Cabinet Meeting | ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ; ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಅಭಿವೃದ್ಧಿಗೆ ಆದ್ಯತೆ
ಮೈಸೂರು ವಿಭಾಗದ ಜಿಲ್ಲೆಗಳಾದ ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ 3,647 ಕೋಟಿ 62 ಲಕ್ಷ ಮೌಲ್ಯದ ತುರ್ತು ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ.;
ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೈ ಮಹದೇಶ್ವರ ಬೆಟ್ಟದ ಮೇಲೆ ಗುರುವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಮೈಸೂರು ವಿಭಾಗ ವ್ಯಾಪ್ತಿಯ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಿದೆ.
ಮೈಸೂರು ವಿಭಾಗದ ಜಿಲ್ಲೆಗಳಾದ ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ 3,647 ಕೋಟಿ 62 ಲಕ್ಷ ಮೌಲ್ಯದ ತುರ್ತು ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ.
ನಂದಿ ಬೆಟ್ಟದ ಮೇಲೆ ಸಂಪುಟ ಸಭೆ
ವಲಯವಾರು ಸಂಪುಟ ಸಭೆ ಆಯೋಜನೆಯ ಭಾಗವಾಗಿ ಬೆಂಗಳೂರು ವಿಭಾಗದ ಸಂಪುಟ ಸಭೆಯನ್ನು ನಂದಿಬೆಟ್ಟದ ಮೇಲೆ ನಡೆಸಲು ಸಚಿವ ಸಂಪುಟ ನಿರ್ಣಯಿಸಿದೆ. ಅದೇ ರೀತಿ ಬೆಳಗಾವಿ ವಿಭಾಗದ ಸಂಪುಟ ಸಭೆಯನ್ನು ವಿಜಯಪುರದಲ್ಲಿ ನಡೆಸಲು ತೀರ್ಮಾನಿಸಿದೆ. ಆದರೆ, ಯಾವಾಗ ನಡೆಸಲಾಗುತ್ತದೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.
ಕಲಬುರಗಿ ವಿಭಾಗ ಮಟ್ಟದ ಸಂಪುಟ ಸಭೆಯನ್ನು ಈಗಾಗಲೇ ಕಲಬುರಗಿಯಲ್ಲಿ ನಡೆಸಲಾಗಿದೆ. ಇಂದು ಮೈಸೂರು ವಿಭಾಗದ ಸಂಪುಟ ಸಭೆ ನಡೆಸಿದ್ದು, ವಲಯವಾರು ಸಭೆ ನಡೆಸುವುದರಿಂದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದಂತಾಗುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ ಎನ್ನಲಾಗಿದೆ.
ಕೊಳ್ಳೆಗಾಲದಲ್ಲಿ ಜಿಲ್ಲಾಸ್ಪತ್ರೆಗೆ ಸಂಪುಟ ಒಪ್ಪಿಗೆ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. 250 ಬೆಡ್ ಗಳ ಜಿಲ್ಲಾಸ್ಪತ್ರೆಯನ್ನು ನಿರ್ಮಿಸುವ ಮೂಲಕ ಮೈಸೂರು, ಚಾಮರಾಜನಗರದ ಮೇಲಿನ ಅವಲಂಬನೆ ತಗ್ಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆ, ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆ, ಇಂಧನ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಬುಡಕಟ್ಟು ಅಭಿವೃದ್ಧಿ, ಬುಡಕಟ್ಟು ಜನರು ವಾಸಿಸುವ ಗ್ರಾಮಗಳಿಗೆ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
1787 ಕೋಟಿ ರೂ. ಮೊತ್ತದಲ್ಲಿ ನೀರಾವರಿ ಸೌಲಭ್ಯ ಹಾಗೂ ಪರಿಶಿಷ್ಟ ಜಾತಿ-ಪಂಗಡದ ಜನರಿಗೆ ವಸತಿ, ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲಾಗುವುದು. ಅರಣ್ಯ ಭಾಗದಲ್ಲಿ ಮಾನವ-ಪ್ರಾಣಿ ಸಂಘರ್ಷ ತಡೆಯಲು 210 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಪೂರ್ಣಗೊಳಿಸಲು ಅನುಮೋದನೆ ದೊರೆತಿದೆ.
ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ 315 ಕೋಟಿ ರೂ., ಆರೋಗ್ಯ ಸುಧಾರಣೆಗೆ 228 ಕೋಟಿ ರೂ., ಪ್ರವಾಸೋದ್ಯಮ ಅಭಿವೃದ್ಧಿಗೆ 300 ಕೋಟಿ ರೂ. ಮೀಸಲಿರಿಸಲಾಗಿದೆ.
ಹನೂರಿನಲ್ಲಿ ಹೊಸ ತಾಲ್ಲೂಕು ಆಸ್ಪತ್ರೆ, ತಾಲೂಕು ಆಡಳಿತ ಭವನ ನಿರ್ಮಾಣ ಮಾಡಲಾಗುವುದು. ಚಿಕ್ಕಲ್ಲೂರಿನಲ್ಲಿ ರಾಜಪ್ಪಾಜಿ, ಸಿದ್ದಪ್ಪಾಜಿ, ಮಂಟೇಸ್ವಾಮಿ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಜಾಗ
ಮೈಸೂರಿನ ವರುಣಾ ಕ್ಷೇತ್ರದ ಇಲವಾಲದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ನೀಡುವ ಪ್ರಸ್ತಾವಕ್ಕೆ ಸಂಪುಟ ಸಭೆ ಅಂಗೀಕಾರ ನೀಡಿದೆ.
ಮೈಸೂರು ಹೊರವಲಯದಲ್ಲಿರುವ ಇಲವಾಲ ಬಳಿಯ ಹುಯಿಲಾಳು ಗ್ರಾಮದಲ್ಲಿ ಒಟ್ಟು 26.31 ಎಕರೆ ಸರ್ಕಾರಿ ಭೂಮಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ವರ್ಗಾಯಿಸಲು ನಿರ್ಣಯಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಕೋರಿಕೆಯ ಮೇರೆಗೆ ಸರ್ವೆ ಸಂಖ್ಯೆ 312 ಮತ್ತು 313 ರಲ್ಲಿರುವ 26.31 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
ರನ್ ವೇ ವಿಸ್ತರಣೆಗೆ ಜಾಗ
ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 101 ಕೋಟಿ ಮೊತ್ತದ ಜಾಗ ನೀಡಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ.
ಮೈಸೂರಿನ ಅಟಾರ್ಹಾ ಕಚೇರಿಯಲ್ಲಿ 100 ಕೋಟಿ ವೆಚ್ಚದ ಮ್ಯೂಸಿಯಂ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ. ಗುಂಡ್ಲುಪೇಟೆ 110 ಕೆರೆಗಳಿಗೆ ನೀರು ತುಂಬಿಸುವ 475 ಕೋಟಿ ವೆಚ್ಚ ಯೋಜನೆ, ಚಾಮರಾಜನಗರದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ, ಚಾಮರಾಜನಗರ ಟೌನ್ ನಲ್ಲಿ ಕುಡಿಯುವ ನೀರು, ಒಳ ಚರಂಡಿ ನಿರ್ಮಾಣ, ಚಾಮರಾಜನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 15 ಕೋಟಿ, 40 ಕೋಟಿ ರೂ.ಅಂದಾಜಿನಲ್ಲಿ ಬದನವಾಳು ಅಭಿವೃದ್ಧಿಗೂ ಸಂಪುಟ ಸಭೆ ಅನುಮೋದನೆ ನೀಡಿದೆ.
ಇದೇ ವೇಳೆ ಸಂಪುಟ ಸಭೆಯಲ್ಲಿ ಕಾಶ್ಮೀರ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ಎಲ್ಲ ಹುತಾತ್ಮರು ಶ್ರದ್ಧಾಂಜಲಿ ಮತ್ತು ಧರ್ಮಗುರು ಪೋಪ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.