Cabinet Meeting |ಅಂಗೀಕಾರವಾಗದ ಒಳ ಮೀಸಲಾತಿ ವರದಿ; ವಿಸ್ತೃತ ಚರ್ಚೆಗೆ ಆ.16 ರಂದು ವಿಶೇಷ ಕ್ಯಾಬಿನೆಟ್
ಆ.4 ರಂದು ನ್ಯಾ. ನಾಗಮೋಹನ್ ದಾಸ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ವರದಿ ಸಲ್ಲಿಸಿದ್ದರು. ಒಟ್ಟು 1766 ಪುಟಗಳ ವರದಿಯಲ್ಲಿ ಜಾತಿಗಳ ದತ್ತಾಂಶ ಮತ್ತು ಅನುಬಂಧಗಳು ಹಾಗೂ ಆರು ಶಿಫಾರಸ್ಸುಗಳು ಇದ್ದವು.;
ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಒದಗಿಸಲು ಹೈಕೋರ್ಟ್ ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಸಲ್ಲಿಸಿರುವ ʼಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆʼಯ ವರದಿಯ ಕುರಿತು ವಿಸ್ತೃತ ಚರ್ಚೆ ನಡೆಸಲು ಆ.16 ರಂದು ವಿಶೇಷ ಸಂಪುಟ ಸಭೆ ಕರೆಯಲು ನಿರ್ಧರಿಸಲಾಗಿದೆ.
ಪರಿಶಿಷ್ಟ ಜಾತಿಯವರ ದಶಕಗಳ ಹೋರಾಟ, ಸರ್ಕಾರಿ ನೌಕರಿಯಲ್ಲಿ ನೇಮಕ-ಬಡ್ತಿ, ಪರಿಶಿಷ್ಟರಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಮೀಸಲಾತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ವರದಿಯನ್ನು ತ್ವರಿತವಾಗಿ ಅಂಗೀಕರಿಸುವ ಅಗತ್ಯವಿದೆ. ಆದರೆ, ಬಲಗೈ ಸಮುದಾಯದವರು ಶೇ 5 ರಷ್ಟು ಮೀಸಲಾತಿಗೆ ಆಕ್ಷೇಪ ವ್ಯಕ್ತಪಡಿಸಿವೆ. ಜತೆಗೆ ಎಡಗೈ ಸಮುದಾಯಗಳು ಶೇ 8 ರಷ್ಟು ಮೀಸಲಾತಿಗೆ ಬೇಡಿಕೆ ಇಟ್ಟಿವೆ. ಈ ಹಿನ್ನೆಲೆಯಲ್ಲಿ ವರದಿ ಕುರಿತು ವಿಸ್ತೃತ ಚರ್ಚೆ ಅಗತ್ಯವಿದೆ. ಹಾಗಾಗಿ ಆ.16 ರಂದು ವಿಶೇಷ ಸಂಪುಟ ಸಭೆಯಲ್ಲಿ ವರದಿ ಜಾರಿ ಕುರಿತು ತೀರ್ಮಾನಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ವರದಿಯಲ್ಲಿ ಐದು ಪ್ರವರ್ಗಗಳನ್ನು ಸೃಷ್ಟಿಸಲಾಗಿದೆ. ಬಲಗೈ ಸಮುದಾಯದವರಿಗೆ ಶೇ 5, ಎಡಗೈನವರಿಗೆ ಶೇ 6, ಸ್ಪೃಶ್ಯ ಜಾತಿಗಳಿಗೆ ಶೇ 4, ಅಲೆಮಾರಿ ಹಾಗೂ ಸಣ್ಣ ಸಮುದಾಯಗಳಿಗೆ ಶೇ 1 ಹಾಗೂ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಸೂಚಕಗಳ ಪ್ರತ್ಯೇಕ ಗುಂಪಿಗೆ ಶೇ 1 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಎಡ ಹಾಗೂ ಬಲ ಸಮುದಾಯದವರ ಆಕ್ಷೇಪಗಳ ಹಿನ್ನೆಲೆಯಲ್ಲಿ ವರದಿ ಅಂಗೀಕರಿಸದೇ ಮಂಡನೆಗಷ್ಟೇ ಅವಕಾಶ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.
ಆ.4 ರಂದು ನ್ಯಾ. ನಾಗಮೋಹನ್ ದಾಸ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ವರದಿ ಸಲ್ಲಿಸಿದ್ದರು. ಒಟ್ಟು 1766 ಪುಟಗಳ ವರದಿಯಲ್ಲಿ ಜಾತಿಗಳ ದತ್ತಾಂಶ ಮತ್ತು ಅನುಬಂಧಗಳು ಹಾಗೂ ಆರು ಶಿಫಾರಸ್ಸುಗಳು ಇದ್ದವು.
ರಾಜ್ಯವ್ಯಾಪಿ ಸಮೀಕ್ಷೆಯಲ್ಲಿ ಆಯೋಗ ಸಂಗ್ರಹಿಸಿದ ಮತ್ತು ಸರ್ಕಾರದ ಸಂಸ್ಥೆಗಳಿಂದ ಪಡೆದ ದತ್ತಾಂಶ ವಿಶ್ಲೇಷಣೆ ಮಾಡಿ, ಸುಪ್ರೀಂಕೋರ್ಟ್ ಸೂಚನೆಯಂತೆ ಪರಿಶಿಷ್ಟ ಜಾತಿಯ ಒಳಜಾತಿಗಳನ್ನು ವರ್ಗೀಕರಿಸಿ ಲಭ್ಯವಿರುವ ಮೀಸಲಾತಿ ಹಂಚಲಾಗಿದೆ.
2025 ಮೇ 5 ರಿಂದ ಆರಂಭಿಸಿದ್ದ ಸಮೀಕೆಯು ಜುಲೈ 6 ರವರೆಗೆ ನಡೆದಿತ್ತು. ಪರಿಶಿಷ್ಟ ಜಾತಿಯ 27,24,768 ಕುಟುಂಬಗಳು ಮತ್ತು 1,07,01,982 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಒಳಜಾತಿಗಳ ವರ್ಗೀಕರಣಕ್ಕೆ ಸುಪ್ರೀಂಕೋರ್ಟ್ ವಿಧಿಸಿದ ಮಾನದಂಡಗಳಾದ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ, ಸಾಮಾಜಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗಿತ್ತು.
ಒಳ ಮೀಸಲಾತಿ ಸಮೀಕ್ಷೆಯಲ್ಲಿ ಸುಮಾರು 5ಲಕ್ಷ ಜನರು ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂದೇ ಬರೆಸಿದ್ದರು. 5 ಲಕ್ಷ ಮೇಲ್ಪಟ್ಟ ಜನಸಂಖ್ಯೆ ಜಾತಿಸೂಚಕ ಪದ ಬರೆಸಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಗುಂಪು ರಚಿಸಿ, ಶೇ ೧ ರಷ್ಟು ಮೀಸಲಾತಿ ಒದಗಿಸಲಾಗಿದೆ.
ಶನಿವಾರವಷ್ಟೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸರ್ಕಾರದ ದಲಿತ ಸಚಿವರು ಹಾಗೂ ಶಾಸಕರ ಸಭೆ ಸೇರಿ ಒಳ ಮೀಸಲಾತಿ ವರದಿಗೆ ಯಾವುದೇ ತಕರಾರು ತೆಗೆಯದೇ ಒಮ್ಮತದಿಂದ ಒಪ್ಪಿಕೊಳ್ಳಲು ನಿರ್ಧರಿಸಿದ್ದರು. ಈಗಾಗಲೇ ಒಳ ಮೀಸಲಾತಿ ಹಂಚಿಕೆ ಸಾಕಷ್ಟು ವಿಳಂಬವಾಗಿದೆ. ಇನ್ನಷ್ಟು ತಗಾದೆಗಳು ಎದುರಾಗದರೆ ವಿಳಂಬವಾಗಲಿದೆ. ಮೊದಲಿಗೆ ವರದಿ ಜಾರಿಯಾಗಲಿ, ಆ ನಂತರ ಸಮುದಾಯದ ನಡುವಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಬಹುದು ಎಂಬ ನಿರ್ಣಯಕ್ಕೆ ಬಂದಿದ್ದರು.
2025ರ ವೇಳೆಗೆ ಪರಿಶಿಷ್ಟ ಜಾತಿಯವರ ಜನಸಂಖ್ಯೆ ಅಂದಾಜಿಸಿ (1.16 ಕೋಟಿ) ಹೋಲಿಸಿದಾಗ ಜೂನ್ 27ರವರೆಗೆ ಇಡೀ ರಾಜ್ಯದಲ್ಲಿ ಸಮೀಕ್ಷೆಯಲ್ಲಿ ಶೇ. 91ರಷ್ಟು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡಾ 53ರಷ್ಟು ಪ್ರಗತಿ ಆಗಿತ್ತು.