶಿ ಸೆಡ್ಡು
ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ನಡುವಿನ ಶೀತಲ ಸಮರಕ್ಕೆ ʼರಾಮನಗರʼ ಇನ್ನೊಂದು ವೇದಿಕೆಯಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕಿಂತಲೂ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಹಗ್ಗ ಜಗ್ಗಾಟಕ್ಕೆ ಇದು ಸಾಕ್ಷಿಯಾಗಿದೆ.;
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಘೋಷಿಸುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉದ್ದೇಶಿತ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಈ ಹಿಂದೆ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಮೂಲಕ ಕೇಂದ್ರಕ್ಕೆ ಸೆಡ್ಡು ಹೊಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಆ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ನಡುವಿನ ಶೀತಲ ಸಮರಕ್ಕೆ ʼರಾಮನಗರʼ ಇನ್ನೊಂದು ವೇದಿಕೆಯಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕಿಂತಲೂ ಡಿ.ಕೆ. ಶಿವಕುಮಾರ್ ಮತ್ತು ʼರಾಮನಗರʼ ಜಿಲ್ಲೆಯನ್ನು ರಚಿಸಿದ್ದ ಆಗಿನ ಮುಖ್ಯಮಂತ್ರಿ ಮತ್ತು ಹಾಲಿ ಕೇಂದ್ರ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಹಗ್ಗ ಜಗ್ಗಾಟಕ್ಕೆ ಇದು ಸಾಕ್ಷಿಯಾಗಿದೆ.
ಇದೇ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡುವ ಬಗ್ಗೆ ಗುರವಾರ (ಮೇ 22) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಸಂಪುಟ ಸಭೆ ಚರ್ಚೆಯ ನಡಾವಳಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಹಾಗಾಗಿ, ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಣೆ ಮಾಡುವ ವಿಚಾರ ರಾಜಕೀಯ ಸ್ವರೂಪ ಪಡೆಯಲಿದೆ.
ಯಾಕೆ ರಾಜಕೀಯ?
ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವ ಕುರಿತ ರಾಜ್ಯ ಸರ್ಕಾರದ ಹಿಂದಿನ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕೈವಾಡವಿದೆ ಎಂದು ಹೇಳಲಾಗಿತ್ತು. ರಾಜ್ಯದ ಪ್ರಸ್ತಾವವನ್ನು ಕೇಂದ್ರ ತಿರಸ್ಕರಿಸುವ ಮೂಲಕ ಡಿ.ಕೆ. ಶಿವಕುಮಾರ್ ಅವರಿಗೆ ಹಿನ್ನಡೆ ಉಂಟಾಗಿತ್ತು.
ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ ಜಿಲ್ಲೆ' ಎಂದು ಮರುನಾಮಕರಣ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದರು. ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವವನ್ನೂ ಕಳುಹಿಸಿತ್ತು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ನಿರ್ಧಾರವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಬಲವಾಗಿ ವಿರೋಧಿಸಿದ್ದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಅವರು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾಪ ಮಾಡಿದ್ದರು. ಈ ವಿಚಾರವು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು.
ಬೇನಾಮಿ ಆಸ್ತಿ ರಕ್ಷಣೆ?
'ಡಿ.ಕೆ. ಶಿವಕುಮಾರ್ ಅವರ ಪ್ರಸ್ತಾಪವು ತಮ್ಮ ಬೇನಾಮಿ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳುವ ಯೋಜನೆಯಾಗಿದೆ. ಒಂದು ವೇಳೆ ರಾಮನಗರ ಹೆಸರು ಬದಲಾಯಿಸಿದರೂ ನಾನು ಅಧಿಕಾರಕ್ಕೆ ಬಂದಾಗ ಮತ್ತೆ ಹೆಸರು ಬದಲಾವಣೆ ಮಾಡುತ್ತೇನೆ,' ಎಂದು ಕುಮಾರಸ್ವಾಮಿ ಹೇಳಿದ್ದರು.
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುವ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಹೆಸರು ಬದಲಾವಣೆ ಸಂಚಿನ ಹಿಂದೆ ́ರಾಮ ದ್ವೇಷʼ, ́ರಿಯಲ್ ಎಸ್ಟೇಟ್ ಲಾಲಸೆʼ ಅಡಗಿರುವುದು ಸುಸ್ಪಷ್ಟ ಎಂದು ಟೀಕಿಸಿದ್ದರು.
ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದ ಡಿ.ಕೆ. ಶಿವಕುಮಾರ್ ಅವರು, ಕುಮಾರಸ್ವಾಮಿ ಅವರಿಗೆ ಅಭಿವೃದ್ಧಿಗಿಂತ ದ್ವೇಷದ ರಾಜಕಾರಣವೇ ಮುಖ್ಯ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಸಹಿಸದ ಕುಮಾರಸ್ವಾಮಿ, ಕೇಂದ್ರ ಸರ್ಕಾರಕ್ಕೆ ಆಕ್ಷೇಪ ಸಲ್ಲಿಸಿ, ತಕರಾರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದರು.
ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಕನಕಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಜೇಬಿಗೆ ನೇರವಾಗಿ ದುಡ್ಡು ಹಾಕಲು, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ, ನಿಮ್ಮ ಆಸ್ತಿ ಮೌಲ್ಯಗಳನ್ನು ಹತ್ತು ಪಟ್ಟು ಹೆಚ್ಚಿಸುವ ಶಕ್ತಿ ದೇವರು ನೀಡಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ವಿದ್ಯೆ ನೀಡಬಹುದು ಅಷ್ಟೇ. ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿʼ ಎಂದು ಹೇಳಿದ್ದರು.
ರಿಯಲ್ ಎಸ್ಟೇಟ್ ಮೌಲ್ಯ
ರಾಮನಗರ ಹೆಸರು ಬದಲಾವಣೆಯಿಂದ ರಿಯಲ್ ಎಸ್ಟೇಟ್ ಮೌಲ್ಯ ಹೆಚ್ಚಾಗುತ್ತದೆ ಎಂಬುದು ಡಿ.ಕೆ. ಶಿವಕುಮಾರ್ ವಾದವಾಗಿತ್ತು. "ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡುವುದರಿಂದ ಮುಂದೆ ರಾಮನಗರ, ಚನ್ನಪಟ್ಟಣ, ಮಾಗಡಿ ಸೇರಿದಂತೆ ಮೈಸೂರುವರೆಗೂ ಅಭಿವೃದ್ಧಿ ಸಾಧಿಸಲು, ಕೈಗಾರಿಕೆಗಳ ಸ್ಥಾಪನೆಗೆ ಆಹ್ವಾನಿಸಲು, ಜತೆಗೆ ಆಸ್ತಿ ಮೌಲ್ಯ ಹೆಚ್ಚಳಕ್ಕೂ ನೆರವಾಗುತ್ತದೆ. ಬೆಂಗಳೂರಿನ ಒಂದು ದಿಕ್ಕಿನಲ್ಲಿ ಆಂಧ್ರ ಪ್ರದೇಶ, ಮತ್ತೊಂದು ದಿಕ್ಕಿನಲ್ಲಿ ತಮಿಳುನಾಡು ರಾಜ್ಯದ ಗಡಿ ಬರುತ್ತದೆ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿ ವಿಸ್ತರಣೆಗೆ ನಮಗೆ ಉಳಿದಿರುವುದು ತುಮಕೂರು ಹಾಗೂ ಈ ಭಾಗ ಮಾತ್ರ," ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ನಿಲುವಿಗೆ ಸಮರ್ಥನೆ ನೀಡಿದ್ದರು.
ಬಿಜೆಪಿ ಮುಖಂಡ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ರಿಯಲ್ ಎಸ್ಟೇಟ್‌ಗಾಗಿ ಹೆಸರು ಬದಲಿಸುವುದು ಸರಿಯಲ್ಲ. "ಯರಾದದರೂ ಮೌಲ್ಯ ಕಟ್ಟುತ್ತಾರೆಂದರೆ ಅಪ್ಪ-ಅಮ್ಮನ ಹೆಸರು ಬದಲಾಯಿಸಲು ಸಾಧ್ಯವೆ?" ಎಂದು ಖಾರವಾಗಿ ಪ್ರಶ್ನಿಸಿದ್ದರು.
ಆದರೆ, 2024 ಜುಲೈ ತಿಂಗಳಲ್ಲಿ ಹೆಸರು ಬದಲಾವಣೆ ಸಂಬಂಧ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಅಧಿಕೃತ ಚಾಲನೆ ದೊರೆತಿತ್ತು. ಸಂಪುಟ ಸಭೆಯಲ್ಲೂ ಹಸಿರು ನಿಶಾನೆ ದೊರಕಿತ್ತು.
"ಬೆಂಗಳೂರು ನಗರ ಸೇರಿದಂತೆ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಸೇರಿದಂತೆ ನಾವೆಲ್ಲರೂ ಮೂಲತಃ ಬೆಂಗಳೂರು ಜಿಲ್ಲೆಯವರು. ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಎಂದು ಹಿಂದೆ ವಿಭಾಗ ಮಾಡಲಾಯಿತು. ರಾಮನಗರವನ್ನು ಕೇಂದ್ರಾಡಳಿತವಾಗಿಟ್ಟುಕೊಂಡೇ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದು ಅಗತ್ಯ," ಎಂದು ಡಿ.ಕೆ. ಶಿವಕುಮಾರ್ ವಾದಿಸಿದ್ದರು.
ಎಚ್.ಡಿ. ಕುಮಾರಸ್ವಾಮಿ ಟಾರ್ಗೆಟ್?
ಡಿಕೆ ಶಿವಕುಮಾರ್ ಅವರ ಈ ಹೆಸರು ಬದಲಾವಣೆಯ ಹಿಂದಿನ ಟಾರ್ಗೆಟ್ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ರಾಮನಗರ ಜಿಲ್ಲೆ ಈ ಹಿಂದೆ ಬೆಂಗಳೂರು ಗ್ರಾಮಾಂತರಕ್ಕೆ ಸೇರಿತ್ತು. ಆದರೆ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ 2007 ರಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಇದ್ದ ರಾಮನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ರಚನೆ ಮಾಡಿದ್ದರು.
ರಾಮನಗರ ಜಿಲ್ಲೆ ಘೋಷಣೆಗೂ ಮೊದಲು ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ. ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕುಗಳು ಬೆಂಗಳೂರು ಜಿಲ್ಲೆಯ ಭಾಗವಾಗಿದ್ದವು.
1986ರ ಸಾಲಿನಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನಾಗಿ ಘೋಷಿಸಲಾಯಿತು. ನಂತರ 2007ರ ಸಾಲಿನಲ್ಲಿ ದೊಡ್ಡಬಳ್ಳಾಪುರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಒಳಗೊಂಡಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನಾಗಿ ಘೋಷಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬ ಹೆಸರನ್ನು ಹಾಗೇ ಉಳಿಸಿಕೊಳ್ಳಲಾಯಿತು.
ಹೊಸ ಜಿಲ್ಲೆಯ ರಚನೆಯಾದಾಗ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ತಾಲ್ಲೂಕುಗಳಿದ್ದವು. ಇದೀಗ ಹಾರೋಹಳ್ಳಿ ತಾಲ್ಲೂಕು ರಚನೆಯಾಗಿದೆ. ಆದರೆ ಇದೀಗ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡುವ ಮೂಲಕ ಹೊಸತೊಂದು ರಾಜಕೀಯ ದಾಳವನ್ನು ಡಿಕೆ ಶಿವಕುಮಾರ್ ಉರುಳಿಸಿದ್ದರು.